ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ‘ಮೋಹಿತ’

Last Updated 26 ನವೆಂಬರ್ 2015, 8:31 IST
ಅಕ್ಷರ ಗಾತ್ರ

ಪುಣೆಯ ‘ಆಸಕ್ತ್‌’ ರಂಗತಂಡದ ಕಲಾನಿರ್ದೇಶಕರಾಗಿರುವ ಮೋಹಿತ್‌ ತಾಕಲ್ಕರ್ ಮರಾಠಿ, ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲಿ 20ಕ್ಕೂ ಅಧಿಕ ಪ್ರಯೋಗಾತ್ಮಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದುಕೊಂಡಿರುವ ಮೋಹಿತ್‌ ಅವರಿಗೆ ಈ ಸಲದ ‘ಶಂಕರ್‌ನಾಗ್‌ ಪ್ರಶಸ್ತಿ’ ಸಂದಿದೆ. ರಂಗಶಂಕರದಲ್ಲಿ ಇತ್ತೀಚೆಗೆ ನಡೆದ ‘ಯೂತ್‌ ಯುಗ’ ಯುವ ನಿರ್ದೇಶಕರ ನಾಟಕೋತ್ಸವದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಮೋಹಿತ್‌ ಅವರು ಪದ್ಮನಾಭ ಭಟ್‌ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

* ಈ ವರ್ಷದ ‘ಶಂಕರ್‌ನಾಗ್‌ ಪ್ರಶಸ್ತಿ’ಗೆ ಭಾಜನರಾಗಿದ್ದೀರಿ. ಹೇಗನಿಸುತ್ತಿದೆ?
ನಾವು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಉತ್ಸಾಹದಿಂದ ಕೆಲಸ ಮಾಡುತ್ತಿರುವಾಗ ಯಾರಾದರೂ ನಮ್ಮ ಕೆಲಸವನ್ನು ಗಮನಿಸುತ್ತಾರೆ ಮತ್ತು ಪ್ರಶಂಸಿಸುತ್ತಾರೆ ಎಂದರೆ ಆಗುವ ಖುಷಿಯೇ ಬೇರೆ. ಶಂಕರ್‌ನಾಗ್‌ ಪ್ರಶಸ್ತಿ ನನಗೆ ಈ ರೀತಿಯ ಖುಷಿಗೆ ಕಾರಣವಾಗಿದೆ. ಇದರಿಂದ ನನ್ನ ಮೇಲಿನ ಜವಾಬ್ದಾರಿಯೂ ಹೆಚ್ಚಿದೆ. ಇನ್ನಷ್ಟು ಪರಿಶ್ರಮದಿಂದ ಉತ್ತಮ ನಾಟಕಗಳನ್ನು ಮಾಡಬೇಕಿದೆ. ಪುಣೆಯ ರಂಗಭೂಮಿಯಲ್ಲಿ ಸಕ್ರಿಯನಾಗಿರುವ ನನ್ನನ್ನು ಬೆಂಗಳೂರಿನವರು ಗುರ್ತಿಸುವುದೇ ಖುಷಿಯ ವಿಚಾರವಲ್ಲವೇ?

* ನೀವು ರಂಗಚಟುವಟಿಕೆಗಳಿಗೆ ಇಳಿದ ಆರಂಭದ ದಿನಗಳನ್ನು ನೆನಪಿಸಿಕೊಳ್ಳಿ.
ನಾನು ರಂಗಭೂಮಿಗೆ ಯಾಕೆ ಬಂದೆ ಎನ್ನುವುದು ನನಗೂ ಗೊತ್ತಿಲ್ಲ. ಅದೊಂದು ಆಕಸ್ಮಿಕವಷ್ಟೆ. ನಾನು ಪುಣೆಯ ‘ಪ್ರೊಗ್ರೆಸಿವ್‌ ಡ್ರಮಾಟಿಕ್‌ ಅಸೋಸಿಯೇಶನ್‌’ನ ರಂಗಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ.

ಒಮ್ಮೆ ಆ ತಂಡಕ್ಕಾಗಿ ಖ್ಯಾತ ನಾಟಕಕಾರ ಗಿರೀಶ ಕಾರ್ನಾಡ ಒಂದು ನಾಟಕ ನಿರ್ದೇಶಿಸಬೇಕಾಗಿತ್ತು. ವೈಯಕ್ತಿಕ ಸಮಸ್ಯೆಗಳಿಂದ ಅವರು ಆ ನಾಟಕವನ್ನು ನಿರ್ದೇಶಿಸಲು ಸಾಧ್ಯವಾಗಲಿಲ್ಲ. ಆಗ ಅಚಾನಕ್ಕಾಗಿ ಅದರ ಹೊಣೆಗಾರಿಕೆ ನನ್ನ ಹೆಗಲೇರಿತು. ನನ್ನ ನಿರ್ದೇಶನದಲ್ಲಿ ಆ ನಾಟಕ ಯಶಸ್ವಿಯೂ ಆಯಿತು. ಅಲ್ಲಿಂದ ನಾನು ನಿರಂತರವಾಗಿ ನಾಟಕ ನಿರ್ದೇಶನಕ್ಕೆ ಇಳಿದೆ. 2003ರಲ್ಲಿ ‘ಆಸಕ್ತ್‌’ ಹೆಸರಿನಲ್ಲಿ ನಮ್ಮದೇ ಒಂದು ರಂಗತಂಡವನ್ನೂ ಕಟ್ಟಿಕೊಂಡು ರಂಗಭೂಮಿಯಲ್ಲಿ ಸಕ್ರಿಯನಾಗಿದ್ದೇನೆ.

* ಸಂಪ್ರದಾಯಿಕತೆ ಮತ್ತು ಆಧುನಿಕತೆಯ ಪರಿಕಲ್ಪನೆಗಳನ್ನು ಹೇಗೆ ಅರ್ಥೈಸುತ್ತೀರಿ.
ಈಗ ಕಾರ್ನಾಡರಂತಹ ನಾಟಕಕಾರನ್ನು ತೆಗೆದುಕೊಳ್ಳಿ. ಅವರು ಪುರಾಣ ಕಥನಗಳಿಂದ ಬಹಳಷ್ಟು ಅಂಶಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅವರು ಆ ಪುರಾಣವನ್ನು ಮರುರೂಪಿಸುವ ಕ್ರಮ ಇದೆಯಲ್ಲ, ಅದು ತುಂಬ ಆಧುನಿಕವಾದದ್ದು. ಆ ನಾಟಕ ಕೇವಲ ಸಂಪ್ರದಾಯಿಕ ಪುರಾಣ ಕಥನಗಳಷ್ಟೇ ಆಗಿರುವುದಿಲ್ಲ.

ಇಂದಿನ ಆಧುನಿಕ ಜೀವನಕ್ರಮದ ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ. ಸಂಪ್ರದಾಯಿಕ ನಾಟಕಗಳು ಮತ್ತು ಆಧುನಿಕ ನಾಟಕಗಳು ಇವೆರಡಕ್ಕೂ ಅವುಗಳದ್ದೇ ಆದ ಮಹತ್ವವಿದೆ. ಆದರೆ ವೈಯಕ್ತಿಕವಾಗಿ ನಾನು ಎರಡರಲ್ಲಿ ಒಂದನ್ನು ಆಯ್ದುಕೊಳ್ಳಬೇಕೆಂದರೆ ಆಧುನಿಕ ನಾಟಕಗಳನ್ನೇ ಆಯ್ದುಕೊಳ್ಳುತ್ತೇನೆ. ಯಾಕೆಂದರೆ ಅದರ ಭಾಷೆ, ಪಾತ್ರಗಳು, ಕಥೆ ಎಲ್ಲವೂ ನನ್ನ ಕಾಲ– ಕಾಳಜಿಗಳಿಗೆ ಒದಗಿಬರುತ್ತವೆ.

* ಇಂದು ಬಹಳ ಪ್ರಮಾಣದಲ್ಲಿ ಯುವಪೀಳಿಗೆ ರಂಗಭೂಮಿಯತ್ತ ಬರುತ್ತಿದ್ದಾರೆ. ಇದಕ್ಕೆ ಏನು ಕಾರಣ ಇರಬಹುದು?
ಇಂದಿನ ದಿನಗಳಲ್ಲಿ ಮುಖಾಮುಖಿ ಸಂವಹನ ಎಂಬುದು ತುಂಬ ವಿರಳವಾಗುತ್ತಿದೆ. ಮೊಬೈಲ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿಯೇ ಮುಳುಗಿರುತ್ತಾರೆ. ರಂಗಭೂಮಿ ಪ್ರೇಕ್ಷಕರೊಂದಿಗೆ ಜೀವಂತ ಸಂವಹನವನ್ನು ಕಲ್ಪಿಸುತ್ತದೆ.  ಅದು ತುಂಬ ಪರಿಣಾಮಕಾರಿ ಅಭಿವ್ಯಕ್ತಿ ಮಾಧ್ಯಮ. ಆದ್ದರಿಂದ ಜನರು ರಂಗಭೂಮಿಯನ್ನು ಹೆಚ್ಚು ಹೆಚ್ಚು ಇಷ್ಟಪಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿನ ನನ್ನ ಗ್ರಹಿಕೆಯನ್ನು ಆಧರಿಸಿ ಹೇಳುವುದಾದರೆ ಕಳೆದ ಐದಾರು ವರ್ಷಗಳಲ್ಲಿ ಅನೇಕ ಶಾಲೆಗಳಲ್ಲಿ ರಂಗಶಿಕ್ಷಣವನ್ನು ಅಳವಡಿಸಲಾಗಿದೆ. ಇದು ಕೂಡ ರಂಗಭೂಮಿಯತ್ತ ಯುವಜನರು ಆಸಕ್ತರಾಗಲು ಪ್ರೇರಕವಾಗಿದೆ.

ಮೊದಲೆಲ್ಲ ಜನರು ಜೀವನೋಪಾಯಕ್ಕಾಗಿ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಾ ಬಿಡುವಿನ ವೇಳೆಯಲ್ಲಿ ರಂಗಚಟುವಟಿಕೆಗಳನ್ನು ಮಾಡುತ್ತಿದ್ದರು. ಆದರೆ ಇಂದು ರಂಗಭೂಮಿಯನ್ನೇ ಒಂದು ವೃತ್ತಿಯನ್ನಾಗಿ ಆರಿಸಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ. ಒಂದು ಅಹಿತಕರ ಸಂಗತಿಯೆಂದರೆ ಅನೇಕರು ರಂಗಭೂಮಿಯನ್ನು ಸಿನಿಮಾ ಅಥವಾ ಕಿರುತೆರೆ ಕ್ಷೇತ್ರಕ್ಕೆ ಹೋಗಲು ಮೆಟ್ಟಿಲುಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

* ಆದರೆ ಇಂದು ರಂಗಭೂಮಿಯಲ್ಲಿ ಮೊದಲಿನ ಗುಣಮಟ್ಟ ಕಂಡು ಬರುತ್ತಿಲ್ಲ ಎಂಬ ಆರೋಪವೂ ಆಗೀಗ ಕೇಳಿಬರುತ್ತಿರುತ್ತದಲ್ಲ..?
ಇಂದು ರಂಗಭೂಮಿ ಬೆಳೆಯುತ್ತಿಲ್ಲ, ಗುಣಮಟ್ಟ ಇಲ್ಲ ಎಂಬೆಲ್ಲ ಹೇಳಿಕೆಗಳನ್ನೂ ಅಲ್ಲಲ್ಲಿ ನಾನೂ ನೋಡುತ್ತಿರುತ್ತೇನೆ. ಆದರೆ ಹೀಗೆ ಆರೋಪಿಸುವವರಲ್ಲಿ ಎಷ್ಟು ಜನರು ನಾಟಕಗಳನ್ನು ನೋಡುತ್ತಿದ್ದಾರೆ? 

ಅವರಿನ್ನೂ ಹಳೆಯ ಕಾಲದಲ್ಲಿಯೇ ಇದ್ದಾರೆ. ನಾನು ರಂಗಭೂಮಿಯಲ್ಲಿ ಇದ್ದಾಗ ಹೀಗಿತ್ತು ಹಾಗಿತ್ತು ಎಂದೆಲ್ಲ ಹೇಳಿಕೊಳ್ಳುತ್ತಿರುತ್ತಾರೆ. ಆದರೆ ಅವರಲ್ಲಿ ಬಹುತೇಕರು ಇಂದಿನ ಯುವಪೀಳಿಗೆ ಏನೆಲ್ಲ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಏನೇನೂ ತಿಳಿದುಕೊಂಡಿಲ್ಲ. ಆದರೂ ಅವರು ಇಂದಿನ ರಂಗಭೂಮಿಯ ಬಗ್ಗೆ ಟೀಕೆ ಮಾಡುತ್ತಿರುವುದು ದುರದೃಷ್ಟಕರ. ಅವರು ಮೊದಲು ನಾಟಕಗಳನ್ನು ನೋಡಿ ಆಮೇಲೆ ಅವುಗಳ ಬಗ್ಗೆ ಮಾತನಾಡಬೇಕು.

ನಾನೂ ಇಂದಿನ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಹಲವಾರು ಜನರು ತುಂಬ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದು ನನಗೆ ಗೊತ್ತಿದೆ.

* ಮರಾಠಿ ರಂಗಭೂಮಿಯ ಇತ್ತೀಚೆಗಿನ ಒಲವುಗಳ ಬಗ್ಗೆ ಹೇಳಿ?
ಮರಾಠಿ ರಂಗಭೂಮಿ ಇಂದಿಗೂ ಸಾಕಷ್ಟು ಶಕ್ತವಾಗಿದೆ. ಸಾಕಷ್ಟು ಒಳ್ಳೆಯ ನಾಟಕಕಾರರು–ನಿರ್ದೇಶಕರು ಇದ್ದಾರೆ. ಈ ಮೊದಲು ನಾಟಕಕಾರರು ರಂಗಭೂಮಿಯ ಕೇಂದ್ರವಾಗಿದ್ದರು. ಆದರೆ ಇತ್ತೀಚೆಗೆ ನಾಟಕಕಾರ–ನಿರ್ದೇಶಕ– ನಟ ಈ ಮೂವರೂ ರಂಗಭೂಮಿಯ ಕೇಂದ್ರಸ್ಥಾನಕ್ಕೆ ಬರುತ್ತಿದ್ದಾರೆ.

ಮರಾಠಿ ರಂಗಭೂಮಿ ಸಾಮಾನ್ಯವಾಗಿ ಸಾಮಾಜಿಕ, ಮನರಂಜನಾ ನಾಟಕಗಳಿಂದಲೇ ಗುರ್ತಿಸಿಕೊಂಡಿತ್ತು. ಆದರೆ ಇತ್ತೀಚೆಗೆ ಹೊಸ ಹೊಸ ಆಧುನಿಕ ನಾಟಕಗಳು ಬರುತ್ತಿವೆ. ಹೊಸ ಪೀಳಿಗೆಯ ಧ್ವನಿ ಕೇಳಿಬರುತ್ತಿದೆ. ಶೈಲಿ, ಭಾಷೆಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಪುಣೆ ಮತ್ತು ಮುಂಬೈ ರಂಗಭೂಮಿಯಲ್ಲಿ ಕಂಡುಬರುವ ಒಂದು ಸಮಸ್ಯೆಯೆಂದರೆ ನಾವು ಬಾಲಿವುಡ್‌ಗೆ ತುಂಬ ಹತ್ತಿರದಲ್ಲಿದ್ದೇವೆ. ಅದರ ನಕಾರಾತ್ಮಕ ಪರಿಣಾಮವೂ ರಂಗಭೂಮಿಯ ಮೇಲೆ ಆಗಿದೆ.

***
‘ಹೊಸ ನಾಟಕಗಳ ಕೊರತೆಯಿದೆ’
ಇಂದು ಪ್ರಾದೇಶಿಕ ಭಾಷೆಗಳಲ್ಲಿ ಸಾಕಷ್ಟು ಹೊಸ ನಾಟಕಗಳು ರಚನೆಯಾಗುತ್ತಿಲ್ಲ ಎಂಬುದು ನಿಜ. ನಾಟಕ ರಚನೆಯ ಇಡೀ ಪಕ್ರಿಯೆಯೇ ಬದಲಾಗುತ್ತಿದೆ. ಈ ಮೊದಲು ನಾಟಕಕಾರರು ನಾಟಕ ಬರೆಯುತ್ತಿದ್ದರು. ನಿರ್ದೇಶಕರು ಅದನ್ನು ನಿರ್ದೇಶಿಸುತ್ತಿದ್ದರು. ಅವೆರಡೂ ಬೇರೆ ಬೇರೆ ಪ್ರಕ್ರಿಯೆಗಳೇ ಆಗಿದ್ದವು. ಈಗ ಹಾಗಿಲ್ಲ. ಇಂದು ನಾಟಕಕಾರ ನಾಟಕ ತಂಡದೊಂದಿಗೆ ಕೆಲಸ ಮಾಡುತ್ತಾನೆ. ತಾಲೀಮಿನಲ್ಲಿಯೂ ಪಾಲ್ಗೊಂಡು, ನಿರ್ದೇಶಕರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಂಡು ತನ್ನ ನಾಟಕವನ್ನು ತಿದ್ದುತ್ತಾನೆ. ಒಟ್ಟಾರೆ ನಾಟಕ ರಚನೆಯೂ ನಾಟಕ ನಿರ್ಮಾಣದ ಪ್ರಕ್ರಿಯೆಯ ಒಂದು ಭಾಗವೇ ಆಗಿದೆ.

***
"ರಂಗಭೂಮಿ ಎಂದರೆ ಜೀವನ ಎಂದು ತುಂಬಾ ಜನರು ಹೇಳುತ್ತಾರೆ. ಆದರೆ ನನ್ನ ಪ್ರಕಾರ ಅದು ಪರ್ಯಾಯ ಬದುಕು. ವಾಸ್ತವ ಬದುಕನ್ನು ಕುರಿತಾದ ಪರ್ಯಾಯ ಬದುಕು."
–ಮೋಹಿತ್‌ ತಾಕಲ್ಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT