ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿಯಿಂದ ಮರೆಯಾದ ರೇಣುಕಾ

Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕಣ್ಣಂಚಿನ ಮಿಂಚು, ಹಾರುವ ಹುಬ್ಬಿನ ಸಂಚು, ಬಳಕುವ ನಡು, ತಮಾಶಾ ಹೆಜ್ಜೆ ಹಾಕುತ್ತಿದ್ದರೆ ನೋಡುಗನ ಮನದಲ್ಲೂ ರಾಗಮೃದಂಗ ನುಡಿಯಬೇಕು. ರೇಣುಕಾ ಅಕ್ಕಲಕೋಟೆ ವೃತ್ತಿ ರಂಗಭೂಮಿಯಲ್ಲಿ ಎರಡು ದಶಕಗಳಷ್ಟು ಕಾಲ ಪ್ರೇಕ್ಷಕನನ್ನು ಹಿಡಿದಿಟ್ಟಿದ್ದು ತಮಾಶಾ ನೃತ್ಯದಿಂದ ಮತ್ತು ಮನೋಜ್ಞ ಅಭಿನಯದಿಂದ.

ಕೇವಲ ನಟಿ ಮತ್ತು ನೃತ್ಯಗಾತಿ ಎಂದಿದ್ದರೆ ರೇಣುಕಾ ಅಕ್ಕಲಕೋಟೆಯಂಥ ಕಲಾವಿದೆಗೆ ಅವಮಾನವಾದೀತು. ರೇಣುಕಾ ವೃತ್ತಿ ರಂಗಭೂಮಿಯನ್ನು ಕಟ್ಟಿ ಬೆಳೆಸಿದವರು. ಸ್ವಾಮಿ ಸಮರ್ಥ ಕಲಾ ಸಂಘವನ್ನು ನಿರ್ಮಿಸಿ, ನಿರ್ವಹಿಸಿದವರು. ಹೈದರಾಬಾದ್‌ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ರೇಣುಕಾ ಅಕ್ಕಲಕೋಟೆ ತಮ್ಮದೇ ಛಾಪನ್ನು ಮೂಡಿಸಿದ್ದು ಹಲವು ನಾಟಕಗಳಿಂದ. ಜೇವರ್ಗಿ ಹತ್ತಿರದ ‘ಆಂದೋಲ’ಎಂಬ ಊರಿನಲ್ಲಿ ಕಿವುಡ ಮಾಡಿದ ಕಿತಾಪತಿ ನಾಟಕದ ಮೂಲಕ ಕಂಪೆನಿ ಆರಂಭಿಸಿದರು.

ಧರ್ಮದೇವತೆ, ಚಿಕ್ಕ ಸೊಸೆ, ಚಿನ್ನದ ಗೊಂಬೆ, ತವರಿಗೆ ಬಾ ತಂಗಿ, ಬಸ್ ಕಂಡಕ್ಟರ್, ಲೋಫರ್ ಮಾವ ಸುಪರ್ ಸೊಸೆ, ಗೌಡ ಮೆಚ್ಚಿದ ಹುಡುಗಿ ಮುಂತಾದ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿದರು. ರೇಣುಕಾ ಬಣ್ಣದ ಬದುಕಿನಲ್ಲಿ ಯಶಸ್ವಿಯಾಗುತ್ತಿದ್ದಂತೆ ಬದುಕಿನಲ್ಲಿಯೂ ಹಲವು ಬಣ್ಣಗಳನ್ನು ಕಂಡರು. ಪ್ರೀತಿ, ಪ್ರೇಮ ವಿಶ್ವಾಸದ ಬಣ್ಣಗಳಲ್ಲಿ ಎಲ್ಲವನ್ನೂ ಮರೆಯುತ್ತಿದ್ದ ರೇಣುಕಾಗೆ ಕೊನೆಗೆ ದೊರೆಯುತ್ತಿದ್ದುದು ತಿರಸ್ಕಾರದ ಕಪ್ಪು ಬಣ್ಣವೇ.

ಕಪ್ಪು ಬಣ್ಣವನ್ನೂ ನಾಟಕದ ಅಂಕವೆಂಬಂತೆ ಮತ್ತೊಂದು ಬಣ್ಣಕ್ಕೆ ತಯಾರಾಗುತ್ತಿತ್ತು ಅವರ ಜೀವನಪ್ರೀತಿ. ರಂಗಭೂಮಿಯಲ್ಲಿ ಮಾಲೀಕರ ಪಾರುಪತ್ಯವನ್ನು ಹೆಣ್ಣುಮಗಳೊಬ್ಬಳು ಪ್ರಶ್ನಿಸಿ, ಸವಾಲಿನಂತೆ ಸ್ವೀಕರಿಸಿ, ದಶಕಕ್ಕೂ ಹೆಚ್ಚುಕಾಲ ಕಂಪೆನಿ ನಡೆಸಿದ ಹೆಮ್ಮೆ ರೇಣುಕಾ ಅವರದ್ದು. ಕಿನ್ನರಿ, ಆ ಊರು ಈ ಊರು, ಕನ್ನಡದ ಆಣೆ ಪ್ರಮಾಣ, ಸಾವಂತ್ರಿ, ಸೇವಾಲಾಲದಂತಹ ಸಾಕ್ಷ್ಯಚಿತ್ರಗಳಲ್ಲಿ ಪಾತ್ರ ಮಾಡಿದ್ದಾರೆ. ಟೈಲರ ಮಾವ, ತುಂಬಿದ ಮನೆ, ತಾಯಿ ಕಣ್ಣಿರು, ಅಣ್ಣನ ಕೋಪ ತಂಗಿಯ ಶಾಪ, ಗೌಡ್ರ ಕಪಾಟು, ನಂದು ನಿನಗ, ನಿಂದು ನನಗ, ಮಂಡ ಮೌಲ್ಯಾ ಎಂ.ಬಿ.ಬಿ.ಎಸ್ (ಹಿಂದಿ), ಪ್ರೀತಿ ಜೋಡಿ, ನಗುವದೇ ಸ್ವರ್ಗ, ಸಾಸು ಭೋಡಿ (ಲಂಬಾಣಿ) ಮುಂತಾದ ಸಿ.ಡಿಗಳನ್ನೂ ಹೊರ ತಂದಿದ್ದರು.

ಮರಾಠಿ ಮೂಲದವರಾಗಿದ್ದೂ, ಕನ್ನಡಕ್ಕಾಗಿ ಬದುಕಿದ ಕಲಾವಿದೆ. 36 ವರ್ಷಕ್ಕೇ ಪಾರ್ಶ್ವವಾಯುವಿಗೆ ಈಡಾಗಿ, ಸಾವನ್ನಪ್ಪಿದರು. ವಿಪರ್ಯಾಸವೆಂದರೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ, ಸಹನೆಗೆ, ಸಾಮಾಜಿಕ ಬದಲಾವಣೆಗೆ ಕಾರಣವಾಗುವ ಹಲವು ನಾಟಕಗಳನ್ನು ಪ್ರದರ್ಶಿಸಿದ ಈ ಕಲಾವಿದೆ ಎಲ್ಲೂ ಸುದ್ದಿಯಾಗಲಿಲ್ಲ. ಕಲಾವಿದರಿಗಾಗಿ ಜೀವ ಸವೆಸಿದ ಜೀವಕ್ಕೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ. ಇದ್ದಾಗಲೂ ಗುರುತಿಸಲಿಲ್ಲ. ಸತ್ತಾಗಲೂ ಸುದ್ದಿಯಾಗಲಿಲ್ಲ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ರೇಣುಕಾ ಅಕ್ಕಲಕೋಟೆ ಕಲಾವಿದೆಯ ಹೆಸರಿನಲ್ಲಿಯೇ ಕಣ್ಮರೆಯಾದರು.

ಅವರ ಬಣ್ಣದ ಬದುಕಿಗೆ ವಿಧಿ ತೆರೆ ಎಳೆಯಿತು. ಆದರೆ ಸಾವು, ಉಳಿದವರ ಬದುಕಿನ ಬಣ್ಣವನ್ನೂ ತೋರಿಸಿತು. ವೃತ್ತಿ ರಂಗಭೂಮಿ ಕಲಾವಿದೆಯನ್ನಷ್ಟೇ ಅಲ್ಲ, ಹೃದಯವಂತ ಒಡತಿಯನ್ನೂ ಕಳೆದುಕೊಂಡಿದೆ. ಈ ನಷ್ಟ ಯಾರ ಕಣ್ಣಿಗೂ ಕಾಣುತ್ತಿಲ್ಲ. ಈ ಹಾನಿ ಯಾರ ಮನಸನ್ನೂ ಕಲಕುತ್ತಿಲ್ಲ. ಇದಕ್ಕೆ ವೃತ್ತಿ ರಂಗಭೂಮಿ ಎಂಬ ತಾತ್ಸಾರ ಕಾರಣವೇ ಅಥವಾ ರೇಣುಕಾ ಅಕ್ಕಲಕೋಟೆ ಮಹಾರಾಷ್ಟ್ರದವರು ಎಂಬ ಗಡಿ ಕಾರಣವೇ? ಅಥವಾ ಅವರು ಮಹಿಳೆ ಎನ್ನುವುದೇ ಮಹಾ ಕಾರಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT