ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿ ಸೇರಿ ಆರು ಮಂದಿ ಬಂಧನ

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆ ಮನೆಯಲ್ಲಿ ಡಕಾಯಿತಿ
Last Updated 11 ಫೆಬ್ರುವರಿ 2016, 20:05 IST
ಅಕ್ಷರ ಗಾತ್ರ

ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಗೆಳತಿಯ ಮನೆಗೆ ನುಗ್ಗಿ ಹಣ–ಚಿನ್ನಾಭರಣ ದೋಚಿದ್ದ ಯುವತಿ ಸೇರಿದಂತೆ ಆರು ಮಂದಿ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದು,  ಪರಪ್ಪನ ಅಗ್ರಹಾರ ಜೈಲು ಅತಿಥಿಗಳಾಗಿದ್ದಾರೆ.

ಪ್ರಕರಣ ಸಂಬಂಧ ಟಿ. ದಾಸರಹಳ್ಳಿಯ ಅಶ್ವಿನಿ (20), ಲಗ್ಗೆರೆಯ ಆನಂದ್‌ (25), ಬ್ಯಾಡರಹಳ್ಳಿಯ ಪವನ್‌ ಕುಮಾರ್‌ (19), ಕಮಲಾನಗರದ ಎಂ. ಭರತ್‌ (18), ರೇವಣ್ಣ (20) ಮತ್ತು ಕುರುಬರಹಳ್ಳಿಯ ಚರಣ್‌ (19) ಎಂಬುವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ₹80 ಸಾವಿರ ನಗದು, ಚಿನ್ನಾಭರಣ, ಮೊಬೈಲ್, ಕಾರು ಜಪ್ತಿ ಮಾಡಲಾಗಿದೆ ಎಂದು ಸುಬ್ರಹ್ಮಣ್ಯಪುರ  ಪೊಲೀಸರು ತಿಳಿಸಿದರು.
ದೊಡ್ಡಕಲ್ಲಸಂದ್ರದಲ್ಲಿ ವಾಸವಾಗಿರುವ ರಾಜೇಶ್ವರಿ ಎಂಬುವರ ಮನೆಗೆ ಫೆ. 2ರಂದು ನುಗ್ಗಿದ್ದ ಆರೋಪಿಗಳು, ಆಕೆಯ ಪತಿ ವಿನಯ್  ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಚಿನ್ನಾಭರಣ ದೋಚಿದ್ದರು. ಈ ಬಗ್ಗೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಒಂದು ಗಂಟೆಗೆ ₹1 ಸಾವಿರ: ತ್ಯಾಗರಾಜನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ರಾಜೇಶ್ವರಿ, ಏಡ್ಸ್‌ ಬಗ್ಗೆ ಅರಿವು ಮೂಡಿಸುವ ಸಂಸ್ಥೆಯೊಂದರ (ಎನ್‌ಜಿಒ) ಸದಸ್ಯೆಯಾಗಿದ್ದಾಳೆ. ವಿನಯ್ ರಿಯಲ್‌ ಎಸ್ಟೇಟ್ ವ್ಯವಹಾರ ನಡೆಸುತ್ತಾರೆ.

ಎನ್‌ಜಿಒನಲ್ಲಿ ಪರಿಚಯವಾದ ಸದಸ್ಯನೊಬ್ಬನ ನೆರವಿನಿಂದ ರಾಜೇಶ್ವರಿ ಮನೆಯಲ್ಲೇ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಆ ವ್ಯಕ್ತಿ ಗಿರಾಕಿಗಳನ್ನು ಆಕೆಯ ಮನೆಗೆ ಕಳುಹಿಸುತ್ತಿದ್ದ. ಗಂಟೆಗೆ ಒಂದು ಸಾವಿರದಂತೆ ಕೊಠಡಿಯನ್ನು ಬಾಡಿಗೆ ಕೊಡುತ್ತಿದ್ದಳು ಎಂದು ಪೊಲೀಸರು ಹೇಳಿದರು.

ಮೂಲತಃ ಬೀದರ್‌ನ ಅಶ್ವಿನಿ, ಪೀಣ್ಯ ದಾಸರಹಳ್ಳಿಯಲ್ಲಿ ವಾಸವಾಗಿದ್ದಾಳೆ. ಏಡ್ಸ್‌ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವೊಂದರಲ್ಲಿ ಅಶ್ವಿನಿಗೆ ರಾಜೇಶ್ವರಿಯ ಪರಿಚಯವಾಗಿತ್ತು.

ಆರೋಪಿಗಳಾದ ಆನಂದ್‌ ಮತ್ತು ಭರತ್ ಸಹ ಅಶ್ವಿನಿಯ ಮನೆಯಲ್ಲೇ ವಾಸವಾಗಿದ್ದರು. ಆಗಾಗ್ಗೆ ರಾಜೇಶ್ವರಿಯ ಮನೆಗೆ ಹೋಗಿ ಬರುತ್ತಿದ್ದ ಅಶ್ವಿನಿ, ಅವರ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಗಮನಿಸಿ ಹಣ– ಒಡವೆಗಳೂ ಇರುವ ಬಗ್ಗೆ ಲೆಕ್ಕಚಾರ ಹಾಕಿದ್ದಳು.

ಇತ್ತೀಚೆಗೆ ಮನೆ ಬದಲಾಯಿಸಲು ಬಯಸಿದ್ದ ಅಶ್ವಿನಿಗೆ, ಹೊಸ ಮನೆಗೆ ಮುಂಗಡ ಕೊಡಲು ಹಣ ಇರಲಿಲ್ಲ. ಅದಕ್ಕಾಗಿ ಆಕೆ ರಾಜೇಶ್ವರಿಯ ಮನೆಯಲ್ಲಿ ಕಳವು ಮಾಡುವ ಸಂಚು ರೂಪಿಸಿದ್ದಳು.

ಇದೇ ವೇಳೆ ಆರೋಪಿ ಆನಂದ್‌ಗೆ ತನ್ನ ಕಾರಿನ ಸಾಲ ತೀರಿಸಲು ಮತ್ತು ಭರತ್‌ಗೆ ಡ್ಯಾನ್ಸ್‌ ತರಗತಿಗಳನ್ನು ಆರಂಭಿಸಲು ಹಣದ ಅವಶ್ಯಕತೆ ಇತ್ತು. ಹೀಗಾಗಿ ಅವರು ಅಶ್ವಿನಿ ಅವರ ಯೋಜನೆಗೆ ಸಹಕರಿಸಲು ಒಪ್ಪಿಕೊಂಡಿದ್ದರು.

ಸಂಚು ಹೀಗಿತ್ತು: ಮಾತನಾಡಿಸುವ ನೆಪದಲ್ಲಿ ಅಶ್ವಿನಿ ರಾಜೇಶ್ವರಿಯ ಮನೆಗೆ ಹೋಗುವುದು. ಸ್ವಲ್ಪ ಸಮಯದ ನಂತರ ಆರೊಪಿಗಳಲ್ಲಿ ಒಬ್ಬಾತ ಅಶ್ವಿನಿಯ ಸಹೋದರನ ಸೋಗಿನಲ್ಲಿ ಮನೆಗೆ ನುಗ್ಗಿ, ‘ಬಲವಂತವಾಗಿ ನನ್ನ ತಂಗಿಯನ್ನು ಮನೆಯಲ್ಲಿ ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ’ ಎಂದು ರಾಜೇಶ್ವರಿ ಜತೆ ಜಗಳ ತೆಗೆಯಬೇಕು.

ಇದೇ ವೇಳೆ ಉಳಿದ ಆರೋಪಿಗಳೂ ಮನೆಗೆ ನುಗ್ಗಿ ರಾಜೇಶ್ವರಿಯ ಮುಖಕ್ಕೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿ ನಗದು, ಚಿನ್ನಾಭರಣ ದೋಚಬೇಕು ಎಂದು ಮೊದಲು ಸಂಚು ರೂಪಿಸಿಕೊಂಡಿದ್ದರು.

ತಲೆ ಕೆಳಗಾದ ಯೋಜನೆ: ರಾಜೇಶ್ವರಿಯ ಪತಿ ವಿನಯ್ ಅವರು ಮನೆಯಲ್ಲಿ ಇರುವುದಿಲ್ಲ ಎಂದುಕೊಂಡ ಅಶ್ವಿನಿ, ಪೂರ್ವ ಯೋಜಿತ ಸಂಚಿನಂತೆ ಫೆ.2ರ ರಾತ್ರಿ ರಾಜೇಶ್ವರಿಯ ಮನೆಗೆ ಹೋಗಿದ್ದಳು. ಆದರೆ, ಆ ದಿನ ವಿನಯ್ ಕೆಲಸದಿಂದ ಬೇಗನೆ ಮನೆಗೆ ಬಂದಿದ್ದರು.

ಅವರನ್ನು ನೋಡಿ ತಬ್ಬಿಬ್ಬಾದ ಅಶ್ವಿನಿ, ಈ ವಿಷಯವನ್ನು ತಂಡದ ಸದಸ್ಯರಿಗೆ ತಿಳಿಸುವ ಮುನ್ನವೇ ಅವರು ಮನೆಗೆ ನುಗ್ಗಿದ್ದರು. ನಂತರ ಏಕಾಏಕಿ ರಾಜೇಶ್ವರಿಗೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿದ್ದರು. ಅಲ್ಲದೆ, ವಿನಯ್‌ ಮೇಲೂ ಚಾಕುವಿನಿಂದ ಹಲ್ಲೆ  ನಡೆಸಿ, ನಗದು–ಚಿನ್ನಾಭರಣ ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಸ್ಥಳೀಯರಿಂದ ಸುಳಿವು: ರಾಜೇಶ್ವರಿಯ ಮನೆಗೆ ಕಾರಿನಲ್ಲಿ ಬಂದಿದ್ದ ಅರೋಪಿಗಳು, ಕಾರನ್ನು ಅವರ ಮನೆ ಸಮೀಪದ ದಿನಸಿ ಅಂಗಡಿ ಬಳಿ  ನಿಲ್ಲಿಸಿದ್ದರು.
ಕೃತ್ಯದ ನಂತರ ಅರೋಪಿಗಳು ಅವರ ಮನೆಯಿಂದ ಓಡಿ ಬಂದು ಕಾರಿನಲ್ಲಿ ಪರಾರಿಯಾಗಿದ್ದನ್ನು ಗಮನಿಸಿದ್ದ ಅಂಗಡಿಯ ಮಾಲೀಕರು, ಅದರ ನೋಂದಣಿ ಸಂಖ್ಯೆ ಬರೆದಿಟ್ಟುಕೊಂಡಿದ್ದರು.

ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದಾಗ ಆರೋಪಿಗಳು ಪೀಣ್ಯದ ಮಂಜುನಾಥ್ ಎಂಬುವರಿಂದ ಕಾರು ಬಾಡಿಗೆ ಪಡೆದಿದ್ದರು ಎಂಬುವುದು ತಿಳಿಯಿತು. ಆ ಸುಳಿವು ಅಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಳು ತಿಳಿಸಿದರು.

ಅಶ್ವಿನಿಯದ್ದೂ ಅದೇ ದಂಧೆ
ಏಳನೇ ತರಗತಿ ಓದಿದ್ದ ಅಶ್ವಿನಿ, ಆರಂಭದಲ್ಲಿ ಪೀಣ್ಯದ  ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ನಂತರ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಳು. ಉಳಿದ ಆರೋಪಿಗಳೂ ಏಳನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ. ಅವರು ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹಣಕ್ಕಾಗಿ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪತಿಗೆ ಗೊತ್ತಿರಲಿಲ್ಲ: ರಾಜೇಶ್ವರಿ, ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಿಷಯ ಆಕೆಯ ಪತಿ ವಿನಯ್‌ಗೆ ಗೊತ್ತಿರಲಿಲ್ಲ. ಪತಿ ಹಾಗೂ ಮಕ್ಕಳು ಬೆಳಿಗ್ಗೆ ಮನೆಯಿಂದ ಹೊರಗೆ ಹೋದ ನಂತರ ದಂಧೆ ನಡೆಸುತ್ತಿದ್ದಳು ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT