ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಪೂರ್ವ ಪರೀಕ್ಷೆ ತಂತ್ರವೇ ಮಂತ್ರ

Last Updated 29 ಮೇ 2016, 19:30 IST
ಅಕ್ಷರ ಗಾತ್ರ

ನಾಗರಿಕ ಸೇವಾ ಪರೀಕ್ಷೆಗೆ ನಿರ್ದಿಷ್ಟ ಕಾಲಮಾನದಲ್ಲಷ್ಟೇ ತಯಾರಿಯಾದರೆ ಸಾಕಾಗುವುದಿಲ್ಲ. ಆ ವರ್ಷದ ಪರೀಕ್ಷೆಗೆ ನೋಟಿಫಿಕೇಷನ್‌ ಜಾರಿಯಾದ ಕ್ಷಣದಿಂದಲೇ ಆಕಾಂಕ್ಷಿಗಳು ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ಪೂರ್ವ ಪರೀಕ್ಷೆಗೆ (ಪಿ.ಟಿ.) ಅಭ್ಯರ್ಥಿಗಳು ಒತ್ತು ನೀಡಬೇಕು. ಮುಂದಿನ ಎರಡು ಹಂತಗಳಾದ ಮುಖ್ಯ ಪರೀಕ್ಷೆ ಹಾಗೂ ವೈಯಕ್ತಿಕ ಪರೀಕ್ಷೆಗೆ ಇದೇ ಸೋಪಾನ.

ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪೂರ್ವ ಪರೀಕ್ಷೆ ಬರೆಯುವುದರಿಂದ ಅದೊಂದು ರೀತಿ ಜೂಜಾಟದಂತೆ. ಮುಖ್ಯ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದ ಪ್ರತಿಭಾವಂತ ಅಭ್ಯರ್ಥಿಗಳೂ ಕೆಲವೊಮ್ಮೆ ಈ ಪರೀಕ್ಷೆಯಲ್ಲಿ ಫೇಲಾಗುವುದುಂಟು. ಅಂಥವರಲ್ಲಿ ಹಿಂದೆ ವೈಯಕ್ತಿಕ ಪರೀಕ್ಷೆವರೆಗೆ ಹಾಜರಾದವರು ಕೂಡ ಸೇರಿರುವ ಉದಾಹರಣೆಗಳೂ ಉಂಟು. ಈ ಪರೀಕ್ಷೆಯನ್ನು ಹಗುರವಾಗಿ ಪರಿಗಣಿಸುವುದು ತರವಲ್ಲ.

ಫಲಿತಾಂಶ ಆಧಾರಿತ ತಂತ್ರವನ್ನು ಈ ಪರೀಕ್ಷೆಯ ವಿಷಯದಲ್ಲಿ ಅಭ್ಯರ್ಥಿಗಳು ಅನುಸರಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಕೆಲವು ಅನುಕೂಲಕರ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ. ಮೊದಲನೆಯದಾಗಿ, ಅಭ್ಯರ್ಥಿಗಳು ಮಾಹಿತಿಯ ಕೊರತೆಯನ್ನು ಎದುರಿಸಬಾರದು. ಇದನ್ನು ನಾವು ‘ಜ್ಞಾನಾಧಾರಿತ’ ಎಂದು ಹೇಳುತ್ತೇವೆ. ಪಿ.ಟಿ. ಪಠ್ಯಕ್ರಮ ಸಮಗ್ರವಾಗಿರುವುದಿಲ್ಲ (ಅದು ಒಳಾರ್ಥಶೋಧಕ ಸ್ವರೂಪದ್ದಾಗಿರುತ್ತದೆ). ಬಹುತೇಕ ಅಭ್ಯರ್ಥಿಗಳಿಗೆ ಯಾವುದನ್ನು ಓದಬೇಕು, ಯಾವುದನ್ನು ಬಿಡಬೇಕು ಎಂಬುದನ್ನು ಕುರಿತು ಗೊಂದಲವಿರುತ್ತದೆ.

ಆದ್ದರಿಂದ ಮಾಹಿತಿ ಸಂಗ್ರಹಿಸುವ ಸೂಕ್ಷ್ಮಮತಿಯನ್ನು ಬೆಳೆಸಿಕೊಳ್ಳಬೇಕು. ಈ ಕೌಶಲವಿಲ್ಲದಿದ್ದರೆ ಕಲೆಹಾಕುವ ಮಾಹಿತಿ ಸಮೃದ್ಧಿಯಾದೀತೇ ವಿನಾ ಗುಣಾತ್ಮಕವಾಗದು. ಈ ಹಿನ್ನೆಲೆಯಲ್ಲಿ ಎರಡು ಸೂಕ್ಷ್ಮಗಳನ್ನು ಅಭ್ಯರ್ಥಿಗಳು ಪಾಲಿಸಬೇಕು. ಒಂದು, ಅಧ್ಯಯನ ಮಾಡಲು ಹಾಗೂ ಪೂರಕ ಮಾಹಿತಿಗಾಗಿ ಸಂಗ್ರಹಿಸುವ ಪುಸ್ತಕಗಳ ಆಯ್ಕೆಯಲ್ಲಿ ಎಚ್ಚರವಿರಬೇಕು. ಸಿಕ್ಕಿದ್ದೆಲ್ಲವನ್ನೂ ಓದಕೂಡದು.

ಉತ್ತಮ ಗುಣಮಟ್ಟದ ಪುಸ್ತಕಗಳು, ಸರ್ಕಾರಿ ಪತ್ರಿಕೆಗಳು ಹಾಗೂ ಆಯ್ದ ಸರ್ಕಾರಿ ದಾಖಲೆಗಳು ಎಲ್ಲ ಹಂತದ ಪರೀಕ್ಷೆಗಳಿಗೂ  ಉಪಯುಕ್ತ. ಒಳ್ಳೆಯದಕ್ಕೆ ಯಾವುದೇ ಅಡ್ಡದಾರಿ ಇಲ್ಲ ಎನ್ನುವುದಂತೂ ಸತ್ಯ. ಇನ್ನೊಂದು, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಪರಿಶೀಲಿಸಿ, ಏನನ್ನು ಓದಬೇಕು ಎಂದು ನಿರ್ಧರಿಸುವುದು. ಪ್ರಶ್ನೆಗಳ ಸ್ವರೂಪ, ಅವುಗಳನ್ನು ಕೇಳುವ ಕ್ರಮ, ವಿಷಯದ ಆಳ, ಯಾವ ರೀತಿ ಗೊಂದಲಗಳನ್ನು ಮೂಡಿಸುವಂತೆ ಪ್ರಶ್ನೆ ಕೇಳುತ್ತಾರೆ ಎನ್ನುವ ಸೂಕ್ಷ್ಮ–ಎಲ್ಲವನ್ನೂ ಹಳೆ ಪ್ರಶ್ನೆಪತ್ರಿಕೆಗಳ ಅಧ್ಯಯನ ಸ್ಪಷ್ಟಪಡಿಸೀತು.

ಎರಡನೆಯದಾಗಿ, ಪರೀಕ್ಷಾ ಪ್ರಕ್ರಿಯೆಯ ಬದಲಾವಣೆಯನ್ನು ಅರಿಯುವ ಜಾಣ್ಮೆ ಇರಬೇಕು. ಪರೀಕ್ಷಾ ಬದಲಾವಣೆಯ ಪ್ರಕ್ರಿಯೆ ಶುರುವಾದಾಗ (ಸಂಕ್ಷಿಪ್ತವಾಗಿ ಹೇಳುವುದಾದರೆ, ಪಿ.ಟಿ.ಯಲ್ಲಿ ‘ಸಿಸ್ಯಾಟ್‌’ ಎನ್ನಲಾಗುವ ಕ್ರಮವನ್ನು ಜಾರಿಗೆ ತಂದದ್ದು) ವಾಡಿಕೆ ಕಲಿಕೆಯಿಂದ ಆನ್ವಯಿಕ ಕಲಿಕೆಯನ್ನು ಆಧರಿಸಿದ ಪ್ರಶ್ನೆಗಳಿಗೆ ಸ್ಥಿತ್ಯಂತರ ಆಯಿತು. ಸಂಪುಟ ಸಚಿವರು ಹಾಗೂ ಪಿ.ಟಿ. ನಿರ್ದೇಶಕರು ಸಂಸತ್‌ನಲ್ಲಿ 2010ರಲ್ಲಿ ಘೋಷಿಸಿದಂತೆ ಇದು ಬದಲಾವಣೆಗಳ ಗುರಿಗಳಲ್ಲಿ ಒಂದು. ಇದು ಪಿ.ಟಿ.ಯಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾಯಿತು.

ಈಗ ಉರುಹೊಡೆದು ಓದಿ, ಯುಪಿಎಸ್‌ಸಿ ಪೂರ್ವ ಪರೀಕ್ಷೆ ಬರೆಯುವುದು ಅಸಾಧ್ಯ. ವಿಷಯ ಪರಿಕಲ್ಪನಾ ಸ್ಪಷ್ಟತೆ ತುಂಬ ಮುಖ್ಯ. ಈಗ ಬಹುತೇಕ ಪ್ರಶ್ನೆಗಳು ಹೈಬ್ರಿಡ್‌ ಸ್ವರೂಪದವು. ಮಾಹಿತಿ ಜ್ಞಾನದ ಜೊತೆಗೆ ಪರಿಕಲ್ಪನಾ ಸ್ಪಷ್ಟತೆಯನ್ನೂ ಅಳೆಯುವಂತೆ ಅವು ಇರುತ್ತವೆ. ಆದ್ದರಿಂದ ಕೇವಲ ಮಾಹಿತಿ ಇದ್ದರೆ ಸಾಲದು. ಲಭ್ಯ ಮಾಹಿತಿಯನ್ನು ವಿವಿಧ ಆಯಾಮಗಳಿಗೆ ಅನ್ವಯಿಸಿ ನೋಡುವ ಜಾಣ್ಮೆ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಕರಗ್ರಂಥಗಳು ಹಾಗೂ ಹೊಂದಿಸಿಕೊಂಡ ನೋಟ್ಸ್‌ ಇದ್ದರಷ್ಟೇ ಸಾಲದು. ಅವನ್ನು ಯಾವ ರೀತಿ ಅನ್ವಯಿಸಿ ನೋಡಬೇಕು ಎಂದು ಪರಿಣತರನ್ನು ಕೇಳಿ ತಿಳಿಯಬೇಕು.

ಕೊನೆಯದಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕರಾರುವಾಕ್ಕಾದ ಉತ್ತರಗಳನ್ನು ವೇಗವಾಗಿ ಬರೆಯುವುದರ ಮೂಲಕ ಬೇರೆ ಅಭ್ಯರ್ಥಿಗಳನ್ನು ಹಿಂದಿಕ್ಕಬೇಕಾಗುತ್ತದೆ. ಇದಕ್ಕೆ ಸೂಕ್ತ ಅಭ್ಯಾಸ ಅಗತ್ಯ. ಕೆಲವು ಅಣಕು ಪರೀಕ್ಷೆಗಳನ್ನು ಬರೆದು, ಕೈ ಪಳಗಿಸಿಕೊಳ್ಳಬೇಕು. ಹೀಗೆ ಮಾಡಿದಾಗ ಸಮಯನಿರ್ವಹಣೆ, ಪ್ರಮುಖವಾದ ವಿವಿಧ ಮಾಹಿತಿಯನ್ನು ಆಧರಿಸಿದ ಪ್ರಶ್ನೆಗಳನ್ನು ಎದುರಿಸುವ ರೀತಿ, ಪರಿಣತರ ವಿಶ್ಲೇಷಣೆ ಇವೆಲ್ಲವೂ ಮನವರಿಕೆಯಾಗುತ್ತವೆ. ಅಣಕು ಪರೀಕ್ಷೆಯ ಗುಣಮಟ್ಟದ ಬಗೆಗೆ ಕೂಡ ಎಚ್ಚರಿಕೆ ವಹಿಸಬೇಕು. ಯುಪಿಎಸ್‌ಸಿ ನಡೆಸುವ ಪರೀಕ್ಷೆಯ ಗುಣಮಟ್ಟಕ್ಕೆ ಸರಿಗಟ್ಟುವಂತೆ ಅದು ಇರಬೇಕಲ್ಲದೆ, ಅದಕ್ಕೆ ಮನಸ್ಸು ಅಣಿಯಾಗಲು ಉದ್ದೀಪಿಸಬೇಕು.

(ಲೇಖಕರು ನಾಗರಿಕ ಸೇವಾ ಪರೀಕ್ಷೆಯ ಅಭ್ಯರ್ಥಿಗಳಿಗೆ ಮಾರ್ಗದರ್ಶಕರು, ಅಂಕಣಕಾರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT