ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಯ್‌ಥಿಬಿ ಬೆಟ್ಟದಲ್ಲಿ ಪದಕಗಳ ಕನಸು

Last Updated 14 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

‘ನೂರು ಕೋಟಿಗೂ ಮೀರಿದ ಜನಸಂಖ್ಯೆ, ಅದರಲ್ಲಿ ಅರ್ಧದಷ್ಟು 30ರ ಗಡಿಯನ್ನೂ ದಾಟದ ಯುವಪಡೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಲೆಕ್ಕವಿಲ್ಲದಷ್ಟು ವೈವಿಧ್ಯ; ಇಂತಹ ದೊಡ್ಡ ದೇಶದಲ್ಲಿ ಪದಕಗಳನ್ನು ಗೆದ್ದು ತರಬಲ್ಲ ಕೆಲವು ಕ್ರೀಡಾಪಟುಗಳೂ ಸಿಗಲಾರದೆ ಹೋದರೇ?’

–ಜಾಗತಿಕ ಕ್ರೀಡಾಕೂಟ ನಡೆದಾಗಲೆಲ್ಲ ಭಾರತದಲ್ಲಿ ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ ಇದು. ಅದರಲ್ಲೂ ಒಲಿಂಪಿಕ್‌ ಕೂಟ ನಡೆದಾಗ ಈ ಪ್ರಶ್ನೆ ಮುನ್ನೆಲೆಗೆ ಬಂದು ನಿಂತು ಬಿಡುತ್ತದೆ. ಆಗ ಅಷ್ಟೇ ಸಾಮಾನ್ಯವಾಗಿ ಸಿಗುವ ಉತ್ತರ: ‘ಈ ದೇಶದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಒಂದು ವಿನ್ಯಾಸವೇ ಇಲ್ಲ. ಅದನ್ನು ವಿಶಾಲ ತಳಹದಿ ಮೇಲೆ ನಿಲ್ಲಿಸುವ, ವೈಜ್ಞಾನಿಕ ದೃಷ್ಟಿಕೋನದಿಂದ ಬೆಳೆಸುವ ಕೆಲಸ ಇದುವರೆಗೆ ಆಗಿಲ್ಲ’ ಎನ್ನುವುದು.

ತಡವಾಗಿಯಾದರೂ ಅಂತಹದ್ದೊಂದು ಯತ್ನ ಈಗ ಶುರುವಾದಂತೆ ಕಾಣುತ್ತದೆ. ದೇಶದ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯದ ಸ್ಥಾಪನೆಗೆ ಭರದಿಂದ ತಯಾರಿಗಳು ನಡೆದಿದ್ದು, ಮಣಿಪುರದ ಯಾಯ್‌ಥಿಬಿ ಬೆಟ್ಟ ಅದಕ್ಕೆ ನೆಲೆ ಒದಗಿಸಲು ಸಜ್ಜಾಗಿದೆ. ಕೇಂದ್ರ ಸರ್ಕಾರ ಈ ವಿಶ್ವವಿದ್ಯಾಲಯದ ಸ್ಥಾಪನೆಗೆ ಈಗಾಗಲೇ ₨ 100 ಕೋಟಿ ಅನುದಾನ ಒದಗಿಸಿದೆ.
ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಮಸೂದೆ ಸಿದ್ಧವಾಗಿದ್ದು, ವಿಶ್ವವಿದ್ಯಾಲಯದ ಸ್ಥಾಪನೆಗೆ ಶಾಸನಾತ್ಮಕ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಕೇಂದ್ರ ಕ್ರೀಡಾ ಇಲಾಖೆಯ ಜಂಟಿ ಕಾರ್ಯದರ್ಶಿ ಜಿಎಸ್‌ಜಿ ಅಯ್ಯಂಗಾರ್‌ ಅವರ ತಂಡ ಯಾಯ್‌ಥಿಬಿ ಬೆಟ್ಟಕ್ಕೆ ಭೇಟಿ ನೀಡಿ, 200 ಎಕರೆ ಪ್ರದೇಶದಲ್ಲಿ ಹೇಗೆಲ್ಲ ಸೌಕರ್ಯ ಕಲ್ಪಿಸಿಕೊಡಬೇಕು ಎಂಬ ನೀಲನಕ್ಷೆಯನ್ನೂ ತಯಾರಿಸಿದೆ.

ಏಷ್ಯಾದ ಚೀನಾ, ಜಪಾನ್‌ ಹಾಗೂ ಭಾರತ ಮೂರೂ ರಾಷ್ಟ್ರಗಳ ಕ್ರೀಡಾ ಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ಚೀನಾದ ಕರಾಟೆ, ಜಪಾನಿನ ಸುಮೊ ಮತ್ತು ಭಾರತದ ಕುಸ್ತಿ ಕ್ರೀಡೆಗಳು ಆ ಪರಂಪರೆಯ ಭಾಗವಾಗಿವೆ. ಈ ದೇಶಗಳಲ್ಲಿ ನಾಗರಿಕತೆ ಬೆಳೆದಂತೆ ಕ್ರೀಡಾ ಸಂಸ್ಕೃತಿಯೂ ಬೆಳೆಯುತ್ತಾ ಬಂದಿದೆ. ಚೀನಾ, ಜಪಾನ್‌  ಜಾಗತಿಕ ಕೂಟಗಳಲ್ಲಿ ಪದಕಗಳ ರಾಶಿ ಮಾಡುತ್ತಾ, ಪರಂಪರೆಯ ಬುನಾದಿ ಮೇಲೆ ಭವ್ಯ ಭವಿಷ್ಯದ ಸೌಧ ಕಟ್ಟಿಕೊಂಡಿವೆ. ಆದರೆ, ಮಾನವನ ಶರೀರದಲ್ಲಿ ರಕ್ತ ಹರಿಯದೆ ಅಶಕ್ತವಾದ ಅಂಗದಂತೆ ಭಾರತದ ಕ್ರೀಡಾಕ್ಷೇತ್ರ ಇತ್ತೀಚಿನ ಶತಮಾನಗಳಲ್ಲಿ ಸೊರಗಿಹೋಗಿದೆ.

ಪದಕ ಗಳಿಕೆಯಲ್ಲಿ ಸಾಧನೆ ಮಾಡುತ್ತಿರುವ ದೇಶಗಳಲ್ಲಿ ಕ್ರೀಡೆ ಈಗ ಆಟವಾಗಿ ಉಳಿಯದೆ ವಿಜ್ಞಾನವಾಗಿ ಬೆಳೆದಿದೆ. ಈ ಹಿನ್ನೆಲೆಯಲ್ಲೇ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ವರೂಪದ ಕುರಿತು ಚರ್ಚೆ ಆರಂಭವಾಗಿದೆ. ಶರೀರದ ಗುಣಲಕ್ಷಣ (ಶರೀರ ರಚನೆ–ಜೈವಿಕ ಸಂಯೋಜನೆ) ನೋಡಿಕೊಂಡು ಯಾವ ಹುಡುಗ, ಯಾವ ಕ್ರೀಡೆಗೆ ಲಾಯಕ್ಕು ಎಂಬುದನ್ನು ನಿರ್ಧರಿಸುವುದು ಬಹುತೇಕ ರಾಷ್ಟ್ರಗಳಲ್ಲಿರುವ ರೂಢಿ. ಆದರೆ, ನಮ್ಮಲ್ಲಿ ಇಂತಹ ಪ್ರಯತ್ನ ಇದುವರೆಗೆ ನಡೆದಿಲ್ಲ. ಉದಾಹರಣೆಗೆ ಹ್ಯಾಮರ್‌ ಥ್ರೋ ಕ್ರೀಡೆಯಲ್ಲಿ ಮಿಂಚಬಹುದಾದ ಹುಡುಗನನ್ನು ಓಡಲು ಬಿಟ್ಟಿರುತ್ತೇವೆ ಎಂದು ಕ್ರೀಡಾತಜ್ಞರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಮಾನವ ಶರೀರ ಶಾಸ್ತ್ರಕ್ಕೂ ಕ್ರೀಡೆಗೂ ಬಿಡಿಸಲಾಗದ ನಂಟು. ನಿಯೋಜಿತ ವಿಶ್ವವಿದ್ಯಾಲಯ ಆ ನಂಟಿನ ಹಿಂದಿರುವ ಗುಟ್ಟನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಎಂಬ ಸಲಹೆಯೂ ಕೇಳಿಬಂದಿದೆ. ಜಾಗತಿಕ ಮಟ್ಟದಲ್ಲಿ 1960ರಷ್ಟು ಹಿಂದೆಯೇ ಇಂತಹ ಪ್ರಯತ್ನಗಳು ನಡೆದಿವೆ. ಆಗಿನ ಒಲಿಂಪಿಕ್‌ ಕ್ರೀಡಾಕೂಟದ ಸಾಧನೆಯನ್ನು ನಾಲ್ಕು ಪ್ರಮುಖ ಜನಾಂಗಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಲಾಗಿತ್ತು. ಕಾಕೆಸಾಯ್ಡ್‌, ಮೆಬ್ರಾಯ್ಡ್‌, ಮೆಸಿಜೊ ಮತ್ತು ಮಂಗೋಲಿಯಾಡ್‌ – ಇವೇ ಆ ನಾಲ್ಕು ಜನಾಂಗಗಳು. ಆ ಕೂಟದಲ್ಲಿ ಕಾಕೆಸಾಯ್ಡ್‌ ಜನಾಂಗಕ್ಕೆ ಸೇರಿದ ಕ್ರೀಡಾಪಟುಗಳೇ ಹೆಚ್ಚಾಗಿ ಯಶಸ್ಸು ಗಳಿಸಿದ್ದರು. ಕ್ರೀಡೆಗೆ ಹೇಳಿ ಮಾಡಿಸಿದ ಶರೀರ ಅವರದಂತೆ.

1970ರ  ಒಲಿಂಪಿಕ್‌ ಕೂಟದ ವೇಳೆಗೆ ಆಫ್ರಿಕಾದ ನಿಗ್ರೊಗಳು ಮುಂದೆ ಬಂದಿದ್ದರು. ಭಾರತದಲ್ಲಿ ಹೆಚ್ಚಾಗಿ ಕಂಡು ಬರುವುದು ಇಂಡೋ–ಆರ್ಯನ್‌ ಜನಾಂಗ. ಉಳಿದ ಸಮುದಾಯಗಳಿಗೆ ಹೋಲಿಸಿದರೆ ಈ ಜನಾಂಗಕ್ಕೆ ಕ್ರೀಡಾ ಸಾಮರ್ಥ್ಯ ಕಡಿಮೆ ಎಂದು ಹೇಳಲಾಗುತ್ತದೆ.
ದೇಹದ ಸ್ವರೂಪ, ಅದರಲ್ಲಿನ ಕೊಬ್ಬಿನ ಅಂಶ, ಬಾಗುವ ಸಾಮರ್ಥ್ಯ, ಎಲುಬಿನ ತಾಕತ್ತು ಮೊದಲಾದ ಅಂಶಗಳು ಕ್ರೀಡಾಪಟುಗಳ ಸಾಧನೆಗೆ ಮುಖ್ಯವಾಗುತ್ತವೆ. ಹೀಗಾಗಿ ದೇಹದ ಶಕ್ತಿ ಕೇಂದ್ರಗಳ ನಡುವಿನ ಸಂವಹನ  ಹೇಗಿದೆ ಎಂಬುದರ ಅಧ್ಯಯನ ಕೂಡ ಕ್ರೀಡಾ ಕ್ಷೇತ್ರದಲ್ಲಿ ಅಗತ್ಯವಾಗಿದೆ. ಮನೋವೈಜ್ಞಾನಿಕ ಮತ್ತು ರೋಗಕಾರಕ ಸಮಸ್ಯೆಗಳನ್ನು ಸಹ ಪ್ರತ್ಯೇಕವಾಗಿ ನೋಡಬೇಕಿದೆ ಎನ್ನುತ್ತಾರೆ ಕ್ರೀಡಾ ವೈದ್ಯಕೀಯ ತಜ್ಞರು.

‘ಶರೀರ ರಚನೆ ಆಧಾರದ ಮೇಲೆ ಮಗುವಿನ ಕೌಶಲವನ್ನು ಆರಂಭದಲ್ಲೇ ಗುರ್ತಿಸಿದರೆ ಪದಕ ಗೆಲ್ಲುವ ಮಟ್ಟಕ್ಕೆ ಆ ಪ್ರತಿಭೆಯನ್ನು ಬೆಳೆಸುವುದು ಕಷ್ಟವಲ್ಲ. ಕಣಿವೆಗೆ ಬಿದ್ದ ದೇಶದ ಕ್ರೀಡಾ ಕ್ಷೇತ್ರವನ್ನು ಶಿಖರದ ತುದಿಗೆ ಒಯ್ಯುವ ಹೊಣೆ ಹೊರಬೇಕಾದ ನೂತನ ವಿಶ್ವ ವಿದ್ಯಾಲಯ ಈ ಅಂಶದ ಕಡೆಗೂ ಗಮನಹರಿಸಬೇಕಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಕ್ರೀಡಾ ವೈದ್ಯಕೀಯ ಶಾಸ್ತ್ರದ ವಿಷಯವಾಗಿ ವೈದ್ಯರು, ಫಿಸಿಯೋಥೆರಪಿಸ್ಟ್‌ಗಳು, ಕೋಚ್‌ಗಳು, ಟ್ರೇನರ್‌ಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಪರಿಪೂರ್ಣ ಮಾಹಿತಿ ಇರುವುದು ಅಗತ್ಯವಾಗಿದೆ. ಕ್ರೀಡಾ ವೈದ್ಯಕೀಯವು ಗಾಯದ ಸಮಸ್ಯೆ, ಚಿಕಿತ್ಸೆ, ಪುನಃಶ್ಚೇತನ, ಮನೋ ವಿಶ್ಲೇಷಣೆ, ಆಹಾರ, ಪೌಷ್ಟಿಕಾಂಶ ಮತ್ತು ಸಾಧನೆ ಎಲ್ಲವನ್ನೂ ಒಳಗೊಂಡ ಶಾಸ್ತ್ರವಾಗಿದೆ. ಈ ಘಟಕ ವಿಶ್ವವಿದ್ಯಾಲಯದ ಪ್ರಮುಖ ಅಂಗವಾಗಬೇಕಿದೆ ಎಂದು ಹೇಳುತ್ತಾರೆ.

ಮಸೂದೆ ಏನು ಹೇಳುತ್ತದೆ?
ದೇಶದಲ್ಲಿ ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಜ್ಞಾನದಲ್ಲಿ ಜ್ಞಾನದ ಸೃಷ್ಟಿ, ಜಾಗತಿಕ ಗುಣಮಟ್ಟದ ತರಬೇತಿ ಸೌಲಭ್ಯ, ಕ್ರೀಡಾ ತಂತ್ರಗಳ ಬೋಧನೆ, ಹೊಸ ತಂತ್ರಜ್ಞಾನ ಪರಿಚಯ ಮತ್ತು ಕ್ರೀಡಾ ಸಾಧನೆ ಮಟ್ಟವನ್ನು ಎತ್ತರಕ್ಕೆ ಏರಿಸುವ ಉದ್ದೇಶದಿಂದ ಈ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.

ಕ್ರೀಡಾ ಕ್ಷೇತ್ರದ ಸಂಶೋಧನೆಗಳಿಗೆ ಉತ್ತೇಜನ ನೀಡಬೇಕು. ದೇಶದ ಎಲ್ಲ ರಾಜ್ಯಗಳಲ್ಲಿ ಕ್ರೀಡಾ ತರಬೇತಿ ವ್ಯವಸ್ಥೆ ಮಾಡಬೇಕು. ಆಯಾ ಪ್ರದೇಶದಲ್ಲಿ ಬಲಿಷ್ಠವಾಗಿರುವ ಕ್ರೀಡೆಗಳಿಗೆ ತಕ್ಕಂತೆ ತರಬೇತಿ ಸೌಲಭ್ಯ ಕಲ್ಪಿಸಬೇಕು. ದೇಶಕ್ಕೆ ಅಗತ್ಯವಾದ ಕೋಚ್‌ಗಳು, ಟ್ರೇನರ್‌ಗಳು ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ತಯಾರು ಮಾಡಬೇಕು. ಜಾಗತಿಕ ಕ್ರೀಡಾ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿ, ಕ್ರೀಡಾಪಟುಗಳಿಗೆ ಪರಿಪೂರ್ಣ ಜ್ಞಾನ ಒದಗಿಸಬೇಕು ಮತ್ತು ಅಕಾಡೆಮಿಗಳನ್ನು ಸ್ಥಾಪನೆ ಮಾಡಬೇಕು ಎಂಬ ಹೊಣೆಯನ್ನೂ ನಿಯೋಜಿತ ವಿಶ್ವವಿದ್ಯಾಲಯಕ್ಕೆ ವಹಿಸಿಕೊಡಲಾಗಿದೆ.

ಆಸ್ಟ್ರೇಲಿಯದಲ್ಲಿ ಕ್ರೀಡಾ ವ್ಯವಸ್ಥಾಪನೆ ಎಂಬ ಪರಿಕಲ್ಪನೆ ಕಳೆದ 30 ವರ್ಷಗಳಲ್ಲಿ ಬೆಳೆದು ಮಾಗಿದೆ. ಅದು ಒಬ್ಬ ಬಾಲಪ್ರತಿಭೆಯನ್ನು ವೃತ್ತಿಪರ ಕ್ರೀಡಾಪಟು ವಾಗಿ ಬೆಳೆಸುವ ಸಾಮರ್ಥ್ಯ ಹೊಂದಿದೆ. ಆದ್ದರಿಂದಲೇ ಅಲ್ಲಿನ ಕ್ರೀಡಾ ಸಾಧನೆ ಎತ್ತರಕ್ಕೆ ಏರಿದೆ. ಸಮರ್ಪಣಾ ಭಾವ ಹೊಂದಿದ ಸುಶಿಕ್ಷಿತ ಕ್ರೀಡಾಪಟುಗಳ ದೊಡ್ಡ ಸಮುದಾಯವೇ ಆ ದೇಶದಲ್ಲಿದೆ. ಆದರೆ ಭಾರತದಲ್ಲಿ ಕ್ರೀಡೆಯನ್ನು ಉದ್ಯೋಗ ಕೊಡಿಸುವ ‘ವೀಸಾ’ ಆಗಿ ಬಳಕೆ ಮಾಡಲಾಗುತ್ತದೆ ಎಂಬ ಆರೋಪವಿದೆ. ಈ ಕಳಂಕವನ್ನು ಹೋಗಲಾಡಿಸುವ ಜವಾಬ್ದಾರಿ ಸಹ ಕ್ರೀಡಾ ವಿಶ್ವವಿದ್ಯಾಲಯದ ಮೇಲೆ ಬಿದ್ದಿದೆ.

ಈಶಾನ್ಯ ರಾಜ್ಯಗಳನ್ನು ಭಾರತದ ಕ್ರೀಡಾ ಶಕ್ತಿಕೇಂದ್ರ ಎಂದು ಕರೆಯಲಾಗುತ್ತದೆ. ಆದರೆ, ಆ ಶಕ್ತಿ ಕೇಂದ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಮಾಹಿತಿ ಇದೆ. ಯಾಯ್‌ಥಿಬಿಯಲ್ಲಿ ತಲೆ ಎತ್ತಲಿರುವ ಹೊಸ ಸೌಧ, ಪ್ರತಿಭೆಗಳಿಗೆ ಮಾದಕ ವ್ಯಸನದ ಬದಲು ಕ್ರೀಡಾ ವ್ಯಸನ ಹಿಡಿಸಲಿದೆ ಎನ್ನುವ ನಿರೀಕ್ಷೆಯನ್ನೂ ಇಟ್ಟುಕೊಳ್ಳಲಾಗಿದೆ.

ಕ್ರೀಡಾಪಠ್ಯ ರಚನೆ, ಶಾಲಾ ಹಂತದಿಂದಲೇ ಕ್ರೀಡಾ ಸಂಸ್ಕೃತಿ ವಿಸ್ತರಣೆ, ಕ್ರೀಡಾ ಮೂಲಸೌಕರ್ಯ ಸೃಷ್ಟಿ, ಕೋಚ್‌ಗಳ ತಯಾರಿ, ಸಂಶೋಧನೆಗೆ ಉತ್ತೇಜನ ಮತ್ತು ಜಾಗತಿಕ ಪೈಪೋಟಿಯನ್ನು ಎದುರಿಸಬಲ್ಲ ಸೇನಾನಿಗಳ ಸೃಷ್ಟಿಗಾಗಿ ದೇಶ ಇನ್ನೂ ಕಣ್ಣು ಬಿಡಬೇಕಾದ ಕ್ರೀಡಾ ವಿಶ್ವವಿದ್ಯಾಲಯದ ಕಡೆಗೆ ಆಸೆಗಣ್ಣಿನಿಂದ ನೋಡುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT