ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ವಿನ್ಯಾಸಕರಿಗೊಂದು ಚೆಂದದ ವೇದಿಕೆ

‘ಬೆಂಗಳೂರು ಡಿಸೈನರ್ ಕಾಂಟೆಸ್ಟ್’
Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ಫ್ಯಾಷನ್ ಲೋಕವೇ ಅಂಥದ್ದು. ದಿನದಿನವೂ ಹೊಸತು. ಇಂದಿನ ಫ್ಯಾಷನ್‌ ನಾಳೆಯೇ ಹಳತಾಗುತ್ತದೆ. ಮುಂದೆ ಕೆಲ ದಿನಗಳಲ್ಲಿ ಅದುವೇ ಹೊಸ ಲುಕ್ ಪಡೆದು ಮರಳುತ್ತದೆ. ಇಂತಹ ಫ್ಯಾಷನ್‌ ಲೋಕವನ್ನು ಒಂದು ನೆಲೆಯಲ್ಲಿ ನಿಲ್ಲಿಸುವುದು ಅಸಾಧ್ಯ. ಅದರ ಚಂಚಲ ಚಿತ್ತದೊಂದಿಗೆ ಬದಲಾಗುತ್ತ ಹೋಗುವುದು ಫ್ಯಾಷನ್‌ ಕ್ಷೇತ್ರದಲ್ಲಿ ದುಡಿಯುವವರಿಗೆ ಅನಿವಾರ್ಯ.

ಸದಾ ಬದಲಾಗುವ ಇಂತಹ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳಿಗೊಂದು ಅವಕಾಶ ನೀಡುವ ಹಾಗೂ ಅವರ ಸೃಜನಶೀಲತೆಗೆ ವೇದಿಕೆ ಒದಗಿಸುವ  ಪ್ರಯತ್ನವೇ ‘ಬೆಂಗಳೂರು ಡಿಸೈನರ್ ಕಾಂಟೆಸ್ಟ್‌–ಬಿಡಿಸಿ’.

ಫ್ಯಾಷನ್ ಫೋಟೊಗ್ರಾಫರ್ ಪುನೀತ್ ಗೌಡ ಈ ಕಾರ್ಯಕ್ರಮದ ರೂವಾರಿ. ಹಲವು ವರ್ಷಗಳಿಂದ ಫ್ಯಾಷನ್‌ ಫೋಟೊಗ್ರಾಫರ್ ಆಗಿ ಕೆಲಸ ಮಾಡುತ್ತಿರುವ ಪುನೀತ್‌ಗೆ ಈ ಸ್ಪರ್ಧೆಯ ಮೂಲಕ ಹೊಸ, ಪ್ರತಿಭಾವಂತ ಯುವ ವಿನ್ಯಾಸಕರಿಗೆ ಒಂದು ವೇದಿಕೆ ಒದಗಿಸುವ ಹಂಬಲ.

‘ಫ್ಯಾಷನ್‌ ಲೋಕ ನೋಡುವ ಕಣ್ಣಿಗೆ ಥಳುಕು ಬಳುಕು. ಒಳಗಡೆ ಸಾಕಷ್ಟು ಸವಾಲುಗಳಿವೆ. ಕಣ್ಣು ಕೋರೈಸುವ ಬೆಳಕಿನ ಹಿಂದೆ ಯಾರಿಗೂ ಕಾಣದ ನೂರು ನೂರು ಕನಸುಗಳಿರುತ್ತವೆ, ಯುವ ಮನಸ್ಸುಗಳ ಸಾಕಷ್ಟು ಶ್ರಮವಿರುತ್ತದೆ. ಅವಕಾಶಗಳಿಗಾಗಿ, ಸೂಕ್ತ ವೇದಿಕೆಗಾಗಿ ಪರಿತಪಿಸುವ ಸಾಕಷ್ಟು ಯುವ ವಿನ್ಯಾಸಕರನ್ನು, ಮಾಡೆಲ್‌ಗಳನ್ನು ದಿನನಿತ್ಯ ನೋಡುತ್ತೇನೆ. ಎಷ್ಟೋ ಬಾರಿ ಕಣ್ಣೀರಾದ ಅಂತಹ ಯುವ ಪ್ರತಿಭೆಗಳನ್ನು ಕಂಡು ದಂಗಾಗಿದ್ದೂ ಇದೆ. ಅಂಥವರಿಗೆ ಏನಾದರೂ ಮಾಡಬೇಕು ಎನ್ನುವ ಆಲೋಚನೆ ಬಹಳ ವರ್ಷಗಳಿಂದ ಇತ್ತು. ಇದೀಗ ಕೈಗೂಡುತ್ತಿದೆ’ ಎನ್ನುತ್ತಾರೆ ಪುನೀತ್.

‘ಬೆಂಗಳೂರೂ ಫ್ಯಾಷನ್‌ ಹಬ್‌ ಆಗಿ ರೂಪುಗೊಳ್ಳುತ್ತಿದೆ. ಇದೀಗ ಮುಂಬೈ ದೆಹಲಿಯಿಂದಲೂ ಫ್ಯಾಷನ್ ಡಿಸೈನರ್‌ಗಳು ಹಾಗೂ ಮಾಡೆಲ್‌ಗಳು ಅವಕಾಶಗಳಿಗಾಗಿ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ನಮ್ಮ ನಡುವಿನ ಪ್ರತಿಭೆಗಳನ್ನು ಗುರುತಿಸುವ ಒಂದು ಹೆಜ್ಜೆ ಇದು’ ಎನ್ನುತ್ತಾರೆ ಅವರು.

‘ಆದರೆ ಇದು ಹಣಕ್ಕಾಗಿ ಮಾಡುತ್ತಿರುವ ಕಾರ್ಯಕ್ರಮ ಅಲ್ಲ, ಈಗಷ್ಟೇ ವ್ಯಾಸಂಗ ಪೂರೈಸಿರುವ ಹಾಗೂ ಇನ್ನೂ ಕಲಿಯುತ್ತಿರವ ಯುವ ಪ್ರತಿಭೆಗಳಿಗೆ ಈ ಸ್ಪರ್ಧೆಯನ್ನು ಆಯೋಜಿಸಿರುವ ಕಾರಣ ಅವರಿಂದ ಲಾಭ ಮಾಡಿಕೊಳ್ಳುವ ಲೆಕ್ಕಾಚಾರ ಇಲ್ಲಿಲ್ಲ. ಈ ಕಾರ್ಯಕ್ರಮ ಮುನ್ನಡೆಸಲು ಪ್ರಾಯೋಜಕರನ್ನು ನೋಡುತ್ತಿದ್ದೇವೆ’ ಎಂದೂ ಅವರು ಸ್ಪಷ್ಟಪಡಿಸುತ್ತಾರೆ.

‘ವಿನ್ಯಾಸಕರು ಮತ್ತು ಮಾಡೆಲ್‌ಗಳಿಗೆ ಭಾಗವಹಿಸುವ ಅವಕಾಶದ ಜೊತೆಗೆ ಪ್ರಬಲ ಮಾರ್ಕೆಟಿಂಗ್, ಬ್ರಾಂಡಿಂಗ್ ಮತ್ತು ಮಾರಾಟ ವೇದಿಕೆಯನ್ನು ರಚಿಸುವುದು ನಮ್ಮ ಗುರಿ’ ಎನ್ನುವುದು ಪುನೀತ್‌ ವಿವರಣೆ.

ಸ್ಪರ್ಧೆ ಏನು, ಹೇಗೆ?
ಆಸಕ್ತರು ಸೆಪ್ಟೆಂಬರ್ 12ರಂದು ಜಯನಗರದ  ಒಗಲೆ ಸ್ಟುಡಿಯೊದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ನಡೆಯಲಿರುವ ಆಡಿಷನ್‌ನಲ್ಲಿ ನೇರವಾಗಿ ಭಾಗಿಯಾಗಬಹುದು.

ಪ್ರತಿಯೊಬ್ಬರೂ A3 ಅಳತೆಯ ಸುಮಾರು 10ರಿಂದ 15 ಸ್ಕೆಚ್‌ಗಳನ್ನು ತರಬೇಕು. ಈ ಸ್ಕೆಚ್‌ಗಳೇ ಅಂತಿಮವಲ್ಲ. ಆದರೆ ಅಭ್ಯರ್ಥಿಗಳ ಪ್ರತಿಭೆ, ಜ್ಞಾನ, ವೈಶಿಷ್ಟ್ಯ, ಸೃಜನಶೀಲತೆಗೆ ಈ ಸ್ಕೆಚ್‌ಗಳೇ ಮಾನದಂಡ ಎನ್ನುವುದನ್ನು ನೆನಪಿಡಬೇಕು.

ಇಲ್ಲಿ ವಿದ್ಯಾರ್ಥಿಗಳ ಕೆಲಸ, ಅವರ ಪ್ರಯತ್ನ ಹಾಗೂ ವೈಯಕ್ತಿಕ ಸಂದರ್ಶನದಲ್ಲಿ ಅವರ ಪ್ರದರ್ಶನದ ಆಧಾರದ ಮೇಲೆ ಕ್ಷೇತ್ರದ ಅನುಭವಿಗಳು ಹತ್ತು ಜನ ವಿನ್ಯಾಸಕರನ್ನು ಆಯ್ಕೆ ಮಾಡುತ್ತಾರೆ. ‌

ಹಾಗೆ ಆಯ್ಕೆಯಾಗುವ ವಿನ್ಯಾಸಕರು ಯಾವುದೋ ಒಂದು ವಿಷಯದ ಮೇಲೆ ತಲಾ ಐದು ವಿನ್ಯಾಸಗಳನ್ನು ಸಿದ್ಧಗೊಳಿಸಬೇಕು.  ಫ್ಯಾಷನ್ ಷೋದಲ್ಲಿ ಪ್ರತಿಯೊಬ್ಬರ ಮೂರು ವಿನ್ಯಾಸಗಳು, ಅಂದರೆ ಒಟ್ಟು ಮೂವತ್ತು ವಿನ್ಯಾಸಗಳು ಪ್ರದರ್ಶನಗೊಳ್ಳುತ್ತವೆ. ಫೋಟೊಶೂಟ್‌ನಲ್ಲಿ ಪ್ರತಿಯೊಬ್ಬರ ಐದೂ ವಿನ್ಯಾಸಗಳನ್ನು ಬಳಸಿಕೊಳ್ಳಲಾಗುತ್ತದೆ.

ಫೋಟೊ ಶೂಟ್
ಈ ಸ್ಪರ್ಧೆಯ ಬಹು ಮುಖ್ಯ ಆಕರ್ಷಣೆ ಎಂದರೆ ಫೋಟೊ ಶೂಟ್. ಆಯ್ಕೆಯಾಗುವ ವಿನ್ಯಾಸಕರ ವಸ್ತ್ರ ಗಳನ್ನು ತೊಟ್ಟ ಮಾಡೆಲ್‌ಗಳ ಫೋಟೊ ಶೂಟ್‌ ಮಾಡಲಾಗುವುದು. ಇದು ವಿನ್ಯಾಸಕರಿಗೆ ಹಾಗೂ ಮಾಡೆಲ್‌ಗಳಿಗೆ ಒಂದು ಅತ್ಯುತ್ತಮ ಪೋರ್ಟ್‌ಪೋಲಿಯೋ ಆಗುತ್ತದೆ. ಇದನ್ನು ಬುಕ್‌ಲೆಟ್‌ ರೂಪದಲ್ಲಿ ತಂದು ಹಲವು ಕಂಪೆನಿಗಳಿಗೆ, ಸಂಸ್ಥೆಗಳಿಗೆ, ಫ್ಯಾಷನ್‌ ಕಾಲೇಜುಗಳಿಗೆ ಹಂಚಲಾಗುತ್ತದೆ.

ವಿನ್ಯಾಸಕರ ಅರ್ಹತಾ ಪಟ್ಟಿ
* ಈಗ ತಾನೆ ಕಾಲೇಜು ಮುಗಿಸಿರುವ ಅಭ್ಯರ್ಥಿಗಳು
* ಕೊನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು
* A3 ಅಳತೆಯ 10ರಿಂದ 15  ಸ್ಕೆಚ್‌ಗಳು
* ಸದ್ಯದ ಫ್ಯಾಷನ್‌ ಟ್ರೆಂಡ್‌ಗಳನ್ನು ಪ್ರತಿನಿಧಿಸುವ ಉತ್ತಮ ಸ್ಕೆಚ್‌ಗಳನ್ನು ಮಾತ್ರ ಪರಿಗಣಿಸಲಾಗುವುದು
* ವಿಷಯ ಮಂಡನೆಯ ಗುಣಮಟ್ಟ ಬಹಳ ಮುಖ್ಯ
* ತಮ್ಮ ಸ್ಕೆಚ್‌ಗಳ ಬಗ್ಗೆ ವಿವರಿಸುವ ಮತ್ತು ಕೇಳುವ ಪ್ರಶ್ನೆಗಳಿಗೆ ಸಮಂಜಸ ಉತ್ತರ ಕೊಡುವ ಪ್ರೌಢಿಮೆ
* ಒಟ್ಟಾರೆ ಭಾಗವಹಿಸುವಿಕೆ: ಮಾಡೆಲ್‌ಗಳ ಆಯ್ಕೆ, ಮೇಕ್ಅಪ್, ಅಲಂಕಾರ ಹಾಗೂ ಆಭರಣಗಳ ಆಯ್ಕೆ ಇತ್ಯಾದಿ

ಆಡಿಷನ್‌ ವಿವರ
ಸ್ಥಳ: ಒಗಲೆ ಸ್ಟುಡಿಯೊ, ನಂ. 406, 7ನೇ ಮುಖ್ಯರಸ್ತೆ, 2ನೇ ಬ್ಲಾಕ್ ಜಯನಗರ.
ದಿನಾಂಕ: ಸೆಪ್ಟೆಂಬರ್ 12
ಸಮಯ: ಬೆಳಿಗ್ಗೆ 10ರಿಂದ ಸಂಜೆ 4
ಪ್ರವೇಶ ಶುಲ್ಕ: ₨ 1000
ಮಾಹಿತಿಗೆ: pg.bdc2015@gmail.com ಹಾಗೂ 94114 47117

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT