ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೆ ಎಂಥ ಸ್ಕರ್ಟ್‌?

ಅರಿವೆಯ ಹರವು
Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೇಸಿಗೆ ಬಂದಾಯಿತು. ತ್ವಚೆ ತಾಕಿ ಚುರುಗುಟ್ಟುವ ಬಿಸಿಲಿಗೆ ಮೈತುಂಬ ಬಟ್ಟೆ ಧರಿಸಿ ಹೊರನಡೆಯಬೇಕೆಂದರೂ ಆಗದು. ಬೆವರು, ಸೆಕೆಗೆ ಬಟ್ಟೆಯೂ ಅಂಟಂಟು. ತ್ವಚೆ ಉಸಿರಾಡಿದಷ್ಟೂ ಆರೋಗ್ಯಕರವಾಗಿರುತ್ತದೆ. ಬಿಸಿಲಿಗೆ ಹೆದರಿ ಬಚ್ಚಿಟ್ಟುಕೊಂಡರೆ ಡಿ ಜೀವಸತ್ವದಿಂದ ವಂಚಿತರಾಗುತ್ತೇವೆ; ಹಾಗೆಂದು ಹಾಗೇ ಹೊರಹೋದರೆ ಕಳೆಗುಂದುತ್ತೇವೆ ಎಂಬೆಲ್ಲ ಯೋಚನೆ ಹುಡುಗಿಯರಿಗೆ. ಜೀನ್ಸ್‌ ಎಷ್ಟೇ ಮೆಚ್ಚಿನದಾದರೂ, ಅದು ಹತ್ತಿಯದೇ ಆದರೂ ಬಿಗಿಯಾಗಿದ್ದರೆ ಬಿಸಿಲಿಗೆ ಅಷ್ಟೇನೂ ಹಿತವೆನಿಸದರು. ಈಗ ಕಾಟನ್‌ ಬಟ್ಟೆಯೇ ಹೆಚ್ಚು ಹಿತಾನುಭವ ನೀಡುವುದು.

ಅದರಲ್ಲೂ ಪ್ಯಾಂಟು, ಮತ್ತು ಬಿಗಿಯಾದ ಚೂಡಿದಾರ್‌ ಬಾಟಮ್‌ಗಿಂತ, ಲೆಗ್ಗಿಂಗ್‌ಗಿಂತಲೂ ಸ್ಕರ್ಟ್‌ಗಳು ಹೆಚ್ಚು ಆಪ್ತವಾಗುವ ಸಮಯ. ಗಾಳಿಗೆ ಮಾತು ಕೇಳದೆ ಹಾರುವ ಭಯವಿಲ್ಲ. ಬಿಸಿಲೇ ಇಲ್ಲೆಲ್ಲ. ಆಗಲೋ ಈಗಲೊ ಅಪರೂಪಕ್ಕೊಮ್ಮೆ ಬೀಸುವ ತಂಗಾಳಿ ಕಾಲುಗಳಿಗೂ ತಾಕಿ ಹಾಯೆನಿಸುವ ಕಾರಣ ಈಗ ಸ್ಕರ್ಟ್‌ ಹಾಕುವುದು ಸೂಕ್ತ. ಆದರೆ ಸ್ಕರ್ಟ್‌ ತೊಡದೇ ಅದೆಷ್ಟು ಸಮಯ ಸರಿದಿದೆ ಎಂಬ ಮುಜುಗರ. ಬದಲಾದ ದೇಹದ ಆಕಾರಕ್ಕೆ ಸರಿಹೊಂದುವ ಸ್ಕರ್ಟ್‌ ಆರಿಸುವುದು ಕಷ್ಟ ಎನಿಸಿದೆಯೆ?

ಸೂಕ್ತ ಅಳತೆಯ ಚೆನ್ನಾಗಿ ಒಪ್ಪುವ, ದೇಹದಾಕಾರಕ್ಕೆ ಮಾತ್ರವಲ್ಲ, ವ್ಯಕ್ತಿತ್ವಕ್ಕೂ ಹೊಂದುವ ಸ್ಕರ್ಟ್‌ ತೊಡಬಹುದು.

ತೆಳ್ಳಗೆ ಎತ್ತರವಾದ ಹುಡುಗಿಯರಿದ್ದರೆ ಮೊಳಕಾಲಿಗಿಂತ ಎರಡಿಂಚು ಮೇಲೆ ಅಥವಾ ಎರಡಿಂಚು ಉದ್ದದ ಸ್ಕರ್ಟ್‌ ಒಪ್ಪುತ್ತದೆ. ಹಾಗೆ ನೋಡಿದರೆ ಇಂಥವರು ಏನು ಧರಿಸಿದರೂ ಚೆಂದವೇ. ಸ್ಕರ್ಟ್‌ ಹಾಕಲು ತುಂಬ ಮುಜುಗರವೆನಿಸಿದರೆ ಲೈಕ್ರಾ ಬಟ್ಟೆಯ ಅಥವಾ ಜಾರ್ಜೆಟ್‌, ವೆಲ್ವೆಟ್‌ ಬಟ್ಟೆಯ, ಚೂಡಿದಾರ್‌ ಜತೆ ಧರಿಸುವಂಥ ಲೆಗ್ಗಿಂಗ್‌ ಕೂಡ ಧರಿಸಬಹುದು.

ದಿಟ್ಟ ಪ್ರಿಂಟ್‌ ಡಿಸೈನ್‌ ಇರುವ ಗಾಗ್ರಾ ಕೂಡ ಪರವಾಗಿಲ್ಲ. ದೇಹಕ್ಕೆ ಬಿಗಿಯಾಗಿ ಸುತ್ತಿದಂತೆ ಕಾಣುವ ಮಿನಿ ಸ್ಕರ್ಟ್‌ ಕೂಡ ಚೆನ್ನಾಗಿರುತ್ತದೆ.

ಎತ್ತರವಿದ್ದು, ದೇಹದಾಕಾರ ತುಸು ಅಗಲವಾಗಿದ್ದರೆ ಮೊಳಕಾಲವರೆಗೆ ಇರುವ ಅಥವಾ ಮೀನಖಂಡದವರೆಗಿನ ಸ್ಕರ್ಟ್‌ ಸರಿಯಾಗುತ್ತದೆ. ಹಿಮ್ಮಡಿವರೆಗಿದ್ದರೂ ಚೆಂದ. ಆದರೆ ನಿರಿಗೆ ಹೆಚ್ಚಿರುವುದಕ್ಕಿಂತ ಬಟ್ಟೆ ಗರಿಗರಿಯಾಗಿರದೆ ಅಲೆಅಲೆಯಂತೆ ಫ್ಲೋ ಇರುವ ಹಾಗಿದ್ದರೆ ಸೂಕ್ತ. ನವಿರಾದ ಬಟ್ಟೆ, ದೇಹಕ್ಕೆ ಹತ್ತಿಕೊಂಡೇ ಇರುವಂತಾದರೆ ಇನ್ನೂ ಒಳ್ಳೆಯದು. ಇಂಥ ದಿರಿಸಿನಲ್ಲಿ ಎತ್ತರವಾಗಿ ಕಂಡು, ಅಗಲ ಕಡಿಮೆ ಎನಿಸುವ ಹಾಗಿರುತ್ತದೆ. ಕ್ರಶ್‌ ಮಾಡಿದಂತಿರುವ ಗಾಢ ಬಣ್ಣದ ದೊಡ್ಡ ದೊಡ್ಡ ಚಿತ್ತಾರದ ಸ್ಕರ್ಟ್‌ ಕೂಡ ನಡೆಯುತ್ತದೆ. ಪಾರದರ್ಶಕವಾಗಿದ್ದು, ತಿಳಿವರ್ಣದಲ್ಲಿದ್ದರೂ ಓಕೆ. ಆದರೆ ಆದಷ್ಟೂ ನೈಸರ್ಗಿಕ ಬಟ್ಟೆಯ ಸ್ಕರ್ಟ್‌ ಇದ್ದರೆ ಹೆಚ್ಚು ಒಪ್ಪುತ್ತದೆ.

ಅಷ್ಟೇನೂ ಎತ್ತರವಿಲ್ಲದೆ ಸ್ವಲ್ಪ ದಪ್ಪಗಿರುವವರು ಒಂದೇ ಉದ್ದದ ಸ್ಕರ್ಟ್‌ಗಿಂತಲೂ ಜಿಗ್‌ ಜ್ಯಾಗ್‌ ಅಂಚಿನ ಸ್ಕರ್ಟ್‌ ಧರಿಸುವುದು ಉತ್ತಮ. ಒಂದು ಕಡೆ ಉದ್ದ, ಒಂದು ಕಡೆ ಅದಕ್ಕಿಂತ ತುಸು ಚಿಕ್ಕದಾಗಿ ಕಾಣುವ ಅಂಚಿನಿಂದಾಗಿ ಧರಿಸಿದವರ ಎತ್ತರ ಅಂದಾಜು ಮಾಡಲು ಬಿಡದೆ ಕನ್‌ಫ್ಯೂಸ್‌ ಮಾಡುತ್ತದೆ. ಅಲ್ಲದೆ ಇದರಿಂದ ದೇಹದ ಎತ್ತರವನ್ನು ಇಷ್ಟೇ ಎಂದು ವಿಭಾಗಿಸಿದಂತೆ ಕಾಣುವುದಿಲ್ಲ. ಹೀಗೆ ಕಾಣಬಾರದೆಂದರೆ ಸ್ಕರ್ಟ್‌ ಮತ್ತು ಟಾಪ್‌ ತೀರ ವಿರುದ್ಧ ಬಣ್ಣದ ಕಾಂಟ್ರ್ಯಾಸ್ಟ್‌ ಆಗದಂತೆ ನೋಡಿಕೊಳ್ಳಬೇಕು. ಆದರೆ ತೀರಾ ದೇಹಕ್ಕೆ ಅಂಟಿಂದಂತಿರುವ ಸ್ಕರ್ಟ್‌ ಬೇಡವೇ ಬೇಡ. ಅಡ್ಡಡ್ಡ ಗೆರೆಯ ಪ್ರಿಂಟ್‌ ಕೂಡ ಬೇಡ. ತುಂಬ ಚಿಕ್ಕ ಸ್ಕರ್ಟ್‌ ಸಹ ಸರಿ ಕಾಣುವುದಿಲ್ಲ. ಎ ಲೈನ್‌ ಸ್ಕರ್ಟ್‌ ಆರಿಸದಿದ್ದರೆ ಒಳ್ಳೆಯದು.

ಜಾರ್ಜೆಟ್‌, ಸ್ಯಾಟಿನ್‌ ಬಟ್ಟೆಯ, ಉದ್ದುದ್ದ ಗೆರೆಗಳಿರುವ ಮತ್ತು ಜ್ಯಾಮಿತಿ ಚಿತ್ತಾರದ ಮೊಳಕಾಲುದ್ದದ ಸ್ಕರ್ಟ್‌ ಇರಲಿ. ಇನ್ನೂ ಉದ್ದದ ಸ್ಕರ್ಟ್‌ ಆದರೂ ಪರವಾಗಿಲ್ಲ.
ಮೊಳಕಾಲವರೆಗಿನ ಹಗುರವಾದ ಉಣ್ಣೆಯ ಬಟ್ಟೆಯಿಂದ ಮಾಡಿದ ಅಥವಾ ಪಾರದರ್ಶಕ ಲಿನೆನ್‌ನ ಸ್ಕರ್ಟ್‌ ಒಪ್ಪುತ್ತದೆ. ಇದರಿಂದಾಗಿ ಸಪೂರ ದೇಹಾಕೃತಿ ಎಂಬಂತೆ ಕಾಣುತ್ತದೆ. ಇಂಥ ಸ್ಕರ್ಟ್‌ಗೆ ಆಕಾರವೂ ಇರುತ್ತದೆ.

ಅಷ್ಟೇನೂ ಎತ್ತರವಿರದ, ಆದರೆ ತೆಳ್ಳಗೆ ಇರುವ ಹುಡುಗಿಯರಿಗೆ ಎಕ್ಸ್‌ಟ್ರೀಮ್‌ ಅಳತೆಯ ಸ್ಕರ್ಟ್‌ ಚೆನ್ನಾಗಿ ಕಾಣುತ್ತದೆ. ತುಂಬ ಚಿಕ್ಕದಾದ ಮತ್ತು ತುಂಬ ಉದ್ದನೆ ಸ್ಕರ್ಟ್‌ ಎರಡೂ ಚೆಂದ ಕಾಣುತ್ತದೆ. ಮಿನಿಯಾದರೂ ಸರಿಯೇ, ಸಾಂಪ್ರದಾಯಿಕ ಗಾಗ್ರಾ ಆದರೂ ಸರಿಯೇ. ಪಾದದವರೆಗೂ ಇರುವ ಉದ್ದನೆ ಸ್ಕರ್ಟ್‌ಗೆ ಚಿಕ್ಕ ನಡುವಿನಳತೆ ಇದ್ದು ನಿರಿಗೆ ನಿರಿಗೆ ಸೇರಿಸಿ ಹೊಲಿದ ಸ್ಕರ್ಟ್‌ ಕೂಡ ಉತ್ತಮ ಆಯ್ಕೆ. ತಿಳಿವರ್ಣದ್ದಾದರೆ ಇನ್ನೂ ತೆಳ್ಳಗೆ ಕಾಣಬಹುದು. ದೇಹವನ್ನು ಅಪ್ಪುವ ಲೈಕ್ರಾದಂತಹ ಬಟ್ಟೆ ತುಂಬ ಚೆನ್ನಾಗಿರುತ್ತದೆ.

ಸ್ಕರ್ಟ್‌ಗಳಲ್ಲಿ ಉದ್ದಕ್ಕೂ ಹೊಲಿಗೆಯೇ ಇರದ ಸುಮ್ಮನೆ ಸುತ್ತಿಕೊಳ್ಳುವ ರ್‍ಯಾಪ್‌ ಅರೌಂಡ್‌ಗಳು, ಅಂಬ್ರೆಲಾ ಕಟ್‌ನ ಸ್ಕರ್ಟ್‌ಗಳು, ಸ್ಟ್ರೇಟ್‌ ಕಟ್‌ನ ಸ್ಕರ್ಟ್‌ಗಳು ಚೆಂದವೇ. ಉದ್ದನೆ ಸ್ಕರ್ಟ್‌ಗಳು ಆಧುನಿಕವಾಗಿಯೂ ಸಾಂಪ್ರದಾಯಿಕವಾಗಿಯೂ ಕಾಣಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT