ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ಬಳಿ ಮಕ್ಕಳಿರಲಿ?

ನಿಮಗಿದು ತಿಳಿದಿರಲಿ
Last Updated 22 ಮೇ 2015, 19:30 IST
ಅಕ್ಷರ ಗಾತ್ರ

(ಮಕ್ಕಳ ಅಭಿರಕ್ಷೆ-೫)
ವಿಚ್ಛೇದನೆಯ ಸಂದರ್ಭದಲ್ಲಿ ಮಕ್ಕಳ ಅಭಿರಕ್ಷೆಯ ಪ್ರಶ್ನೆ ಎದುರಾದಾಗಲೆಲ್ಲ ಕೇಳಿಬರುವ ಮಾತು- ಮಕ್ಕಳ ಯೋಗಕ್ಷೇಮದ ದೃಷ್ಟಿಯಿಂದ ತಂದೆ ತಾಯಿಯರಲ್ಲಿ ಯಾರ ವಶಕ್ಕೆ ಮಕ್ಕಳನ್ನು ವಹಿಸಿಕೊಡುವುದು ಸೂಕ್ತವೋ ಅವರಿಗೆ ವಹಿಸಿಕೊಡಲಾಗುತ್ತದೆ ಎಂಬುದು. ಅಭಿರಕ್ಷೆ ಎಂದರೆ ‘ಮಕ್ಕಳ ದೈಹಿಕ’ ಸ್ವಾಧೀನತೆ.

ಇದು ಕಾನೂನಿನ ಪ್ರಶ್ನೆಯಾಗುವುದಕ್ಕಿಂತ ಹೆಚ್ಚಾಗಿ ಆಯಾ ಪ್ರಕರಣದ ವಿವರಗಳು, ಸಂದರ್ಭಗಳು, ತಂದೆ/ತಾಯಿಯ ಆರ್ಥಿಕ ಅನುಕೂಲತೆ ಮತ್ತು ಮಕ್ಕಳ ಇಚ್ಛೆ ಇವುಗಳನ್ನು ಅವಲಂಬಿಸಿ ನ್ಯಾಯಾಲಯ ಕಾನೂನಿನ ಚೌಕಟ್ಟಿಗೆ ಒಳಪಟ್ಟೇ ಕೈಗೊಳ್ಳುವ ವಿವೇಚನೆಯನ್ನಾಧರಿಸಿದ ತೀರ್ಪು ಆಗಿರುತ್ತದೆ. ಆದ್ದರಿಂದ ನ್ಯಾಯಾಲಯದ ತೀರ್ಪು ಹೊರಬೀಳುವವರೆಗೆ ತಂದೆ/ ತಾಯಿಯರ ಆತಂಕ ಹೇಳತೀರದ್ದು. ಎರಡೂ ಪಕ್ಷಕಾರರೂ ಮಗು ತಮ್ಮ ಬಳಿಯಿರುವುದೇ ಮಗುವಿನ ಯೋಗಕ್ಷೇಮದ ದೃಷ್ಟಿಯಿಂದ ಅತ್ಯುತ್ತಮ ಎಂದು ವಾದಿಸುತ್ತಾರೆ.

ಹಾಗಾದರೆ ಮಗುವಿನ ಯೋಗಕ್ಷೇಮಕ್ಕೆ ಅತ್ಯುತ್ತಮ ಎಂದು ನಿರ್ಧರಿಸುವ ಅಂಶಗಳು ಯಾವುವು? ಯಾವ ಅಂಶಗಳನ್ನು ಆಧರಿಸಿ ನ್ಯಾಯಾಲಯ ತನ್ನ ತೀರ್ಮಾನಕ್ಕೆ ಬರುತ್ತದೆ? ಈ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಈ ಮುಂದಿನಂತೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಬಂದಿದೆ.

ಮೊದಲನೆಯದಾಗಿ ಮಕ್ಕಳ ಅಭಿರಕ್ಷೆ ನಿರ್ಧಾರವಾಗುವುದು ಮಕ್ಕಳ ಯೋಗಕ್ಷೇಮದ ದೃಷ್ಟಿಯಿಂದ ಯಾವುದು ಸರಿ ಎಂಬುದರ ಮೇಲೇ ಹೊರತು ತಂದೆ/ತಾಯಿಗಿರುವ ಹಕ್ಕನ್ನು ಆಧರಿಸಿ ಅಲ್ಲ. ಇತರ ಅಂಶಗಳೆಲ್ಲ ಮೇಲಿನ ಅಂಶಕ್ಕೆ ಅಧೀನವಾದವುಗಳು.
ಮಕ್ಕಳ ಎಳೆ ವಯಸ್ಸಿನಲ್ಲಿ ತಾಯಿಯ ಹಾಗೆ ಅವರನ್ನು ಪಾಲನೆ ಮಾಡುವುದು ಬೇರೆ ಯಾರಿಂದಲೂ ಸಾಧ್ಯವಿಲ್ಲ. ತಾಯಿಗೆ ಬದಲಿ ವ್ಯಕ್ತಿ ದೊರೆಯುವುದಿಲ್ಲ. ಮಹಿಳೆಯ ಸ್ಥಾನಮಾನ ಹಿಂದೆಗಿಂತಲೂ ಇಂದು ಸುಧಾರಿಸಿರುವುದರಿಂದ ಸಣ್ಣ  ಮಕ್ಕಳ ಪಾಲನೆ-ಪೋಷಣೆಯನ್ನು ತಾಯಿಗೆ ವಹಿಸು ವುದೇ ಅತ್ಯಂತ ಸೂಕ್ತ.

ಇತ್ತೀಚಿನ ವರ್ಷಗಳಲ್ಲಿ, ನ್ಯಾಯಾಲ ಯಗಳು ತಮ್ಮ ವಿವೇಚನಾಯುತ ಅಧಿಕಾರವನ್ನು ಚಲಾಯಿಸಿ, ಮಕ್ಕಳ ಯೋಗ ಕ್ಷೇಮದ ದೃಷ್ಟಿಯಿಂದ ತಂದೆಯ ಹಕ್ಕುಗಳನ್ನು ಮೊಟಕುಗೊಳಿಸುತ್ತಿವೆ.
ಹಿಂದೂ ವಿವಾಹ ಅಧಿನಿಯಮದ ೨೬ ನೇ ಪ್ರಕರಣ, ಮಕ್ಕಳ ಅಭಿರಕ್ಷೆಗೆ ಸಂಬಂಧಿಸಿದಂತೆ, ತಾಯಿಗೂ ತಂದೆಯಂತೆಯೇ ಸಮಾನ ಹಕ್ಕನ್ನು ನೀಡಿದೆ.
ಮುಖ್ಯವಾಗಿ, ನ್ಯಾಯಾಲಯಗಳು ಮಕ್ಕಳ ಯೋಗಕ್ಷೇಮಕ್ಕೆ ಅತ್ಯಂತ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಮಕ್ಕಳ ಯೋಗಕ್ಷೇಮದ ದೃಷ್ಟಿಯಿಂದ ತಂದೆ ತಾಯಿಯರ ಹಕ್ಕುಗಳನ್ನು ಪಕ್ಕಕ್ಕಿರಿಸಿ ಮಕ್ಕಳ ಅಭಿರಕ್ಷೆಯ ಅಹವಾಲುಗಳ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿ ಬಂದರೆ ಅಂಥ ವಿವೇಚನೆಯನ್ನೂ ಬಳಸಬೇಕಾಗುತ್ತದೆ.

ಹಿಂದೂ ವಿವಾಹ ಅಧಿನಿಯಮ ಜಾರಿಗೆ ಬರುವುದಕ್ಕೆ ಮುನ್ನ ತಂದೆಯ ಹಕ್ಕಿಗೆ ಮೊದಲು ಆದ್ಯತೆ ದೊರೆಯುತ್ತಿತ್ತು. ಆದರೆ ಹಿಂದಿನ ಸಿದ್ಧಾಂತ ಕೊನೆಗೊಂಡು ಮಕ್ಕಳ ಯೋಗಕ್ಷೇಮ ಸಿದ್ಧಾಂತಕ್ಕೆ ಈಗ ಆದ್ಯತೆಯಿದೆ. ಮಗುವಿನ ಯೋಗಕ್ಷೇಮವನ್ನು ಹಣದಿಂದ ಮಾತ್ರ ಅಳೆಯಲಾಗುವುದಿಲ್ಲ. ಐಹಿಕ ಸುಖಕ್ಕೆ ಒದಗಿಸಬಹುದಾದ ಸಾಧನಗಳಿಂದಲೂ ಅಳೆಯಲಾಗುವುದಿಲ್ಲ. ಮಗುವಿನ ಯೋಗಕ್ಷೇಮವನ್ನು ನಿರ್ಧರಿಸು ವಾಗ ಮಗುವಿನ ಬಳಿ ತಂದೆ ತಾಯಿಯರ ವರ್ತನೆ ಹೇಗಿರುತ್ತದೆ ಎಂಬುದು ಮುಖ್ಯ ಅಂಶವಾಗುತ್ತದೆ.

ಹಾಗೆಯೇ, ಪತಿ ಪತ್ನಿಯರು ತಮ್ಮ ತಮ್ಮಲ್ಲಿ  ವರ್ತಿಸುವ ರೀತಿ ಮಗುವಿನ ಮೇಲೆ ಪರಿಣಾಮ ಬೀರುವುದರಿಂದ ಅದನ್ನು ಗಮನಿಸುವುದೂ ಮುಖ್ಯವಾಗುತ್ತದೆ, ಏಕೆಂದರೆ ಅವರ ನಡುವಿನ ವರ್ತನೆ ಅವರ ವ್ಯಕ್ತಿತ್ವವನ್ನು ಅಥವಾ ಅವರಲ್ಲಿರಬಹುದಾದ ವರ್ತನೆಯಲ್ಲಿನ ದೋಷಗಳನ್ನು ಹೊರಗೆಡವುತ್ತವೆ.

ಮಕ್ಕಳು ಯಾರೊಡನೆ ಇದ್ದರೆ ಸಂತೋಷ ವಾಗಿರುತ್ತಾರೆ ಮತ್ತು ಯಾರೊಡನೆ ಇದ್ದರೆ ಅವರಿಗೆ ಭದ್ರತೆಯ ಭಾವವಿರುತ್ತದೆ ಎಂಬುದು ತೀರ್ಪು ನೀಡುವಾಗ ಮುಖ್ಯವಾಗಿ ಗಮನಿಸುವ ಅಂಶವಾಗುತ್ತದೆ. ಈ ಎಲ್ಲ ಅಂಶಗಳನ್ನೂ ಆಯಾ ಪ್ರಕರಣಕ್ಕೆ ಸಂಬಂಧಪಟ್ಟ ವಿವರಗಳನ್ನು ಆಧರಿಸಿಯೇ ವಿಶ್ಲೇಷಿಸಿ ನಿರ್ಧಾರಕ್ಕೆ ಬರಬೇಕಾಗುತ್ತದೆ. ಆದ್ದರಿಂದ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ನಿಯಮಗಳನ್ನು ರೂಪಿಸುವುದೂ ಸಾಧ್ಯವಿಲ್ಲ, ಅವುಗಳ ಪಾಲನೆಯನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT