ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಠೇವಣಿ ಲಾಭದಾಯಕ?

ಕಾರ್ಪೊರೇಟ್‌ ಅಥವಾ ಬ್ಯಾಂಕ್‌ ಎಫ್‌ಡಿ
Last Updated 24 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಇಂದಿನ ಯುವ ವೃತ್ತಿಪರರು ಹಾಗೂ ಆದಾಯ ತೆರಿಗೆ ಉಳಿಸಲು ಸೂಕ್ತ ಮಾರ್ಗೋಪಾಯ ಹುಡುಕುವವರು, ಷೇರುಗಳು, ಮ್ಯೂಚುಯಲ್ ಫಂಡ್‌, ಚಿನ್ನ, ಸ್ಥಿರಾಸ್ತಿ ಇತ್ಯಾದಿ ಗಳ ನಂತರವಷ್ಟೇ ಫಿಕ್ಸೆಡ್ ಡಿಪಾಸಿಟನ್ನು (ಎಫ್‌ಡಿ) ಹೂಡಿಕೆಯ ಆಯ್ಕೆಯಾಗಿ ಪರಿಗಣಿಸುತ್ತಾರೆ!

ಆದರೆ ಯಾವುದೇ ಹಣಕಾಸು ಹೂಡಿಕೆ ಮಾರ್ಗದರ್ಶಿಗಳು ಪ್ರತಿ ವರ್ಷದ ಹಣಕಾಸು ಯೋಜನೆ ರೂಪಿಸುವಾಗ ನಿಮ್ಮ ಸದ್ಯದ ಸ್ಥಿತಿ ಮತ್ತು ಭವಿಷ್ಯದ ಹಣಕಾಸು ಗುರಿಗಳನ್ನು ಗಮನ ದಲ್ಲಿರಿಸಿಕೊಂಡು ಹಣವನ್ನು ವ್ಯವಸ್ಥಿತವಾಗಿ ಹಂಚಿ ಹೂಡಿಕೆ ಮಾಡಬೇಕು ಎಂದು ಸಲಹೆ ನೀಡುತ್ತಾರೆ.

ಹೂಡಿಕೆಗೆ ಎಫ್‌.ಡಿ ಆಯ್ಕೆ ಮಾಡುವುದರ ಬಹುಮುಖ್ಯ ಅನುಕೂಲವೆಂದರೆ ಅದನ್ನು ನಿಮಗೆ ಬೇಕೆಂದಾಗ ನಗದೀಕರಿಸಿಕೊಳ್ಳಬಹುದು. ತುರ್ತು ಸಂದರ್ಭದಲ್ಲಿ ನೀವು ಠೇವಣಿಯನ್ನು ಅವಧಿಗೂ ಮುನ್ನವೇ ಕೊನೆಗೊಳಿಸಿ ನಿಮ್ಮ ಹಣವನ್ನು ಹಿಂದಕ್ಕೆ ಪಡೆಯಬಹುದು.
ಅಲ್ಲದೇ, ಎಫ್‌ಡಿಗಳನ್ನು ‘ಸುರಕ್ಷಿತ ಹೂಡಿಕೆ’ ಎಂದೇ ಪರಿಗಣಿಸಲಾಗುತ್ತದೆ. ಎಫ್‌ಡಿಗಳನ್ನು ಟರ್ಮ್ ಡಿಪಾಸಿಟ್ ಎಂದೂ ಕರೆಯಲಾಗುತ್ತಿದ್ದು, ಇದು ಮುಖ್ಯವಾಗಿ ನಿಶ್ಚಿತ ದರದಲ್ಲಿ ಗಳಿಕೆ ತಂದುಕೊಡುತ್ತದೆ.

ಎಫ್‌ಡಿಗಳೆಂದರೆ ನಮಗೆ ರಾಷ್ಟ್ರೀಕೃತ ಬ್ಯಾಂಕ್‌ ಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳು ಮಾತ್ರ ನೆನಪಾಗುತ್ತವೆ.
ಆದರೆ ಹಲವು ಕಾರ್ಪೊರೇಟ್ ಸಂಸ್ಥೆಗಳು ಕೂಡಾ ಫಿಕ್ಸೆಡ್ ಡಿಪಾಜಿಟ್‌ಗಳನ್ನು ಸಾರ್ವಜನಿಕ ರಿಂದ ಸ್ವೀಕರಿಸಿ ಆಕರ್ಷಕ ದರದ ಬಡ್ಡಿಯನ್ನು ಕೊಡುತ್ತವೆ.

ಬ್ಯಾಂಕ್‌ಗಳಲ್ಲಿ ಒಂದು ವರ್ಷದವರೆಗೆ ನಿಶ್ಚಿತ ಠೇವಣಿಗಳಿಗೆ ಕನಿಷ್ಠ ಶೇ 7.50ರಿಂದ ಗರಿಷ್ಠ ಶೇ 9ರವರೆಗೂ ಬಡ್ಡಿ ದರ ಇದೆ (ಹಿರಿಯ ನಾಗರಿಕರಿಗೆ ಶೇ 0.50ರಷ್ಟು ಹೆಚ್ಚು ಬಡ್ಡಿ ದೊರೆಯುತ್ತದೆ). ಕಾರ್ಪೊರೇಟ್ ಕಂಪೆನಿಗಳಲ್ಲಾದರೆ ಇದೇ ಅವಧಿಗೆ ಕನಿಷ್ಠ ಶೇ 8.50ರಿಂದ ಗರಿಷ್ಠ ಶೇ 12ರವರೆಗೂ ಬಡ್ಡಿದರ ಇರುತ್ತದೆ.

ಈ ಎಫ್‌ಡಿಗಳು ಎಷ್ಟು ಸುರಕ್ಷಿತ? ಅವುಗಳ ಅನುಕೂಲ ಮತ್ತು ಅನಾನುಕೂಲಗಳೇನು ಎಂಬುದರ ಕುರಿತು ಇಲ್ಲಿದೆ ಮಾಹಿತಿ... 
ಕಾರ್ಪೊರೇಟ್ ಎಫ್‌ಡಿಗಳಲ್ಲಿನ ಹೂಡಿಕೆಗೆ ಕನಿಷ್ಠ ಶೇ 8.50ರಿಂದ ಗರಿಷ್ಠ ಶೇ 12ರವರೆಗೂ ನಿಶ್ಚಿತ ಬಡ್ಡಿದರ ಇರುತ್ತದೆ. ಆದರೆ, ರಿಸ್ಕ್ (ಕಂಟಕ) ಪ್ರಮಾಣ ಸಾಧಾರಣಕ್ಕಿಂತ ಹೆಚ್ಚು ಇರುತ್ತದೆ.

ಕಂಪೆನಿ ಹಣ ನೀಡಲು ವಿಫಲವಾದರೆ ಇಡೀ ಹೂಡಿಕೆಯೇ ತೊಂದರೆಗೆ ಸಿಲುಕಿಕೊಳ್ಳಬಹುದು. ನಿರ್ದಿಷ್ಟ ಮಂಡಳಿಗಳ ನಿಯಂತ್ರಣದಲ್ಲಿರುವ  ಕಂಪೆನಿಗಳಲ್ಲಾದರೆ ರಿಸ್ಕ್ ಸ್ವಲ್ಪ ಕಡಿಮೆ ಇರುತ್ತದೆ.

ಅವಧಿ ಪೂರ್ವ ಹಿಂಪಡೆಯುವಿಕೆಗೆ ಇಲ್ಲಿ ದಂಡ ವಿಧಿಸುವ ಸಾಧ್ಯತೆ ಹೆಚ್ಚಿರುತ್ತದೆ. ಠೇವಣಿಗೆ ಬರುವ ಬಡ್ಡಿಯ ಮೂಲದಲ್ಲಿಯೇ ತೆರಿಗೆ ಕಡಿತವಾಗುತ್ತದೆ.

ಬ್ಯಾಂಕ್ ಎಫ್‌ಡಿಗಳಿಗಾಗಿ ಕನಿಷ್ಠ ಶೇ 7.5ರಿಂದ ಗರಿಷ್ಠ ಶೇ 9ರವರೆಗೆ ನಿಶ್ಚಿತ ಬಡ್ಡಿದರ ಇರುತ್ತದೆ. ಆದರೆ, ಕಡಿಮೆ ರಿಸ್ಕ್ ಇರುತ್ತದೆ. ಇಲ್ಲಿ ಹೂಡಿಕೆ ಸಂಪೂರ್ಣ ಸುರಕ್ಷಿತವಾಗಿರುತ್ತದೆ.

ಆರ್‌ಬಿಐನ ಅಧೀನ ಸಂಸ್ಥೆ ಡಿಪಾಜಿಟ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಪ್ರಕಾರ ₨1 ಲಕ್ಷದವರೆಗಿನ ಠೇವಣಿಗೆ ಮಾತ್ರ ವಿಮೆ ಇರುತ್ತದೆ. ಅಂದರೆ ನೀವು ₨5 ಲಕ್ಷ ಠೇವಣಿ ಮಾಡಿದ್ದು, ಹಣಕಾಸು ಸಂಸ್ಥೆ ಮರುಪಾವತಿಸುವಲ್ಲಿ ವಿಫಲವಾದರೆ ₨1 ಲಕ್ಷವನ್ನು ಮಾತ್ರವೇ ನಿಮಗೆ ಮರುಪಾವತಿಸುವುದಕ್ಕೆ ಖಾತ್ರಿ ಇರುತ್ತದೆ.

ಕೆವೈಸಿ ಅರ್ಜಿ ಮತ್ತು ಚೆಕ್ ಆಧರಿಸಿ ಕೆಲವು ಬ್ಯಾಂಕ್‌ಗಳು ಆನ್‌ಲೈನ್ ಮೂಲಕವೂ ಎಫ್‌ಡಿಗ ಳನ್ನು ಪಡೆಯುತ್ತವೆ. ಆದರೆ ಅದಕ್ಕೆ ಉಳಿತಾಯ ಬ್ಯಾಂಕ್ ಖಾತೆ ಇರಲೇಬೇಕು.

ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡುವ ಮುನ್ನ ಈ ಕೆಳಗಿನ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಿರಿ.

ಸಣ್ಣ ಮೊತ್ತದ ಹಲವು ಠೇವಣಿ
ಬ್ಯಾಂಕ್‌ಗಳಲ್ಲಿ ಅಥವಾ ಕಂಪೆನಿಗಳಲ್ಲಿಯೇ ಆಗಲಿ ಫಿಕ್ಸೆಡ್ ಡಿಪಾಜಿಟ್ ಮಾಡುವುದಾದರೆ ಸಣ್ಣ ಮೊತ್ತಗಳಲ್ಲಿ, ಹಲವು ಠೇವಣಿಗಳಲ್ಲಿ ಹೂಡಿಕೆ ಮಾಡಿರಿ. ತುರ್ತು ಸಂದರ್ಭದಲ್ಲಿ ಸ್ವಲ್ಪವಾದರೂ ಹಣ ಹಿಂದಕ್ಕೆ ಪಡೆಯಲು ಅನುಕೂಲವಾಗುತ್ತದೆ.

ಬಡ್ಡಿಯನ್ನು ನಿಮಗೆ ಬೇಕು ಎನಿಸಿದ ಯಾವುದೇ ಅವಧಿಗೆ ಪಡೆಯಬಹುದು. ಮೆಚ್ಯುರಿಟಿ ವೇಳೆ ಬಡ್ಡಿ ಪಡೆಯುವುದು, ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವರ್ಷಕ್ಕೊಮ್ಮೆ ಬಡ್ಡಿ ಪಡೆಯಬಹುದು.

ಎಫ್‌ಡಿಗಳು ಬುಟ್ಟಿಯಲ್ಲಿರುವ ಮೊಟ್ಟೆ ಕೋಳಿಗಳ ಹಾಗೆ. ‘ತಿನ್ನಲು ಬಯಕೆ ಉಂಟು ಮಾಡುತ್ತವೆ. ಒಮ್ಮೆ ತಿಂದು ಹಾಕಿದರೆ ಕೋಳಿಯೂ ಇಲ್ಲ. ಮೊಟ್ಟೆಯೂ ಇಲ್ಲ. ಜೀವನದಲ್ಲಿ ಅಂತಹ ಬಯಕೆ ಅಗತ್ಯ. ಅದು ಬುಟ್ಟಿಯಲ್ಲಿ ಹೆಚ್ಚು ಕೋಳಿಗಳನ್ನು ಸಂಗ್ರಹಿಸಲು ಮತ್ತು ಭವಿಷ್ಯಕ್ಕೆ ಹೆಚ್ಚು ಮೊಟ್ಟೆಗಳನ್ನು ಪಡೆಯಲು ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT