ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕನನ್ನು ಕೊಲೆ ಮಾಡಿದ ಬಾಲಕ

Last Updated 16 ಏಪ್ರಿಲ್ 2015, 20:06 IST
ಅಕ್ಷರ ಗಾತ್ರ

ಮೈಸೂರು: ದುಶ್ಚಟಗಳ ಬಗೆಗೆ ಪೋಷಕರಿಗೆ ಮಾಹಿತಿ ನೀಡಿದ್ದರಿಂದ ಕುಪಿತಗೊಂಡ ಬಾಲಕನೊಬ್ಬ, ಹಾಸ್ಟೆಲ್‌ ಸಹಪಾಠಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗಂಗೋತ್ರಿ ಬಡಾವಣೆಯ ವಿಶ್ವಕರ್ಮ ವಿದ್ಯಾರ್ಥಿನಿಲಯದಲ್ಲಿ ಗುರುವಾರ ಹಾಡಹಗಲೆ ನಡೆದಿದೆ.

ಕಲಬುರ್ಗಿ ನಗರದ ಮುಕ್ತಂಪುರ ಬಡಾವಣೆಯ ಸರಾಫ್‌ ಬಜಾರ್‌ ನಿವಾಸಿ ಮಾಣಿಕರಾವ್‌ ಪೊದ್ದಾರ್‌ ಪುತ್ರ ಮೋಹನಕುಮಾರ್‌ (22) ಕೊಲೆಯಾದ ಯುವಕ. ಐಟಿಐ ಮೊದಲ ವರ್ಷ ಓದುವ ಹದಿನಾರುವರೆ ವರ್ಷದ ಬಾಲಕ ಕೊಲೆ ಮಾಡಿದವನು.

ಶ್ರೀಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ 8ನೇ ಸೆಮಿಸ್ಟರ್‌ ವಿದ್ಯಾರ್ಥಿಯಾಗಿದ್ದ ಮೋಹನಕುಮಾರ್, ಈಚೆಗೆ ನಡೆದ ಕ್ಯಾಂಪಸ್‌ ಆಯ್ಕೆಯಲ್ಲಿ ‘ಅಸೆಂಚರ್‌’ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ.  ಕೊಲೆ ಮಾಡಿದ ಬಾಲಕ ತಲೆಮರೆಸಿಕೊಂಡಿದ್ದಾನೆ.

ಹಾಸ್ಟೆಲ್ಲಿನ ಬಹುತೇಕ ವಿದ್ಯಾರ್ಥಿಗಳು ಗುರುವಾರ ಕಾಲೇಜಿಗೆ ತೆರಳಿದ್ದರು. ಮೋಹನ್‌ ಪ್ರಾಜೆಕ್ಟ್‌ ವರ್ಕ್‌ಗೆ ತನ್ನ 3ನೇ ಕೊಠಡಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಈ ವೇಳೆ ಕೊಠಡಿಗೆ ತೆರಳಿದ ಬಾಲಕ ಚಾಕುವಿನಿಂದ ಮೋಹನನ ಕುತ್ತಿಗೆಗೆ ಇರಿದಿದ್ದಾನೆ. ಇದರಿಂದ ಅಘಾತಕ್ಕೆ ಒಳಗಾದ ಮೋಹನ ಕಿರುಚಿಕೊಂಡಿದ್ದಾನೆ. ಇದನ್ನು ಕೇಳಿಸಿಕೊಂಡ ಹಾಸ್ಟೆಲ್‌ ಸಿಬ್ಬಂದಿ ಕೊಠಡಿಗೆ ಧಾವಿಸಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೋಹನಕುಮಾರನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ತೀವ್ರ ರಕ್ತಸ್ರಾವದಿಂದ ಮಾರ್ಗಮಧ್ಯದಲ್ಲಿಯೇ ಮೃತಪಟ್ಟ. ಕೊಠಡಿಯಲ್ಲಿ ಚಾಕು ಪತ್ತೆಯಾಗಿದೆ ಎಂದು ಸರಸ್ವತಿಪುರಂ ಠಾಣೆಯ ಇನ್‌ಸ್ಪೆಕ್ಟರ್‌ ರಾಜು ತಿಳಿಸಿದ್ದಾರೆ.

ಒಂದೇ ಕೊಠಡಿ ವಾಸಿಗಳು: ಪಿಯು, ಪದವಿ, ಕಾನೂನು, ಎಂಜಿನಿಯರಿಂಗ್‌ ಹಾಗೂ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುವ 41 ವಿದ್ಯಾರ್ಥಿಗಳು ವಿಶ್ವಕರ್ಮ ಹಾಸ್ಟೆಲಿನಲ್ಲಿ ಇದ್ದಾರೆ. 15 ಕೊಠಡಿಗಳಿದ್ದು, ದೊಡ್ಡ ಕೋಣೆಗಳಲ್ಲಿ ನಾಲ್ವರು ಹಾಗೂ ಚಿಕ್ಕ ಕೊಠಡಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ತಂಗಿದ್ದಾರೆ. 2014ರ ಜೂನ್‌ ತಿಂಗಳಲ್ಲಿ ಹಾಸ್ಟೆಲ್‌ಗೆ ಪ್ರವೇಶ ಪಡೆದಾಗಿನಿಂದಲೂ ಈತ ಮೋಹನಕುಮಾರ್‌ ಕೊಠಡಿಯಲ್ಲಿಯೇ ತಂಗಿದ್ದ. ಇಬ್ಬರ ನಡುವೆ ಮನಸ್ತಾಪ ಉಂಟಾದ ಪರಿಣಾಮ ಕೆಲ ತಿಂಗಳ ಹಿಂದೆ ಬಾಲಕನನ್ನು ಕೊಠಡಿ ಸಂಖ್ಯೆ 6ಕ್ಕೆ ಸ್ಥಳಾಂತರಿಸಲಾಗಿತ್ತು.

ಗೋವಾದಿಂದ ಮರಳಿದ್ದ: ಚಾಮರಾಜನಗರದ ಬಡಕುಟುಂಬದ ಹಿನ್ನೆಲೆಯ ಹದಿನಾರೂವರೆ ಬಾಲಕ ಹಠಮಾರಿ ಸ್ವಭಾವ ಹೊಂದಿದ್ದ. ತಮಿಳುನಾಡಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಮಗನನ್ನ ಓದಿಸುತ್ತಿರುವ ತಾಯಿ ಈಚೆಗೆ ₨ 6 ಸಾವಿರ ಮೌಲ್ಯದ ಸೈಕಲ್‌ ಕೊಡಿಸಿದ್ದರು. ಇದಾದ ಬಳಿಕ ತಾಯಿಗೆ ಸ್ಮಾರ್ಟ್‌ಫೋನ್‌ ಕೊಡಿಸುವಂತೆ ಬೇಡಿಕೆ ಇಟ್ಟಿದ್ದ. ಇದಕ್ಕೆ ಸ್ಪಂದಿಸದ ಪರಿಣಾಮ ಕಾಲೇಜು ತೊರೆದು ಮಾರ್ಚ್‌ 13ರಂದು ಗೋವಾಕ್ಕೆ ತೆರಳಿದ್ದ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಈತನಿಗೆ ಹುಡುಕಾಟ ನಡೆಸಿದ ಪೊಲೀಸರು ಗೋವಾದಲ್ಲಿ ಪತ್ತೆ ಹಚ್ಚಿ ಕರೆತಂದಿದ್ದರು. ಈತನ ಒರಟು ಸ್ವಭಾವವನ್ನು ಗಮನಿಸಿ ಹಾಸ್ಟೆಲಿನಲ್ಲಿ ಇರಿಸಿಕೊಳ್ಳದಂತೆ ಸಲಹೆ ನೀಡಿದ್ದರು. ಆದರೆ, ತಾಯಿಯ ಕೋರಿಕೆಯ ಮೇರೆಗೆ ಈತನಿಗೆ ಇಲ್ಲಿ ಆಶ್ರಯ ನೀಡಲಾಗಿತ್ತು ಎಂದು ಹಾಸ್ಟೆಲ್‌ ಕಾರ್ಯದರ್ಶಿ ಎಂ.ಜಿ. ದೇವರಾಜ್‌ ಮಾಹಿತಿ ನೀಡಿದರು.

ದುಶ್ಚಟಗಳ ದಾಸ: ಕೊಲೆ ಮಾಡಿದ ಬಾಲಕ ದುಶ್ಚಟಗಳ ದಾಸನಾಗಿದ್ದ. ಧೂಮಪಾನ, ಮದ್ಯಪಾನ ಸೇವನೆ ಮಾಡಿ ಆಗಾಗ ಹಾಸ್ಟೆಲಿನಲ್ಲಿ ಗಲಾಟೆ ಮಾಡುತ್ತಿದ್ದ. ಗೋವಾದಿಂದ ಮರಳಿದ ಬಳಿಕ ಈತನ ಚಲವಲನಗಳ ಮೇಲೆ ನಿಗಾ ಇಡುವಂತೆ ಬಾಲಕನ ತಾಯಿ ಮೋಹನ್‌ಕುಮಾರ್‌ಗೆ ಸೂಚಿಸಿದ್ದರು. ಇದನ್ನು ಚಾಚೂ ತಪ್ಪದೆ ಪಾಲಿಸಿದ ಮೋಹನ, ಬಾಲಕನ ತಾಯಿಗೆ ಮಾಹಿತಿ ಮುಟ್ಟಿಸುತ್ತಿದ್ದ. ಇದರಿಂದ ಕುಪಿತಗೊಂಡಿದ್ದ ಬಾಲಕ ಗಲಾಟೆ ಕೂಡ ಮಾಡಿದ್ದ. ಇದನ್ನು ಮೋಹನ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಸ್ನೇಹಿತ ಜಯಂತ್‌ ತಿಳಿಸಿದ.
ಪೊಲೀಸ್‌ ಕಮಿಷನರ್‌ ಡಾ.ಎಂ.ಎ. ಸಲೀಂ, ಡಿಸಿಪಿ ವಿನಾಯಕ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT