ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ: ವಾರದಲ್ಲಿ ಪರಿಹಾರ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಕೇಂದ್ರ ಲೋಕ­ಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆ ಪಠ್ಯಕ್ರಮದ ಗೊಂದಲಕ್ಕೆ ವಾರದಲ್ಲಿ ಪರಿಹಾರ ಕಂಡುಕೊಳ್ಳು­ವು­­­ದಾಗಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಹೇಳಿದ್ದಾರೆ.

ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದು, ವಾರದೊಳಗೆ ಗೊಂದಲ ಬಗೆಹರಿಯಲಿದೆ ಎಂದು ಅವರು ಸೋಮವಾರ ಇಲ್ಲಿ ತಿಳಿಸಿದರು. ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿ­ದಿರುವುದರಿಂದ ತ್ವರಿತ ತೀರ್ಮಾನ ತೆಗೆದುಕೊಳ್ಳುವಂತೆ ಪ್ರಧಾನಿ ಮೋದಿ ಅವರು ಸೂಚನೆ ನೀಡಿದ್ದಾರೆ. ಸಚಿವ­ರಾದ ಅರುಣ್‌ ಜೇಟ್ಲಿ, ಜಿತೇಂದ್ರ ಸಿಂಗ್‌ ಹಾಗೂ ಹಿರಿಯ ಅಧಿಕಾರಿ­ಗ­ಳೊಂದಿಗೂ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.

ಆ.24ಕ್ಕೆ ನಿಗದಿಯಾಗಿರುವ ನಾಗ­ರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ­ಗಳನ್ನು ಮುಂದೂಡಲಾಗುವುದೇ ಎಂಬ ಪ್ರಶ್ನೆಗೆ ಸಿಂಗ್‌ ಉತ್ತರಿಸಲಿಲ್ಲ. ರಾಹುಲ್‌ ಭರವಸೆ: ನಾಗರಿಕ ಸೇವಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾ­ಯ­­ವಾ­ಗಲು ಬಿಡುವುದಿಲ್ಲ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಸೋಮ­ವಾರ ತಮ್ಮನ್ನು ಭೇಟಿ ಮಾಡಿದ ನಾಗರಿಕ ಸೇವಾ ಪರೀಕ್ಷೆ ಆಕಾಂಕ್ಷಿಗಳ ನಿಯೋಗಕ್ಕೆ ಅವರು ಈ ಭರವಸೆ ನೀಡಿದ್ದು, ಈ ವಿಷಯವನ್ನು ಸಂಸತ್ತಿ­ನಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.

ಮುಂದುವರಿದ ಪ್ರತಿಭಟನೆ: ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಬರುವ ಸಾಮರ್ಥ್ಯ ಪರೀಕ್ಷೆಯನ್ನು (ಸಿಸ್ಯಾಟ್) ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಅಪಾರ ಸಂಖ್ಯೆಯ ವಿದ್ಯಾರ್ಥಿ­­ಗಳು ಸೋಮವಾರ ಯುಪಿಎಸ್‌ಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಹಿಂದಿ ಭಾಷಾ ಹಿನ್ನೆಲೆಯ ಪರೀಕ್ಷಾ ಆಕಾಂಕ್ಷಿಗಳಿಗೆ ಸಿಸ್ಯಾಟ್‌ನಿಂದ ಅನ್ಯಾಯ­ವಾಗುತ್ತಿದೆ ಎಂದು ಪ್ರತಿಭಟನಾಕಾರರು ಯುಪಿಎಸ್‌ಸಿ ವಿರುದ್ಧ ಘೋಷಣೆಗಳನ್ನು ಕೂಗಿದರು.

‘20 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಯುಪಿಎಸ್‌ಸಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಬೇಡಿಕೆ ಈಡೇರು­ವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT