ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿಯಿಂದ ಸಮಾಜ ಸುಧಾರಣೆ

ಜಾನಪದ ವಿದ್ವಾಂಸ ಎಂ.ಜಿ.ಈಶ್ವರಪ್ಪ ಅಭಿಮತ
Last Updated 22 ಸೆಪ್ಟೆಂಬರ್ 2014, 5:54 IST
ಅಕ್ಷರ ಗಾತ್ರ

ದಾವಣಗೆರೆ: ಮನರಂಜನೆ ನೀಡುವುದರ ಜತೆಗೆ ಸಮಾಜ ಸುಧಾರಣೆಯಂತಹ ಶ್ರೇಷ್ಠ ಕಾರ್ಯವನ್ನು ವೃತ್ತಿ ರಂಗಭೂಮಿ ನಿರ್ವಹಿಸುತ್ತಿದೆ ಎಂದು ಜಾನಪದ ವಿದ್ವಾಂಸ ಎಂ.ಜಿ.ಈಶ್ವರಪ್ಪ ಅಭಿಪ್ರಾಯಪಟ್ಟರು. ನಗರದ ಬಾಪೂಜಿ ಸಭಾಂಗಣದಲ್ಲಿ ಗುರು ವಾದ್ಯವೃಂದದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನಾಟಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಪೂರ್ವ ಹಾಗೂ ನಂತರದಲ್ಲಿ ವೃತ್ತಿರಂಗ ಭೂಮಿ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶಪ್ರೇಮದ ಕಿಚ್ಚನ್ನು ಹಚ್ಚಲು ರಂಗಭೂಮಿ ಪ್ರಮುಖ ಮಾಧ್ಯಮವಾಗಿ ಬಳಕೆಯಾದರೆ, ಸ್ವಾತಂತ್ರ್ಯ ನಂತರ ಸಮಾಜ ಸುಧಾರಣೆಗೊಳಿಸುವಲ್ಲಿ ರಂಗಭೂಮಿ ಪ್ರಭಾವಶಾಲಿಯಾಗಿತ್ತು. ಸಾಮಾಜಿಕ, ಪೌರಾಣಿಕ ನಾಟಕಗಳು ಜನರ ಜೀವನ ಶೈಲಿಯನ್ನೇ ಬದಲಾಯಿಸುವಂತಹ ಶಕ್ತಿ ಹೊಂದಿದ್ದವು ಎಂದರು.

‘ಕಾವ್ಯ ಪ್ರಾಕಾರಗಳಲ್ಲೇ ನಾಟಕರಂಗ ಶ್ರೇಷ್ಠವಾದ ಮಾಧ್ಯಮ. ಹಿಂದೆ ಸಂಸಾರ ಸಹಿತ ಜನರು ಗಾಡಿಕಟ್ಟಿಕೊಂಡು ಬಂದು ನಾಟಕ ನೋಡುತ್ತಿದ್ದರು. ಪ್ರಸ್ತುತ ಟಿವಿ, ಮೊಬೈಲ್‌ ಮಾಧ್ಯಮಗಳ ಭರಾಟೆಯಿಂದ ಜನರು ನಾಟಕಗಳಿಂದ ವಿಮುಖರಾಗುತ್ತಿದ್ದಾರೆ. ಜನರ ಮನಸ್ಸು, ಜೀವನಶೈಲಿ ಕಲುಷಿತವಾಗುತ್ತಿದೆ. ಆರೋಗ್ಯಕರ ಸಮಾಜ ನಿರ್ಮಾಣ ಆಗಬೇಕಾದರೆ ಮನರಂಜನೆಯಲ್ಲಿ ಸಮುದಾಯದ ಸಹಭಾಗಿತ್ವ ಮುಖ್ಯ. ಈ  ನಿಟ್ಟಿನಲ್ಲಿ ರಂಗಭೂಮಿಯನ್ನು ಪ್ರತಿಯೊಬ್ಬರೂ ಪೋಷಿಸುವ ಅಗತ್ಯವಿದೆ’ ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಮನುಷ್ಯನ ಬದುಕಿಗೆ ವೃತ್ತಿ ರಂಗಭೂಮಿ ದಿಕ್ಸೂಚಿ ಇದ್ದಂತೆ. ನಾಟಕಗಳು ಮನುಷ್ಯನ ವ್ಯಕ್ತಿತ್ವವನ್ನು ಶ್ರೀಮಂತಗೊಳಿಸುವ ಜತೆಗೆ, ಮಾನವೀಯ ಮೌಲ್ಯ ಹಾಗೂ  ಉತ್ತಮ ಸಂಸ್ಕಾರವನ್ನು ಕಲಿಸುತ್ತವೆ. ಪ್ರಸ್ತುತ ಸಿನಿಮಾ ಹಾಗೂ ಧಾರಾವಾಹಿಗಳು ಮನುಷ್ಯರ ನಡುವಿನ ಮಾನವೀಯ ಸಂಬಂಧಗಳನ್ನು ಶಿಥಿಲಗೊಳಿಸಿವೆ.

ಮನಸ್ಸುಗಳನ್ನು ಮುರಿಯುತ್ತಿವೆ. ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ಮಾತ್ರ ಮನುಷ್ಯನ ಬದುಕು ಶ್ರೀಮಂತವಾಗುತ್ತದೆ ಎಂದರು.
ಹರಿಹರ ಶಾಸಕ ಎಚ್‌.ಎಸ್‌.ಶಿವಶಂಕರ್ ಮಾತನಾಡಿ, ಮಾಧ್ಯಮಗಳ ಭರಾಟೆಯಿಂದ ರಂಗಭೂಮಿ ನಲುಗುತ್ತಿದೆ. ಕಲಾವಿದರೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಕಲೆಗೆ ಸರ್ಕಾರ ಹಾಗೂ ಸಾರ್ವಜನಿಕರಿಂದ ಪ್ರೋತ್ಸಾಹ ಅಗತ್ಯ. ಮನಸ್ಸನ್ನು ಪರಿವರ್ತಿಸುವ ಶಕ್ತಿ ಇರುವ ರಂಗಭೂಮಿ ಕ್ಷೇತ್ರದ ಉಳಿವಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದರು.

ಎಚ್‌.ಮೆಹಬೂಬ್‌ ಅಲಿ ಕಲಾತಂಡದ ವತಿಯಿಂದ ‘ಮಲಮಗಳು’ ಎಂಬ ಸಾಮಾಜಿಕ ನಾಟಕ ಪ್ರದರ್ಶಿಸಲಾಯಿತು. ನಂತರ ಜಯಶ್ರೀ ಕಲಾತಂಡದಿಂದ ರಂಗಸಂಗೀತ ನಡೆಯಿತು. ತಹಶೀಲ್ದಾರ್‌ ಮಂಜುನಾಥ್‌ ಬಳ್ಳಾರಿ, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಸಹಾಯಕ ನಿರ್ದೇಶಕ ಶಿವರುದ್ರಪ್ಪ, ಪಾಲಿಕೆ ಸದಸ್ಯ  ದಿನೇಶ್‌ ಕೆ. ಶೆಟ್ಟಿ, ರಂಗ ನಿರ್ದೇಶಕ ಚಿಂದೋಡಿ ಶಂಭುಲಿಂಗಪ್ಪ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT