ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದು ಕನಸು, ಎಲ್ಲಿದೆ ‘ಆತ್ಮ’

ಕಿರುದಾರಿ
Last Updated 23 ಮೇ 2016, 19:30 IST
ಅಕ್ಷರ ಗಾತ್ರ

ಬರವಣಿಗೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಯುವ ಬರಹಗಾರನಿಗೆ ಸಿಗದ ಪ್ರೋತ್ಸಾಹ, ಪ್ರಗತಿಪರ ಬರಹಗಾರನನ್ನು ಬಾಧಿಸುವ ನಕಾರಾತ್ಮಕ ಆಕ್ರಮಣ... ಇಂಥ ಎಳೆಗಳು ‘ಆತ್ಮ’ ಕಿರುಚಿತ್ರದ ಉದ್ದಕ್ಕೂ ಗೋಚರಿಸುತ್ತವೆ. ಕಥೆಯನ್ನು ಮುನ್ನಡೆಸುವ ಮಾರ್ಗದರ್ಶಿಯೂ ಅಗುತ್ತವೆ. ‘ಆತ್ಮ’ ಕಿರುಚಿತ್ರದ ಕಥೆ ಬರೆದು ನಿರ್ದೇಶಿದವರು ತಾಯಿ ಲೋಕೇಶ್.

ಬರಹಗಾರರಿಗೆ ದೇಶಕಾಲಗಳ ವ್ಯತ್ಯಾಸವಿಲ್ಲದೇ ಸದಾ ಕಾಡುವ ಸಂಗತಿ ಅಭಿವ್ಯಕ್ತಿ ಸ್ವಾತಂತ್ರ್ಯ. ಕಥೆಗಾರ, ಕವಿ, ವಿಮರ್ಶಕ ಅಥವಾ ಸಿನಿಮಾ ನಿರ್ದೇಶಕ ಕಲಾಕೃತಿ ರೂಪಿಸಲು ತಮ್ಮದೇ ಆದ ಧೋರಣೆಯನ್ನು ನೆಚ್ಚಿಕೊಂಡಿರುತ್ತಾರೆ. ಒಂದು ವಿಚಾರ ಮತ್ತು ಅದರ ವಿವಿಧ ನೆಲೆಗಳನ್ನು ತಮ್ಮ ಕೃತಿಯ ಮೂಲಕ ನಿರ್ದಿಷ್ಟ ಸಮುದಾಯಕ್ಕೆ ತಲುಪಿಸುವ ಆಶಯವನ್ನು ಹೊಂದಿರುತ್ತಾರೆ.

ಕೆಲ ಪ್ರಭುತ್ವಗಳು ವೈಯಕ್ತಿಕ ಹಿತಾಸಕ್ತಿಗೆ ಬರಹಗಾರ ಮತ್ತು ಕಲಾವಿದನ ಮೇಲೆ ಹೇಗೆ ಒತ್ತಡ ಹೇರುತ್ತವೆ ಎಂಬುದನ್ನು ‘ಆತ್ಮ’ ಕಿರುಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ ತಾಯಿ ಲೋಕೇಶ್.

‘ನಿರ್ದೇಶಕನಾಗಬೇಕು ಎಂಬುದು ನನ್ನ ಕನಸು. ಅದನ್ನು ಸಾಕಾರಗೊಳಿಸಿಕೊಳ್ಳುವ ಮಾರ್ಗವಾಗಿ ರೂಪುಗೊಂಡಿದ್ದು ಆತ್ಮ’ ಎಂದು ಅವರು ವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ.

“ಪ್ರತಿ ಬಾರಿ ಕೆಲಸ ಕೇಳಿಕೊಂಡು ಅಲೆಯುವಾಗ ನಿರ್ದೇಶಕರು ಕೇಳುತ್ತಿದ್ದುದು ಒಂದೇ  ಪ್ರಶ್ನೆ, ‘ಏನ್‌ ಅನುಭವಿದೆ, ಎಷ್ಟು ಸಿನಿಮಾ ಮಾಡಿದಯಾ?’.  ಆಗ ನನ್ನ ಬಗ್ಗೆ ಎಷ್ಟು ಹೇಳಿಕೊಂಡರೂ ಪ್ರಯೋಜನವಾಗುತ್ತಿರಲಿಲ್ಲ. ಹೀಗಾಗಿ ನನ್ನ ಸಾಮರ್ಥ್ಯ ನಿರೂಪಿಸಲು ಕಿರುಚಿತ್ರ ಮಾಡಿದೆ” ಎನ್ನುತ್ತಾರೆ ಅವರು.

‘ರಾಜಧಾನಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಮೇಲೆ ಮತ್ತೆ ಯಾವ ಚಿತ್ರದಲ್ಲೂ ಅವಕಾಶ ಸಿಗಲಿಲ್ಲ. ‘ಪಾಂಡುರಂಗವಿಠಲ’ ಧಾರಾವಾಹಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಆದರೆ ಅದು ತೃಪ್ತಿ ಕೊಡಲಿಲ್ಲ. ಮತ್ತೆ ಸಿನಿಮಾ ಕ್ಷೇತ್ರಕ್ಕೆ ಬರಬೇಕೆಂಬ ತುಡಿತ ಹೆಚ್ಚಾದಾಗ ‘ಆತ್ಮ’ ಸಿದ್ಧವಾಯಿತು.

ಕಿರುಚಿತ್ರ ಮಾಡಬೇಕು ಎಂದು   ನಿರ್ಧರಿಸಿದ ತಾಯಿ ಲೋಕೇಶ್‌ ಕಥೆಗಾಗಿ ಹುಡುಕಾಡುತ್ತಿದ್ದರು. ಇದೇ ಸಂದರ್ಭ ಬಂಜಗೆರೆ ಜಯಪ್ರಕಾಶ ಅವರ ‘ಅನುದೇವಾ ಹೊರಗಣವನು’ ಪುಸ್ತಕ ನಿಷೇಧಿಸಲಾಯಿತು. ಇದು ಅವರ ಮನಸ್ಸನ್ನು ಕಲಕಿತು. ವಿಚಾರ ಯಾವುದೇ ಇರಲಿ ಒಬ್ಬ ಲೇಖಕ ತನಗೆ ಅನಿಸಿದ್ದನ್ನು ವ್ಯಕ್ತಪಡಿಸುವ ಅವಕಾಶ ಇಲ್ಲವಲ್ಲ ಎಂಬ ಹಿಂಸೆ ಅವರನ್ನು ಬಾಧಿಸಿತು. ‘ಬರಹಗಾರ ಮತ್ತು ಅವನ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರವನ್ನು ಮುಂದಿಟ್ಟುಕೊಂಡೇ ಕಿರುಚಿತ್ರ ಮಾಡಬೇಕು ಎನಿಸಿತು.

ಒಂದೇ ದಿನದಲ್ಲಿ ಸಿದ್ಧವಾದ ಚಿತ್ರ ಆತ್ಮ’ ಎಂದು ಕಥೆ ಹುಟ್ಟಿದ ಪರಿಯನ್ನು ಹೇಳಿಕೊಳ್ಳುತ್ತಾರೆ ಲೋಕೇಶ್. ಬರಹಗಾರ ಮತ್ತು ಅವನು ಸೃಷ್ಟಿಸಿದ ಪಾತ್ರ ಮುಖಾಮುಖಿಯಾಗಿ ಸಂವಾದ ನಡೆಸುವುದರೊಂದಿಗೆ ಕಿರುಚಿತ್ರ ತೆರೆದುಕೊಳ್ಳುತ್ತದೆ.

ಬರಹಗಾರ ‘ಅಭಿವ್ಯಕ್ತಿ’ಯ ಸಂಕೇತವಾದರೆ, ಅವನು ಸೃಷ್ಟಿಸಿದ ಪಾತ್ರ ‘ಪ್ರಭುತ್ವ’ದ ಸಂಕೇತ. ಬರಹಗಾರನ ಅಭಿವ್ಯಕ್ತಿಯನ್ನು ಅವನು ಸೃಷ್ಟಿಸಿದ ಪಾತ್ರ ಪ್ರಶ್ನಿಸುತ್ತದೆ. ‘ನಿನಗೆ ಸೃಷ್ಟಿಸುವ ಹಕ್ಕು ಮಾತ್ರ ಇದೆ. ಸಾಯಿಸುವುದು ನಿನ್ನ ಹಕ್ಕಲ್ಲ, ನಿನ್ನ ಹಂಗಿಲ್ಲದೆ ಬದುಕುವುದು ನನ್ನ ಹಕ್ಕು’ ಎಂದು ಆತ್ಮ ಹೇಳುತ್ತದೆ.

‘ಹಾಗಾದರೆ ನನ್ನ ಸ್ವಾತಂತ್ರ್ಯ’ ಎಂದು ಬರಹಗಾರ ಪ್ರಶ್ನಿಸಿಕೊಳ್ಳುತ್ತಾನೆ. ಇಂಥ ತಾಕಲಾಟಗಳೇ ಕಿರುಚಿತ್ರದ ಅಡಿಪಾಯ. ಛಾಯಾಗ್ರಹಣದ ಹೊಣೆಯನ್ನು  ದಿಲೀಪ್ ಕುಮಾರ್ ನಿರ್ವಹಿಸಿದ್ದಾರೆ. ಬೆಳಕಿನ ನಿರ್ವಹಣೆ, ಸೂಕ್ಷ್ಮ  ಫ್ರೇಮಿಂಗ್ ಕಥೆಯ ಮೂಲ ಆಶಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಬರಹಗಾರನಾಗಿ ಪವನ್ ಪ್ರಸಾದ್ ಶರ್ಮ ಕಟ್ಟಿಕೊಡುವ ಅನುಭವ ಬಹುಕಾಲ ಕಾಡುತ್ತದೆ. ಆತ್ಮದೊಂದಿಗೆ ಸಂವಾದ ನಡೆಸುವಾಗ ನಡೆಯುವ ಭಾವ ಪಲ್ಲಟಗಳ ಅಭಿವ್ಯಕ್ತಿ ಸಹಜವಾಗಿದೆ.

‘ಬರೆಯುವ ಸ್ವಾತಂತ್ರ ನನ್ನದು’ ಎಂಬ ಬರಹಗಾರನ ಘೋಷಣೆಗೆ, ‘ಬರೆದ ಮೇಲೆ ಬದುಕುವ ಹಕ್ಕು ನನ್ನದು’ ಎಂದು ಕಥೆಯ ಆತ್ಮ ಪ್ರತಿ ಹೇಳುತ್ತದೆ. ಆತ್ಮದ ಪಾತ್ರಧಾರಿ ನವೀನ್, ಬರಹಗಾರನ ಪಾತ್ರಧಾರಿ ಪವನ್ ಪ್ರಸಾದ್ ಶರ್ಮ ತಮ್ಮ ಅಸ್ತಿತ್ವ ಹುಡುಕಿಕೊಳ್ಳುವ ತೊಳಲಾಟವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಕಿರುಚಿತ್ರದ ಕೊನೆಯಲ್ಲಿ ಬರಹಗಾರನನ್ನು ಆತ್ಮ ಬೆದರಿಸಿ ಕುತ್ತಿಗೆಗೆ ಚಾಕು ಹಿಡಿದು, ಕೊನೆಯ ಆಸೆ ಏನೆಂದು ಕೇಳುತ್ತದೆ. ಬರಹಗಾರ ತನ್ನ ಕ್ರಿಯಾತ್ಮಕ ಚಿಂತನೆಗೆ ನೆರವಾಗುವ ಸಿಗರೇಟಿನ ಮೇಲೆ ಕಣ್ಣು ಹಾಯಿಸುತ್ತಾನೆ. ಅದೇ ಕ್ಷಣ ಚಾಕು ಬರಹಗಾರನ ಕತ್ತು ಸೀಳುತ್ತದೆ.

ಕನಸಿನಿಂದ ಎದ್ದು ನೋಡುವ ಬರಹಗಾರನಿಗೆ ಮಂಚದ ಕೆಳಗೆ ಬಿದ್ದ ರಕ್ತದ ಕಲೆ ಕಾಣಿಸುತ್ತದೆ. ‘ಕೊಲೆಯಾದದ್ದು ಏನು?’ ಎಂಬ ಪ್ರಶ್ನೆ ಹುಡುಕುವ ಕಾಯಕ ನೋಡುಗರಿಗೆ ವರ್ಗಾವಣೆಯಾಗುತ್ತದೆ.
‘ಆತ್ಮ’ ಕಿರುಚಿತ್ರ ನೋಡಲು  goo.gl/jIwKHy ಸಂಪರ್ಕಿಸಿ.

ಕಲಾತ್ಮಕ ಚಿತ್ರಗಳ ಅಭಿರುಚಿ
ನಿರ್ದೇಶಕ ತಾಯಿ ಲೋಕೇಶ್ ಅವರು ಸಂವಾದ ಸಂಸ್ಥೆಯೊಂದಿಗೆ ಬಹುಕಾಲದಿಂದ ಒಡನಾಟ  ಹೊಂದಿದ್ದಾರೆ. ವಿಭಿನ್ನ ಸಿನಿಮಾಗಳಿಗೆ ತೆರೆದುಕೊಳ್ಳಲು ಈ ಒಡನಾಟ ನೆರವಾಗಿದೆ. ಕಲಾತ್ಮಕ ಚಿತ್ರ ನೋಡುವ ಅಭಿರುಚಿ ಬೆಳೆಸಿಕೊಂಡಿದ್ದಾರೆ.

ಸಿನಿಮಾ ಕ್ಷೇತ್ರಕ್ಕೆ ಬರಬೇಕು ಎಂದುಕೊಂಡ ಹೊಸತರಲ್ಲಿ ಸಂವಾದ ಸಂಸ್ಥೆಯ ಮುರಳಿ ಮೋಹನ ಕಾಟಿ ಸಾಕಷ್ಟು ಬೆಂಬಲ ನೀಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ತಾಯಿ ಲೋಕೇಶ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೆ.ವಿ. ರಾಜು, ರಘುಜಯ, ಪಿ. ಶೇಷಾದ್ರಿ, ಎಸ್. ಮಹೇಂದ್ರ, ರಾಮನಾಥ ಋಗ್ವೇದಿ, ಕಬ್ಬಡಿ ಬಾಬು ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ.

ಅನ್ಯಾಯ, ಮತಾಂತರ, ಜನಾಂಗೀಯ ನಿಂದನೆಯನ್ನು ಪ್ರಸ್ತಾಪಿಸುವ ‘ಕ್ಷಮೆ’ ಮತ್ತು ಗಾಂಧಿ ಚಿಂತನೆಗಳ ಪ್ರಭಾವದಿಂದ ‘ರೂವಾರಿ’ ಕಥೆಗಳ ಸ್ಕ್ರಿಪ್ಟ್‌ (ಚಿತ್ರಕಥೆ)  ಸಿದ್ಧವಾಗಿದೆ. ನಿರ್ದೇಶಿಸುವ ಸಮಯಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಚಿತ್ರಗಳಿಗೆ ವಿಕ್ರಮ್ ಹತ್ವಾರ್, ಯೋಗರಾಜ ಭಟ್, ಜಯಂತ್ ಕಾಯ್ಕಿಣಿ ಹಾಡುಗಳನ್ನು ಬರೆದುಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT