ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರಿಗಾಗಿ ‘ಅಗೋಚರ’ ಸ್ಟಿಕ್ಕರ್!

Last Updated 28 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ನುಷ್ಯ ನಾಗರಿಕನಾಗುವ ಜತೆಜತೆಗೇ ಇಡೀ ವಿಶ್ವವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬಲ್ಲಂತಹ ವಿದ್ವಂಸಕಕಾರಿ ಸಾಧನಗಳನ್ನು ಸ್ವರಕ್ಷಣೆಯ ನೆಪದಲ್ಲಿ ಕಂಡುಹಿಡಿಯತ್ತಾ ಮತ್ತು ಅವನ್ನೆಲ್ಲಾ ಕೂಡಿಡುತ್ತಾ ಬಂದಿದ್ದಾನೆ. ಇಡೀ ವಿಶ್ವವನ್ನು ನಾವೀಗ ‘ಗ್ಲೋಬಲ್ ವಿಲೇಜ್’ ಎಂದು ಕರೆಯುವ ಈ ಹೊತ್ತಿನಲ್ಲಿ, ಮನುಷ್ಯ ಸಂಬಂಧಗಳು ಪರಸ್ಪರ ಬೆಸೆದುಕೊಳ್ಳುವ ಬದಲಿಗೆ ಸಡಿಲಗೊಳ್ಳುತ್ತಿರುವುದು ಇಂದಿನ ವಾಸ್ತವ ಎನ್ನುವುದನ್ನು ತಳ್ಳಿ ಹಾಕಲಾಗದು. ಆದರೆ ಇಲ್ಲಿ ದೇಶದ ರಕ್ಷಣೆಯೇ ಪ್ರಧಾನ ಎಂಬುದನ್ನು ಮರೆಯುವಂತಿಲ್ಲ.

ಎಂತಹ ಸಂದರ್ಭಗಳಲ್ಲೂ ತನ್ನ ಪ್ರಜೆಗಳಿಗೆ ಸಂಪೂರ್ಣ ರಕ್ಷಣೆ ಕೊಡಬಲ್ಲ ಸಾಮರ್ಥ್ಯ ಹೊಂದುವುದು ಪ್ರತಿಯೊಂದು ದೇಶದ ಇಂದಿನ ಸವಾಲಾಗಿದೆ. ಅದರಲ್ಲೂ ಸೇನೆಯ ಆಧುನೀಕರಣ ಮತ್ತು ಸೈನಿಕರನ್ನು ಹೊಸ ಸವಾಲುಗಳಿಗೆ ಸಜ್ಜುಗೊಳಿಸುವುದು ಇಂದಿನ ತುರ್ತು.
ದೇಶದ ಸೈನಿಕರು ಯಾರ ಕಣ್ಣಿಗೂ ಗೋಚರಿಸಿದಂತೆ, ಅಂದರೆ ಅಗೋಚರರಾಗಿ ಶತ್ರು ಸೈನ್ಯದ ಮೇಲೆ ಎರಗಿ ಹಿಮ್ಮೆಟ್ಟಿಸುವಂತಹ ದೃಶ್ಯಗಳನ್ನು ತಂತ್ರಜ್ಞಾನವೇ ಮೇಳೈಸಿರುವ ಕೆಲ ಸಿನಿಮಾಗಳಲ್ಲಿ ನಾವು ನೋಡಿದ್ದೇವೆ ಅಲ್ಲವೆ? ಇಂತಹ ಸಾಹಸ ದೃಶ್ಯಗಳನ್ನು ಸಿನಿಮಾಗಳಲ್ಲಿ ಮಾತ್ರ ವೀಕ್ಷಿಸಬಹುದು ಅಷ್ಟೆ ಎಂದು ನಾವು ಅಂದುಕೊಂಡು ಹೊರಬರುವುದು ಸಾಮಾನ್ಯ.

ಆದರೆ, ಈ ಕಾಲ್ಪನಿಕ ಸಂಗತಿಯನ್ನು ವಿಜ್ಞಾನ ನಿಜವಾಗಿಸಿದೆ. ಯೋಧರು ಶತ್ರು ದೇಶದ ಸೈನಿಕರ ಕಣ್ಣಿಗೆ ಸುಲಭಕ್ಕೆ ಗೋಚರಿಸದಂತೆ ಮಾಡಲು ನೆರವಾಗುವಂತಹ ತಂತ್ರಜ್ಞಾನ ವನ್ನು ಕಂಡುಕೊಳ್ಳಲಾಗಿದೆ. ಅಮೆರಿಕದ ವಿಜ್ಞಾನಿಗಳ ತಂಡ ಸತತ ಸಂಶೋಧನೆಯ ನಂತರ ಕಡೆಗೂ ‘ಅಗೋಚರ ಸ್ಟಿಕ್ಕರ್‌’ವೊಂದನ್ನು ಅಭಿವೃದ್ಧಿಪಡಿಸಿ, ಒಂದು ಹಂತದವರೆಗೆ ಯಶಸ್ಸು ಕಂಡಿದೆ.

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಇಂತಹದ್ದೊಂದು ಸಂಶೋಧನೆ ನಡೆದಿದೆ. ಸ್ಕೀಡ್‌ಗಳಲ್ಲಿರುವ (ಒಂದು ಬಗೆಯ ಜಲಚರ) ಬೆಳಕು ಪ್ರತಿಫಲಿಸುವ ವಿಶೇಷ ಕೋಶಗಳನ್ನು ಸ್ಫೂರ್ತಿಯಾಗಿಟ್ಟುಕೊಂಡು ‘ಅಗೋಚರ ಸ್ಟಿಕ್ಕರ್‌’ಗಳನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಈ ಸ್ಟಿಕ್ಕರ್‌’ಗಳು ಮುಂದೊಂದು ದಿನ ಸೈನಿಕರಿಗೆ ಅತ್ಯುಪಯುಕ್ತವಾಗಬಲ್ಲವು ಎನ್ನಲಾಗಿದೆ.

‘ಸೈನಿಕರು ಸಾಮಾನ್ಯವಾಗಿ ಪರಿಸರದ ನಡುವೆ ಸುಲಭದಲ್ಲಿ ಕಣ್ಣಿಗೆ ಮರೆಮಾಚಬಲ್ಲಂತಹ ಹಸಿರು ಮತ್ತು ಕಂದುಬಣ್ಣದ ಸಮವಸ್ತ್ರಗಳನ್ನು ಧರಿಸುತ್ತಾರೆ. ಅಲ್ಲದೆ, ಕಡಿಮೆ ಬೆಳಕು ಮತ್ತು ಕತ್ತಲೆ ಇರುವಾಗ ಈ ಸಮವಸ್ತ್ರ ಗೋಚರಿಸಬಲ್ಲದು. ಆದರೆ, ನಾವು ಅಭಿವೃದ್ಧಿಪಡಿಸಿರುವ ಅತಿ ತೆಳುವಾದ ಅಗೋಚರ ಸ್ಟಿಕ್ಕರ್‌ಗಳು ಸೈನಿಕರನ್ನು ಸುಲಭಕ್ಕೆ ಯಾರ ಕಣ್ಣಿಗೂ ಬೀಳದಂತೆ ಅವರನ್ನು ಮರೆಮಾಚಿಕೊಳ್ಳಲು ನೆರವಾಗುತ್ತವೆ’ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಮತ್ತು ಮೇಟಿರಿಯಲ್ ಸೈನ್ಸ್‌ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಸಂಶೋಧನಾ ತಂಡದ ಮುಖ್ಯಸ್ಥರಾದ ಅಲೊನ್ ಗೊರೊಡೆಟ್ಸ್ಕಿ ಹೇಳುತ್ತಾರೆ.

‘ಸ್ಕ್ವೀಡ್‌ಗಳು ಚರ್ಮವು ‘ಇರಿಡೊಸೈಟ್ಸ್‌’ ಎಂಬ ಅಸಾಮಾನ್ಯ ಕೋಶಗಳನ್ನು ಒಳಗೊಂಡಿವೆ. ಇವು ಬೆಳಕಿನ ಪ್ರತಿಫಲನ ಲಕ್ಷಣಗಳನ್ನು ಹೊಂದಿವೆ. ಅಲ್ಲದೆ, ತಮ್ಮ ದೇಹದ ಮೇಲ್ಮೈನ ದಪ್ಪವನ್ನು ಬದಲಾಯಿಸಿಕೊಳ್ಳಲು ಇವು ಜೀವರಾಸಾಯನಿಕ ಕ್ಯಾಸ್ಕೆಡ್‌ಗಳನ್ನು ಬಳಸಿಕೊಳ್ಳುತ್ತವೆ. ಹಾಗಾಗಿ ಇವು ಬೆಳಕಿನ ಪ್ರತಿಫಲನಗಳನ್ನು ಹೊಂದುವ ಮೂಲಕ ಅದೃಶ್ಯವಾಗಬಲ್ಲವು’ ಎಂದು ಗೊರೊಡೆಟ್ಸ್ಕಿ ವಿವರಿಸುತ್ತಾರೆ.

ವೇಷವನ್ನು ಮರೆಮಾಚಿಕೊಳ್ಳುವ ಮೂಲಕ ಮುಂದೊಂದು ದಿನ ಯೋಧರಿಗೆ ನೆರವಾಗಬಲ್ಲ ಈ ಅಗೋಚರ ಸ್ಟಿಕ್ಕರ್‌ಗಳನ್ನು ಸದ್ಯದಲ್ಲಿ ಬಳಸಲಾಗದು. ಈ ಕುರಿತು ಇನ್ನಷ್ಟು ಸಂಶೋಧನೆಗಳು ನಡೆದು ಪ್ರಯೋಗಕ್ಕೆ ಒಳಪಟ್ಟು ಸಾಬೀತಾಗಬೇಕಿದೆ.

ಗೊರೊಡೆಟ್ಸ್ಕಿ ಮತ್ತು ಅವರ ತಂಡ ಬೆಳಕನ್ನು ಪ್ರತಿಫಲಿಸುವ ಸ್ಕ್ವೀಡ್‌ಗಳ ಕೋಶಗಳ ಕಡೆಗೆ ವಿಶೇಷ ಗಮನ ಹರಿಸಿ ಸಂಶೋಧನೆ ನಡೆಸುತ್ತಿದ್ದು, ಸದ್ಯದ ‘ಅಗೋಚರ ಸ್ಟಿಕ್ಕರ್‌’ಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಮುಂದೊಂದು ದಿನ ಪ್ರಜೆಗಳನ್ನು ಕಾಯುವ ಸೈನಿಕರಿಗೆ ನೆರವಾಗುವಂತೆ ರೂಪಿಸಲು ಶ್ರಮಿಸುತ್ತಿದೆ.

‘ಅಗೋಚರ ಸ್ಟಿಕ್ಕರ್‌’ಗಳ ಅಭಿವೃದ್ಧಿ ಕುರಿತ ಸಂಶೋಧನಾ ವರದಿಯು ‘ಅಮೆರಿಕ್ ಕೆಮಿಕಲ್ ಸೊಸೈಟಿ’ಯ ರಾಷ್ಟ್ರೀಯ ಸಭೆಯಲ್ಲಿ ಮಂಡಿಸುವ ಮೂಲಕ ಸಂಶೋಧಕರು ವಿಶ್ವದ ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT