ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ಮುಡಿಗೆ ಕಿರೀಟ?

ಐಪಿಎಲ್ –9ರ ಫೈನಲ್ ಇಂದು :ಮಹಾ ಭಾನುವಾರದ ಹಣಾಹಣಿಗೆ ಸಿದ್ಧವಾಗಿರುವ ರಾಜಧಾನಿ
Last Updated 28 ಮೇ 2016, 20:07 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ  ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಇಂದು ಮಹಾ ಭಾನುವಾರ.  ಎರಡು ಮದಗಜಗಳ ‘ಸಮರ’ ನೋಡುವ ದಿನ.

ಒಂದು ಕಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ, ಎ.ಬಿ. ಡಿವಿಲಿಯರ್ಸ್, ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್, ಕೆ.ಎಲ್. ರಾಹುಲ್ ಎಂಬ ‘ರನ್‌ ಯಂತ್ರಗಳ’ ಪಡೆ. ಇನ್ನೊಂದು  ಕಡೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಡೇವಿಡ್ ವಾರ್ನರ್, ಶಿಖರ್ ಧವನ್, ಯುವರಾಜ್‌ ಸಿಂಗ್,  ಭುವನೇಶ್ವರ್ ಕುಮಾರ್, ಮುಸ್ತಫಿಜರ್ ರೆಹಮಾನ್ ಎಂಬ ಛಲದಂಕಮಲ್ಲರ ಬಳಗ.  ಈ ಎರಡೂ ಬಣಗಳ ನಡುವಿನ  ಹಣಾಹಣಿಗೆ  ಚಿನ್ನಸ್ವಾಮಿ ಅಂಗಳ ಸಜ್ಜಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಟೂರ್ನಿಯ ಒಂಬತ್ತನೆ ಆವೃತ್ತಿಯ ಫೈನಲ್‌  ಪಂದ್ಯದತ್ತಲೇ ಈಗ ಕ್ರಿಕೆಟ್‌ ಪ್ರಿಯರ ಚಿತ್ತ ನೆಟ್ಟಿದೆ.  ಐಪಿಎಲ್‌ನಲ್ಲಿ  ಒಂಬತ್ತು ವರ್ಷಗಳಿಂದ ಆಡುತ್ತಿರುವ ಆರ್‌ಸಿಬಿ ಮತ್ತು ನಾಲ್ಕು ವರ್ಷಗಳಿಂದ ಸತತವಾಗಿ  ಸಾಮರ್ಥ್ಯ ವೃದ್ಧಿಸಿಕೊಂಡು ಬೆಳೆದಿರುವ ಸನ್‌ರೈಸರ್ಸ್‌ ತಂಡಗಳಿಗೆ ಮೊದಲ ಪ್ರಶಸ್ತಿ ಗೆಲ್ಲುವ ಛಲ ಇದೆ. ಆದ್ದರಿಂದಲೇ ಎರಡೂ ತಂಡಗಳ ನಡುವೆ ತುರುಸಿನ ಹೋರಾಟದ ನಿರೀಕ್ಷೆ ಮೂಡಿದೆ. 

ಇದರಿಂದಾಗಿ ಹರಿಯಬಹುದಾದ  ಮನರಂಜನೆಯ  ಹೊಳೆಯಲ್ಲಿ ಈಜಾಡಲು ಸಾವಿರಾರು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ವಿರಾಟ್‌.. ಎಬಿಡಿ..ಗೇಲ್‌..ರಾಹುಲ್
ನಾಲ್ಕು ಶತಕ, ಆರು ಅರ್ಧಶತಕಗಳು ಸೇರಿರುವ ಒಟ್ಟು 919 ರನ್‌ಗಳನ್ನು ತಮ್ಮ ಖಾತೆಯಲ್ಲಿ ಇಟ್ಟುಕೊಂಡಿರುವ ವಿರಾಟ್ ಕೊಹ್ಲಿಯೇ ಈಗ ಕೇಂದ್ರಬಿಂದು.

ಮೇ 24ರಂದು ಇಲ್ಲಿಯೇ  ನಡೆದ ಮೊದಲ ಕ್ವಾಲಿಫೈಯರ್ ಹೊರತುಪಡಿಸಿದರೆ ಲೀಗ್ ಹಂತದ ಬಹುತೇಕ ಪಂದ್ಯಗಳಲ್ಲಿ ಅವರೇ ತಂಡದ ಗೆಲುವಿನ ರೂವಾರಿಯಾಗಿದ್ದರು. ಅದರೊಂದಿಗೆ ಅಭಿಮಾನಿಗಳ ಮನದಂಗಳದಲ್ಲಿ ನಲಿಯುತ್ತಲೇ ಇದ್ದಾರೆ.

ಫೈನಲ್ ನೋಡಲು ಉತ್ಸುಕರಾಗಿರುವ ಬಹುತೇಕ ಅಭಿಮಾನಿಗಳು ಆರ್‌ಸಿಬಿಯೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳಲು ಕೊಹ್ಲಿ  ಆಟವೇ ಕಾರಣ. ಅಲ್ಲದೇ ಅನುಭವದಲ್ಲಿಯೂ ಆರ್‌ಸಿಬಿಯು ಸನ್‌ರೈಸರ್ಸ್‌ಗಿಂತ ಹಿರಿಯ. ಎಲ್ಲ ಒಂಬತ್ತು ಆವೃತ್ತಿಗಳಲ್ಲಿ ಆಡಿರುವ ತಂಡ.  ಹೈದರಾಬಾದ್ 2013ರಿಂದ ಆಡುತ್ತಿದೆ. ಒಂದು ಬಾರಿಯೂ ಫೈನಲ್ ತಲುಪಿಲ್ಲ. ಆದರೆ, ಆರ್‌ಸಿಬಿ 2009 ಮತ್ತು 2011ರಲ್ಲಿ  ರನ್ನರ್ಸ್‌ಅಪ್ ಆಗಿತ್ತು.

ಹೋದ ವರ್ಷ ಪ್ಲೇಆಫ್‌ನಲ್ಲಿ ನಿರ್ಗಮಿಸಿತ್ತು. ಟೂರ್ನಿಯ ಆರಂಭಿಕ ಹಂತದಲ್ಲಿ ಆರ್‌ಸಿಬಿ ಬಹಳಷ್ಟು ನಿರಾಸೆ ಅನುಭವಿಸಿತ್ತು.  ಕೊಹ್ಲಿಯ  ಭುಜ ಬಲ ಪರಾಕ್ರಮದಿಂದ ಆರ್‌ಸಿಬಿ ಪುಟಿದೆದ್ದಿತ್ತು. ಅದರಿಂದಾಗಿ ಹಿಂದಿನ ಏಳು ಪಂದ್ಯಗಳಲ್ಲಿ ಆರ್‌ಸಿಬಿ ಆರರಲ್ಲಿ ಗೆದ್ದಿದೆ. ಅವರೊಂದಿಗೆ ಎ.ಬಿ. ಡಿವಿಲಿಯರ್ಸ್‌  ಕೂಡ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದ್ದಾರೆ. ಕ್ವಾಲಿಫೈಯರ್‌ನಲ್ಲಿ ಎಬಿಡಿ  ಹೋರಾಟದಿಂದಲೇ ಆರ್‌ಸಿಬಿ ಫೈನಲ್‌ಗೆ ಲಗ್ಗೆ ಹಾಕಿತ್ತು.  ಗುಜರಾತ್ ಲಯನ್ಸ್‌ ನಾಯಕ ಸುರೇಶ್ ರೈನಾ  ಕೂಡ ಮೆಚ್ಚಿ ತಲೆದೂಗಿದ್ದಾರೆ.

ಟೂರ್ನಿಯ ಎರಡು ಪಂದ್ಯಗಳಲ್ಲಿ  ಮಾತ್ರ ಅಬ್ಬರಿಸಿದ್ದರೂ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಬಗ್ಗೆ ಎದುರಾಳಿಗಳಿಗೆ ಸ್ವಲ್ಪ ಭಯ ಇರುವುದಂತೂ ಖಚಿತ.  ಆರ್‌ಸಿಬಿಯ ಬ್ಯಾಟಿಂಗ್ ಬಲ ಇಷ್ಟಕ್ಕೆ ಮುಗಿಯುವುದಿಲ್ಲ. ಮಧ್ಯಮಕ್ರಮಾಂಕದಲ್ಲಿ ಆಡುವ ಶೇನ್ ವ್ಯಾಟ್ಸನ್ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡುವ ಆಟಗಾರ. ಇವರೆಲ್ಲರಿಗೂ ತಕ್ಕ ಜೊತೆಗಾರನಾಗಿ ರೂಪುಗೊಂಡಿರುವ ಕರ್ನಾಟಕದ ಕೆ.ಎಲ್. ರಾಹುಲ್ ಕೂಡ ಇದುವರೆಗೆ ವಿಶ್ವಾಸಾರ್ಹ ಆಟವಾಡಿದ್ದಾರೆ.  ಹೋದ ವರ್ಷ ತಾವು ಪ್ರತಿನಿಧಿಸುತ್ತಿದ್ದ ಸನ್‌ರೈಸರ್ಸ್ ತಂಡದ ವಿರುದ್ಧ ಅವರ ಆಟವನ್ನು ನೋಡುವ ಅವಕಾಶ ಈಗ ಇದೆ.  ಆದರೆ, ಸನ್‌ರೈಸರ್ಸ್ ತಂಡದ ಬಲಿಷ್ಠ ಬೌಲಿಂಗ್ ಪಡೆಯ ಮುಂದೆ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ಸತ್ವ ಪರೀಕ್ಷೆ ಆಗುವುದಂತೂ ದಿಟ.

ಸನ್‌ರೈಸರ್ಸ್ ಬೌಲರ್‌ಗಳ ಪ್ರಖರತೆ
ಈ ಟೂರ್ನಿಯಲ್ಲಿ ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲಿ ವಾರ್ನರ್‌ ಬಳಗವನ್ನು ಇದೇ ಮೈದಾನದಲ್ಲಿ ಮಣಿಸಿತ್ತು. 

ಆದರೆ, ಅಂದಿನ ಸನ್‌ರೈಸರ್ಸ್ ತಂಡಗಕ್ಕೂ ಇಂದಿಗೂ ಅಗಾಧ ವ್ಯತ್ಯಾಸವಿದೆ. ಎಲ್ಲ ತಂಡಗಳಲ್ಲಿ ಬ್ಯಾಟಿಂಗ್ ಪಡೆ ಮಿಂಚಿದರೆ, ಹೈದರಾಬಾದ್‌ನಲ್ಲಿ ಬೌಲರ್‌ಗಳು ತಮ್ಮ ತೋಳ್ಬಲ ಮೆರೆದಿದ್ದಾರೆ. ಒಟ್ಟು 23 ವಿಕೆಟ್‌ಗಳನ್ನು ಗಳಿಸಿರುವ ಭುವನೇಶ್ವರ ಕುಮಾರ್, ಮುಸ್ತಫಿಜರ್ ರೆಹಮಾನ್, ಮೊಯಿಸೆಸ್ ಹೆನ್ರಿಕ್ಸ್ ಅವರು ವಿಕೆಟ್‌ಗಳನ್ನು ಪಡೆಯುವುದರ ಜೊತೆಗೆ ರನ್‌ಗಳಿಕೆಗೆ ಕಡಿವಾಣ ಹಾಕುವಲ್ಲಿಯೂ ನಿಸ್ಸೀಮರು.   ಈ ಬಾರಿಯ ಬಹುತೇಕ ಎಲ್ಲ ಪಂದ್ಯಗಳಲ್ಲಿಯೂ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದಾರೆ.  ಕಳೆದ ಮೂರು ಪಂದ್ಯಗಳಲ್ಲಿ  ಎಡಗೈ ವೇಗಿ ಆಶಿಶ್ ನೆಹ್ರಾ ಅವರ ಅನುಪಸ್ಥಿತಿಯಲ್ಲಿ ಉಳಿದ ಬೌಲರ್‌ಗಳು ಮಿಂಚಿದ್ದಾರೆ.

ವಾರ್ನರ್ ವೀರಾವೇಷ
ಆಸ್ಟ್ರೇಲಿಯಾದ ಆಟಗಾರ, ಹೈದರಾಬಾದ್ ತಂಡದ ಸಾರಥಿ ಡೇವಿಡ್ ವಾರ್ನರ್ ಕೂಡ ಸಿಡಿಲಬ್ಬರದ ಬ್ಯಾಟ್ಸ್‌ಮನ್. ಎರಡನೇ ಕ್ವಾಲಿಫೈಯರ್‌ನಲ್ಲಿ ಲಯನ್ಸ್ ಎದುರು ಏಕಾಂಗಿ ಹೋರಾಟ ನಡೆಸಿದ್ದ ಅವರು ತಂಡವನ್ನು ಫೈನಲ್‌ಗೆ ತಂದು ನಿಲ್ಲಿಸಿದ್ದಾರೆ.

ಟೂರ್ನಿಯಲ್ಲಿ ಒಂದೂ ಶತಕ ಬಾರಿಸದಿದ್ದರೂ ಅವರ ಬ್ಯಾಟಿಂಗ್ ಕೌಶಲ ಕೊಹ್ಲಿಗಿಂತ ಕಮ್ಮಿಯೇನಿಲ್ಲ. ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಶಿಖರ್ ಧವನ್ ಮಿಂಚಿದರೆ ಆತಿಥೇಯ ಬೌಲರ್‌ಗಳಿಗೆ ಕಠಿಣ ಪರೀಕ್ಷೆ ಖಚಿತ. ಯುವರಾಜ್ ಸಿಂಗ್, ಹೆನ್ರಿಕ್ಸ್, ದೀಪಕ್ ಹೂಡಾ, ಕಳೆದ ಪಂದ್ಯದಲ್ಲಿ ಮಿಂಚಿದ್ದ ವಿಪುಲ್ ಶರ್ಮಾ, ನಮನ್ ಓಜಾ ಕೂಡ ರನ್‌ ಗಳಿಕೆಗೆ ವೇಗ ನೀಡುವ ಸಮರ್ಥರು.

ಟೂರ್ನಿಯಲ್ಲಿ ಒಟ್ಟು 20 ವಿಕೆಟ್‌ಗಳನ್ನು ಕಬಳಿಸಿರುವ ಆರ್‌ಸಿಬಿಯ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್, ಎಡಗೈ ಮಧ್ಯಮವೇಗಿ ಎಸ್. ಅರವಿಂದ್, ಹೋದ ಪಂದ್ಯದಲ್ಲಿ ಆಲ್‌ರೌಂಡ್ ಅಟವಾಡಿದ್ದ ಇಕ್ಬಾಲ್ ಅಬ್ದುಲ್ಲಾ, ಶೇನ್ ವ್ಯಾಟ್ಸನ್ ಅವರ ಮೇಲೆ ಜವಾಬ್ದಾರಿ ಹೆಚ್ಚಿದೆ.

ಏಕೆಂದರೆ, ಎಲಿಮಿನೇಟರ್‌ನಲ್ಲಿ ಸನ್‌ರೈಸರ್ಸ್‌ ತಂಡವು  ಮೊದಲು ಬ್ಯಾಟಿಂಗ್ ಮಾಡಿತ್ತು. ಕ್ವಾಲಿಫೈಯರ್‌ನಲ್ಲಿ ಲಯನ್ಸ್ ನೀಡಿದ್ದ ಗುರಿ ಬೆನ್ನತ್ತಿತ್ತು. ಎರಡೂ ಬಾರಿಯೂ ಗೆದ್ದಿತ್ತು. ಆದ್ದರಿಂದ ಟಾಸ್ ಕೂಡ ಪ್ರಮುಖ ಪಾತ್ರ ವಹಿಸಲಿದೆ.

‘ಸ್ಪರ್ಧಾತ್ಮಕ’ ಪಿಚ್‌ನಲ್ಲಿ ಎರಡು ಸಮಬಲದ ತಂಡಗಳಲ್ಲಿ ಯಾರ ಕೊರಳಿಗೆ ವಿಜಯಮಾಲೆ ಅಲಂಕರಿಸಿದೆ ಎನ್ನುವ ಕುತೂಹಲ ಈಗ ಗರಿಗೆದರಿದೆ.

ಇಂದು ಮಳೆ ಸಾಧ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT