ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ಕಾಯಕಕ್ಕೆ ನೆಲೆಯಾದವರು

Last Updated 3 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಕಾಲೇಜಿಗೆಂದು ತೆರಳುತ್ತಿದ್ದ ಯುವಕ ಹೆಚ್ಚು ಸಮಯ ಕಳೆಯುತ್ತಿದ್ದದ್ದು ಗ್ರಂಥಾಲಯದಲ್ಲಿ. ಪಠ್ಯಪುಸ್ತಕಕ್ಕಿಂತಲೂ ಅವರನ್ನು ಆವರಿಸುತ್ತಿದ್ದದ್ದು ಕಲೆ, ಸಂಸ್ಕೃತಿ ಕುರಿತ ಹೊತ್ತಿಗೆಗಳು. ಆ ಓದಿನ ತುಡಿತ ಸುಪ್ತವಾಗಿ ಅವರೊಳಗೆ ಸೃಜನಶೀಲ ಚಟುವಟಿಕೆಯ ಕಿಡಿಯನ್ನು ಹಚ್ಚಿತ್ತು. ಅದು ಸ್ಪಷ್ಟ ರೂಪ ಪಡೆದು ಅರಳಿದ್ದು ಅವರು ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾದ ಬಳಿಕ. ಈಗ ರಂಗಲೋಕದಲ್ಲಿ ಆಂಜನೇಯ ಅವರ ಹೆಸರು ಚಿರಪರಿಚಿತ.

ಆಂಜನೇಯ ಅವರ ಅಭಿರುಚಿಗಳನ್ನು ಗಮನಿಸಿದ ಇತಿಹಾಸದ ಆಸಕ್ತಿಯುಳ್ಳ ಬಿ.ವಿ. ಲಕ್ಷ್ಮಣ್ ಅವರು ಯಲಹಂಕ ನಾಡಪ್ರಭು ಕೆಂಪೇಗೌಡರ ಕುರಿತ ಚರಿತ್ರೆಯ ಅಧ್ಯಯನಕ್ಕೆ ತಮ್ಮೊಂದಿಗೆ ಕರೆದೊಯ್ಯತೊಡಗಿದರು. ಅಧ್ಯಯನದ ವೇಳೆ ಅರಿತುಕೊಂಡ ಕೆಂಪೇಗೌಡರ ಸೊಸೆ ಮಾಡಿದ ತ್ಯಾಗದ ಕಥೆಗಳು ಒಂದೆಡೆಯಾದರೆ, ಆಕೆಯ ನೆನಪಿಗಾಗಿ ಕೆಂಪೇಗೌಡ ಕೋರಮಂಗಲದಲ್ಲಿ ನಿರ್ಮಿಸಿದ್ದ ದೇವಸ್ಥಾನ, ಆಕೆಯ ಸಮಾಧಿ ಜಾಗಗಳ ಅತಿಕ್ರಮಣ ಅವರನ್ನು ಕಂಗೆಡಿಸಿತು. ಸಮಾಧಿಯಂತೂ ಚರಂಡಿ ನೀರಿನಲ್ಲಿ ಮುಳುಗಿ ಹೋಗಿತ್ತು. ಈ ಕುರಿತು ಸರ್ಕಾರದ ಗಮನ ಸೆಳೆಯಲು ನಿರಂತರವಾಗಿ ಪತ್ರಗಳನ್ನು ಬರೆದರು. ಆದರೆ ಪ್ರಯೋಜನವಾಗಲಿಲ್ಲ.

ಈ ಕುರಿತು ಆಳುವವರು ಮತ್ತು ಜನರ ಗಮನ ಸೆಳೆಯಲು ಅವರು ಕಂಡುಕೊಂಡ ಮಾರ್ಗ ನಾಟಕ. ಕೆಂಪೇಗೌಡರ ಬದುಕು, ಅವರ ಸೊಸೆಯ ತ್ಯಾಗವನ್ನು ಆಧರಿಸಿದ ‘ಬೆಂಗಳೂರು ಭಾಗ್ಯಲಕ್ಷ್ಮಿ’ ನಾಟಕ ರಚಿಸಿದ ಅವರು 1985ರಲ್ಲಿ ‘ನಾಟ್ಯ ಸರಸ್ವತಿ ಶಾಂತಲಾ ಕಲಾ ಸಂಘ’ ಸ್ಥಾಪಿಸಿ ಅದರ ಮೂಲಕ ನಾಟಕ ಪ್ರದರ್ಶನಕ್ಕೆ ಮುಂದಾದರು. ಯಾವ ನೆರವೂ ಇಲ್ಲದೆಯೇ ನಾಟಕ ಆಡಿಸುವುದು ಸುಲಭವಾಗಿರಲಿಲ್ಲ. ಸಾಮಾನ್ಯ ನೌಕರರಾಗಿದ್ದ ಅವರ ಬಳಿ ನಾಟಕ ಆಡಿಸುವಷ್ಟೂ ಹಣವಿರಲಿಲ್ಲ.

ಬೇರೆಯವರ ಬಳಿ ಕೈಚಾಚುವ ಮನಸ್ಸೂ ಅಲ್ಲ. ಅದಕ್ಕಾಗಿ ಪಿತ್ರಾರ್ಜಿತವಾಗಿ ಬಂದ ಸುಮಾರು 15 ಎಕರೆ ಜಮೀನು ಮಾರಾಟ ಮಾಡಿದರು. ಜನರಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾದರೂ, ಅಂದುಕೊಂಡ ಕಾರ್ಯ ನೆರವೇರಲಿಲ್ಲ. ಹೀಗಾಗಿ ಮತ್ತೆ ಮತ್ತೆ ನಾಟಕಗಳನ್ನು ಪ್ರದರ್ಶಿಸುತ್ತಲೇ ಹೋದರು. ಉಳಿದ ಆಸ್ತಿಪಾಸ್ತಿಗಳನ್ನೂ ಮಾರಿದರು. 25ನೇ ಪ್ರದರ್ಶನ ಕಂಡ ಸಂದರ್ಭದಲ್ಲಿ ಅವರ ಆಶಯವೂ ಈಡೇರಿತು.

ಕೋರಮಂಗಲದಿಂದ ಮೈಸೂರು ಬ್ಯಾಂಕ್‌ ವೃತ್ತದವರೆಗೆ ನಡೆಸಿದ ಪಂಜಿನ ಮೆರವಣಿಗೆ ಸರ್ಕಾರವನ್ನು ಎಚ್ಚರಿಸಿತು.  ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಚಿವ ರಾಮಚಂದ್ರೇಗೌಡ ಕೆಂಪೇಗೌಡರ ಸೊಸೆಯ ಸಮಾಧಿ ರಕ್ಷಣೆಗೆ ಮುಂದಾದರು. ಅದೀಗ ಬಿಬಿಎಂಪಿ ಸುಪರ್ದಿಯಲ್ಲಿ ಸುರಕ್ಷಿತವಾಗಿದೆ ಎಂಬ ನೆಮ್ಮದಿ ಆಂಜನೇಯ ಅವರದು.

ರಂಗಕರ್ಮಿಯಾಗಿ ದೊಡ್ಡ ಹೆಸರು ಮಾಡಿದ್ದರೂ, ಸಾವಿರಾರು ಹೊಸ ಕಲಾವಿದರನ್ನು ಸೃಷ್ಟಿಸಿದ್ದರೂ, ಆಂಜನೇಯ ಅವರದ್ದು ತೆರೆಮರೆಯಲ್ಲಿಯೇ ಇರಲು ಬಯಸುವ ವ್ಯಕ್ತಿತ್ವ. ತಮ್ಮ ಮುಖ್ಯ ಗುರಿ ಈಡೇರಿದ್ದರೂ ಆಂಜನೇಯ ಅವರು ಅಷ್ಟಕ್ಕೆ ತೃಪ್ತರಾಗಿರಲಿಲ್ಲ. ಏಕೆಂದರೆ ಅಷ್ಟರಲ್ಲಾಗಲೇ ರಂಗಭೂಮಿಯ ಹುಚ್ಚು ಅವರನ್ನು ಗಾಢವಾಗಿ ಆವರಿಸಿತ್ತು. ಈ ಮೂವತ್ತು ವರ್ಷದ ಅವಧಿಯಲ್ಲಿ ಈ ನಾಟಕ ಪ್ರದರ್ಶನ ಕಂಡಿರುವುದು ಬರೋಬ್ಬರಿ ನೂರು ಬಾರಿ. ಇದರೊಂದಿಗೇ ಐತಿಹಾಸಿಕ, ಸಾಮಾಜಿಕ, ಪೌರಾಣಿಕ, ಹಾಸ್ಯ ಪ್ರಕಾರಗಳಲ್ಲಿ ಸುಮಾರು 650 ನಾಟಕಗಳು ಸಾವಿರಾರು ಪ್ರದರ್ಶನಗಳನ್ನು ಕಂಡಿವೆ.

‘ನಾವು ಯಾವಾಗಲೂ ಹೊಸ ಪೀಳಿಗೆಯ ಕಲಾವಿದರನ್ನು ಹುಟ್ಟುಹಾಕಬೇಕು, ಆಗಲೇ ರಂಗಭೂಮಿ ಬೆಳೆಯುವುದು. ಹಳಬರಿಂದಲೇ ನಾಟಕಗಳನ್ನು ಆಡಿಸುತ್ತಿದ್ದರೆ ಹೊಸ ಕಲಾವಿದರಿಗೆ ಅವಕಾಶ ದೊರಕುವುದಿಲ್ಲ. ಹಳಬರು ಅನುಭವ ದೊರೆತಂತೆ ಮುಂದೆ ಸಾಗುತ್ತಾರೆ. ಹೊಸ ತಲೆಮಾರಿಗೆ ದಾರಿ ಸಿಗುತ್ತದೆ’ ಎನ್ನುವ ಅವರು ಜನರಲ್ಲಿ ನಾಟಕದ ಅಭಿರುಚಿ ಹೆಚ್ಚುತ್ತಿದೆ ಎನ್ನುತ್ತಾರೆ. ಇತಿಹಾಸ ಮತ್ತು ಪುರಾಣ ಆಧರಿಸಿ ಏಳೆಂಟು ನಾಟಕಗಳನ್ನು ರಚಿಸಿರುವ ಅವರು, ಅನೇಕ ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ನಿರ್ದೇಶನದಂತಹ ರಂಗದ ಹಿಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದೂ ಅವರಿಗೆ ಬಲು ಪ್ರೀತಿ.

ನಿಸ್ವಾರ್ಥ ಸೇವೆ
ಆಂಜನೇಯ ಕಲಾ ಆಸಕ್ತಿಗಿಂತಲೂ ಅವರ ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ಅಚ್ಚರಿ ಮೂಡಿಸುತ್ತದೆ. ಮೂರು ದಶಕಗಳಲ್ಲಿ ಇವರ ಗರಡಿಯಲ್ಲಿ ಸಾವಿರಕ್ಕೂ ಅಧಿಕ ಕಲಾವಿದರು ಸೃಷ್ಟಿಯಾಗಿದ್ದಾರೆ. ಈಗ ಅವರೆಲ್ಲರೂ ಬೇರ ಬೇರೆ ರಂಗತಂಡಗಳು, ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈಗಲೂ ಒಂದು ನಾಟಕದಲ್ಲಿ ಅಭಿನಯಿಸಿ ಎಂದು ಕರೆದರೆ ನೆಪ ಹೇಳದೆ ಬರುವ ಅನೇಕ ಶಿಷ್ಯಂದಿರು ಅವರಿಗಿದ್ದಾರೆ. ಅದಕ್ಕೆ ಕಾರಣ ಆಂಜನೇಯ ಕಲಾವಿದರನ್ನು ರೂಪಿಸಿದ ಪರಿ.

ಹೊಸ ಕಲಾವಿದರನ್ನು ಹುಟ್ಟುಹಾಕುವುದರಲ್ಲಿ ಅವರಿಗೆ ಎಲ್ಲಿಲ್ಲದ ಆಸಕ್ತಿ. ತಮ್ಮ ಮನೆಯ ಒಂದು ಕೆಳ ಅಂತಸ್ತನ್ನು ನಾಟಕ ಪರಿಕರಗಳನ್ನು ಇರಿಸಲು ಮತ್ತು ಕಲಾವಿದರಿಗಾಗಿಯೇ ಮೀಸಲಿಟ್ಟಿದ್ದಾರೆ. ಹೀಗೆ ತಮ್ಮ ಜೊತೆಯೇ ಇರುವ ಕಲಾವಿದರಿಗೆ ಅವರ ಪತ್ನಿ ಪ್ರಭಾವತಿ ತುಸುವೂ ಬೇಸರಿಸದೆ ಅಡುಗೆ ಮಾಡಿ ಬಡಿಸುತ್ತಾರೆ. ಇಲ್ಲಿಗೆ ಬರುವ ಕಲಾವಿದರೆಲ್ಲರೂ ಅವರ ಮನೆಯ ಸದಸ್ಯರೂ ಆಗಿಬಿಡುತ್ತಾರೆ. ಆಂಜನೇಯ ಅವರ ಮಕ್ಕಳಾದ ಧನ್ವಂತ್ರಿ ಮತ್ತು ಶಾಂತಲಾ ಕೂಡ ಅದಕ್ಕೆ ಕೈಜೋಡಿಸುತ್ತಾರೆ.

ಪತ್ನಿ ಪ್ರಭಾ ಕೆಲವು ವರ್ಷದ ಹಿಂದೆ ಹೃದಯ ಸಮಸ್ಯೆ ಸಂಬಂಧಿ ಚಿಕಿತ್ಸೆಗೆ ಒಳಗಾಗಿದ್ದರು. ಆಂಜನೇಯ ಅವರೂ ಸ್ಟೀರಾಯ್ಡ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಅವರಿಬ್ಬರಿಗೂ ಇದು ಕಷ್ಟ ಎಂದೆನಿಸಿಲ್ಲ. ‘ಕಲೆಯ ಸೇವೆಯಲ್ಲಿ ತೊಡಗಿದ್ದಾಗ ನೋವೆಲ್ಲವೂ ಮರೆಯುತ್ತದೆ’ ಎನ್ನುತ್ತಾರೆ.

ಸಂಕಷ್ಟದ ಬಾಲ್ಯ
ತಾವರೆಕೆರೆಯ ಮುದ್ದಯ್ಯನ ಪಾಳ್ಯದಲ್ಲಿ ಹುಟ್ಟಿದ ಆಂಜನೇಯ ಅವರ ಕುಟುಂಬದ ವೃತ್ತಿ ವ್ಯವಸಾಯ. ತಂದೆ ವೆಂಕಟಪ್ಪ, ತಾಯಿ ತಿಮ್ಮಕ್ಕ. ಜಮೀನು ಇದ್ದರೂ ಬಾಲ್ಯದಲ್ಲಿ ಕಷ್ಟದ ಬದುಕನ್ನು ನೋಡಿದವರು ಆಂಜನೇಯ. ಉಪವಾಸ ಮಲಗಿದ ದಿನಗಳನ್ನು ಅವರಿನ್ನೂ ಮರೆತಿಲ್ಲ. ಆ ಕಾರಣಕ್ಕೇ ತಮ್ಮಲ್ಲಿಗೆ ಬರುವ ಕಲಾವಿದರಿಗೆ ಈಗ ಉಚಿತವಾಗಿ ಊಟ ನೀಡುತ್ತಿರುವುದು.

ಬಿ.ಎ ಮುಗಿದ ಬಳಿಕ ಅಂಚೆ ಇಲಾಖೆಯಲ್ಲಿ ವೃತ್ತಿ ಗಿಟ್ಟಿಸಿಕೊಂಡ ಅವರು, ರಂಗಭೂಮಿಯಲ್ಲಿ ಸಾಕಷ್ಟು ಜ್ಞಾನ ಪಡೆದುಕೊಂಡ ಬಳಿಕವೂ ಅದೇ ಕುತೂಹಲದೊಂದಿಗೆ  ಆರೇಳು ವರ್ಷದ ಹಿಂದೆ ನಾಟಕದಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದರು. ಅದೊಂದು ಅನುಭವವಷ್ಟೇ, ಅದರಲ್ಲಿ ಕಲಿತದ್ದಕ್ಕಿಂತ ಹೆಚ್ಚಿನದ್ದನ್ನು ಅದರಲ್ಲಿ ತೊಡಗಿಸಿಕೊಳ್ಳುತ್ತಲೇ ಕಲಿತಿದ್ದೆ ಎನ್ನುತ್ತಾರೆ ಅವರು.

ವೃತ್ತಿಗೂ ಬದ್ಧ
ನಾಟಕರಂಗದಲ್ಲಿ ಇಷ್ಟು ಸಕ್ರಿಯವಾಗಿ ತೊಡಗಿಕೊಂಡಿದ್ದರೂ ಆಂಜನೇಯ ಎಂದಿಗೂ ವೃತ್ತಿಯಲ್ಲಿ ಆಗುವ ಸಣ್ಣ ಲೋಪವನ್ನೂ ಸಹಿಸಲಾರರು. ಅದರಲ್ಲಿಯೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಡೆಸದಿದ್ದರೆ ಅವರಿಗೆ ಸಮಾಧಾನ ಸಿಗುವುದಿಲ್ಲ. ತಮ್ಮ ಕೆಳಗೆ ಹತ್ತಾರು ಜನರು ಕೆಲಸ ಮಾಡುವುದರಿಂದ ಜವಾಬ್ದಾರಿಯೂ ಹೆಚ್ಚು. ಒಂದು ದಿನ ರಜೆ ಹಾಕಿದರೆ ತೊಂದರೆಯಾಗುತ್ತದೆ ಎಂದು ರಜೆ ತೆಗೆದುಕೊಳ್ಳಲೂ ಅವರು ಯೋಚಿಸುತ್ತಾರೆ.

ಪ್ರತಿ ಶನಿವಾರ ಇಡೀ ಕಚೇರಿಯನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಅವರದೇ ಮೇಲ್ವಿಚಾರಣೆ. ಆದರೆ ತಾವು ಕೂರುವ ಜಾಗವನ್ನು ಸ್ವತಃ ತಾವೇ ಸ್ವಚ್ಛಗೊಳಿಸಬೇಕು, ಬೇರೊಬ್ಬರು ಸ್ವಚ್ಛಗೊಳಿಸಬಾರದು ಎನ್ನುವ ನೀತಿ ಅವರದು. ಕಚೇರಿಯಲ್ಲಿ ಅನೇಕರಿಗೂ ಕಲೆಯ ಆಸಕ್ತಿ ಅಂಟಿಸಿದ್ದಾರೆ. ಮನೆಯ ಊಟವನ್ನು ಅಗತ್ಯಕ್ಕಿಂತ ಹೆಚ್ಚೇ ತೆಗೆದುಕೊಂಡು ಹೋಗುವ ಅವರು, ಅಲ್ಲಿಯೂ ಹಂಚಿ ತಿನ್ನುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ.

ಅವಧಿಗೂ ಮೀರಿ ಹೆಚ್ಚಿನ ಸಮಯವನ್ನು ಅವರು ಕಚೇರಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದಕ್ಕೆ ಅವರು ನೀಡುವ ಕಾರಣ, ‘ನಾವು ಮಾಡುವ ಕೆಲಸಕ್ಕೆ ಸರ್ಕಾರ ಸಂಬಳ ನೀಡುತ್ತಿದೆ. ಅಲ್ಲದೆ ಪತ್ನಿ ಮತ್ತು ನನ್ನ ಚಿಕಿತ್ಸೆಗೂ ನೆರವು ನೀಡಿದೆ. ಅದು ವೇತನಕ್ಕೆ ಹೊರತಾದದ್ದು. ಅದನ್ನು ಸರಿದೂಗಿಸಬೇಕಲ್ಲವೇ?’

ಕನಸು ಇನ್ನೂ ದೊಡ್ಡದು
ನಾಟಕಕ್ಕಾಗಿ ಜಮೀನು ಮಾರಿದಾಗ ತಮಾಷೆ ಮಾಡಿದವರು, ಪ್ರಶ್ನಿಸಿದವರು ಸಾಕಷ್ಟು ಮಂದಿ ಇದ್ದರು. ಅವರಿಗೆಲ್ಲಾ ತಮ್ಮ ಪ್ರಾಮಾಣಿಕ ಚಟುವಟಿಕೆಯಿಂದಲೇ ಉತ್ತರ ನೀಡಿದವರು ಆಂಜನೇಯ. ಮನೆಯವರ ಬೆಂಬಲ ಜೊತೆಯಲ್ಲಿದ್ದರಿಂದ ಅವರಿಗೆ ಅದು ಸವಾಲು ಎನಿಸಲಿಲ್ಲ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೆರವು ದೊರಕುತ್ತಿರುವುದರಿಂದ ಅವರ ಮೇಲಿನ ಆರ್ಥಿಕ ಹೊರೆ ತಗ್ಗಿದೆ. ಈಗಲೂ ತಮ್ಮ ಸಂಬಳದ ಒಂದು ಭಾಗವನ್ನು ನಾಟಕಗಳಿಗೆ ಮೀಸಲಿಡುತ್ತಿದ್ದಾರೆ ಅವರು. ಹಾಗೆ ದುಡಿದ ಹಣವನ್ನು ಕಲೆಗೆ ವಿನಿಯೋಗಿಸುವುದರಲ್ಲಿ ಅವರಿಗೆ ಕೊಂಚವೂ ಬೇಸರವಿಲ್ಲ. ಈ ಕೆಲಸದಲ್ಲಿ ಖುಷಿ, ನೆಮ್ಮದಿ ಎರಡೂ ದೊರಕುತ್ತಿದೆ ಎಂದು ಸಂಕೋಚದಿಂದಲೇ ನುಡಿಯುತ್ತಾರೆ.

ನಾಟಕಗಳಲ್ಲಿ ಇನ್ನೂ ಹಲವು ಪ್ರಯೋಗಗಳನ್ನು ನಡೆಸುವ ತುಡಿತ ಅವರದು. ಊರಿನಲ್ಲಿ ತಮ್ಮದೆಂದು ಉಳಿದುಕೊಂಡಿರುವ ಪುಟ್ಟ ಜಾಗವನ್ನೂ ರಂಗಮಂದಿರ ಕಟ್ಟಲು ಬಳಸುವ ಇರಾದೆ ಅವರದು. ಇದುವರೆಗೆ ಮಾರಿದ ಜಮೀನಿನ ಅಂದಾಜು ಮೌಲ್ಯವನ್ನು ಹೇಳಿಕೊಳ್ಳಲೂ ಅವರು ಸಂಕೋಚ ಪಡುತ್ತಾರೆ. ಈಗಿನ ಲೆಕ್ಕಾಚಾರದಲ್ಲಿ ಅದು ಕೋಟ್ಯಂತರ ರೂಪಾಯಿ ಆಗಬಹುದು ಎಂದು ನಗುತ್ತಾರೆ. ಹೀಗೆ ಜಮೀನು ಮಾರಾಟ ಮಾಡಿ ಬಂದ ಹಣವನ್ನೆಲ್ಲಾ ನಾಟಕ ಪರಿಕರ, ಕಲಾವಿದರ ಭತ್ಯೆ, ಪ್ರದರ್ಶನಗಳಿಗೆಂದೇ ಸಂಪೂರ್ಣವಾಗಿ ಬಳಸಿದ್ದಾರೆ ಅವರು.

ಸಾಮಾಜಿಕ ಮೌಲ್ಯ
ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಅಥವಾ ಹಾಸ್ಯ ಯಾವ ನಾಟಕವೇ ಇರಲಿ, ಅದರಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಇರಲೇಬೇಕು ಎಂಬ ನಿಯಮವನ್ನು ಅವರು ಹಾಕಿಕೊಂಡಿದ್ದಾರೆ. ಪ್ರತಿ ನಾಟಕದ ಅಂತ್ಯದಲ್ಲಿಯೂ ನೀತಿ ಬೋಧನೆಯ ಮಾತುಗಳೂ ಇರುತ್ತದೆ. ಇದುವರೆನ ಯಾವ ನಾಟಕದಲ್ಲಿಯೂ ಒಂದೂ ದ್ವಂದ್ವಾರ್ಥದ ಸಂಭಾಷಣೆಯನ್ನು ಬಳಸಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಆಂಜನೇಯ. ಉದ್ಯೋಗದಿಂದ ನಿವೃತ್ತಿ ಹೊಂದಲು ಇನ್ನು ಎರಡು ವರ್ಷವಿದೆ. ನಿವೃತ್ತಿ ಬಳಿಕ ಸಂಪೂರ್ಣ ಸಮಯವನ್ನು ನಾಟಕಕ್ಕೇ ವಿನಿಯೋಗಿಸುತ್ತೇನೆ ಎನ್ನುತ್ತಾರೆ ಆಂಜನೇಯ.    
*
ಪ್ರಮುಖ ನಾಟಕ, ಪ್ರಶಸ್ತಿಗಳು
‘ಕೆಂಪೇಗೌಡ’, ‘ಸಾಮ್ರಾಟ ಶ್ರೀಪುರುಷ’, ‘ಕಾನಿನ’, ‘ಸೇವಂತಿ ಪ್ರಸಂಗ’, ‘ಸೀಕರ್ಣೆ ಸಾವಿತ್ರಿ’, ‘ವಿಕಟ ವಿಲಾಸ’, ‘ಹರಿಕಥೆ’ ಮುಂತಾದ 650ಕ್ಕೂ ಅಧಿಕ ನಾಟಕಗಳು ಇವರ ಕಲಾತಂಡದಿಂದ ಪ್ರದರ್ಶನಗೊಂಡಿವೆ. ‘ಕೆಂಪೇಗೌಡ ಪ್ರಶಸ್ತಿ’, ‘ಶಂಕರಗೌಡ ಪ್ರಶಸ್ತಿ’, ‘ಮಾಚಿದೇವ ಪ್ರಶಸ್ತಿ’, ‘ರಂಗರತ್ನ ಪ್ರಶಸ್ತಿ’ ಮುಂತಾದ ಹತ್ತಾರು ಪ್ರಶಸ್ತಿಗಳು ಇವರ ಅವಿರತ ಸೇವೆಗೆ ದೊರೆತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT