ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನತೆ ಕಾಡುವ ‘ಅಪ್ಲಾಸ್ಟಿಕ್ ಅನೀಮಿಯಾ’

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

‘ಅಪ್ಲಾಸ್ಟಿಕ್ ಅನೀಮಿಯಾ’ ಎಂಬುದು ಅಪರೂಪದ ಕಾಯಿಲೆಯಾಗಿದ್ದ ಕಾಲವೊಂದಿತ್ತು. ಆದರೆ ಕೆಲವು ವರ್ಷಗಳಿಂದೀಚೆಗೆ ಈ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗಿ ಕಾಣಸಿಗುತ್ತಿವೆ. ಮೂಲತಃ ರಕ್ತದ ಸಮಸ್ಯೆಯಾಗಿರುವ ಅಪ್ಲಾಸ್ಟಿಕ್ ಅನೀಮಿಯಾದಲ್ಲಿ, ಅಸ್ಥಿಮಜ್ಜೆಯಲ್ಲಿ ಅಗತ್ಯವಾದ ಹೊಸ ರಕ್ತಕಣಗಳ ಉತ್ಪಾದನೆ ಸಾಧ್ಯವಾಗದೆ, (ಕೆಂಪು ರಕ್ತಕಣ, ಬಿಳಿ ರಕ್ತ ಕಣ ಹಾಗೂ ಪ್ಲೇಟ್‌ಲೆಟ್‌ಗಳು) ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.

ಈ ಕುರಿತು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ‘ಹೆಮಟೊ ಆಂಕಾಲಜಿಸ್ಟ್’ ಡಾ. ಆಶಿಶ್ ದೀಕ್ಷಿತ್ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
* ಅಪ್ಲಾಸ್ಟಿಕ್ ಅನೀಮಿಯಾ ಎಂದರೇನು?
ಅಪ್ಲಾಸ್ಟಿಕ್ ಅನೀಮಿಯಾ ರಕ್ತದ ಸಮಸ್ಯೆ. ಅಪ್ಲಾಸ್ಟಿಕ್ ಎಂದರೆ ಅಪೂರ್ಣ. ಅನೀಮಿಯಾ ರಕ್ತದ ಕೊರತೆ. ಈ ಸಮಸ್ಯೆ ಹುಟ್ಟಿಕೊಳ್ಳುವುದು ದೇಹದಲ್ಲಿನ ಅಸ್ಥಿಮಜ್ಜೆ ಅಗತ್ಯವಿದ್ದಷ್ಟು ರಕ್ತ ಕಣಗಳನ್ನು ಸೃಷ್ಟಿಸುವಲ್ಲಿ ಸೋತಾಗ. ಇದರಿಂದ ಅನಿಯಮಿತ ಹೃದಯ ಬಡಿತ (ಅರಿದ್ಮಿಯಾ), ಹೃದಯದ ಗಾತ್ರ ದೊಡ್ಡದಾಗುವುದು, ಹೃದಯದ ತೊಂದರೆ, ಇನ್ನಿತರ ಸೋಂಕುಗಳಿಗೆ ಕಾರಣವಾಗಬಹುದು. ಇದು ಅತಿರೇಕಕ್ಕೇರಿದರೆ, ಸಾವಿಗೂ ಕಾರಣವಾಗುತ್ತದೆ.

* ಯಾವ ವಯೋಮಾನದವರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುವುದು?
ಯೌವನಾವಸ್ಥೆಯಲ್ಲಿರುವವರಲ್ಲಿ ಹೆಚ್ಚು ಕಂಡುಬರುತ್ತದೆ. ಜೊತೆಗೆ ನಲವತ್ತು ದಾಟಿದವರಲ್ಲೂ ಕಾಣಸಿಗುತ್ತದೆ. ರಾಸಾಯನಿಕ, ವಿಕಿರಣಗಳಿಗೆ ಹೆಚ್ಚು ಒಡ್ಡಿಕೊಂಡವರಿಗೆ ಹೀಗಾಗುವ ಸಾಧ್ಯತೆ ಹೆಚ್ಚು. ಆದರೆ ಅರ್ಧದಷ್ಟು ಹೆಚ್ಚು ಪ್ರಕರಣಗಳಲ್ಲಿ ಇಂಥದ್ದೇ ಕಾರಣ ಎಂದು ಊಹಿಸಲು ಸಾಧ್ಯವಾಗಿರುವುದಿಲ್ಲ.

* ಅಪ್ಲಾಸ್ಟಿಕ್ ಅನೀಮಿಯಾ ಸಮಸ್ಯೆಗೆ ಕಾರಣಗಳೇನು?
ಎಷ್ಟೋ ಸಂದರ್ಭದಲ್ಲಿ ಇದು ವಂಶವಾಹಿಯಾಗಿ ಬಂದಿರುತ್ತದೆ. ಶೇ 5ರಷ್ಟು ವೈರಸ್ ಸೋಂಕಿನಿಂದ ಬರುವ ಸಾಧ್ಯತೆಯಿದೆ.

* ಇದು ಜೀವನಶೈಲಿ ಸಂಬಂಧಿತ ಆರೋಗ್ಯ ಸಮಸ್ಯೆಯೇ?
ಇಲ್ಲ, ಜೀವನಶೈಲಿಗೂ, ಈ ಕಾಯಿಲೆಗೂ ಯಾವುದೇ ಸಂಬಂಧವಿಲ್ಲ.

* ಈ ಕಾಯಿಲೆಯ ಲಕ್ಷಣಗಳೇನು?
ಕಣ್ಣುಗಳು ಹಳದಿ ಬಣ್ಣವಾಗುವುದು, ಚರ್ಮದ ಬಣ್ಣ ಬದಲಾಗುವುದು, ಕೆಂಪು ರಕ್ತಕಣಗಳ ಕೊರತೆಯಿಂದ ತಲೆ ಸುತ್ತು ಬರುವುದು, ರಕ್ತ ಸೋರುವಿಕೆ ಹೀಗೆ ಕೆಲ ಲಕ್ಷಣಗಳು ಬಂದರೆ, ಬಿಳಿ ರಕ್ತಕಣಗಳ ಕೊರತೆಯಿಂದ ಆಮ್ಲಜನಕ ಕೊರತೆ (ಉಸಿರಾಟದ ತೊಂದರೆ) ಜ್ವರ, ಎದೆನೋವು, ಕಾಲು ಊತ ಹೀಗೆ ಹಲವು ಲಕ್ಷಣಗಳನ್ನು ಕಾಣಬಹುದು.

* ಈ ಸಮಸ್ಯೆಗೆ ಲಭ್ಯವಿರುವ ಚಿಕಿತ್ಸೆಗಳೇನು?
ಇದರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಇದರತ್ತ ಹೆಚ್ಚು ಗಮನ ಹರಿಸಬೇಕಾಗಿದೆ. ಯುವಜನತೆಗೆ ಈ ತೊಂದರೆ ಬಂತೆಂದರೆ, ಅಸ್ಥಿಮಜ್ಜೆ ಕಸಿ ಉತ್ತಮ ಆಯ್ಕೆ. ಇದಕ್ಕೆ ಹೊರತಾಗಿ ಎಟಿಜಿ ಔಷಧಿ ಹೇಳಲಾಗುತ್ತದೆ. ಕುದುರೆ ಅಥವಾ ಮೊಲದ ಸೆರಮ್‌ನಿಂದ ಈ ಔಷಧಿಯನ್ನು ತಯಾರಿಸಲಾಗಿದ್ದು, ಯುವಜನತೆಯಲ್ಲಿ ಶೇ 70 ಹಾಗೂ ಮಧ್ಯವಯಸ್ಕರಲ್ಲಿ ಶೇ 50ರಷ್ಟು ಫಲಿತಾಂಶ ಕಾಣಬಹುದು. ಸಮಸ್ಯೆಯ ಗಾಂಭೀರ್ಯವನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ.

* ಇದರ ವೆಚ್ಚ ಎಷ್ಟಾಗಬಹುದು?
ಅಸ್ಥಿಮಜ್ಜೆ ಕಸಿಗೆ ಹತ್ತರಿಂದ 14 ಲಕ್ಷ ತಗುಲಬಹುದು. ಎಟಿಜಿ ಚಿಕಿತ್ಸೆ ವ್ಯಕ್ತಿಯ ತೂಕದ ಮೇಲೆ ಅವಲಂಬಿತವಾಗಿರುತ್ತದೆ. ಅದು ಯುವಜನತೆಗೆ– ಐದರಿಂದ ಏಳು ಲಕ್ಷವಾದರೆ, ಮಧ್ಯವಯಸ್ಕರಿಗೆ ನಾಲ್ಕರಿಂದ ಐದು ಲಕ್ಷವಾಗುತ್ತದೆ.

* ಇದಕ್ಕೆ ಜೀವನವಿಡೀ ಔಷಧೋಪಚಾರ ಅಗತ್ಯವಿದೆಯೇ?
ಇಲ್ಲ. ಒಂದು ಹಂತ ಮುಗಿದ ನಂತರ ಯಾವುದೇ ಔಷಧಿಯನ್ನು ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.

* ಈ ಕುರಿತು ಹೇಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬಹುದು?
ಎಷ್ಟೋ ಪ್ರಕರಣಗಳು ಕಾಲ ಮೀರಿದ ಮೇಲೆ ಬೆಳಕಿಗೆ ಬರುತ್ತವೆ. ಆದರೆ ಒಂದಿಷ್ಟು ತೊಂದರೆ ಕಂಡರೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಅತಿರೇಕಕ್ಕೇರುವ ಮುನ್ನ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.

ಮಾಹಿತಿಗೆ: 080-25024444 ಅಥವಾ info@manipalhospitals.comಗೆ ಇಮೇಲ್ ಮಾಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT