ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ: ಖಾನಾ ಖಜಾನ

ರಸಾಸ್ವಾದ
Last Updated 19 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಯುಗಾದಿ ಅಂದರೆ ಹೊಸ ಕನಸುಗಳನ್ನು ಹೊಸೆಯುತ್ತಾ ಅಚ್ಚುಕಟ್ಟಾದ ಊಟ ಸವಿಯುವ ಹಬ್ಬ. ಹಾಗಾಗಿ, ಈ ಹೊಸ ವರ್ಷವನ್ನು ತೆರೆದ ತೋಳುಗಳಿಂದ ಸ್ವಾಗತಿಸಬೇಕು. ನಮ್ಮ ದೇಶದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ವಿಶೇಷ ತಿನಿಸುಗಳು ಇರುತ್ತವೆ. ಹಾಗಾಗಿ, ಇಲ್ಲಿನ ಹಬ್ಬಗಳನ್ನು ನಾವು ಆಚರಣೆ ಮತ್ತು ಆಹಾರದ ಜುಗಲ್‌ಬಂದಿ ಎನ್ನಬಹುದು. 

ರುಚಿ ರುಚಿಯಾದ ಭಕ್ಷ್ಯ ಭೋಜನವಿಲ್ಲದೆ ಇಲ್ಲಿನ ಯಾವುದೇ ಹಬ್ಬವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಯುಗಾದಿ ಹಬ್ಬಕ್ಕೆಂದೇ ವಿಶೇಷವಾಗಿ ತಯಾರಿಸುವ ಪದ್ಧತಿ ನಮ್ಮಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.  ಅಂದಹಾಗೆ, ಯುಗಾದಿ ಹಬ್ಬದ ವಿಶೇಷ ತಿನಿಸುಗಳೊಂದಿಗೆ ಕುತೂಹಲಕಾರಿಯಾದ ಪುರಾಣದ ನಂಟೂ ಬೆಸೆದುಕೊಂಡಿದೆ.

ಈ ಹಬ್ಬದ ಸಂದರ್ಭದಲ್ಲಿ ಜನರು  ತಮ್ಮ ಜೀವನದ ವಿವಿಧ ರಾಗಗಳನ್ನು ಪ್ರತಿನಿಧಿಸುವಂತಹ ಕೆಲವು ಪದಾರ್ಥಗಳನ್ನು ಬಳಸುತ್ತಾರೆ.  ಯುಗಾದಿ ಊಟದ ಎಲೆಯಲ್ಲಿ ಬೇವಿನ ಮೊಗ್ಗು/ಚಿಗುರೆಲೆ ಇರುವುದನ್ನು ಗುರ್ತಿಸಬಹುದು. ಬೇವಿನ ಎಲೆ ದುಖಃದ ಪ್ರತೀಕವಾದರೆ, ಬೆಲ್ಲ ಮತ್ತು ಬಾಳೆಹಣ್ಣು ಸುಖ ಮತ್ತು ಸಂತೋಷದ ಪ್ರತಿಬಿಂಬ. ಹಸಿರು ಮೆಣಸಿನಕಾಯಿ (ಕೋಪ), ಉಪ್ಪು (ಭಯ), ಮಾವಿನಕಾಯಿ ಜೀವನದ ಅಚ್ಚರಿಗಳ ಪ್ರತೀಕವಾಗಿದೆ.
 
ಅಂದಹಾಗೆ, ಯುಗಾದಿಯ ವಿಶೇಷ ತಿನಿಸು ಪಚಡಿ.  ಹಾಗೆಯೇ, ಬೆಲ್ಲ ಮತ್ತು ಬೇಳೆ ಬಳಸಿ ತಯಾರಿಸಿದ ಒಬ್ಬಟ್ಟು ಮತ್ತೊಂದು ವಿಶೇಷ ಖಾದ್ಯ. ಬಾದಾಮಿ, ಬೆಲ್ಲ ಮತ್ತು ಹಾಲು ಬಳಸಿ ತಯಾರಿಸುವ ಪರಮಾನ್ನ ಕೂಡ ಈ ಹಬ್ಬದ ಪ್ರಮುಖ ತಿನಿಸು. ತೆಲುಗು ಸಮಾಜದವರು ಇದನ್ನು ಪ್ರಮುಖವಾಗಿ ಮಾಡುತ್ತಾರೆ. ಉಳಿದಂತೆ, ಮಾವಿನಕಾಯಿ ಚಿತ್ರಾನ್ನ, ಬೋಂಡಾ, ವಡೆ ಇತ್ಯಾದಿ ತಿನಿಸುಗಳು ಹಬ್ಬದ ಮೆನುವಿನಲ್ಲಿ ಇರುತ್ತದೆ.

ಯುಗಾದಿ ಜನರಲ್ಲಿ ಸಂತೋಷ ಮತ್ತು ಸಂಭ್ರಮವನ್ನು ಮೊಗೆದು ಉಣಿಸುವ ಹಬ್ಬ. ನಾವೆಲ್ಲ ಈಗಷ್ಟೇ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದೇವೆ. ಈಗ ಯುಗಾದಿ  ಬಂದಿದೆ. ಈ ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳಲು ಹಲವು ಕಾರಣಗಳಿವೆ. ಮನೆಯಲ್ಲಿ ಹಬ್ಬದ ವಿಶೇಷ ಖಾದ್ಯಗಳನ್ನು ಮಾಡಿ ಸವಿಯಲು ಆಗದಿದ್ದವರು ಚಿಂತಿಸಬೇಕಿಲ್ಲ. ಅದಕ್ಕೆಂದೇ ನಗರದ ಅನೇಕ ಹೋಟೆಲ್‌ಗಳು ಯುಗಾದಿ ಸವಿ ಉಣ್ಣಿಸಲು ಸಜ್ಜಾಗಿವೆ.

ಬಿಬಿಕ್ಯೂ ಲಾಂಜ್‌ನಲ್ಲಿ ಯುಗಾದಿ
ಕೋರಮಂಗಲದಲ್ಲಿರುವ  100 ಫೀಟ್‌ ಬಿಬಿಕ್ಯೂ ಲಾಂಜ್‌ ರೆಸ್ಟೋರೆಂಟ್‌ ವಿಭಿನ್ನ ರೀತಿಯಲ್ಲಿ ಹಿಂದೂ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದೆ.  ವಿವಿಧ ಸಂಸ್ಕೃತಿಯಲ್ಲಿ ಏಕತೆ ತರುವ ಪ್ರಯತ್ನವಾಗಿ ಈ ಹೋಟೆಲ್‌ ಮೂರು ಪ್ರಮುಖ ಮನೋರಂಜನೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಹಬ್ಬದ ಊಟದ ಮಧ್ಯೆ ಜನಪ್ರಿಯ ಕನ್ನಡ ಮತ್ತು ಹಿಂದಿ ಹಿಟ್ ಟ್ಯೂನ್‌ಗಳನ್ನು ಡಿಜೆ ಕೇಳಿಸುತ್ತಾನೆ. ಈ ಮೂಲಕ ಗ್ರಾಹಕರು ನೇರವಾಗಿ ಫೇವರಿಟ್ ಹಾಡುಗಳನ್ನು ಆಲಿಸುತ್ತಾ ಯುಗಾದಿ ಖಾದ್ಯಗಳನ್ನು ಸವಿಯಬಹುದು. ಅಷ್ಟೇ ಅಲ್ಲ, ಆ ದಿನ ಬಿಬಿಕ್ಯೂನಲ್ಲಿ ಊಟ ಮಾಡುವವರು ಸಾಲ್ಸಾ ಹಾಗೂ ಯಕ್ಷಗಾನ ನೃತ್ಯಗಳಿಗೆ ಸಾಕ್ಷಿಯಾಗಬಹುದು.

ಯಕ್ಷಗಾನ ಕಲೆ ಕರ್ನಾಟಕದ ವಿಸ್ತಾರವಾದ ಪರಂಪರೆಗೆ ಪರಿಪೂರ್ಣ ಉದಾಹರಣೆ. ವರ್ಣರಂಜಿತ ವೇಷಭೂಷಣಗಳು, ಅರ್ಥಪೂರ್ಣ ಮಾತುಗಾರಿಕೆ ಹಾಗೂ ಮನಮೋಹಕ ನೃತ್ಯ ಒಂದೆಡೆ ಕಲೆಯುವುದರಿಂದ ಅದು ದೃಶ್ಯದ ಹಬ್ಬವೇ ಆಗಿರುತ್ತದೆ. ಇದು ವೀಕ್ಷಕರ ಮೈನವಿರೇಳಿಸುವ ಸಾಲ್ಸಾ ನೃತ್ಯಕ್ಕೆ ಪ್ರಬಲ ಎದುರಾಳಿ ಎಂದರೆ ತಪ್ಪಲ್ಲ.  ಸಾಲ್ಸಾದಲ್ಲಿ ನೃತ್ಯಗಾರರ ನಡುವಿನ ಲಯ ಹಾಗೂ ಹೊಂದಾಣಿಕೆಯೇ ಪ್ರಮುಖವಾದುದು.

ಈ ಎಲ್ಲಾ ಮನರಂಜನೆಯ ಮಧ್ಯೆ, ಸಾಂಪ್ರದಾಯಿಕವಾದ ಕೆಲವು ಅದ್ಭುತ ಆಹಾರಗಳೂ ಇವೆ. ಮೆನುವಿನಲ್ಲಿ ಒಬ್ಬಟ್ಟು, ಕೋಸಂಬರಿ ಮತ್ತು ಮಾವಿನ ಕಾಯಿ ಚಿತ್ರಾನ್ನ  ಸೇರಿಕೊಂಡಿದೆ. ಬೇವು-ಬೆಲ್ಲ ಕೂಡಾ ನೀವು ಇಲ್ಲಿ ಮೆಲ್ಲಬಹುದಾಗಿದೆ. ಇಷ್ಟೆಲ್ಲವೂ ಪ್ರತಿ ವ್ಯಕ್ತಿಗೆ₹ 999ಗೆ ಲಭ್ಯ ಇದೆ. ‘ಯುಗಾದಿಯು ಕುಟುಂಬದವರ ಜತೆ ಸೇರಿಕೊಂಡು ಸಂಭ್ರಮಿಸುವ ಹಬ್ಬ. ನಮ್ಮಲ್ಲಿ ಭೋಜನ ಸವಿಯುವವರನ್ನು ಖುಷಿಯಾಗಿಡಲು ಬಯಸಿದ್ದೆವು.  ಈ ಸಾಂಸ್ಕೃತಿಕ ಸಮ್ಮಿಶ್ರಣ ಹೊಸ ವರ್ಷದ ಸ್ವಾಗತಕ್ಕೆ ಅದ್ಧೂರಿ ಪ್ರಾರಂಭ ನೀಡಲಿದೆ ಎಂಬುದು ನಮ್ಮ ನಂಬಿಕೆ’ ಎನ್ನುತ್ತಾರೆ ಬಿಬಿಕ್ಯೂ ಲಾಂಜ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಸಿ.ಮುರಳಿ ಕೃಷ್ಣ ಹೇಳುತ್ತಾರೆ.
ಮಾಹಿತಿಗೆ: 81059 44438​.

ಹಲಸು-ಮಾವಿನ ಜುಗಲ್‌ಬಂದಿ
ಮಲ್ಲೇಶ್ವರದಲ್ಲಿರುವ ಹಳ್ಳಿಮನೆ ಯುಗಾದಿ ಹಬ್ಬಕ್ಕೆ ಸಡಗರದಿಂದ ಸಜ್ಜಾಗಿದೆ. ಅಪ್ಪಟ ಹಳ್ಳಿಯ ವಾತಾವರಣ ಸೃಷ್ಟಿಸಿ, ಹಳ್ಳಿ ಪರಿಸರದಲ್ಲಿನ ಹಲಸು-ಮಾವಿನ ತಾಳಮೇಳವನ್ನು ಜನರಿಗೂ ಹಬ್ಬದೂಟದೊಂದಿಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ.
ಈ ಬಾರಿ ಮಾರ್ಚ್ 20 ಮತ್ತು 21ರಂದು ಹಬ್ಬದೂಟ ಲಭ್ಯವಿದ್ಯು. ಹಬ್ಬದ ಮೆನುವಿನಲ್ಲಿ ಯುಗಾದಿಯ ಪಾರಂಪರಿಕ ಹಬ್ಬದೂಟದ ರುಚಿ ಇದ್ದೇ ಇದೆ.

ಜತೆಗೆ ಯುಗಾದಿ ಹಲಸು ಮಾವಿನ ಸೀಸನ್ ಆಗಿರುವುದರಿಂದ,  ಅದಕ್ಕನುಗುಣವಾಗಿ ಹಬ್ಬದೂಟದಲ್ಲಿ ಹಲಸಿನ ಹಣ್ಣಿನ ಪಾಯಸ, ಮಾವಿನ ಹಣ್ಣಿನ ರಸಾಯನ, ಮಾವಿನ ಕಾಯಿ ಚಿತ್ರಾನ್ನ, ನೀರ್ ದೋಸೆ, ಕಾಯಿ ಬೆಲ್ಲ, ಹಲಸಿನ ಕಾಯಿ, ಗೋಡಂಬಿ ಪಲ್ಯ, ಮಾವಿನ ಕಾಯಿ ಚಟ್ನಿ, ಮಾವಿನ ಮಿಡಿ ಉಪ್ಪಿನಕಾಯಿ ಹೀಗೆ ವಿವಿಧ ಬಗೆಯ ರುಚಿ ಸವಿಯಬಹುದಾಗಿದೆ ಎನ್ನುತ್ತಾರೆ ಹಳ್ಳಿಮನೆ ಹೋಟೆಲ್ ವ್ಯವಸ್ಥಾಪಕ ನಿರ್ದೇಶಕ ನೀಲಾವರ ಸಂಜೀವರಾವ್.

ಹಬ್ಬದೂಟದಲ್ಲಿ ಪಾರ್ಸೆಲ್ ಕೊಂಡೊಯ್ಯುವವರಿಗೆ ಹಾಗೂ ಈ ಬಾರಿ ವಿಶೇಷವಾಗಿ ಹೋಂ ಡೆಲಿವರಿ ಅವಕಾಶ ನೀಡಲಾಗಿದೆ. ಹಬ್ಬದೂಟದ ಎರಡೂ ದಿನಗಳಲ್ಲಿ ಮಧ್ಯಾಹ್ನ 12 ರಿಂದ 3 ಹಾಗೂ ಸಂಜೆ 7.30ರಿಂದ 10ರವರೆಗೆ ಲಭ್ಯವಿರುತ್ತದೆ. ಹಬ್ಬದೂಟ ಕುರಿತ ಮಾಹಿತಿಗೆ 99457 61283 ಸಂಪರ್ಕಿಸಬಹುದು.

ಜೆಡಬ್ಲ್ಯು ಮ್ಯಾರಿಯೆಟ್‌ನಲ್ಲಿ...
ವಿಠ್ಠಲ್‌ ಮಲ್ಯ ರಸ್ತೆಯಲ್ಲಿರುವ ಜನಪ್ರಿಯ ಜೆಡಬ್ಲ್ಯು ಕಿಚನ್‌ ರೆಸ್ಟೋರೆಂಟ್‌ನಲ್ಲಿ ಮಾರ್ಚ್‌ 21ರಂದು ಯುಗಾದಿ ವಿಶೇಷ ಊಟ ಲಭ್ಯವಿದೆ. ಇಲ್ಲಿನ ಮೆನುವಿನಲ್ಲಿ ಹಬ್ಬದ ವಿಶೇಷ ಖಾದ್ಯಗಳಾದ ಪಪ್ಪು ಪುಲುಸು, ನಿಂಬೆಕಾಯಿ ಅನ್ನಂ, ಗುಂಟೂರ್‌ ಅನ್ನಂ ಹಾಗೂ ಮನೆಯಲ್ಲಿ ತಯಾರಿಸಿದ ನಾಲ್ಕು ಬಗೆಯ ಮುರುಕುಗಳೂ ಸೇರಿರುತ್ತವೆ. ಮಧ್ಯಾಹ್ನ 12.30ರಿಂದ 3ರವರೆಗೆ ಲಭ್ಯವಿರುವ ಈ ಊಟದ ಬೆಲೆ ಒಬ್ಬರಿಗೆ₹ 1249 (ತೆರಿಗೆ ಪ್ರತ್ಯೇಕ). ಮಾಹಿತಿಗೆ: 080-67188950/080-67189999
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT