ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುನೆಸ್ಕೊ ಮಾನ್ಯತೆ ಗೋಪುರ ನೆಲಸಮ

ಅವಶೇಷಗಳ ಅಡಿಯಿಂದ 180 ಮೃತದೇಹಗಳು ಹೊರಕ್ಕೆ
Last Updated 25 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕಠ್ಮಂಡು (ಐಎಎನ್‌ಎಸ್‌): ನೇಪಾಳದ ಸ್ಮಾರಕಗಳಲ್ಲಿ ಒಂದಾಗಿದ್ದ 19ನೇ ಶತಮಾನಕ್ಕೆ ಸೇರಿದ 203 ಅಡಿ ಎತ್ತರದ ಒಂಬತ್ತು ಮಹಡಿಯ ಐತಿಹಾಸಿಕ ಧರಹರಾ (ಭೀಮಸೇನ) ಗೋಪುರ  ಶನಿವಾರ ಸ್ಮಶಾನವಾಗಿ ಮಾರ್ಪಟ್ಟಿತ್ತು.

ರಾಜಧಾನಿಯ ಹೃದಯಭಾಗದಲ್ಲಿರುವ ಈ ಗೋಪುರ ಸಂಪೂರ್ಣ ನೆಲಕ್ಕುರುಳಿದ್ದು, ಅವಶೇಷಗಳ ಅಡಿಯಿಂದ ಕನಿಷ್ಠ 180 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ನೂರಾರು ದೇಹಗಳು ಒಳಗೆ ಸಿಲುಕಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಕರ್ತರು ಅವಶೇಷಗಳ ಅಡಿಯಿಂದ ಮೃತದೇಹಗಳನ್ನು ಹೊರತೆಗೆಯುತ್ತಿದ್ದರೆ, ಕೆಲವು ಜನರು ಹತಾಶೆಯಿಂದ ಇಟ್ಟಿಗೆ ರಾಶಿ ಮತ್ತು ದೂಳಿನ ನಡುವೆ ಕೈಹಾಕಿ ತಮ್ಮವರಿಗಾಗಿ ಹುಡುಕುತ್ತಿರುವ ಹೃದಯವಿದ್ರಾವಕ ದೃಶ್ಯ ಕಂಡುಬಂತು.

ನೇಪಾಳದ ಮೊದಲ ಪ್ರಧಾನಿ ಭೀಮಸೇನ್ ಥಾಪಾ 1832ರಲ್ಲಿಈ ಗೋಪುರವನ್ನು ನಿರ್ಮಿಸಿದ್ದರು. ಯುನೆಸ್ಕೊದ ಜಾಗತಿಕ ಪಾರಂಪರಿಕ ತಾಣದ ಪಟ್ಟಿಯಲ್ಲಿ ಈ ಗೋಪುರ ಸ್ಥಾನ ಪಡೆದಿದೆ. ಸೇನಾ ಕಣ್ಗಾವಲಿಗಾಗಿ ನಿರ್ಮಿಸಲಾಗಿದ್ದ ಈ ಗೋಪುರ, ಪ್ರಮುಖ ಪ್ರವಾಸಿ ತಾಣವಾಗಿ ಖ್ಯಾತಿ ಗಳಿಸಿತ್ತು. ಈ ಗೋಪುರದ ತುತ್ತ ತುದಿಯಲ್ಲಿ ನಿಂತು ಕಠ್ಮಂಡು ಕಣಿವೆಯ ಭವ್ಯ ಸೌಂದರ್ಯವನ್ನು ಸವಿಯಬಹುದಾಗಿತ್ತು.

ಬಿಳಿ ಬಣ್ಣದ ಈ ಗೋಪುರದ ತುದಿಯಲ್ಲಿ ಕಂಚಿನ ಸ್ತಂಭಗೋಪುರವಿತ್ತು. ಒಳಭಾಗದಲ್ಲಿ ಸುರುಳಿಯಾಕಾರದ 200 ಮೆಟ್ಟಿಲುಗಳನ್ನು ಇದಕ್ಕೆ ನಿರ್ಮಿಸಲಾಗಿತ್ತು. ಮೊಘಲ್ ಮತ್ತು ಐರೋಪ್ಯ ಶೈಲಿಯಲ್ಲಿ ಈ ಗೋಪುರವನ್ನು ವಿನ್ಯಾಸಗೊಳಿಸಲಾಗಿತ್ತು. ಗೋಪುರದ ತುತ್ತ ತುದಿಯಲ್ಲಿ ಶಿವನ ಸಣ್ಣ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು.  ಕಡಿಮೆ ದರದಲ್ಲಿ ಗೋಪುರವನ್ನು ಏರಿ ಅಲ್ಲಿನ ಸೊಬಗು ಕಣ್ತುಂಬಿಕೊಳ್ಳಬಹುದಾಗಿದ್ದರಿಂದ ಇದು ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿತ್ತು.

ದರ್ಬಾರ್ ಚೌಕ:  ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ದರ್ಬಾರ್‌ ಚೌಕವೂ ಸಂಪೂರ್ಣವಾಗಿ ಧ್ವಂಸವಾಗಿದೆ. 10ನೇ ಶತಮಾನದಿಂದಲೂ ದರ್ಬಾರ್ ಚೌಕ ಪ್ರಾಚೀನ ರಾಜಮನೆತನಗಳ ಅರಮನೆಗಳು, ದೇವಸ್ಥಾನ, ಪ್ರತಿಮೆಗಳು, ನ್ಯಾಯಾಲಯ, ಕಾರಂಜಿ ಮುಂತಾದವುಗಳನ್ನು ಒಳಗೊಂಡ ಸಂಕೀರ್ಣ. ಮಲ್ಲ ಮತ್ತು ಷಾ ರಾಜಮನೆತನಗಳಿಗೆ ಸೇರಿದ ಅರಮನೆಗಳು ಇಲ್ಲಿವೆ. ಹನುಮಂತನ ವಿಗ್ರಹವೂ ಇಲ್ಲಿದ್ದು, ಈ ಕಾರಣಕ್ಕೆ ಹನುಮಾನ್ ಧೋಕ ದರ್ಬಾರ್ ಚೌಕ ಎಂದೇ ಕರೆಯಲಾಗುತ್ತಿತ್ತು.

ಮುಖ್ಯಾಂಶಗಳು
* ನೇಪಾಳದ ಮೊದಲ ಪ್ರಧಾನಿ ಭೀಮಸೇನ್ ಅವರಿಂದ 1932ರಲ್ಲಿನ ನಿರ್ಮಾಣಗೊಂಡಿತ್ತು
* ದರ್ಬಾರ್‌ ಚೌಕ ನಾಮಾವಶೇಷ

ಭಯಾನಕ ಭೂಕಂಪನಗಳ ವಿವರ
* 1934 ಜನವರಿ 15:
ಪೂರ್ವ ನೇಪಾಳ ಮತ್ತು ಭಾರತದ ಬಿಹಾರ ರಾಜ್ಯದಲ್ಲಿ 8.1 ತೀವ್ರತೆಯ ಕಂಪನ. ಘಟನೆಯಲ್ಲಿ 10,700 ಮಂದಿ ದುರ್ಮರಣ.
* 1976 ಜುಲೈ 28: ಚೀನಾದ ಉತ್ತರ ಭಾಗದ ಹೆಬಿಯ್‌ ಪ್ರಾಂತ್ಯದ ತಂಗ್ಶನ್‌ನಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪನದಿಂದಾಗಿ 2.42 ಲಕ್ಷ ಮಂದಿ ಸಾವು.
* 1988 ಆಗಸ್ಟ್ 20: ನೇಪಾಳದ ಪೂರ್ವ ಭಾಗ ಮತ್ತು ಭಾರತದ ಬಿಹಾರದಲ್ಲಿ 6.8 ತೀವ್ರತೆಯ ಕಂಪನ ಸಂಭವಿಸಿ, ನೇಪಾಳದಲ್ಲಿ 721 ಹಾಗೂ ಬಿಹಾರದಲ್ಲಿ ಕನಿಷ್ಠ 277 ಮಂದಿ ಮೃತಪಟ್ಟಿದ್ದರು.
* 1991 ಅಕ್ಟೋಬರ್ 30: ಉತ್ತರಪ್ರದೇಶದ ಹಿಮಾಲಯ ಬೆಟ್ಟದ ತಪ್ಪಲಿನ ಗಡ್ವಾಲ್‌ನಲ್ಲಿ 6.6 ತೀವ್ರತೆಯ ಕಂಪನ. 768 ಮಂದಿ ದುರ್ಮರಣ.
* 1993 ಸೆಪ್ಟೆಂಬರ್ 30: ಮಹಾರಾಷ್ಟ್ರದ ಲಾತೂರ್‌ನಲ್ಲಿ ಸಂಭವಿಸಿದ 6.3 ತೀವ್ರತೆಯ ಭೂಕಂಪನದಿಂದಾಗಿ 7,601 ಜನರ ಮರಣ.‌
* 2001 ಜನವರಿ 26: ಗುಜರಾತ್‌ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿ 2.5 ಲಕ್ಷ ಮಂದಿ ಸಾವು. 1.66 ಲಕ್ಷಕ್ಕೂ ಅಧಿಕ ಜನರಿಗೆ ಗಾಯ.

ಟಿಬೆಟ್‌ನಲ್ಲಿ 12 ಸಾವು
ಬೀಜಿಂಗ್‌ (ಪಿಟಿಐ):
ನೇಪಾಳದ ನೆರೆಯ ಸ್ವಾಯುತ್ತ ಪ್ರಾಂತ್ಯವಾದ ಟಿಬೆಟ್‌ನಲ್ಲೂ ಭೂ ಕಂಪನ ಸಂಭವಿಸಿದ್ದು,  83 ವರ್ಷದ ವೃದ್ಧೆ ಸೇರಿದಂತೆ  ಕನಿಷ್ಠ 12 ಮಂದಿ ಸತ್ತಿದ್ದಾರೆ. ಲಾಸಾ  ಹಾಗೂ ಶಿಂಗಸ್ತೆಯಲ್ಲಿ ಭೂಮಿ ಕಂಪಿಸಿದ್ದು, ಅನೇಕ ಮನೆಗಳು ಹಾನಿಗೊಂಡಿವೆ. ಚೀನಾ– ನೇಪಾಳ ಗಡಿಯಲ್ಲಿ ದೂರಸಂಪರ್ಕ ಸೇವೆ ಸ್ಥಗಿತಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT