ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗು ರಂಗು ರವಿ!

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಐಷಾರಾಮಿ ಹೋಟೆಲ್‌ನ ಒಂದು ಕೋಣೆ. ನರ್ತಕಿಯರು ಹಾಡಿ ಕುಣಿಯುತ್ತಿದ್ದರು. ಅವರನ್ನು ಕಣ್ತುಂಬಿಕೊಂಡು ಸಂತಸ ಪಡುತ್ತ ಹರಟೆ ಹೊಡೆವ ಮಂದಿ ಒಂದಿಷ್ಟು. ಇದು ಇಂದ್ರಜಿತ್ ಲಂಕೇಶ್ ನಿರ್ದೇಶನದ ಹೊಸ ಚಿತ್ರ ‘ಲವ್ ಯೂ ಆಲಿಯಾ’ ಚಿತ್ರದ ಹಾಡೊಂದರ ಚಿತ್ರೀಕರಣದ ದೃಶ್ಯ.

ನಟ ರವಿಚಂದ್ರನ್ ಅವರು ಇದೇ ಮೊದಲ ಬಾರಿ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ಆರಂಭದಿಂದಲೂ ಅವರ ಪಾತ್ರದ ಸುತ್ತವೇ ಕಥೆ ತಿರುಗುತ್ತಿದ್ದರೂ ಅವರ ಪ್ರವೇಶ ಮಧ್ಯಂತರದಲ್ಲಂತೆ. ‘ನಿರ್ದೇಶಕರೊಬ್ಬರು ಸೆಟ್‌ನಲ್ಲಿ ನಗುನಗುತ್ತ ಖುಷಿಯಾಗಿರುವುದನ್ನು ಬಹಳ ಸಮಯದ ನಂತರ ಕಾಣುತ್ತಿದ್ದೇನೆ’ ಎಂದರು ಕನಸುಗಾರ ರವಿಚಂದ್ರನ್. ಆ ಖುಷಿ ಸ್ವತಃ ರವಿಚಂದ್ರನ್ ಮೊಗದಲ್ಲೂ ಇತ್ತು. ಬಿಳಿ ಕೂದಲಿನ ತಮ್ಮ ವಿಗ್ ತೋರಿಸಿ, ‘ರವಿಗೆ ವಯಸ್ಸಾಯಿತು ಎಂದುಕೊಳ್ಳಬೇಡಿ. ಇನ್ನೂ 20 ವರ್ಷಗಳಾದರೂ ನಾನೇ ಮರ ಸುತ್ತುವುದು’ ಎಂದು ಚಟಾಕಿ ಹಾರಿಸಿದರು.

ರವಿಚಂದ್ರನ್‌ಗೆ ಜೊತೆಗಾತಿಯಾಗಿರುವ ಬಹುಭಾಷಾ ನಟಿ ಭೂಮಿಕಾ ಚಾವ್ಲಾ ಅವರದು ಡಾನ್ಸರ್ ಪಾತ್ರ. ‘ತುಂಬ ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿದ್ದೇನೆ’ ಎಂಬ ಸಂತಸ ಅವರಿಗೆ. ಧಾರಾವಾಹಿಗಳಿಂದ ಸಿನಿಮಾಕ್ಕೆ ಬಡ್ತಿ ಪಡೆದ ಚಂದನ್ ಶೆಟ್ಟಿ ಈ ಚಿತ್ರದಲ್ಲಿಯೂ ಪಾತ್ರ ಗಿಟ್ಟಿಸಿದ್ದಾರೆ. ‘2014 ನನ್ನ ಧಾರಾವಾಹಿ ಜೀವನಕ್ಕೆ ಅಧಿಕೃತ ನಿವೃತ್ತಿ’ ಎನ್ನುತ್ತಾರೆ ಅವರು.

‘ರವಿ ಅವರು ಪಾತ್ರದಲ್ಲಿ ತುಂಬಾ ಒಳಹೋಗುತ್ತಾರೆ. ಅವರಿಂದಾಗಿ ನನಗೂ ಮಾರ್ಗದರ್ಶನ ಸಿಗುತ್ತಿದೆ. ಭೂಮಿಕಾಗೆ ಇಷ್ಟು ಅನುಭವವಿದ್ದರೂ ಸರಳತೆಯಿಂದ ನಡೆದುಕೊಳ್ಳುತ್ತಾರೆ. ಕನ್ನಡ ಚಿತ್ರರಂಗಕ್ಕೆ ಚಂದನ್ ಮೂಲಕ ಒಬ್ಬ ಒಳ್ಳೆಯ ನಟ ಸಿಕ್ಕಂತಾಗಿದೆ. ಛಾಯಾಗ್ರಾಹಕ ಸಂತೋಷ್‌ ರೈ ಪಾತಾಜೆ ಎಲ್ಲಿಯೂ ರಾಜಿ ಮಾಡಿಕೊಳ್ಳದೇ ಕೆಲಸ ಮಾಡುತ್ತಿದ್ದಾರೆ’ ಎಂದು ಎಲ್ಲರಿಗೂ ಒಳ್ಳೆಯ ಅಂಕ ನೀಡಿದರು ಇಂದ್ರಜಿತ್.

ಇದುವರೆಗೆ ಹದಿನೈದು ದಿನಗಳ ಚಿತ್ರೀಕರಣ ಮುಗಿದಿದ್ದು ಇನ್ನೂ 50–55 ದಿನಗಳ ಚಿತ್ರೀಕರಣ ಇದೆ. ಎರಡು ದಿನಗಳ ಆಸ್ಪತ್ರೆಯ ದೃಶ್ಯಗಳನ್ನು ಚಿತ್ರಿಸಿಕೊಂಡಾಗಿದೆ. ಮುಂಬೈ, ಮೈಸೂರು, ಚೆನ್ನೈಗಳಲ್ಲಿ ಚಿತ್ರೀಕರಣ ಮುಗಿಸಿ, ಹಾಡುಗಳನ್ನು ಚಿತ್ರೀಕರಿಸಲು ವಿದೇಶಗಳಿಗೂ ಚಿತ್ರತಂಡ ಹಾರಲಿದೆ. ಜೆಸ್ಸಿ ಗಿಫ್ಟ್ ಸಂಗೀತದಲ್ಲಿ ಈಗಾಗಲೇ ನಾಲ್ಕು ಹಾಡುಗಳ ಸಂಯೋಜನೆಯೂ ಮುಗಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT