ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಅಸಮರ್ಪಕತೆ: ಲೋಕಾಯುಕ್ತ ಕಿಡಿ

ವಾರಾಹಿ ನೀರಾವರಿ ಯೋಜನಾ ಪ್ರದೇಶಕ್ಕೆ ಭೇಟಿ
Last Updated 27 ಜುಲೈ 2014, 8:13 IST
ಅಕ್ಷರ ಗಾತ್ರ

ಕುಂದಾಪುರ: ನೈಸರ್ಗಿಕವಾಗಿ ಅತ್ಯಂತ ಸೂಕ್ಷ ಪ್ರದೇಶ ಎಂದು ಗುರುತಿಸಿಕೊಂಡಿರುವ ಪಶ್ಚಿಮ ಘಟ್ಟ ಪ್ರದೇಶಗಳ ಬುಡದಲ್ಲಿ 35 ವರ್ಷಗಳ ಹಿಂದೆ ಪ್ರಾರಂಭವಾಗಿರುವ ನೀರಾವರಿ ಯೋಜನೆಯ ಪ್ರಗತಿಗಳನ್ನು ಪರಿಶೀಲನೆ ನಡೆಸಿದಾಗ ಮೇ ಲ್ನೋಟಕ್ಕೆ ಈ ಯೋಜನೆಯ ವಿಳಂಬದ ಹಿಂದಿರುವ ದುರುದ್ದೇಶಗಳ ಬಗ್ಗೆ ಕೆಲವಷ್ಟು ಅಂಶಗಳು ಕಂಡು ಬರುತ್ತಿದೆ ಎಂದು ರಾಜ್ಯ ಉಪ ಲೋಕಾಯುಕ್ತ ಸುಭಾಷ್ ಅಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಾರಾಹಿ ಯೋಜನಾ ಪ್ರದೇಶದ ಯಡಾಡಿ- ಮತ್ಯಾಡಿ ಗ್ರಾಮದ ಗುರುರಾಜ್ ಕುಲಾಲ್ ಎನ್ನು ವವರ ದೂರು ಹಾಗೂ ಸ್ಥಳೀಯ ಕೆಲವು ವಕೀಲರ ವಿನಂತಿಯ ಹಿನ್ನೆಲೆಯಲ್ಲಿ ಶನಿವಾರ ವಾರಾಹಿ ಯೋಜನಾ ಪ್ರದೇಶಕ್ಕೆ ಖುದ್ದು ಪರಿಶೀಲನೆಗಾಗಿ ಆಗಮಿಸಿದ್ದರು. ಯೋಜನಾ ಪ್ರದೇಶದಲ್ಲಿ ಈಗಾಗಲೇ ಕಾಮಗಾರಿ ನಡೆದಿರುವ ಹಾಗೂ ಕಾಮಗಾರಿಗಾಗಿ ಗುರುತಿಸಲಾದ ಪ್ರದೇಶ ಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳಿಂದ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.

ಯೋಜನೆಯ ಪ್ರಗತಿಯ ಕುರಿತಂತೆ ಅಧಿ ಕಾರಿಗಳು ಹಾಗೂ ಸ್ಥಳೀಯರು ನೀಡಿದ ಮಾಹಿತಿ ಗಳು ಪರಸ್ಪರ ಹೊಂದಾಣಿಕೆಯಾಗದೆ ಇದ್ದಾಗ ಕೆಂಡಾಮಂಡಲವಾದ ಉಪ ಲೋಕಾಯುಕ್ತರು, 424 ಹೇಕ್ಟರ್ ಭೂಮಿಗೆ ನೀರಾವರಿ ಉದ್ದೇಶಕ್ಕಾಗಿ ಪ್ರಾಯೋಗಿಕವಾಗಿ ನೀರು ನೀಡಿದ್ದೇವೆ ಎಂದು ನೀವು ಹೇಳುತ್ತಿರುವುದನ್ನು ಜನ ಒಪ್ಪುತ್ತಿಲ್ಲ ಹಾಗಾಗಿ ಪ್ರತಿ ಕುಟುಂಬದವರಿಂದಲೂ ನೀರು ಬಂದಿರುವ ಕುರಿತು ಖುದ್ದು ಮಾಹಿತಿ ಪಡೆದು ವರದಿ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಪತ್ರಿಕಾಗೋಷ್ಠಿ: ಸಂಜೆ ಕುಂದಾಪುರದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಉಪ ಲೋಕಾಯುಕ್ತರು ವಾರಾಹಿ ಯೋಜನೆಯನ್ನು ವೈಜ್ಙಾನಿಕ ನೆಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆಯೇ ಎನ್ನುವ ಕುರಿತು ಸಂದೇಹ ಬರುತ್ತಿದೆ. ಮೂಲತಃ ಇದು ನೀರನ್ನು ಸಂಗ್ರಹಿಸಿಕೊಂಡು ಕಾಲ ಕಾಲಕ್ಕೆ ನೀರು ಹರಿಸುವ ಯೋಜನೆಯೇ ಅಲ್ಲ. ನೈಸರ್ಗಿಕವಾಗಿ ಹರಿಯುವ ನದಿ ಪಾತ್ರವನ್ನು ಕಾಲುವೆಗಳ ಮೂಲಕ ಹಾಯಿಸುವ ನಿರ್ದಿಷ್ಟ ಉದ್ದೇಶದ ಯೋಜನೆಯಲ್ಲಿ, ಮಳೆಗಾಲದಲ್ಲಿಯೇ ರೈತರಿಗೆ ನೀರು ನೀಡಲು ಆಗುತ್ತಿಲ್ಲ ಎಂದಾದರೆ ವರ್ಷದ ಇನ್ನಾವ ಋತುವಿನಲ್ಲಿ ನೀರು ಒದಗಿಸಲು ಸಾಧ್ಯ ಎನ್ನುವ ಸಂದೇಹ ವ್ಯಕ್ತಪಡಿಸಿದರು.

ಎಡ ಹಾಗೂ ಬಲ ದಂಡೆ ಯೋಜನೆಯನ್ನು ಅನುಷ್ಠಾನಗೊಳಿಸುವ ರೀತಿಯಲ್ಲಿಯೂ ಮೇಲ್ನೋ ಟಕ್ಕೆ ದುರುದ್ದೇಶಗಳು ಕಾಣುತ್ತಿದೆ. ಬಲದಂಡೆ ಮುಗಿಯದೆ ಎಡದಂಡೆಯ ಕಾಲುವೆಯಲ್ಲಿ ನೀರಿನ ಹರಿವು ಕಷ್ಟ ಎನ್ನುವ ಅಂಶ ಸ್ವಷ್ಟವಿದೆ. ಯೋಜನಾ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಪವರ್ ಪ್ರಾಜೆಕ್ಟ್ ಒಂದಕ್ಕೆ ನೀರು ದೊರಕಿದ ನಂತರವಷ್ಟೆ ಉಳಿದ ನೀರು ಕಾಲುವೆಯಲ್ಲಿ ಹರಿಯ ಬಹುದು ಎನ್ನುವ ಅಂಶಗಳು ಕಂಡು ಬರುತ್ತಿದೆ. ವರ್ಷದ ಕೇವಲ ಮೂರು ತಿಂಗಳು ಮಾತ್ರ ಈ ಪ್ರೊಜೆಕ್ಟ್‌ಗೆ ನೀರು ನೀಡಬೇಕು ಎನ್ನುವ ಒಪ್ಪಂದಗಳ ಕುರಿತು ಸ್ಥಳೀಯ ವಕೀಲರು ಗಮನಕ್ಕೆ ತಂದಿದ್ದು, ಈ ಕುರಿತು ಸಂಬಂಧಿಸಿದ ಇಲಾಖೆಗಳಿಂದ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಪ್ರಾಯೋಗಿಕವಾಗಿ ನೀರನ್ನು ಹರಿಸಲು 72 ಲಕ್ಷ ಖರ್ಚಾಗಿರುವ ಕುರಿತು ದೂರುಗಳಿದ್ದು, ಆ ಕುರಿತು ಪರಿಶೀಲನೆ ನಡೆಸಲಾಗುವುದು. ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೊದಲೇ ಕಾಮಗಾರಿಗಳನ್ನು ನಡೆಸಿರುವ, ಅರಣ್ಯ ಪರಿಸರ ಹಾಗೂ ಯೋಜನೆಗೆ ಸಂಬಂಧಿಸಿದ ಇತರ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆದುಕೊಳ್ಳುವ ಮೊದಲೇ ಯೋಜನೆ ಪ್ರಾರಂಭ ಮಾಡಿರುವ ಹಿನ್ನೆಲೆಯ ಕುರಿತು ಸಮಗ್ರವಾಗಿ ತನಿಖೆ ನಡೆಸಲಾಗುವುದು. ಕಾಲುವೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮೃದು ಹಾಗೂ ಹುಸುಕು ಪ್ರದೇಶಗಳನ್ನು ಕಲ್ಲು ಪ್ರದೇಶ ಎಂದು ತೋರಿಸಿ ಕಾಮಗಾರಿ ಮೊತ್ತವನ್ನು ಏರಿಸಲಾಗಿದೆ ಎನ್ನುವ ಸ್ಥಳೀಯರ ಆರೋಪದ ಕುರಿತು ಗಮನ ಹರಿಸಲಾಗುವುದು ಎಂದು ಹೇಳಿದ ನ್ಯಾಯ ಮೂರ್ತಿ ಸುಭಾಸ್ ಅಡಿ ಅವರು ಈ ಯೋಜನೆಯ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಲು ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಉಡುಪಿಯಲ್ಲಿ ಸಭೆ ನಡೆಸುವುದಾಗಿ ತಿಳಿಸಿದರು.

ಯೋಜನೆಯ ಕಾಮಗಾರಿಯನ್ನು ಕ್ರಮ ಬದ್ದವಾಗಿ ನಡೆಸಿಲ್ಲ ಹಾಗೂ ಆಕ್ರಮ ನಡೆದಿದೆ ಎನ್ನುವ ದೂರು ಈಗಾಗಲೆ ದಾಖಲಾಗಿದ್ದು ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಂದುವರೆಸಲಾಗುವುದು ಎಂದು ಹೈಕೋರ್ಟ್‌ ವಕೀಲ ಪವನ್‌ಚಂದ್ರ ಶೆಟ್ಟಿ ತಿಳಿಸಿದರು.

ಜಿಲ್ಲಾಧಿಕಾರಿ ಮುದ್ದುಮೋಹನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬೋರಲಿಂಗಯ್ಯ, ವಾರಾಹಿ ನೀರಾವರಿ ಯೋಜನೆಯ ಪ್ರಭಾರ ಮುಖ್ಯ ಎಂಜಿನಿಯರ್‌ ನಟರಾಜ್‌, ಡಿಎಫ್ಓ ರವಿಶಂಕರ, ಉಪವಿಭಾಗಾಧಿಕಾರಿ ಎಸ್. ಯೋಗೀಶ್ವರ, ಎಸಿಎಫ್ ಸತೀಶ್ ಬಾಬಾ ರೈ, ತಹಸೀಲ್ದಾರ್ ಗಾಯತ್ರಿ ನಾಯಕ್ ಮುಂತಾದವರಿದ್ದರು.

ಸ್ಥಳೀಯ ವಕೀಲರಾದ ಉಮೇಶ್ ಶೆಟ್ಟಿ ಶಾನ್ಕಟ್ಟು, ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ, ಪ್ರದೀಪ್ ಶೆಟ್ಟಿ ಕಾಳಾವರ, ಸುಭಾಶ್ಚಂದ್ರ ಶೆಟ್ಟಿ ಬನ್ನಾಡಿ ಲೋಕಾಯುಕ್ತರ ಭೇಟಿಯ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT