ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಫಲಿತಾಂಶ: ಮಹಿಳೆಯರ ಮೇಲುಗೈ

Last Updated 4 ಜುಲೈ 2015, 9:32 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಐಎಎಸ್‌ ಹಾಗೂ ಐಪಿಎಸ್‌ ಹುದ್ದೆಗಳಿಗಾಗಿ ಕೇಂದ್ರ ಲೋಕಸೇವಾ ಆಯೋಗದ 2014ರಲ್ಲಿ ನಡೆಸಿದ್ದ ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಅಗ್ರ ನಾಲ್ಕು ಸ್ಥಾನಗಳಲ್ಲಿ ಮಹಿಳೆಯರು ಕಾಣಿಸಿಕೊಂಡಿದ್ದಾರೆ.

ವಿವಿಧ ನಾಗರಿಕ ಸೇವೆಗಳಿಗೆ ಒಟ್ಟು 1,236 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಆಯೋಗ ತಿಳಿಸಿದೆ.

ಅಗ್ರ ಐದು ರ‍್ಯಾಂಕ್‌ಗಳ ಪೈಕಿ ನಾಲ್ವರು ಮಹಿಳೆಯರಿದ್ದಾರೆ ಎಂದು ಮೂಲಗಳು ಹೇಳಿವೆ. ಇರಾ ಸಿಂಘಾಲ್, ರೇಣು ರಾಜ್, ನಿಧಿ ಗುಪ್ತಾ ಹಾಗೂ ವಂದನಾ ರಾವ್ ಅವರು ಕ್ರಮವಾಗಿ ಮೊದಲ ನಾಲ್ಕು ರ‍್ಯಾಂಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇರಾ ಹಾಗೂ ನಿಧಿ ಅವರು ದೆಹಲಿಯವರು. ಇಬ್ಬರೂ ಸದ್ಯ ಭಾರತೀಯ ಕಂದಾಯ ಸೇವೆಯಲ್ಲಿದ್ದಾರೆ. ಇನ್ನು, ರೇಣು ರಾಜ್ ಅವರು ಕೇರಳದವರಾಗಿದ್ದು, ವೃತ್ತಿಯಿಂದ ವೈದ್ಯೆ.

ರ‍್ಯಾಂಕ್‌ ಪಡೆದವರ ಮೊದಲ ಮಾತು...:  'ನನಗೆ ತುಂಬಾ ಸಂತೋಷವಾಗಿದೆ. ನನಗೆ ನಂಬಲಾಗುತ್ತಿಲ್ಲ. ಪರೀಕ್ಷೆಗೆ ಚೆನ್ನಾಗಿ ಸಿದ್ಧತೆ ಮಾಡಿಕೊಂಡಿದ್ದೆ’ ಎಂದು ಮೊದಲ ರ‍್ಯಾಂಕ್‌ ಪಡೆದಿರುವ ಇರಾ ಅವರು ಸುದ್ದಿಸಂಸ್ಥೆಯೊಂದಿಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಮೊದಲ ಯತ್ನದಲ್ಲೇ ಎರಡನೇ ರ‍್ಯಾಂಕ್‌ ಪಡೆದಿರುವ ರೇಣು, ‘ಫಲಿತಾಂಶ ನೋಡಿ ನನಗೆ ತುಂಬಾನೇ ಸಂತೋಷವಾಗಿದೆ.ಕಳೆದೊಂದು ವರ್ಷದಿಂದ ನಾನು ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ’ ಎಂದು ತಿರುವನಂತಪುರಂನಿಂದ ಪ್ರತಿಕ್ರಿಯಿಸಿದರು. ಮೂಲತಃ ಕೊಟ್ಟಾಯಂನವರಾದ ರೇಣು ರಾಜ್, ಪ್ರಸ್ತುತ ಕೇರಳದ ಕೊಲ್ಲಂನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಮೂರನೇ ರ‍್ಯಾಂಕ್‌  ಪಡೆದಿರುವ ನಿಧಿ ಅವರೂ ಸಂತೋಷದಿಂದ ಖುಷಿ ಹಂಚಿಕೊಂಡರು. ‘ಇದು ನಿಜಕ್ಕೂ ಹೆಮ್ಮಯ ಕ್ಷಣ. ಶ್ರಮಪಟ್ಟಿದ್ದಕ್ಕೆ ಸಾರ್ಥಕವಾಯಿತು’ ಎಂದರು. ನಿಧಿ ಅವರು ಪ್ರಸ್ತುತ ಕಸ್ಟಮ್ಸ್‌ ಹಾಗೂ ಸೆಂಟ್ರಲ್ ಎಕ್ಸೈಸ್‌ನಲ್ಲಿ ಸಹಾಯಕ ಆಯುಕ್ತೆಯಾಗಿದ್ದಾರೆ.

ಆಯ್ಕೆಯಾದ 1,236 ಅಭ್ಯರ್ಥಿಗಳ ಪೈಕಿ 590 ಜನರು ಸಾಮಾನ್ಯ ವರ್ಗದವರು. 354 ಜನರು ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರು.194 ಜನರು ಪರಿಶಿಷ್ಟ ಜಾತಿ ಹಾಗೂ 98 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT