ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಫ್ರಟಿಸ್ – ಟೈಗ್ರಿಸ್‌ ನದಿಗಳ ನಡುವೆ...

Last Updated 5 ಮಾರ್ಚ್ 2016, 19:39 IST
ಅಕ್ಷರ ಗಾತ್ರ

ಸರ್ವಾಧಿಕಾರಿಯ ಆಡಳಿತವನ್ನು ಅಮೆರಿಕ ಹೊಡೆದುರುಳಿಸಿದ ಮೇಲೆ ಇರಾಕ್‌ನ ಪರಿಸ್ಥಿತಿ ಈಗ ಹೇಗಿದೆ? ಅಲ್ಲಿನ ಜನಜೀವನ ಹೇಗಿದೆ? ಎಂಬ ಕುತೂಹಲದೊಂದಿಗೆ ಬಾಗ್ದಾದ್‌ ಮತ್ತು ಕರ್ಬಾಲಾದಲ್ಲಿ ಅಡ್ಡಾಡಿದರೆ, ಅಲ್ಲಿನ ಗೋಡೆ ಗೋಡೆಗಳಲ್ಲಿ ಕಾಣಸಿಗುವುದು ಹುತಾತ್ಮರ ಭಾವಚಿತ್ರಗಳು! ಎಲ್ಲ ಸಾರ್ವಜನಿಕ ಸ್ಥಳಗಳನ್ನೂ ಆವರಿಸಿಕೊಂಡಿರುವ ಈ ಚಿತ್ರಗಳ ಸರಣಿಯ ಹಿನ್ನೆಲೆಯಲ್ಲೇ ದಿನಕ್ಕೆ ಒಮ್ಮೆಯಾದರೂ ಆಗಷ್ಟೇ ಯುದ್ಧಭೂಮಿಯಿಂದ ಬಂದ ಮೃತದೇಹದ ಮೆರವಣಿಗೆಯೂ ಕಾಣಸಿಗುತ್ತದೆ.

ಕರ್ಬಲಾದ ಇಮಾಂ ಹುಸೇನ್ ಕ್ಷೇತ್ರದ ಎದುರೇ ಇರುವ ‘ಅಲ್ ಸಫೀರ್ ಅಲ್ ಹುಸೈನ್’ ಆಸ್ಪತ್ರೆಯ ಹಾಸಿಗೆಯ ಮೇಲಿದ್ದ ಆದಿಲ್ ಫೋಜಿ ಮಲಗಿದ್ದಲ್ಲಿಂದಲೇ ಬಲಗೈಯ ಬೆರಳುಗಳಲ್ಲಿ ವಿಜಯದ ಸಂಕೇತವನ್ನು ತೋರುತ್ತಲೇ ನಮ್ಮನ್ನು ಸ್ವಾಗತಿಸಿದರು. ಶುಶ್ರೂಷಕಿ ಬಂದು ಕುಳಿತುಕೊಳ್ಳುವುದಕ್ಕೆ ಅನುಕೂಲವಾಗುವಂತೆ ಮಂಚವನ್ನು ಮೇಲಕ್ಕೇರಿಸಿದರು. ಆಗ ಆದಿಲ್ ‘ಕಾಲುಗಳೆರಡಕ್ಕೂ ಬಲವಿಲ್ಲ’ ಎಂದರು.

ಈಗಷ್ಟೇ ಮೂವತ್ತೈದು ವರ್ಷ ತುಂಬುತ್ತಿರುವ ಆದಿಲ್, ಇರಾಕ್‌ ಅನ್ನು ಸ್ಥಳೀಯರು ‘ದಾಯಿಷ್’ ಎಂದು ಕರೆಯುವ ‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ’ (ಐಸಿಸ್) ಕಪಿಮುಷ್ಠಿಯಿಂದ ಬಿಡುಗಡೆ ಮಾಡಲು ಹೋರಾಡುತ್ತಿರುವ ಸ್ವಯಂ ಸೇವಕರ ಪಡೆಯ ಯೋಧ. ‘ದಾಯಿಷ್’ ಒಂದು ದುಷ್ಟ ಶಕ್ತಿ. ಅವರಿಗೆ ನೇರವಾಗಿ ಹೋರಾಡುವ ಧೈರ್ಯವಿಲ್ಲ. ಆ ಕಾರಣಕ್ಕೇ ಅವರು ಮರೆಯಲ್ಲಿ ನಿಂತು ಗುಂಡು ಹಾರಿಸುತ್ತಾರೆ’ ಎಂದು ವ್ಯಂಗ್ಯವಾಡುವ ಆದಿಲ್‌ ಅವರಿಗೆ ಅವಕಾಶ ಸಿಕ್ಕರೆ ಮತ್ತೆ ರಣರಂಗಕ್ಕೆ ತೆರಳುವಷ್ಟು ಉತ್ಸಾಹವಿದೆ. ಕಾಲುಗಳ ಶಕ್ತಿಯನ್ನು ಕಿತ್ತುಕೊಂಡ ಫಿರಂಗಿಯನ್ನು ಸಿಡಿಸಿದ ‘ಐಸಿಸ್‌’ನ ಹುಟ್ಟಡಗಿಸಬೇಕೆಂಬ ಸಿಟ್ಟೂ ಇದೆ.

ಸದ್ದಾಂ ಆಳ್ವಿಕೆಯ ಅವಧಿಯಲ್ಲಿ ಇರಾಕಿ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಆದಿಲ್ ಹೊಸ ಸರ್ಕಾರ ಬಂದ ಮೇಲೆ ಊರಿಗೆ ಹಿಂದಿರುಗಿದ್ದರು. ಎಲ್ಲವೂ ಸರಿಯಾಗಿದ್ದರೆ ಆದಿಲ್ ಈಗ ಹಾಸಿಗೆಯ ಮೇಲೆ ಮಲಗಿರುತ್ತಿರಲಿಲ್ಲ. ಹಿಂದೆ ಅಮೆರಿಕನ್ನರೊಂದಿಗೆ ಹೋರಾಡಿದಂತೆ ಈಗ ‘ಐಸಿಸ್’ ವಿರುದ್ಧ ಹೋರಾಟಕ್ಕೆ ಇಳಿಯಬೇಕಾದ ಅಗತ್ಯವೂ ಇರುತ್ತಿರಲಿಲ್ಲ. ಬಹುಶಃ ಇರಾಕ್ ಮತ್ತು ಸಿರಿಯಾ ಗಡಿ ಭಾಗದಲ್ಲಿರುವ ತಮ್ಮ ಊರಿನಲ್ಲಿ ಶಾಂತ ಜೀವನ ನಡೆಸುತ್ತಿದ್ದರೇನೋ.

ಮೆಸಪಟೋಮಿಯಾ ನಾಗರಿಕತೆಯ ಹುಟ್ಟಿಗೆ ಕಾರಣವಾದ ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿಯ ನಡುವಣ ಫಲವತ್ತಾದ ಭೂಮಿ ಈ ಬಗೆಯ ಶಾಂತಿಯನ್ನು ಅನುಭವಿಸುವ ಅವಕಾಶ ಕಳೆದೊಂದು ಶತಮಾನದ ಅವಧಿಯಲ್ಲಿ ದೊರೆತೇ ಇಲ್ಲ. ಸದ್ದಾಂ ಅಂತ್ಯದೊಂದಿಗೆ ಇರಾಕ್‌ನಲ್ಲಿ ಅನಾವರಣಗೊಂಡದ್ದು ಅರಾಜಕತೆಯ ಮತ್ತೊಂದು ಪರ್ವ. ‘ಐಸಿಸ್’ ಅದರ ಮೂರ್ತ ರೂಪಗಳಲ್ಲೊಂದು ಒಂದು ಮಾತ್ರ.
                                          * * *
‘ಅಲ್ ಸಫೀರ್ ಅಲ್ ಹುಸೇನ್’ ಆಸ್ಪತ್ರೆಯಿಂದ ಹೊರಗೆ ಕಾಲಿರಿಸಿದರೆ ಇರುವೆಯಂತೆ ಸಾಲುಗಟ್ಟಿ ಸಾಗುವ ತೀರ್ಥಯಾತ್ರಿಗಳಲ್ಲಿ ಕಣ್ಣಿನಲ್ಲಿ ನೀರು ತುಂಬಿಕೊಂಡವರ ಸಂಖ್ಯೆಯೇ ದೊಡ್ಡದಿರುತ್ತದೆ. ಅಲ್ಲಲ್ಲಿ ಹಜರತ್ ಹುಸೇನ್ ಅವರ ಹತ್ಯೆಯ ಚರಿತ್ರೆಯನ್ನು ನೆನಪಿಸಿಕೊಂಡು ‘ಅಳುವ ವಿಧಿ’ಯನ್ನು ಪೂರೈಸುವವರ ಸಂಖ್ಯೆ ಸಣ್ಣದೇನೂ ಇಲ್ಲ. ಅಲ್ಲಿಂದ ಕೆಲವೇ ಹೆಜ್ಜೆಗಳ ದೂರದಲ್ಲಿರುವ ಜೈನಬ್ ದಿಣ್ಣೆಯ ಮೇಲಿನ ಸ್ಮಾರಕವನ್ನು ಸಂದರ್ಶಿಸುವ ಹೆಂಗಳೆಯರ ಕಣ್ಣಾಲಿಗಳ ತುಂಬ ನೀರು ತುಂಬಿರುತ್ತದೆ. ಹಜರತ್ ಹುಸೇನ್‌ರ ಸೋದರಿ ಜೈನಬ್ ಈ ದಿಣ್ಣೆಯ ಮೇಲೆ ನಿಂತು ಉಮ್ಮಯಾದ್ ದೊರೆ ಯಜೀದ್‌ನ ಸೇನೆ ತನ್ನ ಸೋದರನನ್ನು ಕ್ರೂರವಾಗಿ ಕೊಲ್ಲುವುದನ್ನು ಕಂಡ ಐತಿಹ್ಯವಿದೆ.

ಈ ದುಃಖದ ಮಡುವಿನಲ್ಲೇ ‘ಲಾ ಇಲಾಹ ಇಲ್ಲಲ್ಹಾ’ ಎಂಬ ಸ್ತುತಿಯೊಂದಿಗೆ ಸಮವಸ್ತ್ರ ತೊಟ್ಟ ಯೋಧರು ಆಗಮಿಸಿದರೆಂದರೆ ‘ಐಸಿಸ್’ ವಿರುದ್ಧದ ಹೋರಾಟದಲ್ಲಿ ಹುತಾತ್ಮನಾದ ಯೋಧನ ಮೃತದೇಹ ಎನ್ನುವುದು ಖಚಿತವಾಗುತ್ತದೆ. ಯೂಫ್ರಟಿಸ್ ನದಿಯ ದಂಡೆಯ ಮೇಲಿದ್ದ ಈ ಪ್ರದೇಶ ನಗರವಾದದ್ದೇ ಹಜರತ್ ಹುಸೇನ್ ಅವರು ತಮ್ಮ ಕುಟುಂಬದ ಸಮೇತ ಹುತಾತ್ಮರಾಗುವುದರೊಂದಿಗೆ. ಆಡಳಿತದ ಮುಂದಾಳ್ತನ ವಂಶಪಾರಂಪರ್ಯವಾಗಿ ವರ್ಗಾವಣೆ ಆಗುವುದಲ್ಲ.

ಅದು ಜನರು ಇಚ್ಛಿಸುವ ನಾಯಕರಿಗೆ ವರ್ಗಾವಣೆ ಆಗಬೇಕು ಎಂಬ ತತ್ವ ಮರೆತದ್ದನ್ನು ಉಮ್ಮಯಾದ್ ವಂಶದ ದೊರೆಗಳಿಗೆ ನೆನಪಿಸುವುದಕ್ಕಾಗಿ ಬಂದ ಪ್ರವಾದಿ ಮುಹಮ್ಮದರ ಮೊಮ್ಮಗ ಹಜರತ್ ಹುಸೇನ್ ಮತ್ತು ಕುಟುಂಬ ಕ್ರೂರವಾಗಿ ಕೊಲೆಗೀಡಾದ ಸ್ಥಳವಿದು. ಈ ಘಟನೆ ಇಸ್ಲಾಮನ್ನು ಸುನ್ನಿ ಮತ್ತು ಶಿಯಾ ಪಂಥಗಳನ್ನಾಗಿ ವಿಭಜಿಸಿತು.

ಇರಾಕ್‌ನ ರಾಜಧಾನಿ ಬಾಗ್ದಾದ್‌ನಿಂದ 100 ಕಿಲೋ ಮೀಟರ್ ದೂರದಲ್ಲಿರುವ ಕರ್ಬಲಾಕ್ಕೆ ವಾರ್ಷಿಕ ಐವತ್ತು ಲಕ್ಷಕ್ಕೂ ಹೆಚ್ಚು ತೀರ್ಥಯಾತ್ರಿಗಳು ಸಂದರ್ಶಿಸುತ್ತಾರೆ. ಇದನ್ನೊಂದು ಯಾತ್ರಾಸ್ಥಳವಾಗಲು ಬಿಡಬಾರದೆಂಬ ಬಹಳಷ್ಟು ಪ್ರಯತ್ನಗಳು ಹಲವು ರಾಜರಿಂದ ನಡೆಯಿತು. ಅಷ್ಟೇಕೆ, ಸದ್ದಾಂ ಹುಸೇನ್ ಆಡಳಿತದ ಅವಧಿಯಲ್ಲೂ ಕರ್ಬಲಾ ಸಂದರ್ಶನಕ್ಕಾಗಿ ವೀಸಾ ಪಡೆಯಲು ಬಹಳಷ್ಟು ಅಡೆತಡೆಗಳಿದ್ದವು. ಆದರೆ 2003ರಿಂದ ಈಚೆಗೆ ಯಾತ್ರಾರ್ಥಿಗಳ ಸಂಖ್ಯೆ ಹಲವು ಪಟ್ಟು ಏರಿದೆ. ಸಮೀಪದ ಸ್ಥಳಗಳಲ್ಲಿ ನಡೆದ ಬಾಂಬ್ ಸ್ಫೋಟಗಳ ನಂತರವೂ ಯಾತ್ರಾರ್ಥಿಗಳ ಸಂಖ್ಯೆಯೇನೂ ಕುಸಿದಿಲ್ಲ.

ಹಜರತ್ ಹುಸೇನ್ ಮತ್ತು ಅವರ ಪರಿವಾರದ ಸಮಾಧಿಗಳಿರುವ ಕ್ಷೇತ್ರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶೇಕ್ ಮೆಹ್ದಿ ಅವರು ಹೇಳುವಂತೆ– ‘‘ಇದೊಂದು ಪ್ರತಿಭಟನೆ. ಇಮಾಂ ಹುಸೇನ್ ಅವರ ಹುತಾತ್ಮತೆಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಜನರು ಹೇಳಿದ್ದು ಹೀಗೆ...’’
* * *
‘‘ನನ್ನ ಗಂಡನನ್ನೂ ಮಗನನ್ನೂ 2006ರಲ್ಲಿ ಅಲ್‌ ಖೈದಾ ಕೊಂದುಬಿಟ್ಟಿತು’’ ಎಂದು ಕಣ್ಣೀರಾಗುವ ಸೈಯೀದಾ ರುಖಿಯಾ ಮೋಸುಲ್ ನಗರದವರು. ಗಂಡ ಚಾಲಕನಾಗಿ ದುಡಿಯುತ್ತಿದ್ದರೆ, ಈ ಗೃಹಿಣಿ ಮಕ್ಕಳೊಂದಿಗೆ ಒಂದು ಉಪಾಹಾರ ಗೃಹ ನಡೆಸುತ್ತಿದ್ದವರು. ಅಲ್ ಖೈದಾದ ಒಂದು ರಾತ್ರಿ ನಡೆಸಿದ ದಾಳಿಯಲ್ಲಿ ಸೈಯೀದಾ ಅವರ ಗಂಡ ಮತ್ತು ಮಗ ಗುಂಡಿನ ದಾಳಿಗೆ ಬಲಿಯಾದರು. ದುರಂತವನ್ನು ತಾಳಿಕೊಂಡೇ ಊರಿನಲ್ಲೇ ಉಳಿದ ಅವರು, ಎರಡು ವರ್ಷಗಳ ಅಂತರದಲ್ಲಿ ಮತ್ತೊಂದು ದುರಂತವನ್ನು ಎದುರಿಸಬೇಕಾಯಿತು.

ಅವರ ಎರಡನೇ ಮಗನೂ 2008ರಲ್ಲಿ ಅಲ್ ಕೈದಾದ ಬಾಯಿಗೆ ತುತ್ತಾದ. ಮೋಸುಲ್‌ಗೆ ‘ಐಸಿಸ್’ ಪ್ರವೇಶ ಪಡೆದ ಮೇಲೆ ಸೈಯಿದಾ ಅವರಿಗೆ ಇನ್ನು ತಾನು ಬದುಕಲು ಸಾಧ್ಯವಿಲ್ಲ ಅನ್ನಿಸಿತು. ಉಳಿದೊಬ್ಬ ಮಗ ಮತ್ತು ಮಗಳನ್ನು ಕಟ್ಟಿಕೊಂಡು ಅವರು ಹುಟ್ಟಿದೂರು ಬಿಟ್ಟು ನಡೆಯಲಾರಂಭಿಸಿದರು. ಮತ್ತೆಲ್ಲೋ ಸಿಕ್ಕ ಯಾವುದೋ ವಾಹನವೇರಿ ಯಾವ್ಯಾವುದೋ ಊರಿನಲ್ಲಿರುವ ಹುಸೈನಿಯಾಗಳಲ್ಲಿ (ಶಿಯಾ ಮುಸ್ಲಿಮರು) ಏಳೆಂಟು ತಿಂಗಳು ಕಳೆದು, ಕೊನೆಗೆ ಕರ್ಬಲಾ ಸೇರಿದರು.

ಇಲ್ಲಿ ಸೈಯಿದಾ ಅವರಿಗೆ ‘ಇಮಾಂ ಹುಸೇನ್ ಕ್ಷೇತ್ರ’ ಆಂತರಿಕ ನಿರ್ವಸಿತರ ಶಿಬಿರದಲ್ಲೊಂದು (‘ಐಡಿಪಿ’ ಶಿಬಿರ) ನೆಲೆ ಕಲ್ಪಿಸಿದೆ. ಅವರ ಮಗನೀಗ ಹಷದ್ ಸ್ವಯಂ ಸೇವಕರ ಪಡೆಯ ಸದಸ್ಯ. ಮನೆಯಲ್ಲಿ ಉಳಿದಿರುವ ಮಹಿಳಾ ಸದಸ್ಯರ ಹೊಟ್ಟೆಪಾಡನ್ನು ಹುಸೇನ್ ಕ್ಷೇತ್ರವೇ ನೋಡಿಕೊಳ್ಳುತ್ತಿದೆ.
* * *
‘ಲಬ್ಬೈಕ ಯಾ ಹುಸೇನ್’. ಇದು ಕರ್ಬಲಾದ ಐಡಿಪಿ ಶಿಬಿರದೊಳಗೆ ಆಟವಾಡುತ್ತಿರುವ ಪುಟ್ಟ ಮಕ್ಕಳು ತಮ್ಮ ಸಣ್ಣ ಧ್ವನಿಯಾಗಿ ಆದರೆ ಉಚ್ಚ ಸ್ಥಾಯಿಯಲ್ಲಿ ಮೊಳಗಿಸುವ ಘೋಷಣೆ. ಇದು ಮಕ್ಕಳ ಬಾಯಲ್ಲಿ ಬರಬೇಕಾದ ಘೋಷಣೆಯಲ್ಲ; ರಣರಂಗದಲ್ಲಿ ದಾಳಿಗೆ ಮುನ್ನ ಸೈನಿಕರು ಮೊಳಗಿಸುವ ಘೋಷಣೆ.
ಕರ್ಬಲಾದ ‘ಐಡಿಪಿ’ ಶಿಬಿರದಲ್ಲಿ ನೂರರಿಂದ ನೂರಿಪ್ಪತ್ತು ಚದರ ಅಡಿ ವಿಸ್ತೀರ್ಣದ 1197 ಶೆಡ್ಡುಗಳಿವೆ.

ಇಲ್ಲಿರುವವರೆಲ್ಲಾ ‘ಐಸಿಸ್’, ‘ಅಲ್‌ ಕೈದಾ’ ಇತ್ಯಾದಿ ದಾಳಿಗಳ ಪರಿಣಾಮವಾಗಿ ಮೋಸುಲ್, ಸಲಾಹದೀನ್ ಮುಂತಾದ ಪ್ರಾಂತ್ಯಗಳಿಂದ ಗುಳೆ ಬಂದಿರುವವರು. ಊರಲ್ಲಿನ ಕೃಷಿ, ವ್ಯಾಪಾರ ಇತ್ಯಾದಿಗಳನ್ನೆಲ್ಲ ತೊರೆದು ಬಂದು ಇಲ್ಲಿ ಕುಳಿತಿರುವ ಕುಟುಂಬಗಳಿಗೆಲ್ಲ ತಮ್ಮ ಹುಟ್ಟಿದೂರಿಗೆ ಹೋಗಬೇಕೆಂಬ ಹಂಬಲವೇನೋ ಇದೆ. ಆದರೆ ಅದು ಯಾವತ್ತು ಎಂಬುದು ಯಾರಿಗೂ ಗೊತ್ತಿಲ್ಲ.

ಬೆರಳುಗಳಲ್ಲಿ ವಿಜಯದ ಸಂಜ್ಞೆ ತೋರಿಸುತ್ತಾ ರಣಘೋಷಕ್ಕೆ ಮುಂದಾಗುವ ಮಕ್ಕಳಿಗದು ಆಟವಾಗಿರಬಹುದು. ಆದರೆ ಇದು ಇರಾಕ್‌ನ ಖಾಸಗಿ ‘ಸ್ವಯಂ ಸೇವಕ’ರ ಪಡೆಗಳಿಗೆ ಯಾರು ಸೇರುತ್ತಿದ್ದಾರೆ ಎಂಬುದರ ಸೂಚನೆಯೂ ಹೌದು.

* * *
ಎರಡು ವರ್ಷಗಳ ಹಿಂದೆ ಇರಾಕ್‌ನ ವಿವಿಧ ಪ್ರದೇಶಗಳಿಂದ ‘ಐಸಿಸ್’ ದಾಳಿಯ ನಿರಾಶ್ರಿತರ ದಂಡು ಕರ್ಬಲಾ, ನಜ್ಫ್‌ನಂಥ ನಗರಗಳ ಕಡೆಗೆ ಹರಿದುಬಂತು. ಆ ಹೊತ್ತಿನಲ್ಲಿ ನಿರಾಶೆ ಹುಟ್ಟಿಸಿದ್ದು ಇರಾಕ್‌ನ ಸೇನೆ. 33 ಸಾವಿರ ಸೈನಿಕರಿರುವ ಪಡೆಯನ್ನು ಮೋಸುಲ್‌ನಲ್ಲಿ ಕೇವಲ 800 ಸೈನಿಕರಿದ್ದ ‘ಐಸಿಸ್‌’ ಸೋಲಿಸಿದಾಗ ಅದು ಇರಾಕ್‌ನ ಸಾಮಾನ್ಯ ಜನರಲ್ಲಿ ಹುಟ್ಟಿಸಿದ ಭಯ ಅಂತಿಂಥದ್ದಲ್ಲ.

ಕೇವಲಾ ಶಿಯಾ ಪಂಥದ ಮುಸ್ಲಿಮರಷ್ಟೇ ಇರುವ, ಶಿಯಾ ಧಾರ್ಮಿಕ ಕೇಂದ್ರಗಳನ್ನು ದಾಳಿಗಳಿಂದ ರಕ್ಷಿಸುವುದಕ್ಕಾಗಿಯೇ ರೂಪುಗೊಂಡಿದ್ದ ‘ಅಲ್ ಹಷದ್ ಅಲ್ ಶಾಬಿ’ ಒಂದು ಅರೆ ಸೇನಾ ಪಡೆಯಾಗಿ ಪರಿವರ್ತನೆಯಾದದ್ದೂ ಇದೇ ಹಂತದಲ್ಲಿ. ಶಿಯಾ ಪಂಥದ ಅತ್ಯುನ್ನತ ಧಾರ್ಮಿಕ ನಾಯಕರಾದ ಆಯುತಲ್ಲಾ ಅಲೀ ಅಲ್ ಹುಸೈನಿ ಅಲ್ ಸಿಸ್ತಾನಿ ‘ತಾಯ್ನಾಡಿನ ರಕ್ಷಣೆಗೆ ಮುಂದಾಗಿ’ ಎಂಬ ಕರೆ ನೀಡಿದರು. ಇದರೊಂದಿಗೆ ‘ಹಷದ್ ಪಡೆ’ ಸೇನೆಯೊಂದಿಗೆ ಸೇರಿಕೊಂಡು ಹೋರಾಟಕ್ಕೆ ಮುಂದಾಯಿತು.

ಧಾರ್ಮಿಕ ಕ್ಷೇತ್ರಗಳನ್ನು ದಾಳಿಗಳಿಂದ ರಕ್ಷಿಸುವುದಕ್ಕಾಗಿ ನೋಂದಾಯಿಸಿಕೊಂಡಿದ್ದ 1.20 ಲಕ್ಷ ಸ್ವಯಂ ಸೇವಕರಿದ್ದ ಈ ಪಡೆ ಇರಾಕಿ ಸೇನೆಯ ಸೋಲನ್ನು ತನ್ನ ಗೆಲುವಾಗಿಸಿಕೊಂಡಿತು. ಹಷದ್‌ ಪಡೆಯ ಈಗಿನ ಸ್ವರೂಪ ಭಿನ್ನವಾದುದು. ಇದರಲ್ಲೀಗ ಸುನ್ನಿ ಮುಸ್ಲಿಮರು ಮತ್ತು ಇರಾಕಿ ಕ್ರೈಸ್ತ ಸ್ವಯಂ ಸೇವಕರೂ ಸೇರಿಕೊಂಡಿದ್ದಾರೆ. ಅನ್‌ಬಾರ್ ಪ್ರಾಂತ್ಯದ ಅಬು ಶಬಾನ್ ಎಂಬ ಸುನ್ನಿ ಬುಡಕಟ್ಟಿನ ಪ್ರಮುಖರಾಗಿರುವ ಶೇಕ್ ಮುಹಮ್ಮದ್ ಮೆಕ್ಲೀಫ್ ಹಷದ್‌ನ ಕಮಾಂಡರ್‌ಗಳಲ್ಲಿ ಒಬ್ಬರು. ಅವರು ಹೇಳುವಂತೆ ‘ಹಷದ್’ ಈಗ ನಿರ್ದಿಷ್ಟ ಧಾರ್ಮಿಕ ಪಂಥದ ಶಸ್ತ್ರಸಜ್ಜಿತ ಸ್ವಯಂ ಸೇವಕರ ಪಡೆಯಲ್ಲ. ಇದು ಇರಾಕ್‌ನ ನೆಲವನ್ನು ಹೊರಗಿನ ಶಕ್ತಿಗಳಿಂದ ಕಾಪಾಡಲು ಸೇನೆಗೆ ಸಹಕರಿಸುವ ‘ದೇಶಭಕ್ತ ಇರಾಕಿ ಸ್ವಯಂ ಸೇವಕರ ಪಡೆ’.

‘ಐಸಿಸ್’ ಉಗ್ರರು ಇರಾಕ್‌ನ ಸುನ್ನಿಗಳ ಮೇಲೆ ನಡೆಸಿದ ಅಸಂಖ್ಯ ದಾಳಿಗಳನ್ನು ಪಟ್ಟಿಮಾಡುವ ಮೆಕ್ಲೀಫ್ ‘‘ದೇಶವೀಗ ಬಾಹ್ಯ ದಾಳಿಯ ಆತಂಕದಲ್ಲಿದೆ. ಸಣ್ಣ ಪುಟ್ಟ ಆಂತರಿಕ ಭಿನ್ನ ಮತಗಳನ್ನು ಮರೆತು ಹೋರಾಡುವ ಅಗತ್ಯವಿದೆ’’ ಎನ್ನುತ್ತಾರೆ. ಕರ್ಬಲಾದ ಆಸ್ಪತ್ರೆಯಲ್ಲಿ ಕಾಲುಗಳೆರಡಕ್ಕೂ ಬಲವಿಲ್ಲದೆ ಮಲಗಿರುವ ಆದಿಲ್– ‘‘ಐಸಿಸ್‌ನ ಬಳಿ ಅಮೆರಿಕನ್ನರು ಪೂರೈಸುತ್ತಿರುವ ಶಸ್ತ್ರಾಸ್ತ್ರಗಳಿವೆ’’ ಎಂದಿದ್ದರು. ‘‘ಇದು ನಿಮಗೆ ಹೇಗೆ ಗೊತ್ತು’’ ಎಂಬ ಪ್ರಶ್ನೆಗೆ– ‘‘ಬೈಜಿಯಲ್ಲಿ ಕಾವಲು ನಿಂತಿದ್ದಾಗ ಅಮೆರಿಕದ ವಿಮಾನಗಳು ಅವರಿಗೆ ಶಸ್ತ್ರಾಸ್ತ್ರ ಇಳಿಸುವುದನ್ನು ಕಂಡಿದ್ದೇನೆ. ನಾವು ಗುಂಡು ಹಾರಿಸಿದೆವು. ಆದರೆ ವಿಮಾನ ತಪ್ಪಿಸಿಕೊಂಡಿತು’’ ಎಂದು ವಿವರಿಸಿದ್ದರು.

ಬಾಗ್ದಾದ್‌ನಲ್ಲಿರುವ ‘ಹಷದ್ ಅರೆ ಸೇನಾ ಪಡೆ’ಯ ಮುಖ್ಯ ಕಚೇರಿಯಲ್ಲಿ ಇದ್ದ ಮೂವರು ಕಮಾಂಡರ್‌ಗಳಲ್ಲಿ ಒಬ್ಬರೂ ತಮ್ಮದೇ ಸೈನಿಕನ ಹೇಳಿಕೆಯ ಸತ್ಯಾಸತ್ಯತೆಗಳ ಒಂದು ಮಾತನ್ನೂ ಹೇಳಲು ತಯಾರಿರಲಿಲ್ಲ. ಇದು ಇರಾಕ್‌ನೊಳಗಿನ ಸಮಸ್ಯೆಯ ಸಂಕೀರ್ಣತೆಯ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತದೆ.
* * *
‘ಹಷದ್‌ ಅಲ್ ಶಾಬಿ’ ಎಂದರೆ ಜನರ ಸಂಘಟನೆ ಎಂದರ್ಥ. ಆದರೆ ಈ ಸಂಘಟನೆಯ ಮೇಲೆ ಯಾರಿಗೆಲ್ಲಾ ನಿಯಂತ್ರಣವಿದೆ ಎಂಬುದನ್ನು ನೋಡಿದರೆ ಇರಾಕ್‌ನ ವರ್ತಮಾನದ ರಾಜಕಾರಣದ ಚಿತ್ರಣವೊಂದು ದೊರೆಯುತ್ತದೆ. ಹಷದ್‌ನ ಒಳಗಿರುವ ಬಹುಮುಖ್ಯ ವಿಭಾಗಗಳಲ್ಲಿ ಒಂದಾಗಿರುವ ‘ಬದ್ರ್ ಬ್ರಿಗೇಡ್‌’ನ ನೇತೃತ್ವ ಈಗಿನ ಇರಾಕ್ ಪ್ರಧಾನಿ ಜವಾಹದ್ ಖಾದಿಮ್ ಅಲ್ ಅಬಾದಿ ಅವರ ಸಲಹೆಗಾರ ಹಾದಿ ಅಲ್ ಅಮೀರಿ ಅವರದ್ದು.

ಮಾಜಿ ಪ್ರಧಾನಿ ನೂರುಲ್ ಅಲ್ ಮಾಲಿಕಿ ಅವರೊಂದಿಗೆ ಸಂಪರ್ಕ ಹೊಂದಿರುವ ವಿಭಾಗವಿದೆ. ಅದೀಗ ‘ಹಷದ್ ಪಡೆ’ಯ ಬಹುದೊಡ್ಡ ಗುಂಪಾಗಿ ಬೆಳೆಯುತ್ತಿದೆ. ಖಾತಿಬ್ ಹಿಜ್ಬುಲ್ಲಾ ಎಂಬ ಗುಂಪು ಇರಾನ್‌ನ ಪ್ರಭಾವದಲ್ಲಿದೆ. ಕರ್ಬಲಾದಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ‘ಅಲ್ ಅಬ್ಬಾಸ್ ಬ್ರಿಗೇಡ್’ ಇರಾನ್‌ನ ‘ರೆವಲ್ಯೂಷನರಿ ಗಾರ್ಡ್ಸ್‌’ ಜೊತೆಗೆ ಸಂಬಂಧ ಹೊಂದಿದೆ.

ಹಷದ್‌ಗೆ ದೊರೆಯುತ್ತಿರುವ ತರಬೇತಿಯ ಬಗ್ಗೆ ಮಾತನಾಡಿದ ಕಮಾಂಡರ್ ಕರೀಮ್ ಅಲ್ ನೂರಿ, ನಮಗೆ ಐದು ಸಾವಿರ ಅಮೆರಿಕನ್ ತರಬೇತಿದಾರರು ಮತ್ತು 30 ಇರಾನೀ ಸೇನಾ ಸಲಹೆಗಾರರಿದ್ದಾರೆ ಎಂಬುದನ್ನು ಬಹಿರಂಗ ಪಡಿಸಿದರು. ಅಂದರೆ ಈಗ ಹಷದ್ ಕೇವಲ ಇರಾಕೀ ಸೇನೆಗೆ ನೆರವು ನೀಡುವ ಅರೆಸೇನಾ ಪಡೆಯಾಗಿಯಷ್ಟೇ ಉಳಿದಿಲ್ಲ. ಸಂದರ್ಭ ಬಂದರೆ ತನ್ನ ಶಕ್ತಿಯನ್ನು ತೋರ್ಪಡಿಸುವ ಸಾಮರ್ಥ್ಯ ಇದಕ್ಕೂ ಇದೆ.

ಅಯಾತುಲ್ಲಲಾ ಸಿಸ್ತಾನಿಯವರ ಕರೆಗೆ ಓಗೊಟ್ಟು ರೂಪುಗೊಂಡಿರುವ ಹಲವು ಒಲವುಗಳಿರುವ ಪಡೆಗಳು ಒಟ್ಟಾಗಿ ಹಷದ್ ರೂಪುಗೊಂಡಿದೆ ಎಂಬುದು ನಿಜವಾದರೂ ಭವಿಷ್ಯ ಹೇಗಿರುತ್ತದೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಇರಾಕೀ ಸೇನೆಯನ್ನು ಪ್ರಬಲಗೊಳಿಸುವ ಬದಲಿಗೆ ಹೀಗೆ ‘ಸ್ವಯಂ ಸೇವಕ’ರ ಪಡೆಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮುಂದುವರಿಯುವುದರ ದೂರಗಾಮಿ ಪರಿಣಾಮಗಳು ಭೀಕರವಾಗಿರಬಹುದು ಎಂಬುದು ಆಫ್ಘಾನಿಸ್ತಾನದಲ್ಲಿ ಸಾಬೀತಾಗಿದೆ. ಕಾಶ್ಮೀರ ವಿವಾದವನ್ನು ರಾಜಕೀಯವಾಗಿ ಬಗೆಹರಿಸಿಕೊಳ್ಳುವ ಹಾದಿಯನ್ನು ಉಪೇಕ್ಷಿಸಿ ಉಗ್ರ ಸಂಘಟನೆಗಳೊಂದಿಗೆ ಕೈಜೋಡಿಸಿದ ಪಾಕಿಸ್ತಾನಿ ರಾಜಕಾರಣದ ಈಗಿನ ಸ್ಥಿತಿಯೂ ಇದಕ್ಕೆ ಮತ್ತೊಂದು ಉದಾಹರಣೆ.
* * *
ಇಮಾಂ ಹುಸೇನ್ ಅವರ ಕಾಲದಲ್ಲಿ ಕರ್ಬಲಾದ ಮಧ್ಯೆ ಹರಿಯುತ್ತಿದ್ದ ಯೂಫ್ರಟಿಸ್ ಇರಾಕಿನ ಚರಿತ್ರೆಯಂತೆಯೇ ತನ್ನ ಪಾತ್ರವನ್ನು ಬದಲಾಯಿಸಿದೆ. ಇಲ್ಲಿ ದೊರೆಯುವ ಕಚ್ಚಾ ತೈಲವನ್ನು ‘ಸಿಹಿ ಕಚ್ಚಾ ತೈಲ’ ಎಂದು ಕರೆಯುತ್ತಾರೆ. ಇದನ್ನು ಬಳಕೆಗೆ ಪರಿವರ್ತಿಸುವುದಕ್ಕೆ ಹೆಚ್ಚು ಶೋಧಿಸಬೇಕಿಲ್ಲವಂತೆ. ಅದಕ್ಕಾಗಿಯೇ ಇದು ‘ಸಿಹಿ ಕಚ್ಚಾ ತೈಲ’. ಈ ತೈಲದ ಬಳಕೆಯನ್ನರಿಯದೆಯೇ ಯೂಫ್ರಟಿಸ್ ಮತ್ತು ಟೈಗ್ರಿಸ್ ನಡುವಣ ಫಲವತ್ತಾದ ಭೂಮಿಯಲ್ಲಿ ವಿಶ್ವದ ಮೊದಲ ನಾಗರಿಕತೆಗಳಲ್ಲಿ ಒಂದಾಗ ಮೆಸಪಟೋಮಿಯಾ ನಾಗರಿಕತೆ ಅರಳಿತ್ತು.

ಪಶ್ಚಿಮದ ನಗರಗಳು ಜ್ಞಾನದ ಕೇಂದ್ರಗಳಾಗುವುದಕ್ಕೆ ಸಾವಿರಾರು ವರ್ಷಗಳ ಹಿಂದೆಯೇ ಇಲ್ಲಿನ ಬಾಗ್ದಾದ್ ಜ್ಞಾನದ ನಗರವಾಗಿತ್ತು. ‘ಮೊದಲ ಸೂಫಿ’ ಎಂದು ಹೆಸರಾದ ರಾಬಿಯಾ ಅಲ್ ಅದವಿಯಾ ಇದೇ ಇರಾಕ್‌ನ ರೇವು ಪಟ್ಟಣ ಬಸ್ರಾದಲ್ಲಿ ಹುಟ್ಟಿದ್ದಳು. ಅಷ್ಟೇಕೆ, ‘ಸಂತರ ಸುಲ್ತಾನ’ ಎಂಬ ಬಿರುದನ್ನು ಹೊಂದಿರುವ ಶೇಕ್ ಅಬ್ದುಲ್ ಖಾದರ್ ಜೀಲಾನಿಯವರ ಜನ್ಮ ಮತ್ತು ಕರ್ಮಭೂಮಿಯೂ ಇಲ್ಲೇ ಇದೆ.

ಯೂಫ್ರಟಿಸ್‌ನ ಸ್ಫಟಿಕ ಶುದ್ಧ ನೀರಿನ ಮೇಲೆ, ಟೈಗ್ರಿಸ್‌ನ ವಿಶಾಲ ಪಾತ್ರಕ್ಕೆ ದೊಡ್ಡ ಸೇತುವೆಗಳು ಬಂದಿವೆ. ಸಿಹಿ ಕಚ್ಚಾ ತೈಲಕ್ಕೆ ವಿಶ್ವವ್ಯಾಪಿಯಾಗಿ ಬೇಡಿಕೆಯೂ ಇದೆ. ಸರ್ವಾಧಿಕಾರಿಯ ಆಡಳಿತವನ್ನು ಅಮೆರಿಕ ಹೊಡೆದುರುಳಿಸಿದೆ. ಆದರೆ ಈಗ ಇಲ್ಲಿನ ಗೋಡೆ ಗೋಡೆಗಳಲ್ಲಿ ಕಾಣಸಿಗುವುದು ಹುತಾತ್ಮರ ಭಾವಚಿತ್ರಗಳು. ಎಲ್ಲಾ ಸಾರ್ವಜನಿಕ ಸ್ಥಳಗಳನ್ನೂ ಆವರಿಸಿಕೊಂಡಿರುವ ಈ ಚಿತ್ರಗಳ ಸರಣಿಯ ಹಿನ್ನೆಲೆಯಲ್ಲೇ ದಿನಕ್ಕೆ ಒಮ್ಮೆಯಾದರೂ ಆಗಷ್ಟೇ ಯುದ್ಧಭೂಮಿಯಿಂದ ಬಂದ ಮೃತ ದೇಹದ ಮೆರವಣಿಗೆಯೂ ಕಾಣಸಿಗುತ್ತದೆ. 

(ಲೇಖಕರು ಕರ್ಬಲಾದ ‘ಇಮಾಂ ಹುಸೇನ್‌ ಕ್ಷೇತ್ರ’ದ ಆಹ್ವಾನದ ಮೇರೆಗೆ ಇರಾಕ್‌ಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT