ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಸ್ಥಳದ ‘ಗುರಿಕಾರ’ ದಾಸಪ್ಪ ರೈ

Last Updated 1 ಫೆಬ್ರುವರಿ 2014, 9:59 IST
ಅಕ್ಷರ ಗಾತ್ರ

ತುಳು ಯಕ್ಷಗಾನಪ್ರಿಯರು ಎಂದಿಗೂ ಮರೆಯಲಾರದ ಪ್ರಸಂಗ ಕಾಡಮಲ್ಲಿಗೆ. ಈ ಪ್ರಸಂಗದ ‘ಮೈಂದಾ ಗುರಿಕಾರ’ನ ಪಾತ್ರವು ಹಿರಿಯ ತಲೆಮಾರಿನವರ ಕಣ್ಣಮುಂದೆ ಈಗಲೂ ಕುಣಿಯುವಷ್ಟು ಪ್ರಭಾವಶಾಲಿಯಾದುದು. ಈ ಪಾತ್ರಕ್ಕೆ ಜೀವತುಂಬುತ್ತಿದ್ದುದು  ದಾಸಪ್ಪ ರೈ. ಶಾಲೆಯಲ್ಲಿ ಹೆಚ್ಚೇನೂ ಕಲಿಯದೆಯೂ ಯಕ್ಷಗಾನವೆಂಬ ‘ಪಂಡಿತರ ಕಲೆ’ಯ ರಂಗಸ್ಥಳದಲ್ಲಿ ಸುಮಾರು ನಾಲ್ಕೈದು ದಶಕಗಳ ಕಾಲ ಮೆರೆದವರು ದಾಸಪ್ಪ ರೈ.

ದಾಸಪ್ಪ ರೈ ಅವರು ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಕುತ್ಯಾಳ ಹೊಸ ಮನೆಯ ಕಲಾ ಕುಸುಮ. 1950 ಮೇ 10ರಂದು ಜನಿಸಿದ ಇವರು ಶಿಕ್ಷಣವನ್ನು ಆರ್ಥಿಕ ಮುಗ್ಗಟಿನಿಂದ ಅರ್ಧಕ್ಕೆ ಮೊಟಕುಗೊಳಿಸಿದರು. ಹೊಟ್ಟೆಪಾಡಿಗಾಗಿ  ಟೈಲರಿಂಗ್ ವೃತ್ತಿಯನ್ನು ಆರಿಸಿಕೊಂಡರಾದರೂ ಅವರ ಮನಸ್ಸು ಸೆಳೆಯುತ್ತಿದ್ದುದು ಯಕ್ಷಗಾನದ ಸುತ್ತಲೇ. ಯಕ್ಷಗಾನದ ಹಾಡುಗಳನ್ನು ಹಾಡುವುದು  ದಾಸಪ್ಪ ರೈ ಅವರ ಬಾಲ್ಯದ ಹವ್ಯಾಸ. ಈ ಹವ್ಯಾಸ ಗಾಢವಾಯಿತು. ಯಕ್ಷಗಾನ ಕಲಿಯುವ ಹಂಬಲವೂ ಹೆಚ್ಚಾಯಿತು. ಅವರು ಯಕ್ಷಗಾನ ಕಲೆಯನ್ನು ಒಲಿಸಿಕೊಂಡಿದ್ದು ಕೆ.ಎನ್ ಬಾಬು ರೈ ಅವರಿಂದ. ಮೇಳ ಸೇರಿದ್ದು 1965ರಲ್ಲಿ.  ಆಗ ಡೇರೆ ಮೇಳಗಳ ಕಾಲ.  ಮೇಳದ ಆಟಗಳಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಒರೆಗೆ ಹಚ್ಚಿದ ರೈ ಹೆಜ್ಜೆಗಾರಿಕೆ, ಮಾತುಗಾರಿಕೆಗಳಲ್ಲೂ ಸೈ ಎನಿಸಿಕೊಂಡರು.

ಹಿರಿಯ ಕಲಾವಿದರ ಜತೆಗಿನ ಒಡನಾಟದಲ್ಲಿ ಬೆಳೆದರು. 1979ರಲ್ಲಿ ಕರ್ನಾಟಕ ಮೇಳ ಆಡಿತೋರಿಸುತ್ತಿದ್ದ ‘ಕಾಡ ಮಲ್ಲಿಗೆ’ ಎಂಬ ತುಳು ಯಕ್ಷಗಾನದಲ್ಲಿ ಇವರಿಗೆ  ಮೈಂದಾ ಗುರಿಕಾರನ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿತು. ಈ ಪಾತ್ರಕ್ಕೆ ಎಷ್ಟರ ಮಟ್ಟಿನ ಜೀವ ತುಂಬಿದರೆಂದರೆ, ಆ ಆಟ ನೋಡಿದವರು ಯಾರೂ ಮೈಂದಾ ಗುರಿಕಾರನನ್ನು ಮರೆಯಲು ಸಾಧ್ಯವೇ ಇಲ್ಲ! ಖಳ ಪಾತ್ರಗಳಾದ ಕಂಸ, ಮಹಿಷಾಸುರ, ಇಂದ್ರಜಿತು, ರಾವಣ, ಕೌರವ ಇತ್ಯಾದಿ ಪಾತ್ರಗಳಿಗೆ ರೈ ಅವರ ಭೀಮಕಾಯ, ಧ್ವನಿ ಎಲ್ಲವೂ ಒಗ್ಗುತ್ತಿತ್ತು.

ಗಾಂಭೀರ್ಯಕ್ಕೆ ಚ್ಯುತಿ ಬಾರದಂತೆ ಇಂತಹ ಪಾತ್ರಗಳನ್ನು ಕಟ್ಟಿಕೊಡುತ್ತಿದ್ದರು. ರೈ ಅವರು 1980ರಲ್ಲಿ ಕದ್ರಿ ಮೇಳಕ್ಕೆ ಸೇರಿದ ನಂತರ ತುಳು ಪ್ರಸಂಗಗಳ ಕಥಾನಾಯಕನ ಪಾತ್ರಗಳೂ ಅವರನ್ನು ಹುಡುಕುತ್ತಾ ಬಂದವು. ‘ಸತ್ಯದಪ್ಪೆ ಚೆನ್ನಮ್ಮ ’ದಲ್ಲಿ ಸ್ತ್ರೀ ಪಾತ್ರವನ್ನೂ ನಿರ್ವಹಿಸಿ  ಮೆಚ್ಚುಗೆಗೆ ಪಾತ್ರರಾದರು.

ಮೇಳದ ಸಂಚಾಲಕ:ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ದಾಸಪ್ಪ ರೈ ಅವರಿಗೆ ಸ್ವಂತ ಮೇಳ ಕಟ್ಟುವ ಮನಸ್ಸಾಯಿತು. 1984-–85ರಲ್ಲಿ ಕುಂಬ್ಳೆ ಮೇಳವನ್ನು ಕಟ್ಟಿದ ರೈ  ಸತತ 6 ವರ್ಷ ಅದನ್ನು ಮುನ್ನಡೆಸಿದ್ದರು.

ಪ್ರಶಸ್ತಿಗಳ ಪ್ರಭಾವಳಿ: 2004ರಲ್ಲಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ,  2012ರಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಆಕಾಡೆಮಿ ಪ್ರಶಸ್ತಿ, 2012ರಲ್ಲಿ ಬೋಳಾರ ಪ್ರಶಸ್ತಿ,  2011ರ ಸೌರಭ ಪ್ರಶಸ್ತಿ, 2013ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದಾಸಪ್ಪ ರೈ ಅವರನ್ನು ಹುಡುಕಿಕೊಂಡು ಬಂದಿವೆ.  ‘ತುಳುನಾಡ ತುಳುಶ್ರೀ’, ‘ಯಕ್ಷರಂಗ ನಟನಾಚತುರ’, ‘ಯಕ್ಷಭಾರ್ಗವ’,... ಇವು ರೈ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ನೀಡಿದ ಬಿರುದುಗಳು. ಕತಾರ್‌ನಲ್ಲಿ ಎರಡು ಸಲ, ಗುಜರಾತಿನಲ್ಲಿ ಒಮ್ಮೆ ಸೇರಿ, ವಿಶ್ವದ ವಿವಿಧೆಡೆಗಳಲ್ಲಿ 100ಕ್ಕೂ ಮಿಕ್ಕಿ ಸನ್ಮಾನಗಳು ಇವರ ಮುಡಿಗೇರಿವೆ. ಅಹಮದಾಬಾದ್, ದೆಹಲಿ, ಮುಂಬೈನಂತಹ ಮಹಾನಗರಗಳಲ್ಲಿನ ಅಭಿಮಾನಿಗಳು ಇವರ ಅಭಿನಯಕ್ಕೆ ತಲೆದೂಗಿ ಸನ್ಮಾನಿಸಿದ್ದಾರೆ.
 
‘ಈ ಕ್ಷೇತ್ರ ನನಗೆ ಗೌರವ ತಂದುಕೊಟ್ಟಿದೆ.  ಹೆಚ್ಚೇನೂ ವಿದ್ಯಾವಂತನಲ್ಲದಿದ್ದರೂ ಇಲ್ಲಿ ಸಿಕ್ಕಿದ ಸ್ಥಾನಮಾನ ದೊಡ್ಡದು. ಹೆಸರು ಪಡೆಯುವುದು ಹಾಗೂ ಸಾಧನೆಯೇ ಕಲಾವಿದನಿಗೆ ಶ್ರೇಷ್ಠ ಪ್ರಶಸ್ತಿ’ ಎನ್ನುವುದು ದಾಸಪ್ಪ ರೈಯವರ ಮನದಾಳದ ಮಾತು
‘ಅನ್ಯವೃತ್ತಿಯನ್ನು ಮಾಡುತ್ತಾ ಈ ಕಲೆಯನ್ನೂ ರೂಢಿಸಿಕೊಂಡಲ್ಲಿ ವೃತ್ತಿಗೆ ಲಾಭವೇ ಹೊರತು ನಷ್ಟವಿಲ್ಲ. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ ಮತ್ತು ಪ್ರಜ್ಞಾವಂತರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ರೈ.

ಪತ್ನಿ ಚಿತ್ರವತಿ ಅವರ ಪ್ರೋತ್ಸಾಹ ರಂಗಸ್ಥಳದ ಸಾಧನೆಯಲ್ಲಿ ಇವರು ಉತ್ತುಂಗಕ್ಕೆ ಏರುವುದಕ್ಕೆ ಏಣಿಯಾಯಿತು. ಪತ್ನಿಯ ಸಹಕಾರವನ್ನು ನೆನಪಿಸಿಕೊಳ್ಳಲು ಅವರು ಮರೆಯುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT