ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಪಠ್ಯಕ್ರಮ ಸೂಕ್ತ?

ಅಕ್ಷರ ಗಾತ್ರ

‘ಮಕ್ಕಳಿಗಾಗಿ ಆಸ್ತಿ ಮಾಡಬೇಕು!’ ಎಂದು ಯೋಚಿಸುವವರಿಗಿಂತ ‘ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು’ ಎಂಬ ವಿಚಾರ ಈಚೆಗೆ ಹೆಚ್ಚಿನ ಸಂಖ್ಯೆಯ ಪಾಲಕರಲ್ಲಿ ಕಂಡುಬರುತ್ತಿದೆ. ಮಕ್ಕಳನ್ನು ಆಸ್ತಿಯಾಗಿಸಬೇಕಾದರೆ ಅವರಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿವುದೂ ಅಷ್ಟೇ ಮುಖ್ಯ ಎಂಬ ಅರಿವೂ ಅವರಲ್ಲಿದೆ. ಹೀಗಾಗಿ, ಮಗುವಿಗೆ ಉತ್ತಮ ಶಿಕ್ಷಣ ಕೊಡಿಸಲು ಅವರು ಶತಾಯಗತಾಯ ಪ್ರಯತ್ನ ನಡೆಸುತ್ತಾರೆ.

ನಮ್ಮ ದೇಶದಲ್ಲಿ ಶಿಕ್ಷಣ ಸಮವರ್ತಿಪಟ್ಟಿಯಲ್ಲಿದೆ. ಹೀಗಾಗಿ ಶಿಕ್ಷಣಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯಗಳೆರಡಕ್ಕೂ ತನ್ನದೇ ಆದ ಅಧಿಕಾರ ಹಾಗೂ ಕಾರ್ಯವ್ಯಾಪ್ತಿಗಳಿವೆ. ಇದೇ ಕಾರಣಕ್ಕಾಗಿ ನಮ್ಮಲ್ಲಿ ‘ಬಹು ಪಠ್ಯಕ್ರಮ ಮಾದರಿ ವ್ಯವಸ್ಥೆ’ ಜಾರಿಯಲ್ಲಿದ್ದು ರಾಜ್ಯ ಪಠ್ಯಕ್ರಮ, ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮಗಳು ಅಧ್ಯಯನಕ್ಕಾಗಿ ಲಭ್ಯ ಇವೆ. ಈ ಮೂರು ಮಾದರಿಗಳನ್ನು ತುಲನಾತ್ಮಕವಾಗಿ ಪರಿಶೀಲಿಸಿದಾಗ ಕಂಡುಬರುವ ಅಂಶಗಳನ್ನು ನಾವು ಹೀಗೆ ಪಟ್ಟಿಮಾಡಬಹುದು.

ರಾಜ್ಯ ಪಠ್ಯಕ್ರಮ
*ರಾಜ್ಯಸರ್ಕಾರದ ಶಿಕ್ಷಣ ಇಲಾಖೆ ನಿಯಂತ್ರಣಕ್ಕೊಳಪಟ್ಟು ಕಾರ್ಯನಿರ್ವಹಣೆ.
*ಆಯಾ ರಾಜ್ಯದ ಮಾತೃಭಾಷಾ ಮಾಧ್ಯಮದ ಆಯ್ಕೆ.
*ಸ್ಥಳೀಯ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಗಳ ಅಧ್ಯಯನಕ್ಕೆ ಆದ್ಯತೆ.
*ರಾಜ್ಯದಿಂದ ರಾಜ್ಯಕ್ಕೆ ಪಠ್ಯಕ್ರಮ, ಬೋಧನಾ ವಿಧಾನ, ಮಾಧ್ಯಮ ಎಲ್ಲವೂ ವಿಭಿನ್ನ.
*ಸಂಕಲನಾತ್ಮಕ ಮೌಲ್ಯಮಾಪನ ವಿಧಾನ ಅನುಸರಣೆ.
*ಪ್ರಾಥಮಿಕ ಹಂತದಲ್ಲಿ ‘ನಲಿ–ಕಲಿ’ ಮಾದರಿಗೆ ಅವಕಾಶ.
* ‘ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ’ ಪ್ರಕ್ರಿಯೆ
*ರಾಜ್ಯಮಟ್ಟದ ಸ್ಪರ್ಧೆಗೆ ಅವಕಾಶ.
*ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಪೋಷಕರ ಮಕ್ಕಳಿಗೆ ಅನುಕೂಲ.
*ಹೊರ ರಾಜ್ಯಗಳಲ್ಲಿ ಅಧ್ಯಯನಕ್ಕೆ ಅವಕಾಶವಿಲ್ಲ.

ಸಿಬಿಎಸ್‌ಇ  ಪಠ್ಯಕ್ರಮ (ಸೆಂಟ್ರಲ್ ಬೋರ್ಡ್ ಆಫ್‌ ಸೆಕೆಂಡರಿ ಎಜುಕೇಶನ್)
*ದೇಶದಾದ್ಯಂತ ಹೆಚ್ಚು ಪ್ರಚಲಿತದಲ್ಲಿರುವ ಪಠ್ಯಕ್ರಮ.
*ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ವ್ಯಾಪ್ತಿಗೊಳಪಟ್ಟು ಕಾರ್ಯ ನಿರ್ವಹಣೆ.
*ಇಂಗ್ಲಿಷ್ ಅಥವಾ ಹಿಂದಿ ಬೋಧನಾ ಮಾಧ್ಯಮ
*ಇಡೀ ರಾಷ್ಟ್ರದ ಇತಿಹಾಸ, ಸಂಸ್ಕೃತಿ, ಪರಂಪರೆಗಳ ಅಧ್ಯಯನಕ್ಕೆ ರಾಷ್ಟ್ರೀಯತೆಗೆ ಆದ್ಯತೆ.
*ಪೂರ್ವ ಪ್ರಾಥಮಿಕ ಹಂತದಿಂದಲೇ ವಿಕಾಸಾತ್ಮಕ ಮೌಲ್ಯಮಾಪನಕ್ಕೆ ಅವಕಾಶ. 
*ಪ್ರಾಯೋಗಿಕ ಹಾಗೂ ಅನುಭವಾತ್ಮಕ ಕಲಿಕೆಗೆ ಆದ್ಯತೆ. (ಯೋಜನಾಧಾರಿತ ದತ್ತ ಕಾರ್ಯಗಳ ಹಂಚಿಕೆ)
*ಮೇಲಿಂದ ಮೇಲೆ ವರ್ಗಾವಣೆ ಹೊಂದುವ ಕೇಂದ್ರ ಸರ್ಕಾರಿ ನೌಕರರು ಹಾಗೂ ಖಾಸಗಿ ಕಂಪೆನಿಗಳ ನೌಕರರ ಮಕ್ಕಳಿಗೆ ಅನುಕೂಲ.
*ದೇಶದಾದ್ಯಂತ ಅಧ್ಯಯನ ಮುಂದುವರಿಸಲು ಅವಕಾಶ.
*ಜ್ಞಾನಾತ್ಮಕ ಉದ್ದೇಶಗಳಿಗೆ, ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಹೆಚ್ಚಿನ ಆದ್ಯತೆ. (ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದ ನಿಟ್ಟಿನಲ್ಲಿ ಮಕ್ಕಳ ತಯಾರಿ)
* ರಾಷ್ಟ್ರಮಟ್ಟದ ಸ್ಪರ್ಧೆಗೆ ಅವಕಾಶ.
*ಹೆಚ್ಚಿನ ಪ್ರಮಾಣದ ವಿದ್ಯಾರ್ಥಿವೇತನಗಳು ಲಭ್ಯ.
*ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ.
* ಸ್ಪರ್ಧಾತ್ಮಕ ಪರೀಕ್ಷೆಗಳು ಸಿಬಿಎಸ್ಇ ಪಠ್ಯಕ್ರಮ ಆಧರಿಸಿರುತ್ತವೆ.
*ಐಸಿಎಸ್ಇಗೆ ಹೋಲಿಸಿದರೆ ಕಡಿಮೆ ಹಾಗೂ ರಾಜ್ಯ ಪಠ್ಯಕ್ರಮಕ್ಕೆ ಹೋಲಿಸಿದರೆ ಹೆಚ್ಚು ವ್ಯಾಪ್ತಿ ಹೊಂದಿರುವ ಪಠ್ಯಕ್ರಮ.

ಐಸಿಎಸ್‌ಇ ಪಠ್ಯಕ್ರಮ
*ಸ್ವಾತಂತ್ರ್ಯ ಪೂರ್ವದಲ್ಲಿ ಆಂಗ್ಲೋ– ಇಂಡಿಯನ್ನರ ಮಕ್ಕಳ ವಿದ್ಯಾಭ್ಯಾಸ್ಕಕೆ ಅನುಕೂಲವಾಗುವ ನಿಟ್ಟಿನಲ್ಲಿ ‘ಐಸಿಎಸ್ಇ’ ಬೋರ್ಡ್ ಸ್ಥಾಪನೆ.
*ಪ್ರಸ್ತುತ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ವ್ಯಾಪ್ತಿಗೆ ಒಳಪಟ್ಟಿದ್ದರೂ ಅರೆ ಸರ್ಕಾರಿ ಮಂಡಳಿಯಾಗಿ ಕಾರ್ಯ ನಿರ್ವಹಣೆ.
*ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಕಾರ್ಯನಿರ್ವಹಣೆ.
*ಬ್ರಿಟೀಷ್ ಮಾದರಿಯ ಶಿಕ್ಷಣದ ಅನುಕರಣೆ.
* ಇಂಗ್ಲಿಷ್ ಭಾಷೆ ಹಾಗೂ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ.
*ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮಾನ್ಯತೆ.
*ಬೇರೆ ರಾಷ್ಟ್ರಗಳಲ್ಲೂ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ.
*ಸಿಬಿಎಸ್ಇಗಿಂತ ವಿಸ್ತೃತ ಪಠ್ಯಕ್ರಮ.
*ನಿರ್ವಹಣಾ ಕ್ಷೇತ್ರದಲ್ಲಿ ವೃತ್ತಿಕೌಶಲ ವಿಕಸನಕ್ಕೆ ಆದ್ಯತೆ.
*ಮಗುವಿನ ‘ಸಮಗ್ರ ವಿಕಾಸ’ಕ್ಕೆ ಆದ್ಯತೆ.

ಒಟ್ಟಾರೆ, ‘ಗುಣಮಟ್ಟದ ಶಿಕ್ಷಣ’ದ ವಿಚಾರ ಬಂದಾಗ ಪ್ರಸಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಪೋಷಕರು ಗೊಂದಲಕ್ಕೀಡಾಗುತ್ತಾರೆ. ಶಿಕ್ಷಣಕ್ಕೆ ಸಂಬಂಧಿಸಿ ಹಲವಾರು ಆಯ್ಕೆಗಳಿವೆ. ಪಠ್ಯಕ್ರಮ, ಕಲಿಕಾ ಮಾಧ್ಯಮ, ಕಳೆದ ಸಾಲಿನ ಫಲಿತಾಂಶ, ಶಾಲೆಯ ಗುಣಮಟ್ಟ, ಬೋಧನಾ ವಿಧಾನ, ಬೋಧಕ ವರ್ಗ, ಸಾರಿಗೆ ವ್ಯವಸ್ಥೆ, ಹಾಸ್ಟೆಲ್, ಪಠ್ಯ ಅಥವಾ ಪಠ್ಯೇತರ ವಿಷಯಗಳಿಗೆ ಆದ್ಯತೆ, ಇನ್ನಿತರ ಐಶಾರಾಮಿ ಸೌಲಭ್ಯಗಳು ಹೀಗೆ ವಿವಿಧ ವಿಷಯಗಳಲ್ಲಿ ಪೋಷಕರು ಆಯ್ಕೆಯ ಗೊಂದಲಕ್ಕೆ ಸಿಲುಕುತ್ತಾರೆ.  ಮುಖ್ಯವಾಗಿ ‘ಪಠ್ಯಕ್ರಮ’ ಆಯ್ಕೆ. ಈ ಗೊಂದಲಗಳ ನಡುವೆ ಮಗುವಿನ ಸಾಮರ್ಥ್ಯ ಹಾಗೂ ಅಗತ್ಯಗಳನ್ನು ಅವರು ಕಡೆಗಣಿಸುವ ಸಾಧ್ಯತೆಯೂ ಇದೆ.

ಯಾವುದಕ್ಕೂ ಕಮ್ಮಿ ಇಲ್ಲ


ಈಚೆಗೆ ಪೋಷಕರು ತಮ್ಮ ಮಗುವನ್ನು ಸಿಬಿಎಸ್ಇ ಅಥವಾ ಐಸಿಎಸ್ಇ ಶಾಲೆಗಳಿಗೆ ಸೇರಿಸುವುದನ್ನು ಪ್ರತಿಷ್ಠೆ ಎಂದು ಪರಿಗಣಿಸುತ್ತಿದ್ದಾರೆ. ರಾಜ್ಯ ಪಠ್ಯಕ್ರಮದಲ್ಲಿ ಕೊರತೆ ಇಲ್ಲ. ಈ ಮಾದರಿ ಪಠ್ಯಕ್ರಮದಲ್ಲಿ ಓದಿದ ಮಕ್ಕಳೂ ಉನ್ನತ ಸಾಧನೆ ಮಾಡಿರುವುದೇ ಸಾಕ್ಷಿ. ಮಕ್ಕಳ ಸಾಮರ್ಥ್ಯ ಹಾಗೂ ಇತಿಮಿತಿ  ಕಡೆಗಣಿಸುವಂತಿಲ್ಲ.
– ಕಲ್ಮಡರಪ್ಪ, ಶಿಕ್ಷಣಾಧಿಕಾರಿ, ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆ, ಮೈಸೂರು

ಜೀವನ ಕೌಶಲಗಳಿಗೆ ಆದ್ಯತೆ
ಸಿಬಿಎಸ್ಇ ಮಾದರಿಯಲ್ಲಿ ನಿರಂತರ ಸಂಶೋಧನೆ ಹಾಗೂ ಬದಲಾವಣೆಗಳಿಗೆ ಅವಕಾಶವಿದೆ. ಈಚೆಗೆ ಸಿಬಿಎಸ್ಇ ಮಾದರಿ ಜೀವನ ಕೌಶಲಗಳ ಕಲಿಕೆಗೆ ಆದ್ಯತೆ ನೀಡಿದೆ. ಇದು ಮಕ್ಕಳನ್ನು ಭವಿಷ್ಯದ ಯಾವುದೇ ಕಠಿಣ ಸವಾಲುಗಳನ್ನು ಎದುರಿಸಲು ಸಮರ್ಥರನ್ನಾಗಿಸುತ್ತದೆ.
-ಡಾ.ಎಲ್. ಸವಿತಾ, ಪ್ರಾಂಶುಪಾಲರು ಕೌಟಿಲ್ಯ  ವಿದ್ಯಾಲಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT