ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಪ್ರತಿಭೆಗಳ ಪರೀಕ್ಷಾ ಕಣ

ಭಾರತ – ಜಿಂಬಾಬ್ವೆ ಕ್ರಿಕೆಟ್ ಸರಣಿ
Last Updated 8 ಮೇ 2016, 19:44 IST
ಅಕ್ಷರ ಗಾತ್ರ

ಐಪಿಎಲ್‌ ರಂಗು ಮತ್ತು ಗುಂಗು ಮೇ ತಿಂಗಳ ಅಂತ್ಯದಲ್ಲಿ ಮುಗಿಯಲಿದೆ. ಅದರ ನಂತರ ಭಾರತ ತಂಡ ಜಿಂಬಾಬ್ವೆಯತ್ತ ಪ್ರಯಾಣ ಬೆಳೆಸಲಿದೆ. ಆ ತಂಡದ ಎದುರು ಭಾರತ ತಂಡವು ತನ್ನ ಬೆಂಚ್ ಶಕ್ತಿಯನ್ನು ಪರೀಕ್ಷಿಸುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಗಿರೀಶ ದೊಡ್ಡಮನಿ ವಿಶ್ಲೇಷಿಸಿದ್ದಾರೆ.

1983ರ ವಿಶ್ವಕಪ್ ಕ್ರಿಕೆಟ್ ಟೂರ್ನಿ ಎಂದರೆ ಸಾಕು. ಕಪಿಲ್ ದೇವ್ ಜಿಂಬಾಬ್ವೆ ವಿರುದ್ಧ ಗಳಿಸಿದ್ದ ಅಜೇಯ ಶತಕದ ಅಬ್ಬರ ಕಣ್ಣ ಮುಂದೆ ಬರುತ್ತದೆ. ಅವತ್ತು ಸಂಕಷ್ಟದಲ್ಲಿದ್ದ ತಂಡಕ್ಕೆ ಕಪಿಲ್ ಹೊಡೆದಿದ್ದ 175 ರನ್‌ಗಳು ಸಂಜೀವಿನಿಯಾಗಿದ್ದವು. ಭಾರತ ಮತ್ತು ಜಿಂಬಾಬ್ವೆ ನಡುವಣ ಕ್ರಿಕೆಟ್ ಸಂಬಂಧಕ್ಕೆ ಚಾಲನೆ ನೀಡಿದ್ದ  ಪಂದ್ಯ ಅದು.

ಆ ಕಾಲಘಟ್ಟದಲ್ಲಿ ಎರಡೂ ತಂಡಗಳ ಸಾಮರ್ಥ್ಯ ಮತ್ತು ವರ್ಚಸ್ಸುಗಳು ಒಂದೇ ತೆರನಾಗಿದ್ದವು. ಆ ವಿಶ್ವಕಪ್ ಟೂರ್ನಿಯಲ್ಲಿ ಎರಡೂ ತಂಡಗಳು ಕಪ್ಪುಕುದುರೆಗಳೇ ಆಗಿದ್ದವು. ಆದರೆ ಅದರ ನಂತರದ ಇತಿಹಾಸವೇ ಬೇರೆ. ಅಲ್ಲಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಭಾರತದ ಕ್ರಿಕೆಟ್ ಆಗಸದೆತ್ತರಕ್ಕೆ ಬೆಳೆದು ನಿಂತಿದೆ. ಆರ್ಥಿಕವಾಗಿ ಅತ್ಯಂತ ಶ್ರೀಮಂತ ಕ್ರಿಕೆಟ್‌ ಸಂಸ್ಥೆಯಾಗಿ ಬಿಸಿಸಿಐ ಮೆರೆದಾಡುತ್ತಿದೆ. ಆದರೆ, ಜಿಂಬಾಬ್ವೆ ಮಾತ್ರ ಇನ್ನೂ ಅಂಬೆಗಾಲಿಡುತ್ತಿದೆ.

ಅದಕ್ಕೆ ಅಲ್ಲಿಯ ರಾಜಕೀಯ, ಆರ್ಥಿಕ ಸ್ಥಿತಿಗತಿಗಳೇ ಕಾರಣ. ವಿಶ್ವದರ್ಜೆಯ ಆಟಗಾರರು, ತರಬೇತುದಾರರನ್ನು ಕ್ರಿಕೆಟ್‌ಲೋಕಕ್ಕೆ ನೀಡಿರುವ ಹೆಗ್ಗಳಿಕೆ ಆಫ್ರಿಕಾ ಖಂಡದ ಈ ರಾಷ್ಟ್ರಕ್ಕೆ ಇದೆ.ಜಿಂಬಾಬ್ವೆಯ ಮಾಜಿ ಆಟಗಾರ ಡಂಕೆನ್ ಫ್ಲೆಚರ್ ಭಾರತ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದವರು. ಆದರೂ ನಿರೀಕ್ಷಿತ ಮಟ್ಟದ ಬೆಳವಣಿಗೆ ಮಾತ್ರ ಕಂಡಿಲ್ಲ. ಈಗಲೂ ಎದುರಾಳಿ ತಂಡಗಳಿಗೆ ಸುಲಭದ ತುತ್ತು ಎಂಬ ರೀತಿಯಲ್ಲಿಯೇ ತಂಡವು ಬಿಂಬಿತವಾಗಿದೆ.

ಇದೀಗ ಭಾರತ ತಂಡವು ಎಂಟನೇ ಬಾರಿ ಜಿಂಬಾಬ್ವೆ ತಂಡದ ವಿರುದ್ಧ ದ್ವಿಪಕ್ಷೀಯ ಸರಣಿ ಆಡಲಿದೆ. ಕಳೆದ ಏಳು ಸರಣಿಗಳಲ್ಲಿ ಭಾರತವು ಆರು ಬಾರಿ ಗೆದ್ದಿದೆ. 1996–97ರಲ್ಲಿ ಒಂದು ಬಾರಿ ಮಾತ್ರ ಜಿಂಬಾಬ್ವೆ 1–0ಯಿಂದ ಗೆದ್ದಿತ್ತು. 1992ರಿಂದೀಚೆಗೆ ಭಾರತವು ಜಿಂಬಾಬ್ವೆ ಪ್ರವಾಸ ಕೈಗೊಳ್ಳುತ್ತಿರುವುದು ಇದು ಐದನೇ ಬಾರಿ. 2001–02ರಲ್ಲಿ ಜಿಂಬಾಬ್ವೆ ಇಲ್ಲಿಗೆ ಬಂದಿತ್ತು. ಅದು ಬಿಟ್ಟರೆ ವಿಶ್ವಕಪ್, ಚಾಂಪಿಯನ್ಸ್‌ ಟ್ರೋಫಿ, ತ್ರಿಕೋನ ಸರಣಿಗಳಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿವೆ. ಆಗಲೂ ಭಾರತವೂ ಮೇಲುಗೈ ಸಾಧಿಸಿದೆ. ಈ ಬಾರಿಯೂ ಮತ್ತೊಂದು ಸರಣಿ ಗೆದ್ದು ಬರುವ ಹುಮ್ಮಸ್ಸಿನಲ್ಲಿದೆ.

ಕಾಯ್ದಿಟ್ಟ ಆಟಗಾರರ ಪರೀಕ್ಷಾ ಕಣ
ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಬಲಾಢ್ಯ ತಂಡಗಳು ತಮ್ಮ ‘ಕಾಯ್ದಿಟ್ಟ ಆಟಗಾರರ’ ಸಾಮರ್ಥ್ಯ ಪರೀಕ್ಷೆಗಾಗಿ ಜಿಂಬಾಬ್ವೆ ಎದುರಿನ ಸರಣಿಗಳನ್ನು ಬಳಸಿಕೊಳ್ಳುತ್ತವೆ. ತಮ್ಮ ಅನುಭವಿ ತಂಡವನ್ನು ಕಣಕ್ಕಿಳಿಸುವುದು ಕಡಿಮೆ. 2013ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ತಂಡವು  ಜಿಂಬಾಬ್ವೆಯಲ್ಲಿ ಏಕದಿನ ಸರಣಿ ಆಡಿತ್ತು. ಎಲ್ಲ ಐದು ಪಂದ್ಯಗಳನ್ನೂ ಗೆದ್ದಿತ್ತು. ಹೋದ ವರ್ಷ ಅಜಿಂಕ್ಯ ರಹಾನೆ ನಾಯಕರಾಗಿದ್ದ ಯುವ ತಂಡ 3–0ಯಿಂದ ಸರಣಿ ಗೆದ್ದು ಬಂದಿತ್ತು.

ಕರ್ನಾಟಕದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲಿಯೇ ಭರ್ಜರಿ ಬ್ಯಾಟಿಂಗ್ (71 ರನ್) ಮಾಡಿದ್ದರು. ಆ ತಂಡದಲ್ಲಿ ರಾಬಿನ್ ಉತ್ತಪ್ಪ, ಕೇದಾರ್ ಜಾಧವ್, ಮನೋಜ್ ತಿವಾರಿ, ಸ್ಟುವರ್ಟ್ ಬಿನ್ನಿ, ಅಕ್ಷರ್ ಪಟೇಲ್, ಮೋಹಿತ್ ಶರ್ಮಾ ಅವರಂತಹ ಯುವ ಪ್ರತಿಭಾನ್ವಿತರು ಗಮನ ಸೆಳೆದಿದ್ದರು. ಹರಭಜನ್ ಸಿಂಗ್ ಮತ್ತು ಮುರಳಿ ವಿಜಯ್ ಅವರು ತಂಡದಲ್ಲಿದ್ದ ಅನುಭವಿ ಆಟಗಾರರಾಗಿದ್ದರು.

ಈ ಬಾರಿ ದೇಶಿ ಕ್ರಿಕೆಟ್, ಐಪಿಎಲ್‌ ಮತ್ತು 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಗಮನ ಸೆಳೆದಿರುವ ಯುವ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ. ಸರ್ಫರಾಜ್ ಖಾನ್, ಪರ್ವೇಜ್ ರಸೂಲ್, ಕೆ.ಎಲ್. ರಾಹುಲ್, ಕರುಣ್ ನಾಯರ್, ಭುವನೇಶ್ವರ್ ಕುಮಾರ್, ಪವನ್ ನೇಗಿ, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬೂಮ್ರಾ ಅವರು ಅವಕಾಶ ಪಡೆಯುವ ಸಾಧ್ಯತೆ ಹೆಚ್ಚು.

ಮಹೇಂದ್ರಸಿಂಗ್ ದೋನಿ ಮತ್ತು ವಿರಾಟ್ ಕೊಹ್ಲಿ ಅವರು ವಿಶ್ರಾಂತಿ ಪಡೆದರೆ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಅಥವಾ ಶಿಖರ್ ಧವನ್ ಅವರಲ್ಲಿ ಒಬ್ಬರಿಗೆ ನಾಯಕತ್ವದ ಜವಾಬ್ದಾರಿ ವಹಿಸುವುದು ಖಚಿತ. ವಿಶ್ವ ಟ್ವೆಂಟಿ–20 ಚಾಂಪಿಯನ್‌ಷಿಪ್, ಐಪಿಎಲ್ ಟೂರ್ನಿಗಳಲ್ಲಿ ಆಡಿ ದಣಿದಿರುವ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲು ಇದು ಸದವಕಾಶವೂ ಆಗಿದೆ. ಜುಲೈ ನಂತರ ಭಾರತ ತಂಡವು ಮಹತ್ವದ ಟೂರ್ನಿಗಳಲ್ಲಿ ಆಡಲಿರುವುದರಿಂದ ಇದು ಅಗತ್ಯವೂ ಹೌದು.

ತಿರುಗೇಟು ನೀಡುವುದೇ ಜಿಂಬಾಬ್ವೆ?
1980ರ ನಂತರ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಜಿಂಬಾಬ್ವೆ ಪದಾರ್ಪಣೆ ಮಾಡಿತ್ತು. 1992ರಲ್ಲಿ ಟೆಸ್ಟ್  ಕ್ರಿಕೆಟ್ ಮಾನ್ಯತೆ ಪಡೆಯಿತು.1997 ರಿಂದ 2002ರ ಅವಧಿಯನ್ನು ಜಿಂಬಾಬ್ವೆ ಕ್ರಿಕೆಟ್‌ನ ಸುವರ್ಣ ಯುಗವೆಂದೇ ಬಣ್ಣಿಸಲಾಗುತ್ತದೆ. ಆ್ಯಂಡಿ ಫ್ಲವರ್, ಗ್ರ್ಯಾಂಟ್ ಫ್ಲವರ್ ಸಹೋದರರು ಸೇರಿದಂತೆ ಹಲವು ಒಳ್ಳೆಯ ಆಟಗಾರರು ಮೆರೆದಾಡಿದ ಕಾಲವದು.

ಆದರೆ, 2002ರ ನಂತರದ ಕಥೆಯೇ ಬೇರೆ. ಕ್ರಿಕೆಟ್ ಆಡಳಿತದಲ್ಲಿ ರಾಜಕಾರಣಿಗಳ ಹಸ್ತಕ್ಷೇಪ, ಸ್ವಜನ ಪಕ್ಷಪಾತದಿಂದಾಗಿ ಕ್ರೀಡೆ ಅಧೋಗತಿಗೆ ಇಳಿಯಿತು. ಆಗ ತಂಡದಲ್ಲಿದ್ದ ಆ್ಯಂಡಿ ಫ್ಲವರ್, ಹೆನ್ರಿ ಒಲಾಂಗಾ, ಹೀತ್ ಸ್ಟ್ರೀಕ್ ಇದನ್ನು ವಿರೋಧಿಸಿ ಬಂಡಾಯವೆದ್ದರು. 2004ರಲ್ಲಿ ಸ್ಟ್ರೀಕ್ ಅವರನ್ನು ನಾಯಕತ್ವದಿಂದ ಉಚ್ಚಾಟಿಸಲಾಯಿತು. ಸ್ಟ್ರೀಕ್ ಅವರನ್ನು ಬೆಂಬಲಿಸಿದ ಹಲವು ಹಿರಿಯ ಆಟಗಾರರು ಕ್ರಿಕೆಟ್‌ಗೆ ವಿದಾಯ ಹೇಳಿದ್ದು ತಂಡವು ನೆಲಕಚ್ಚಲು ಕಾರಣವಾಯಿತು.

ಆದರೆ ಅಲ್ಲಿ ಈಗಲೂ ಪ್ರತಿಭೆಗಳಿಗೆ ಕೊರತೆಯಿಲ್ಲ.  ಉತ್ತಮ ಆಟಗಾರರು ಈಗಿನ ತಂಡದಲ್ಲಿಯೂ ಇದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವ್ ವಾಟ್ಮೋರ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಲ್‌ರೌಂಡರ್ ಎಲ್ಟನ್ ಚಿಗುಂಬರಾ, ಬ್ರೆಂಡನ್ ಟೇಲರ್, ಹ್ಯಾಮಿಲ್ಟನ್ ಮಸಕಜಾ, ಚಾಮು ಚಿಬಾಬಾ, ಮಾಲ್ಕಂ ವಾಲರ್, ಬೌಲರ್‌ಗಳಾದ ಗ್ರೆಮ್ ಕ್ರೆಮರ್, ಪ್ರಾಸ್ಪರ್ ಉತ್ಸೇಯ, ತಿನಾಶೆ ಪನ್ಯಾಂಗರ, ಸೀನ್ ವಿಲಿಯಮ್ಸ್, ಕ್ರಿಸ್ ಪೊಫು ಉತ್ತಮ ಆಟಗಾರರಾಗಿದ್ದಾರೆ.

ಈ ಸರಣಿಯು ಅವರ ಪ್ರತಿಭಾಪ್ರದರ್ಶನಕ್ಕೂ ವೇದಿಕೆಯಾಗಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿಗುತ್ತಿರುವ ಅಲ್ಪಸ್ವಲ್ಪ ಅವಕಾಶಗಳಲ್ಲಿಯೇ ತಮ್ಮ ಆಟ ತೋರಿಸಬೇಕಾದ ಒತ್ತಡ ಜಿಂಬಾಬ್ವೆ ತಂಡಕ್ಕೆ ಇದೆ. ಒಟ್ಟಿನಲ್ಲಿ ಎರಡೂ ದೇಶಗಳ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಹರಾರೆಯಲ್ಲಿ ವೇದಿಕೆ ಸಿದ್ಧವಾಗಿದೆ.

ವೇಳಾಪಟ್ಟಿ
ಭಾರತ ಜಿಂಬಾಬ್ವೆ ನಡುವಣ ಮೂರು ಏಕದಿನ ಪಂದ್ಯಗಳು (ಜೂನ್ 11, 13 ಮತ್ತು 15ರಂದು ನಡೆಯಲಿವೆ. ಜೂನ್ 18 ಮತ್ತು 20ರಂದು ಟ್ವೆಂಟಿ–20 ಪಂದ್ಯಗಳು ನಡೆಯಲಿವೆ. ಎಲ್ಲ ಪಂದ್ಯಗಳೂ ಹರಾರೆಯಲ್ಲಿ ನಡೆಯಲಿವೆ.

ದ್ವಿಪಕ್ಷೀಯ ಸರಣಿಗಳು: ಭಾರತ –ಜಿಂಬಾಬ್ವೆ ಮುಖಾಮುಖಿ (ಏಕದಿನ)
ಪಂದ್ಯಗಳು - 60
ಭಾರತ ಗೆಲುವು - 48
ಜಿಂಬಾಬ್ವೆ ಜಯ - 10
ಟೈ - 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT