ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಅಭಿರುಚಿ ಬೆಳೆಸಲು ‘ರಂಗೋತ್ಸವ’

Last Updated 2 ಆಗಸ್ಟ್ 2014, 6:16 IST
ಅಕ್ಷರ ಗಾತ್ರ

ಗದಗ: ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ದೇಸಿ ಸಂಸ್ಕೃತಿ ಮರೆಯುತ್ತಿರುವ ಯುವ ಪೀಳಿಗೆಯಲ್ಲಿ ರಂಗಭೂಮಿ ಬಗ್ಗೆ ಅಭಿರುಚಿ ಮತ್ತು ಆಸಕ್ತಿ ಮೂಡಿಸುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಥಮ ಬಾರಿಗೆ ‘ಕಾಲೇಜು ರಂಗೋತ್ಸವ’ ಎಂಬ ಕಾರ್ಯಕ್ರಮ ಪರಿಚಯಿಸಿದೆ.

ನಾಟಕ ಮಾಧ್ಯಮದ ಮೂಲಕ ಕಲೆ, ಸಂಸ್ಕೃತಿ ಬಗ್ಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮತ್ತು ಅಭಿಮಾನ ಮೂಡಿಸುವುದು ಯೋಜನೆಯ ಮುಖ್ಯ ಉದ್ದೇಶ. ರಂಗೋತ್ಸವ ಕಾಲೇಜುಗಳಲ್ಲಿಯೇ ನಡೆಸಲಾಗುತ್ತದೆ.

ಒಂದು ವೇಳೆ ಅನಾನುಕೂಲವಿದ್ದಲ್ಲಿ ಬೇರೆಡೆ ಹಮ್ಮಿಕೊಳ್ಳಬಹುದು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಅಲ್ಲದೇ ವಿದ್ಯಾರ್ಥಿಗಳು ಅಭಿನಯಿಸಿದ ನಾಟಕಗಳಿಗೆ ಆದ್ಯತೆ ನೀಡುವುದರ ಜತೆಗೆ ಹವ್ಯಾಸಿ ನಾಟಕ ಸಂಸ್ಥೆಗಳಿಂದಲ್ಲೂ ನಾಟಕ ಪ್ರದರ್ಶನ ಏರ್ಪಡಿಸಲು ಅವಕಾಶ ಕಲ್ಪಿಸಲಾಗಿದೆ.

‘ರಂಗೋತ್ಸವ’ಕ್ಕೆ ಬೇಕಾದ ರಂಗಸಜ್ಜಿಕೆ, ಧ್ವನಿ–ಬೆಳಕು, ಆಸನ, ಊಟ, ತಿಂಡಿ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಾಲೇಜು ಮತ್ತು ಸಂಸ್ಥೆಗಳ ನೆರವಿನಿಂದ ಕನ್ನಡ ಮತ್ತು ಸಂಸ್ಕೃತಿ ಕೈಗೊಳ್ಳಬೇಕಿದೆ. ಬೆಳಿಗ್ಗೆಯಿಂದ ಸಂಜೆ ವರೆಗೂ ನಡೆಯುವ ರಂಗೋತ್ಸವಕ್ಕೆ ಪ್ರತಿ ಜಿಲ್ಲೆಗೆ ತಲಾ ₨ 2 ಲಕ್ಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ರಂಗೋತ್ಸವದಲ್ಲಿ ಎರಡು ಅಥವಾ ಮೂರು ನಾಟಕಗಳ ಪ್ರದರ್ಶನ. ಜತೆಗೆ ಏಕಪಾತ್ರಾಭಿನಯ ಮತ್ತು ರಂಗಗೀತೆ ಏರ್ಪಡಿಸಬಹುದು.

ನಾಟಕಗಳ ಸ್ವರೂಪ, ಭಾಗವಹಿಸುವ ಕಲಾವಿದರ ಸಂಖ್ಯೆ, ನಾಟಕದ ಅವಧಿ ಮುಂತಾದ ಅಂಶಗಳನ್ನು ಪರಿಗಣಿಸಿ ಕನಿಷ್ಠ ರೂ. 25 ಸಾವಿರದಿಂದ ಗರಿಷ್ಠ ₨35 ಸಾವಿರ ವರೆಗೆ ಸಂಭಾವನೆ ನೀಡಲಾಗುತ್ತದೆ. ಹಾಗೆಯೇ ರಂಗಗೀತೆ, ಏಕಪಾತ್ರಾಭಿನಯ ಮುಂತಾದ ಕಾರ್ಯಕ್ರಮ ನೀಡುವ ಕಲಾವಿದರಿಗೆ ತಲಾ ₨ 5 ಸಾವಿರ ಸಂಭಾವನೆ ನಿಗದಿಪಡಿಸಲಾಗಿದೆ.

‘ಕಾಲೇಜು ವಿದ್ಯಾರ್ಥಿಗಳಲ್ಲಿ ಕಲೆ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿ ಮೂಡಿಸಲು  ‘ರಂಗೋತ್ಸವ’ ಪರಿಚಯಿಸಲಾಗುತ್ತಿದೆ. ಆ.6ರಂದು ಮುಂಡರಗಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯುವ ರಂಗೋತ್ಸವದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ನಾಟಕ, ರಂಗಗೀತೆಗಳು, ಏಕಪಾತ್ರಾಭಿನಯ ಹಮ್ಮಿಕೊಳ್ಳಲಾಗಿದೆ.

ಮುಂಡರಗಿ ಕಾಲೇಜು ವಿದ್ಯಾರ್ಥಿಗಳು ‘ಮುಂಡರಗಿ ಭೀಮರಾಯ’ ಮತ್ತು ಗದಗದ ಎಎಸ್‌ಎಸ್‌ ಕಾರ್ಮಸ್‌ ಕಾಲೇಜು ವಿದ್ಯಾರ್ಥಿಗಳು ‘ಏಕಲವ್ಯ’ ನಾಟಕ ಪ್ರದರ್ಶಿಸಲಿದ್ದಾರೆ’ ಎಂದು ಕನ್ನಡ ಮತ್ತು  ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಎಲ್ಲ ಕಾಲೇಜುಗಳಿಗೂ ಮಾಹಿತಿ ನೀಡಲಾಗಿದೆ. ಬಿಡುಗಡೆ ಮಾಡಿರುವ ಅನುದಾನದಲ್ಲಿಯೇ ಆಹ್ವಾನ ಪತ್ರಿಕೆ,  ವಿಡಿಯೊ ಚಿತ್ರೀಕರಣ, ಬ್ಯಾನರ್‌, ಧ್ವನಿ–ಬೆಳಕು ವ್ಯವಸ್ಥೆ,    ನಾಟಕದ ವೇದಿಕೆ,   ಶಾಮಿಯಾನ ಹಾಗೂ  ಅಂದಾಜು 900   ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡಿಕೊಳ್ಳಲಾಗುವುದು’ ಎಂದು  ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT