ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತಹೀನತೆಗೆ ಚಿಕಿತ್ಸೆ: ವೈದ್ಯರ ಜತೆ ಮೋದಿ ಚರ್ಚೆ

Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕ್ಯೋಟೊ (ಪಿಟಿಐ): ಭಾರತದ ಬುಡ­ಕಟ್ಟು ಜನಾಂಗದವರನ್ನು ಹೆಚ್ಚಾಗಿ ಬಾಧಿ­ಸುವ ರಕ್ತಹೀನತೆಗೆ (ಸಿಕ್ಲ್ ಸೆಲ್‌ ಅನೀ­ಮಿಯಾ) ಪರಿಣಾಮಕಾರಿ ಚಿಕಿತ್ಸೆ ಕಂಡು­ಹಿಡಿಯುವ ದಿಸೆಯಲ್ಲಿ ಸಹಕಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಜ್ಞರೊಂದಿಗೆ ಮಾತುಕತೆ ನಡೆಸಿದರು.

ಮೋದಿ ಅವರು ಈ ಕುರಿತು ವೈದ್ಯ­ಕೀಯ ನೊಬೆಲ್‌ ಪುರಸ್ಕೃತ ಹಾಗೂ ಕ್ಯೋಟೊ ವಿಶ್ವವಿದ್ಯಾಲಯದ ನಿರ್ದೇ­ಶಕ ಎಸ್‌.ಯಮನಾಕ ಅವರೊಂ­ದಿಗೆ ಚರ್ಚಿಸಿದರು. ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ಕಾಲ­ದಿಂದಲೂ ಈ ಕಾಯಿಲೆಗೆ ಪರಿಣಾಮ­ಕಾರಿ ಚಿಕಿತ್ಸೆ ಅಭಿವೃದ್ಧಿ­ಪಡಿ­ಸುವ ಸಾಧ್ಯತೆ ಕುರಿತು ಚಿಂತಿಸುತ್ತಿದ್ದಾರೆ.

ಇಲ್ಲಿನ ಆಕರ ಕೋಶ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಈ ಕುರಿತು ಚರ್ಚಿಸಿದರು. ‘ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಬೇಕೆಂಬ ಆಶಯ ಹೊಂದಿರುವ ನನಗೆ ಸಾಂಸ್ಕೃತಿಕ ಪರಂ­ಪರೆ ಮತ್ತು ವೈಜ್ಞಾನಿಕ ಪರಂಪರೆ­ಗಳನ್ನು ಸಮನ್ವಯಗೊಳಿಸುವ ಇರಾದೆ ಇದೆ. ಕ್ಯೋಟೊ ನಗರವು ಸಾಂಸ್ಕೃತಿಕ ಮತ್ತು ವೈಜ್ಞಾನಿಕತೆ ಹದವಾಗಿ ಮಿಳಿತ­ವಾಗಿರುವ ನಗರವಾಗಿದೆ. ನನ್ನ ಗುರಿಯ ಹಾದಿಯಲ್ಲಿ ಮುನ್ನಡೆಯಲು ಇಲ್ಲಿಗೆ ನೀಡಿರುವ ಭೇಟಿಯು ಸದಾ ಪ್ರೇರಣೆ ನೀಡಲಿದೆ’ ಎಂದು   ಮೋದಿ ಇದೇ ವೇಳೆ ಹೇಳಿದರು.

ದೇಹದಲ್ಲಿನ ಕೆಂಪು ರಕ್ತ ಕಣಗಳ ನೈಜ ಆಕಾರವು ತಟ್ಟೆಯಾ ಕಾರದಲ್ಲಿ­ರುತ್ತದೆ. ಆದರೆ ಈ ಕಣಗಳು ಕುಡು­ಗೋಲಿನ ಆಕಾರಕ್ಕೆ ಬದಲಾಗಿ ಉಂಟಾ­­ಗುವ ತೀವ್ರ ದೈಹಿಕ ತೊಂದರೆಗಳನ್ನು ಸಿಕ್ಲ್‌ ಸೆಲ್‌ ಅನೀ­ಮಿಯಾ (ಒಂದು ಬಗೆಯ ರಕ್ತಹೀನತೆ) ಎನ್ನಲಾಗುತ್ತದೆ.

ಮೋದಿಗೆ ಪ್ಯಾತ್ಯಕ್ಷಿಕೆ
ಕ್ಯೋಟೊ ನಗರದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಹೇಗೆ ಅದನ್ನು ಆಧುನಿಕ ಸುಸಜ್ಜಿತ ನಗರ­ವ­ನ್ನಾಗಿ ಪುನರ್‌ನಿರ್ಮಾಣ ಮಾಡಿದ ರೀತಿಯ ಬಗ್ಗೆ ನರೇಂದ್ರ ಮೋದಿ ಅವರಿಗೆ ಕ್ಯೋಟೊ ಮೇಯರ್‌ ದಾಯಿ­ಸಕಾ ಕಡೊಕಾವಾ ಅವರು ಪ್ರಾತ್ಯಕ್ಷಿಕೆ­ಯೊಂದಿಗೆ ವಿವರಿಸಿದರು.

ನಗರದ ನಾಗರಿಕರು ಸ್ವಚ್ಛತಾ ಕಾರ್ಯ­­ದಲ್ಲಿ ಪಾಲ್ಗೊಂಡ ಬಗ್ಗೆಯೂ 40 ನಿಮಿಷಗಳ ಈ ಪ್ರಾತ್ಯಕ್ಷಿಕೆಯ ವೇಳೆ ಕಡೊ­ಕಾವಾ ತಿಳಿಸಿದರು. ಈ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳು ಕೂಡ ಭಾಗಿ­ಯಾಗಿ ನಗರದ ತ್ಯಾಜ್ಯ ಸಂಗ್ರಹ ಪ್ರಮಾಣ ಶೇ 40ರಷ್ಟು ಇಳಿಯಲು ಕಾರಣರಾದರು ಎಂಬುದನ್ನು ಗಮನಕ್ಕೆ ತಂದರು.

ವಾರಾಣಸಿ ನಗರವನ್ನು ಸುಸಜ್ಜಿತ ನಗರ­ವನ್ನಾಗಿಸಲು (ಸ್ಮಾರ್ಟ್‌ ಸಿಟಿ) ಎರಡು ರಾಷ್ಟ್ರಗಳ ನಡುವೆ ಒಪ್ಪಂದ ಏರ್ಪಟ್ಟ ಮರುದಿನವೇ ಈ ಪ್ರಾತ್ಯಕ್ಷಿಕೆ ತೋರಿಸಲಾಗಿದೆ. ಈ ಸಂದರ್ಭದಲ್ಲಿ ಮೋದಿ ಅವರು ಕಡೊಕಾವಾ ಅವರಿಗೆ ಪುಸ್ತಕ­ವೊಂದನ್ನು ಉಡುಗೊರೆಯಾಗಿ ನೀಡಿದರು. ‘ನಾನು ಸಂಸತ್ತಿ­ನಲ್ಲಿ ವಾರಾಣಸಿಯನ್ನು ಪ್ರತಿನಿಧಿ­ಸು­ತ್ತೇನೆ. ಕ್ಯೋಟೊ ನಗರವನ್ನು ಅಭಿ­ವೃದ್ಧಿ­ಪಡಿಸಿದ ಬಗೆ­ಯನ್ನು ಇಲ್ಲಿ ಅರಿತಿ­ದ್ದೇನೆ’ ಎಂಬ ಒಕ್ಕಣೆಯನ್ನು ಅದ­ರಲ್ಲಿ ಅವರು ಬರೆದರು. ಮೋದಿ ಅವರು ಮೇಯರ್‌ ಅವರಿಗೆ ವಾರಾ­ಣಸಿ ನಗರದ ಡಿಜಿಟಲ್‌ ನಕ್ಷೆ­ಯೊಂದನ್ನು ಕೂಡ ನೀಡಿದರು.

ದೇವಾಲಯಗಳು ಮತ್ತು ಬೌದ್ಧ­ವಿಹಾರ­ಗಳಿಗೆ ಹೆಸರಾದ ಕ್ಯೋಟೊ ನಗರದಲ್ಲಿ ಇಂತಹ ಸುಮಾರು 2000 ಪವಿತ್ರ ತಾಣಗಳಿವೆ. ಟೋಕಿಯೊ ಜಪಾನ್‌ನ ರಾಜಧಾನಿ­ಯಾ­ಗು­ವುದಕ್ಕೆ ಮುನ್ನ ಒಂದು ಸಾವಿರ ವರ್ಷ­ಗಳಿಗೂ ಹೆಚ್ಚು ಕಾಲ ಇದು ಆ ದೇಶದ ರಾಜಧಾನಿಯಾಗಿತ್ತು.

ಶಿಂಝೊ ಕಾತರ: ಜಪಾನ್‌ ಮತ್ತು ಭಾರ­ತದ ಚಾರಿತ್ರಿಕ ಬಾಂಧವ್ಯವನ್ನು ಕೊಂಡಾ­ಡಿದ ಜಪಾನ್‌ ಪ್ರಧಾನಿ ಶಿಂಝೊ ಅಬೆ ಅವರು, ನರೇಂದ್ರ ಮೋದಿ ಅವ­ರೊಂದಿಗೆ ಸೋಮವಾರ ನಡೆ­ಯ­ಲಿರುವ ಶೃಂಗಸಭೆಗೆ ಕಾತರ­ದಿಂದ ಕಾಯು­ತ್ತಿರು­ವುದಾಗಿ ಹೇಳಿದ್ದಾರೆ. ಕ್ಯೋಟೊ ನಗ­ರದ ಕೆಲ ಬೌದ್ಧ­ವಿಹಾರಗಳಿಗೆ ಭೇಟಿ ನೀಡಿದ ನಂತರ ಶಿಂಝೊ ಸಾಮಾ­ಜಿಕ ಜಾಲ­ತಾಣದಲ್ಲಿ ಟ್ವೀಟ್‌ ಮಾಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT