ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಘುನಾಥರ ‘ಆರ್ಟ್‌ ಆಫ್‌ ಟ್ರಾನ್ಸ್‌ಲೇಷನ್‌’

ಹಳತು ಹೊನ್ನು
Last Updated 28 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಆರ್. ರಘುನಾಥ ರಾವ್ ಅವರ The Art of Translation ಇಂಗ್ಲಿಷ್ ಕೃತಿ ಮೊದಲನೆಯ ಬಾರಿಗೆ 1910ರಲ್ಲಿ ಪ್ರಕಟವಾಯಿತು. ಇದರ ಅಂದಿನ ಬೆಲೆ ಒಂದು ರುಪಾಯಿ. ಅಷ್ಟಮ ಡೆಮಿ ಆಕಾರದ 175 ಪುಟಗಳ ಈ ಕೃತಿಯನ್ನು ಮೈಸೂರಿನ ಜಿ.ಟಿ.ಎ ಪ್ರಿಂಟಿಂಗ್ ವರ್ಕ್ಸ್ ಪರವಾಗಿ ಜೆ.ಎಮ್. ಮೈಸೂರುವಾಲಾ ಮುದ್ರಿಸಿರುತ್ತಾರೆ. ರಘುನಾಥ ರಾವ್ ಅವರ ಇನ್ನುಳಿದ ಕೃತಿಗಳೆಂದರೆ– ‘ಕರ್ನಾಟಕ ವ್ಯಾಕರಣೋಪನ್ಯಾಸ ಮಂಜರಿ’ (1894), ‘ನಿಯೋಗವಿಧಿಯ ವಿಚಾರ’, ‘ನೀತಿ ರತ್ನಾಕರ’ (ಈಸೋಪ್ ನೀತಿಕತೆಗಳು-1883), ‘ಭೂವಿವರಣೆ’, ‘ಪ್ರಾಣಿಶಾಸ್ತ್ರ’, ‘ಆರೋಗ್ಯ ಮಾರ್ಗದರ್ಶಿನಿ’ (1889), ‘ಪ್ರೌಢ ವಿವಾಹ’, ‘ವಿವಾಹದ ಮುಖ್ಯತಮಕರ್ಮವಿಚಾರ’, ‘ಸನಾತನ ಧರ್ಮದೀಪಿಕೆ’ (1908), ‘ಸನಾತನ ಧರ್ಮ ಪ್ರಶ್ನೋತ್ತರ ಮಾಲೆ’, ‘ಸ್ತ್ರೀಸಂಸ್ಕಾರ ಪ್ರಕಾಶಿಕೆ’ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸದರಿ ಕೃತಿಯ ಜೊತೆಗೆ ‘ದಿ ಆರ್ಯನ್ ಮೇರೇಜ್’.

ಇಷ್ಟೇ ಅಲ್ಲದೆ ಅಂದಿನ ಪತ್ರಿಕೆಗಳಲ್ಲಿ ತಮ್ಮ ಸಮಕಾಲೀನ ಸಂದರ್ಭದ ಸಾಹಿತ್ಯ ಕೃತಿಗಳನ್ನು ಕುರಿತು ವಿಮರ್ಶಾ ಲೇಖನಗಳನ್ನೂ ಬರೆದಿರುತ್ತಾರೆ. ಅಂತಹ ಲೇಖನಗಳಲ್ಲಿ ರಘುನಾಥ ರಾವ್ ಅವರು ರೈಸ್, ಕಿಟ್ಟೆಲ್ ಅವರುಗಳ ಕೃತಿಗಳ ಗುಣಗ್ರಹಣದ ಜೊತೆಗೆ ನಿರ್ಭೀತ ಮನೋಭಾವದಿಂದ ಅವುಗಳ ದೋಷಗಳನ್ನು ಕೂಡ ನಿರ್ದಾಕ್ಷಿಣ್ಯವಾಗಿ ಮತ್ತು ಮಾರ್ಮಿಕವಾಗಿ ಎತ್ತಿ ತೋರಿಸಲು ಹಿಂಜರಿದಿಲ್ಲ.

ರಘುನಾಥ ರಾಯರು (1860–1918) ಬೆಂಗಳೂರಿನ ದಿವ್ಯ ಜ್ಞಾನ ಸಮಾಜದ (ದಿ ಥಿಯಸೊಫಿಚಲ್ ಸೊಸೈಟಿ) ಕ್ರಿಯಾಶೀಲ ಸದಸ್ಯರಾಗಿದ್ದರು. ಅವರ ಮೇಲೆ ಆನೀ ಬೆಸೆಂಟ್‌ರ ಪ್ರಭಾವವಿತ್ತು. 1916–1918ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದ ರಾಯರು ಮದರಾಸು ವಿಶ್ವವಿದ್ಯಾಲಯದ ಪರೀಕ್ಷಕರಾಗಿಯೂ ಕೆಲಸ ಮಾಡಿದ್ದರು. ಇಂಗ್ಲಿಷ್ ಭಾಷಾ ಸಾಹಿತ್ಯ, ಚರಿತ್ರೆ, ಭೂವಿವರಣೆ, ಭಾಷಾಂತರೀಕರಣ ಈ ವಿಷಯಗಳನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜು ಹಾಗೂ ಸೆಂಟ್ರಲ್ ಹೈಸ್ಕೂಲು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದರು. ಅವರ ಅಧ್ಯಾಪನ, ಭಾಷಾಂತರಗಳನ್ನು ಕುರಿತು ಡಿ.ವಿ.ಜಿ ಹೇಳಿರುವುದು ಹೀಗೆ:

‘‘ಪ್ರವಚನ ವಿಧಾನದಲ್ಲಿ ಅವರು ತಮ್ಮ ಸ್ವಂತದ್ದನ್ನಾಗಿ ಮಾಡಿಕೊಂಡಿದ್ದ ವಾಕ್ಯಪರಿಷ್ಕಾರ ಪದ್ಧತಿಯನ್ನು ಅವರ ಶಿಷ್ಯರನೇಕರು ಪದೇಪದೇ ನೆನೆಸಿಕೊಳ್ಳುತ್ತಿದ್ದುದನ್ನು ನಾನು ಕೇಳಿದ್ದೇನೆ. ಅವರು ಯಾವ ಸೊಗಸಾದ ಇಂಗ್ಲಿಷ್ ವಾಕ್ಯವನ್ನೋದಿದರೂ ಕೂಡಲೇ ಅದನ್ನು ಕನ್ನಡಕ್ಕೆ ಪರಿವರ್ತನೆ ಮಾಡಿಸುವ ಪದ್ಧತಿಯನ್ನಿಟ್ಟುಕೊಂಡಿದ್ದರು. ಅವರು ಕೊಟ್ಟ ವಾಕ್ಯಕ್ಕೆ ವಿದ್ಯಾರ್ಥಿಗಳು ನೀಡಿದ ತರ್ಜುಮೆಗಳನ್ನು ಒಂದೊಂದನ್ನಾಗಿ ಓದಿ ವಿಮರ್ಶೆ ಮಾಡಿ- ‘ಮೂಲವಾಕ್ಯದ ‘ಸ್ಪಿರಿಟ್’ (spirit) ಬರಲಿಲ್ಲವಯ್ಯ. ಸ್ಪಿರಿಟ್ ಬರಲಿಲ್ಲ’ ಎನ್ನುತ್ತಿದ್ದರಂತೆ.

ಮಾತಿಗೆ ಪಡಿ ಮಾತನ್ನಿಟ್ಟು ಮಾಡಿದ ತರ್ಜುಮೆ ಅವರಿಗೆ ಒಪ್ಪದು. ಮೂಲದ ಅರ್ಥ ಸ್ಥೂಲವಾಗಿ ಹೊರಟರೂ ಅವರಿಗೆ ಸಾಲದು. ಕನ್ನಡದ ಒಳ್ಳೆಯ ವಾಕ್ಯವನ್ನು ವಿದ್ಯಾರ್ಥಿಗಳಿಗೆ ಕೊಟ್ಟು ಅದನ್ನು ಇಂಗ್ಲಿಷಿಗೆ ತರ್ಜುಮೆ ಮಾಡ ಹೇಳಿ, ಅದನ್ನೂ ಹೀಗೆಯೇ ವಿಮರ್ಶೆಗೆ ಒಳಪಡಿಸುತ್ತಿದ್ದರು. ಪದಕ್ಕೆ ಪದವನ್ನಿಡುವುದು ದೊಡ್ಡದಲ್ಲ, ಮೂಲದ ಸ್ಪಿರಿಟ್– ಅದರ ಭಾವಧೋರಣೆ, ಅದರ ಕಾವು ಅದರ ಜೋರು– ನಮ್ಮ ಭಾಷಾಂತರದಲ್ಲಿ ಕಾಣಬೇಕು.

ಗಂಡರ ಗಂಡ= Man among men; ಬಿರುದಂತೆಂಬರ ಗಂಡ= Vanquisher of those who challenge his title- ಇದು ರಘುನಾಥ ರಾಯರ ಸರಣಿ. ಇಂಗ್ಲಿಷಿನಿಂದ ಕನ್ನಡಕ್ಕೆ ಪರಿವರ್ತನೆ ಮಾಡಿದಾಗಲೂ ಹಾಗೆಯೇ: Bloemfontein= ಕುಸುಮಪುರಿ, Roof of the world= ಭುವನಭವನದ ಕರುಮಾಡ ಇಂಥ ವೀರ್ಯವತ್ತಾದ ಪದಪ್ರಯೋಗಗಳು ಅವರ ಬರವಣಿಗೆಯಲ್ಲಿ ಹೇರಳವಾಗಿ ಸಿಕ್ಕುತ್ತವೆ. ಸಮಾಜಸಂಸ್ಕಾರ ವಿಷಯದಲ್ಲಿಯೂ ಅವರ ಆಸಕ್ತಿ ತೀವ್ರವಾಗಿತ್ತು... ನಿಯೋಗ ವಿಧಿಯ ವಿಚಾರವೆಂಬ ಗ್ರಂಥದಲ್ಲಿ ಸ್ತ್ರೀಪುನರ್ವಿವಾಹದ ಪ್ರಶ್ನೆಯನ್ನು ಅವರು ಸಮಾಲೋಚನೆ ಮಾಡಿದ್ದರು. ಇದು ರಾಯರ ಉದಾರೀ ಚಿಕಿತ್ಸಕ ಮನೋಧರ್ಮಕ್ಕೆ ನಿದರ್ಶನದಂತಿದೆ’’.

ಭಾಷಾಂತರ ಕಲೆ ಮೂವತ್ತು ವರ್ಷಗಳಿಗೂ ಮೀರಿ ತಮಗೆ ನೆಚ್ಚಿನ ಆಸಕ್ತಿಯ ವಿಷಯವಾಗಿತ್ತೆಂದೂ, 1884ರಲ್ಲಿ ತಾವು ಅನುವಾದಿಸಿ ಪ್ರಕಟಿಸಿದ ‘ನೀತಿರತ್ನಾಕರ’ ಹೆಸರಿನ ಈಸೋಪ್ ನೀತಿಕತೆಗಳ ರಚನೆಗೂ ಹಿಂದೆ ಭಾಷಾಂತರ ಕಲೆಯನ್ನು ಕುರಿತು ಯಾವ ಕೃತಿಗಳೂ ಇಲ್ಲದ್ದನ್ನು ಮನಗಂಡು ತಾವೇ ಭಾಷಾಂತರ ಕಲೆಯನ್ನು ಕುರಿತ ತಾತ್ವಿಕ ಹಾಗೂ ಪ್ರಾಯೋಗಿಕ ಪಾಠಗಳನ್ನೊಳಗೊಂಡ ಪುಸ್ತಕ ರಚಿಸಬೇಕೆಂದು ಸಂಕಲ್ಪಿಸಿ, ಆ ಹಿನ್ನೆಲೆಯಲ್ಲಿ ಈ ಕೃತಿರಚನೆ ಆಯಿತೆಂದೂ ಲೇಖಕರು ಕೃತಿಯ ಮುನ್ನುಡಿಯಲ್ಲಿ ಹೇಳಿರುತ್ತಾರೆ. ದಸರಾ ವಸ್ತುಪ್ರದರ್ಶನದ ಸಂದರ್ಭದಲ್ಲಿ ಅಂದಿನ ವಿದ್ಯಾ ಇಲಾಖೆಯ ಶಿಕ್ಷಣಾಧಿಕಾರಿ ಶ್ರೀ ಬಾಬಾ ಅವರ ಆಹ್ವಾನದ ಮೇರೆಗೆ ಭಾಷಾಂತರ ಕಲೆಯನ್ನು ಕುರಿತು ನೀಡಿದ ಇಂಗ್ಲಿಷ್ ಉಪನ್ಯಾಸವನ್ನೇ ವಿಸ್ತರಿಸಿ ಈ ಪುಸ್ತಕ ರೂಪುಗೊಂಡಿತೆನ್ನುವ ವಿಷಯವನ್ನೂ ಹೇಳಿದ್ದಾರೆ.

ರಘುನಾಥ ರಾಯರು ಎರಡು ಅನುವಾದಗಳನ್ನು ತಮ್ಮ ಮುನ್ನುಡಿಯಲ್ಲಿ ಅತ್ಯುತ್ತಮವಾದವುಗಳೆಂದು ನಿರ್ದೇಶಿಸಿರುತ್ತಾರೆ. ಅವುಗಳೇ ಬಾಣಭಟ್ಟನ ಸಂಸ್ಕೃತ ಕಾದಂಬರಿಯ ನಾಗವರ್ಮನ ಕನ್ನಡಾನುವಾದ ‘ಕರ್ನಾಟಕ ಕಾದಂಬರೀ’ ಹಾಗೂ ಕಾಳಿದಾಸನ ಅಭಿಜ್ಞಾನ ಶಾಕುಂತಲದ ಬಸವಪ್ಪ ಶಾಸ್ತ್ರೀ ಅವರ ಕನ್ನಡಾನುವಾದ ‘ಕರ್ನಾಟಕ ಶಾಕುಂತಲ’ ನಾಟಕಂ.

ಪ್ರಸ್ತುತ ಕೃತಿಯ ಎಂಟು ಅಧ್ಯಾಯಗಳು– Meanings of Translation, A definition of Translation, Translation as a Fine Art, Method, Some necessary Cautions, Adaption, Rules of Guidance, A Test of Translation. Conclusion. ಸಂಸ್ಕೃತದಿಂದ ಕನ್ನಡ/ದ್ರಾವಿಡ ಭಾಷೆಯೊಂದಕ್ಕೆ, ಸಂಸ್ಕೃತದಿಂದ ಇಂಗ್ಲಿಷಿಗೆ, ಇಂಗ್ಲಿಷಿನಿಂದ ಕನ್ನಡ/ದ್ರಾವಿಡಭಾಷೆಯೊಂದಕ್ಕೆ ಹಾಗೂ ಕನ್ನಡದಿಂದ/ದ್ರಾವಿಡ ಭಾಷೆಯೊಂದರಿಂದ ಇಂಗ್ಲಿಷ್ ಭಾಷೆಗೆ ಅನುವಾದ ಮಾಡುವ ಲೇಖಕರನ್ನು ಗಮನದಲ್ಲಿರಿಸಿಕೊಂಡು ಈ ಕೃತಿರಚನೆ ಮಾಡಲಾಗಿದೆ. ಕಾಳಿದಾಸನ ಸಂಸ್ಕೃತದ ಅಭಿಜ್ಞಾನ ಶಾಕುಂತಳ ನಾಟಕದ ಮೊದಲನೆಯ ಶ್ಲೋಕದ ಸರ್ ಎಮ್.ಎಮ್. ವಿಲಿಯಮ್ಸ್‌ರ ಇಂಗ್ಲಿಷಿನ ಅನುವಾದ ಹಾಗೂ ಬಸವಪ್ಪ ಶಾಸ್ತಿಗಳ ಕನ್ನಡ ಅನುವಾದವನ್ನು ಹೋಲಿಸಿ ಕನ್ನಡ ಅನುವಾದವನ್ನು ಕುರಿತು ‘This Kannada translation is in our opinion very much better than the English one’ ಎಂದಿದ್ದಾರೆ.

ಕಾಳಿದಾಸನ ಸಂಸ್ಕೃತದ ಶ್ಲೋಕ ಹೀಗಿದೆ: ಯಾ ಸೃಷ್ಟಿಸ್ಸರಷ್ಟುರಾದ್ಯಾ ಮಹತಿ ವಿಧಿಹುತಂ ಯಾ ಹವಿರ್ಯಾ ಚ ಹೋತ್ರೀ| ಯೇ ದ್ವೇ ಕಾಲಂ ವಿಧತ್ತಶ್ರ್ಯುತಿವಿಷಯಗುಣಾ ಯಾ ಸ್ಥಿತಾವ್ಯಾಪ್ಯ ವಿಶ್ವಮ್ || ಯಾ ಮಾಹುಸ್ಸರ್ವಭೂತಪ್ರಕೃತಿರಿತಿ ಯಯಾ ಪ್ರಾಣಿನಃ ಪ್ರಾಣವನ್ತಃ | ಪ್ರತ್ಯಕ್ಷಾಭಿಃ ಪ್ರಸನ್ನಸ್ತನುಭಿರವತು ವಸ್ತಾಭಿರಷ್ಟಾಭಿರೀಶಃ ||. ಇದರ ವಿಲಿಯಮ್ಸ್‌ರ ಇಂಗ್ಲಿಷ್ ಅನುವಾದ ಇಂತಿದೆ :

Is a preserve you! he who is revealed | In these eight forms by man perceptible- | Water, of all the creation’s work the first; | The Fire that bears on high the sacrifice | Presented with solemnity to heaven; | The Priest, the holy offerer of gifts, | The Sun and Moon, those two majestic orles, | Eternal marshallers of day and night; | The subtle Ether, vehicle of sound, | Diffused throughout the boundless Universe; | The Earth, by sages called ‘ the place of birth | Of all material essences and things;’ | And Air which giveth life to all that breathes. ಇದೇ ಶ್ಲೋಕದ ಬಸವಪ್ಪ ಶಾಸ್ತ್ರಿಗಳ ಕನ್ನಡಾನುವಾದ ಗಮನಿಸಿ:

ಆವುದು ಧಾತೃಸೃಷ್ಟಿಗೆ ಮೊದಲ್ ಹುತಹವ್ಯಮನಾಂತಪುದಾವುದಿ | ನ್ನಾವುದು ಹೋತೃಶಬ್ದ ಗುಣ ಮಾವುವು ಕಾಲಕರ್ತೃಗಳ್ || ಆವುದುಸಿರ್ಜಗಕ್ಕುಸಿರ್ವರಾವುದ ಭೂತಕುಲಪ್ರಧಾನಮೆಂ | ದಾವೊಡಲೆಂಟರಿಂದೆ ಮೆರೆವೀಶನೊಡರ್ಚುಗೆ ನಿಮ್ಮಭೀಷ್ಟಮಂ ||. ಇಲ್ಲಿನ ಕನ್ನಡಾನುವಾದವನ್ನು ಶ್ಲಾಘಿಸಿರುವ ರಘುನಾಥ ರಾಯರು ಇಂಗ್ಲಿಷ್ ಅನುವಾದವನ್ನು ಟೀಕಿಸಿ, We would translate the stanza into English poetry some what as follows  ಎಂದು ತಮ್ಮ ಅನುವಾದವನ್ನು ನೀಡಿದ್ದಾರೆ:

The first of Mighty Brahma’s works; the Bearer | Of HAVIS  duly given, as enjoined ; | The HOTRI  who conducts the sacrifice; | The Two who makes the Times; the one who fills | All worlds with quality sensed by the ear; | The one who’s styled a PRAKRITI  to all | Existing things; the One who giveth life | To all that breathes;- that Isa manifest | E’er in Forms Eight preserve and bless ye all!
ಅನುವಾದ ಕಲೆಯನ್ನು ಕುರಿತು ತಾತ್ವಿಕ ಹಾಗೂ ಪ್ರಾಯೋಗಿಕ ನೆಲೆಯಲ್ಲಿ ಗ್ರಂಥಗಳೇ ಇಲ್ಲದ ಕಾಲಘಟ್ಟದಲ್ಲಿ ಬಂದ ರಘುನಾಥ ರಾಯರ ಇಂಗ್ಲಿಷ್ ಕೃತಿಯು ಭಾಷಾಂತರ ಕಲಾಪ್ರಕಾರಕ್ಕೆ  ಒಂದು ವಿರಳ ಕೊಡುಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT