ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣರಂಗವಾದ ಬಿಬಿಎಂಪಿ ಕೌನ್ಸಿಲ್ ಸಭೆ

Last Updated 29 ಏಪ್ರಿಲ್ 2016, 20:04 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ತೆರಿಗೆ ಹೆಚ್ಚಳವನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಪಾಲಿಕೆಯ ಬಿಜೆಪಿ ಸದಸ್ಯರು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಶುಕ್ರವಾರ ನಡೆಸಿದ ಧರಣಿ ವಿಕೋಪಕ್ಕೆ ತಿರುಗಿ ಸಭೆ ಅಕ್ಷರಶಃ ರಣರಂಗವಾಗಿ ಪರಿವರ್ತನೆಗೊಂಡಿತು.

ಸುಮಾರು ಅರ್ಧ ಗಂಟೆಗಳ ಕಾಲ ನಡೆದ ತಳ್ಳಾಟ– ನೂಕಾಟದಿಂದ ಇಬ್ಬರು ಮಹಿಳಾ ಸದಸ್ಯರೂ ಸೇರಿದಂತೆ ಮೂವರು ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾದವು. ಪ್ರತಿಭಟನೆಯ ಸಂದರ್ಭದಲ್ಲಿ ಅಸ್ವಸ್ಥಗೊಂಡ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಸ್ಪತ್ರೆಗೆ ದಾಖಲಾದರು.

ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ವಿರೋಧಪಕ್ಷದ ನಾಯಕ  ಪದ್ಮನಾಭ ರೆಡ್ಡಿ ಸೇರಿದಂತೆ  ನಾಲ್ವರು ಬಿಜೆಪಿ ಸದಸ್ಯರನ್ನು ಎರಡು ತಿಂಗಳ ಮಟ್ಟಿಗೆ ಕೌನ್ಸಿಲ್‌ ಸಭೆಯಿಂದ ಮೇಯರ್‌ ಅಮಾನತು ಮಾಡಿದರು.

ಶುಕ್ರವಾರ ನಡೆದಿದ್ದೇನು: ಆಸ್ತಿ ತೆರಿಗೆ ಹೆಚ್ಚಳ ಮಾಡಿರುವ ನಿರ್ಧಾರವನ್ನು ವಾಪಸ್‌ ಪಡೆಯದಿದ್ದರೆ  ಕೌನ್ಸಿಲ್‌ ಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಬಿಜೆಪಿ ಗುರುವಾರ ಎಚ್ಚರಿಕೆ ನೀಡಿತ್ತು. ಮುಂಜಾಗ್ರತಾ ಕ್ರಮವಾಗಿ ಕೌನ್ಸಿಲ್‌ ಸಭೆಗೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಭೆ ವೀಕ್ಷಣೆಗೆ ಮಾಧ್ಯಮದವರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.

ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದರು.  ಬಿಜೆಪಿ ಶಾಸಕರಾದ ಎಸ್‌.ಮುನಿರಾಜು, ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌, ವೈ.ಎ. ನಾರಾಯಣಸ್ವಾಮಿ, ಎಸ್‌.ಆರ್‌. ವಿಶ್ವನಾಥ್‌, ಬಿ.ಎನ್‌. ವಿಜಯಕುಮಾರ್‌, ಸತೀಶ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಅವರೂ ಧರಣಿಯಲ್ಲಿ ಭಾಗವಹಿಸಿದರು.

ಧರಣಿ ಕೈಬಿಡುವಂತೆ ಮೇಯರ್‌ ಬಿ.ಎನ್‌. ಮಂಜುನಾಥ ರೆಡ್ಡಿ ಮನವಿ ಮಾಡಿದರು.  ಬಿಜೆಪಿ ಸದಸ್ಯರು ಮೇಯರ್‌ ಪೀಠದ ಸುತ್ತ ಜಮಾಯಿಸಿ ಧರಣಿ ಮುಂದುವರಿಸಿದರು. ಕರಪತ್ರಗಳನ್ನು ಪ್ರದರ್ಶಿಸಿ ಕಾಂಗ್ರೆಸ್‌ ವಿರುದ್ಧ ಘೋಷಣೆ  ಕೂಗಿದರು.

ಇದೇ ಸಂದರ್ಭದಲ್ಲಿ ಆಸ್ತಿ ತೆರಿಗೆ ಏರಿಕೆಯ ಪ್ರಮಾಣವನ್ನು ವಸತಿ ಕಟ್ಟಡಗಳಿಗೆ ಶೇ 20 ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ 25ಕ್ಕೆ ಮಿತಿಗೊಳಿಸುವ ಪ್ರಸ್ತಾವವನ್ನು ಆಡಳಿತ ಪಕ್ಷದ ನಾಯಕ ಆರ್‌.ಎಸ್‌. ಸತ್ಯನಾರಾಯಣ ಮಂಡಿಸಿದರು. ಪ್ರಸ್ತಾವದ ಪ್ರತಿಯನ್ನು ಬಿಜೆಪಿ ಸದಸ್ಯರು ಕಿತ್ತುಕೊಳ್ಳಲು ಯತ್ನಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆದು ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು. ಧರಣಿಯ ನಡುವೆಯೇ ಈ ಪ್ರಸ್ತಾವಕ್ಕೆ ಒಪ್ಪಿಗೆ ಪಡೆಯಲಾಯಿತು. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಕರಪತ್ರಗಳನ್ನು ಹರಿದು ಬಿಸಾಡಿದರು. 11.10ಕ್ಕೆ ಮೇಯರ್‌ ಅವರು ಸಭೆಯನ್ನು 15 ನಿಮಿಷ ಕಾಲ ಮುಂದೂಡಿದರು.

ಬಳಿಕವೂ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ‘ಡೌನ್‌ ಡೌನ್‌ ಕಾಂಗ್ರೆಸ್‌’, ‘ಆಸ್ತಿ ತೆರಿಗೆ ಇಳಿಸಿ–ಬೆಂಗಳೂರು ಉಳಿಸಿ’, ‘ತೊಲಗಿಸಿ ತೊಲಗಿಸಿ ಕಾಂಗ್ರೆಸ್‌ ತೊಲಗಿಸಿ’, ‘ತೆರಿಗೆ ಹೊರೆ–ಜನರಿಗೆ ಬರೆ’ ಎಂದು ಘೋಷಣೆ ಕೂಗಿದರು. ಪ್ರತಿಯಾಗಿ ಕಾಂಗ್ರೆಸ್‌ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ಈ ನಡುವೆ ಮೇಯರ್‌ ಅವರು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಬಿಜೆಪಿ ಸದಸ್ಯರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ’ ಎಂದೂ ಆರೋಪಿಸಿದರು.

ನಾಲ್ವರು ಸದಸ್ಯರ ಅಮಾನತು: 12.04ಕ್ಕೆ ಮತ್ತೆ ಸಭೆ ಆರಂಭವಾಯಿತು. ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ‘ಧರಣಿ ಮುಂದುವರಿಸಿದರೆ ಸದಸ್ಯರನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಮೇಯರ್‌ ಎಚ್ಚರಿಸಿದರು. ಪದ್ಮನಾಭ ರೆಡ್ಡಿ, ಉಮೇಶ್ ಶೆಟ್ಟಿ, ಎಂ. ನಾಗರಾಜು ಮತ್ತಿತರರು ಮೇಯರ್‌ ಪೀಠದ ಪಕ್ಕದಲ್ಲಿ ನಿಂತು ಘೋಷಣೆ ಕೂಗಿದರು.

ಉಳಿದ ಸದಸ್ಯರು ಮೇಯರ್‌ ಪೀಠದ ಮುಂಭಾಗ ಹಾಗೂ ಹಿಂಭಾಗದಲ್ಲಿ ಧರಣಿ ನಡೆಸಿದರು. ‘ನಿಮ್ಮ ಡೋಂಗಿತನವನ್ನು ಜನರು ನೋಡುತ್ತಿ ದ್ದಾರೆ. ನಿಮಗೆ ಚರ್ಚೆ ಮಾಡುವ ಯೋಗ್ಯತೆ ಇಲ್ಲವೇ’ ಎಂದು ಮೇಯರ್‌ ಪ್ರಶ್ನಿಸಿದರು.

ಚರ್ಚೆಗೆ ಅವಕಾಶ ನೀಡುವುದಾಗಿ ಅವರು ಭರವಸೆ ನೀಡಿದರೂ ಬಿಜೆಪಿ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ಆಗ ಕೆಎಂಸಿ ಕಾಯ್ದೆ 1989ರ ಪ್ರಕಾರ ನಾಲ್ವರು ಸದಸ್ಯರನ್ನು ಅಮಾನತು ಮಾಡಿದ್ದೇನೆ ಎಂದು ಮೇಯರ್ ಪ್ರಕಟಿಸಿದರು. ಬಳಿಕ ಸಭೆ ಮುಂದೂಡಿದರು.

ಕೂಡಲೇ ಪದ್ಮನಾಭ ರೆಡ್ಡಿ, ಸಿ.ಆರ್‌. ರಾಮಮೋಹನ್‌ರಾಜು  ಹಾಗೂ ಸದಸ್ಯೆಯೊಬ್ಬರು ಮೇಯರ್‌ ಪೀಠದ ಎಡ ಭಾಗದಲ್ಲಿ ಮಲಗಿ ಪ್ರತಿಭಟಿಸಿದರು. ಉಮೇಶ್‌ ಶೆಟ್ಟಿ ಅವರು ಬಾಗಿಲಿಗೆ ಅಡ್ಡವಾಗಿ ನಿಂತರು. ಮೇಯರ್‌ ಅವರ ಸುತ್ತ ಬಿಜೆಪಿ ಸದಸ್ಯರು ಜಮಾಯಿಸಿ ದಿಗ್ಬಂಧನ ಹಾಕಿದರು.

ಇದರಿಂದ ಕೆರಳಿದ ಕಾಂಗ್ರೆಸ್‌ ಸದಸ್ಯರು ಉಮೇಶ್‌ ಶೆಟ್ಟಿ ಅವರನ್ನು ದರದರನೇ ಹೊರಗೆ ಎಳೆದುಕೊಂಡು ಹೋದರು. ಉಮೇಶ್‌ ಶೆಟ್ಟಿ ನೆರವಿಗೆ ಬಿಜೆಪಿ ಸದಸ್ಯರು ಧಾವಿಸಿದರು. ಆಗ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ನೂಕಾಟ–ತಳ್ಳಾಟ ಆರಂಭವಾಯಿತು. ಮಹಿಳಾ ಸದಸ್ಯರೂ ಇದಕ್ಕೆ ಕೈಜೋಡಿಸಿದರು.

ಮೇಯರ್‌ ಅವರನ್ನು ಕರೆದೊಯ್ಯಲು ಕಾಂಗ್ರೆಸ್‌ ಸದಸ್ಯರು ಯತ್ನಿಸಿದರು. ಆಗ ಮಾಜಿ ಮೇಯರ್‌ ಶಾಂತಕುಮಾರಿ ಅಡ್ಡಲಾಗಿ ನಿಂತರು. ಅವರನ್ನೂ ಕೆಲವು ಪುರುಷ ಸದಸ್ಯರು ಎಳೆದಾಡಿದರು. ಪದ್ಮಾವತಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ನ ಮಹಿಳಾ ಸದಸ್ಯರು ಎಳೆದಾಟದ ಕಣಕ್ಕೆ ಧುಮುಕಿದರು.

ಈ ನಡುವೆ, ಮರಳಿ ಬಂದ ಉಮೇಶ್ ಶೆಟ್ಟಿ ನಗುತ್ತಲೇ ಘೋಷಣೆ ಕೂಗಿದರು, ಧರಣಿ ನಡೆಸಿದರು. ಈ ಎಲ್ಲ ಘಟನೆಗಳಿಗೆ ಮೇಯರ್‌ ಅವರು ಮೂಕ ಪ್ರೇಕ್ಷಕರಾದರು. ವೆಂಕಟೇಶ್, ವೇಲು ಮತ್ತಿತರ ಕಾಂಗ್ರೆಸ್‌ ಸದಸ್ಯರು ಬಿಜೆಪಿ ಸದಸ್ಯರನ್ನು ಹೊರಕ್ಕೆ ಎಳೆದೊಯ್ಯಲು ಪ್ರಯತ್ನ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ಪ್ರತಿರೋಧ ತೋರಿದರು. ನಡುನಡುವೆ ಉಭಯ ಪಕ್ಷಗಳ ಸದಸ್ಯರು ನಗುತ್ತಾ ಚಟಾಕಿ ಹಾರಿಸುತ್ತಿದ್ದರು.

ಕೈಗೆ ಗಾಯ, ಉಳುಕಿದ ಕಾಲು: ಈ ಎಳೆದಾಟದಲ್ಲಿ ಬಿಜೆಪಿ ಸದಸ್ಯರಾದ ಸವಿತಾ ಹಾಗೂ ಶಶಿರೇಖಾ ಮುಕುಂದ್‌ ಅವರ ಕೈಗೆ ಗಾಯಗಳಾದವು. ಮಾಜಿ ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಅವರ ಕಾಲು ಉಳುಕಿತು. ಗಲಾಟೆ 12.25ರ ವರೆಗೂ ಮುಂದುವರಿಯಿತು. ಪೊಲೀಸ್‌ ಭದ್ರತೆಯಲ್ಲಿ ಮೇಯರ್‌ ಅವರನ್ನು ಕರೆದೊಯ್ಯುವ ಯತ್ನ ನಡೆಯಿತು.

ಇದಕ್ಕೂ ಬಿಜೆಪಿ ಸದಸ್ಯರು ಬಿಡಲಿಲ್ಲ. ಅಲ್ಲಿಯವರೆಗೆ ಮೌನವಾಗಿಯೇ ಇದ್ದ ಆಡಳಿತ ಪಕ್ಷದ ನಾಯಕ ಆರ್‌.ಎಸ್‌. ಸತ್ಯನಾರಾಯಣ ಅವರು ಎಲ್ಲರನ್ನೂ ತಳ್ಳಿಕೊಂಡು ಮೇಯರ್‌ ಅವರನ್ನು ಹೊರಕ್ಕೆ ಕರೆದೊಯ್ದರು. ‘ನನ್ನನ್ನು ತುಳಿದುಕೊಂಡೇ ಮೇಯರ್‌ ಹೋದರು’ ಎಂದು ರಾಮ ಮೋಹನ್‌ ರಾಜು ಆರೋಪಿಸಿದರು.

ಪದ್ಮನಾಭ ರೆಡ್ಡಿ ಅಸ್ವಸ್ಥ
ಈ ಎಲ್ಲ ಘಟನೆಗಳ ನಡುವೆ ಪದ್ಮನಾಭ ರೆಡ್ಡಿ ಅಸ್ವಸ್ಥಗೊಂಡರು. ಬಿಜೆಪಿ ಸದಸ್ಯರು ಗಾಳಿ ಬೀಸಿ ಸಾಂತ್ವನ ಹೇಳಿದರು. ಬಿಜೆಪಿ ಸದಸ್ಯರೊಬ್ಬರು ದಿಂಬು ತಂದುಕೊಟ್ಟರು. ಪಾಲಿಕೆಯ ವೈದ್ಯರು ಬಂದು ತಪಾಸಣೆ ನಡೆಸಿದರು. ಬಿಜೆಪಿ ಸದಸ್ಯರು ಆಂಬುಲೆನ್ಸ್‌ ತರಿಸಿ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಬಳಿಕ ಪದ್ಮನಾಭ ರೆಡ್ಡಿ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಆ ಬಳಿಕವೂ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ‘ಕಾಂಗ್ರೆಸ್‌ ಸದಸ್ಯರು ಇವತ್ತು ಬಿಜೆಪಿ ಸದಸ್ಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಗೂಂಡಾಗಿರಿ ತೋರಿದ್ದಾರೆ’ ಎಂದು ಬಿಜೆಪಿ ಸದಸ್ಯರಾದ ಉಮೇಶ್‌ ಶೆಟ್ಟಿ, ಎನ್‌. ನಾಗರಾಜು, ಶ್ರೀನಿವಾಸ್‌ ಮುಂತಾದವರು ಆರೋಪಿಸಿದರು.

ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ್ ಹಾಗೂ ಆರ್‌.ಎಸ್‌.ಸತ್ಯನಾರಾಯಣ ಅವರು ಬಿಜೆಪಿ ಸದಸ್ಯರ ಮನವೊಲಿಸಲು ಯತ್ನಿಸಿದರು.

ಮರಳಿದ ರೆಡ್ಡಿ: ಚೇತರಿಸಿಕೊಂಡ ಪದ್ಮನಾಭ ರೆಡ್ಡಿ ಸಂಜೆ ಆಸ್ಪತ್ರೆಯಿಂದ ಧರಣಿ ಸ್ಥಳಕ್ಕೆ ಮರಳಿದರು. ಸಂಜೆ 7 ಗಂಟೆಗೆ ಶಾಸಕ ಆರ್.ಅಶೋಕ ಧರಣಿ ಸ್ಥಳಕ್ಕೆ ಬಂದರು. ‘ಬಿಜೆಪಿ ಸದಸ್ಯರ ಅಮಾನತು ಆದೇಶವನ್ನು ವಾಪಸ್‌ ಪಡೆಯಬೇಕು. ಆಸ್ತಿ ತೆರಿಗೆ ಹೆಚ್ಚಳ ಆದೇಶ ವಾಪಸ್‌ ಪಡೆಯುವ ತನಕ ಹೋರಾಟ ನಡೆಸುತ್ತೇವೆ’ ಎಂದು ಅಶೋಕ ಪ್ರಕಟಿಸಿದರು. ಬಿಜೆಪಿ ಸದಸ್ಯರು ರಾತ್ರಿಯೂ ಧರಣಿ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT