ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರತ್ನಜ ಎನ್ನುವ ರೈತ!

Last Updated 11 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ರೈತ ಹಾಗೂ ನಿರ್ಮಾಪಕರ ಪರಿಸ್ಥಿತಿ ಒಂದೇ ಎನ್ನುವುದು ರತ್ನಜ ಅನುಭವದಿಂದ ಕಲಿತಿರುವ ಪಾಠ. ಅವರ ನಿರ್ದೇಶನದ ‘ಪ್ರೀತಿಯಲ್ಲಿ ಸಹಜ’ ಇಂದು ತೆರೆಕಾಣುತ್ತಿದೆ. ಪ್ರೇಕ್ಷಕನೆಂಬ ಬಂಧು ಕೈಬಿಡುವುದಿಲ್ಲ ಎನ್ನುವ ನಿರೀಕ್ಷೆ ಅವರದು.

ರೈತರ ಸ್ಥಿತಿ ಕನ್ನಡ ಚಿತ್ರ ನಿರ್ಮಾತೃಗಳದೂ ಆಗಿದೆ! ಬೆವರು ಸುರಿಸಿ ಬೆಳೆದ ಫಸಲಿಗೆ ಬೆಲೆಯಿಲ್ಲ; ಹಾಗೆಯೇ ಕಷ್ಟಪಟ್ಟು ಮಾಡಿದ ಸಿನಿಮಾಗಳಿಗೂ ಕಿಮ್ಮತ್ತಿಲ್ಲ. ಎರಡೂ ಕಡೆ ಲಾಭ ಮಾಡಿಕೊಳ್ಳುವವರು ಮಧ್ಯವರ್ತಿಗಳು ಮಾತ್ರ!”.

ರತ್ನಜ ಹೇಳುತ್ತಿದ್ದುದು ಬೆರಳೆಣಿಕೆಯಷ್ಟು ಹಂಚಿಕೆದಾರರ ಕಪಿಮುಷ್ಠಿಯಲ್ಲಿ ಕನ್ನಡ ಚಿತ್ರರಂಗದ ವರ್ತಮಾನ ಸಿಲುಕಿಕೊಂಡಿರುವ ದುರಂತದ ಕಥೆ. ಒಳ್ಳೆಯ ಸಿನಿಮಾ ಮಾಡುವುದು ಈಗ ಕಷ್ಟವಲ್ಲ. ಆದರೆ ಆ ಚಿತ್ರವನ್ನು ತೆರೆಕಾಣಿಸುವುದು ನಿಜವಾದ ಸವಾಲು. ಬಿಡುಗಡೆಯೇ ಚಿತ್ರವೊಂದರ ಪಾಲಿನ ಗೆಲುವು ಎಂದು ತಮ್ಮ ಅನುಭವವನ್ನೇ ಉದಾಹರಣೆಯನ್ನಾಗಿಸಿಕೊಂಡು ಅವರು ಹೇಳುತ್ತಿದ್ದರು.

ರತ್ನಜ ಅವರ ವಿಷಾದಕ್ಕೆ ಕಾರಣವಿದೆ. ಅವರ ನಿರ್ದೇಶನದ ‘ಪ್ರೀತಿಯಲ್ಲಿ ಸಹಜ’ ಚಿತ್ರ ಇಂದು (ಫೆ. 12) ತೆರೆಕಾಣುತ್ತಿದೆ. ಇಷ್ಟಪಟ್ಟು ಮಾಡಿದ ಚಿತ್ರವನ್ನವರು ಕಷ್ಟಪಟ್ಟು ಬಿಡುಗಡೆ ಮಾಡಿದ್ದಾರೆ. ಈ ಕಷ್ಟದ ಹಿನ್ನೆಲೆಯಲ್ಲಿಯೇ ಅವರು ಕನ್ನಡ ಚಿತ್ರೋದ್ಯಮದ ಇಂದಿನ ಸ್ಥಿತಿಗತಿ ಬಗ್ಗೆ ಗಂಭೀರವಾಗಿ ಮಾತನಾಡುತ್ತಿದ್ದರು.

ರತ್ನಜ ನಿರ್ದೇಶನದ ಚೊಚ್ಚಿಲ ಸಿನಿಮಾ ‘ನೆನಪಿರಲಿ’ ತೆರೆಕಂಡಿದ್ದು 2005ರಲ್ಲಿ. ಆಗ ಅವರಿಗೆ ಚಿತ್ರವನ್ನು ಜನರಿಗೆ ಮುಟ್ಟಿಸುವುದು ಕಷ್ಟ ಎನ್ನಿಸಿರಲಿಲ್ಲ. ಈಗ ಮುಂಗಡ ಹಣ ಕೊಟ್ಟು ಚಿತ್ರಮಂದಿರಗಳನ್ನು ಕಾಯ್ದಿರಿಸಿದರೂ ಚಿತ್ರವೊಂದು ತೆರೆಕಾಣುವ ದಿನಾಂಕವನ್ನು ಸ್ಪಷ್ಟವಾಗಿ ಹೇಳುವುದು ಕಷ್ಟ ಎನ್ನುವಂಥ ಪರಿಸ್ಥಿತಿ. ಮೊದಲೆಲ್ಲ ಸಿನಿಮಾದ ಯೋಗ್ಯತೆಯನ್ನು ನಿರ್ಧರಿಸಲಾಗುತ್ತಿತ್ತು. ಈಗ ದುಡ್ಡು ಸುರಿದು ಚಿತ್ರವನ್ನು ತೆರೆಕಾಣಿಸಬೇಕಾಗಿದೆ ಎನ್ನುವುದು ಅವರ ಅಳಲು. ಕಳೆದ ನಾಲ್ಕೈದು ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬದಲಾವಣೆಯಾಗಿದೆ.

ಸಿನಿಮಾ ಪ್ರೀತಿ ಹಾಗೂ ಸಾಂಸ್ಕೃತಿಕ ಕಾಳಜಿ ಹೊಂದಿದ್ದ ಹಿರಿಯ ನಿರ್ಮಾಪಕರು ಹಿನ್ನೆಲೆಗೆ ಸರಿದು, ಸಿನಿಮಾವನ್ನು ವ್ಯಾಪಾರ ಮಾತ್ರ ಎಂದು ಭಾವಿಸಿರುವವರು ಚಿತ್ರೋದ್ಯಮದ ಮೇಲೆ ಹಿಡಿತ ಸಾಧಿಸಿದ್ದಾರೆ ಎನ್ನುತ್ತಾರೆ ರತ್ನಜ. ‘ಪ್ರೀತಿಯಲ್ಲಿ ಸಹಜ’ ಚಿತ್ರದ ಬಿಡುಗಡೆಗೆ ರತ್ನಜ ಅನೇಕ ಎಡರುತೊಡರುಗಳನ್ನು ಎದುರಿಸಿದ್ದರೂ, ತಮ್ಮ ಸಿನಿಮಾ ಚಿತ್ರರಸಿಕರಿಗೆ ಇಷ್ಟವಾಗುವ ಬಗ್ಗೆ ಅವರಿಗೆ ಅಪಾರ ಆತ್ಮವಿಶ್ವಾಸವಿದೆ. ಅದಕ್ಕೆ ಕಾರಣ ಕಥೆಯ ಮೇಲೆ ಅವರಿಗಿರುವ ವಿಶ್ವಾಸ. ಪ್ರೀತಿ ಹಾಗೂ ಸದಭಿರುಚಿ ತಮ್ಮ ಸಿನಿಮಾದ ಅವಿಭಾಜ್ಯ ಅಂಗ ಎನ್ನುವ ಅವರು, ಯುವಜನರಿಗೂ ಮನೆಮಂದಿಗೂ ಇಷ್ಟವಾಗುವ ಸಿನಿಮಾ ಎಂದು ‘ಪ್ರೀತಿಯಲ್ಲಿ ಸಹಜ’ ಚಿತ್ರವನ್ನು ಬಣ್ಣಿಸುತ್ತಾರೆ.

ಕನ್ನಡದ ಹುಡುಗ ಸೂರ್ಯ ಹಾಗೂ ಕಾಶ್ಮೀರಿ ಚೆಲುವೆ ಅಕ್ಸಾಭಟ್ ಚಿತ್ರದ ಯುವಜೋಡಿ – ಹೊಸಜೋಡಿ. ಇವರ ಜೊತೆಗೆ ಪಳಗಿದ ಹುಲಿಗಳಂಥ ದೇವರಾಜ್ – ಸುಹಾಸಿನಿ ಮೋಡಿಯೂ ಇದೆ. ಅನ್ವಿತಾ ಎನ್ನುವ ಕೇರಳದ ಹುಡುಗಿಯೊಬ್ಬಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾಳೆ. ರಘು ಮುಖರ್ಜಿ ತಾರಾಗಣದಲ್ಲಿನ ಮತ್ತೊಂದು ಆಕರ್ಷಣೆ. ತಮ್ಮ ಪ್ರೀತಿಗೆ ಜೀವನವಿಡೀ ಹೋರಾಟ ನಡೆಸುವ ಹಿರಿಯರು, ತಮ್ಮ ಮಕ್ಕಳ ಪ್ರೇಮದ ಸಂದರ್ಭದಲ್ಲಿ ಯಾವ ರೀತಿಯ ನಿಲುವು ತಳೆಯುತ್ತಾರೆ ಎನ್ನುವುದು ಚಿತ್ರದ ಕಥೆ.

ಕಥೆ ಚಿತ್ರದ ಶೀರ್ಷಿಕೆಯಷ್ಟು ಸರಳವಾಗಿಲ್ಲ ಎನ್ನುವ ರತ್ನಜ, ಪ್ರೇಮದ ಮೂಲಕ ಬದುಕಿನ ಹಲವು ಸಾಧ್ಯತೆಗಳ ಹುಡುಕಾಟವನ್ನು ತಮ್ಮ ಚಿತ್ರದಲ್ಲಿ ನಡೆಸಿರುವಂತೆ ಕಾಣಿಸುತ್ತದೆ. ತನ್ನನ್ನು ತಾನು ಮರೆಮಾಚಿಕೊಂಡು ಬದುಕುವ ವ್ಯಕ್ತಿಯ ಕಥೆ ಚಿತ್ರದ್ದು. ಪ್ರಾಯಶ್ಚಿತ್ತ ರೂಪದ ಈ ಅಜ್ಞಾತವಾಸ ಮಕ್ಕಳ ಮೇಲೆ ಬೀರುವ ಪರಿಣಾಮ ಎಂತಹುದು ಎನ್ನುವುದು ಕಥೆಯಲ್ಲಿನ ಕೌತುಕ.

ರತ್ನಜ ಅವರ ಚಿತ್ರದ ಮತ್ತೊಂದು ಪ್ರಮುಖ ಪಾತ್ರ ನಿಸರ್ಗ. ಕೇರಳ, ತಮಿಳುನಾಡು ಹಾಗೂ ಕರ್ನಾಟಕಗಳ ಗಡಿಭಾಗಗಳಲ್ಲಿ ‘ಪ್ರೀತಿಯಲ್ಲಿ ಸಹಜ’ ಚಿತ್ರದ ಶೂಟಿಂಗ್ ನಡೆದಿದೆ. ನಿಸರ್ಗದ ಈ ‘ತ್ರಿವೇಣಿಸಂಗಮ’ ಚಿತ್ರಕ್ಕೆ ಅಪೂರ್ವ ಶೋಭೆ ನೀಡಿದೆ; ಭಾವನೆ – ಭಾಷೆ – ಸಂಗೀತದಂತೆ ಪ್ರಕೃತಿ ಕೂಡ ಪ್ರೇಕ್ಷಕರನ್ನು ಕಾಡಲಿದೆ ಎನ್ನುವುದು ರತ್ನಜ ಅವರ ಅನಿಸಿಕೆ. ಸಿನಿಮಾವನ್ನು ಪ್ರಕೃತಿ ಎಷ್ಟರಮಟ್ಟಿಗೆ ಆವರಿಸಿಕೊಂಡಿದೆಯೆಂದರೆ, ರತ್ನಜ ತಮ್ಮ ಸಿನಿಮಾವನ್ನು ನಿಸರ್ಗ ಸೌಂದರ್ಯಕ್ಕೆ ಅರ್ಪಿಸಿದ್ದಾರೆ.

ಮೂಲಭೂತ ಸೌಕರ್ಯಗಳಿಲ್ಲದ ಕಾಡಿನಲ್ಲಿ ಸುಮಾರು ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಸಿರುವುದು ರತ್ನಜ ಅವರಿಗೆ ಖುಷಿ ಕೊಟ್ಟಿದೆ. ತಾರಾ ವರ್ಚಸ್ಸಿನ ಹಮ್ಮು ತೊರೆದು, ಕಾಡನ್ನು ಹಾಗೂ ನಿರ್ದೇಶಕರ ಕಾಟವನ್ನು ಸಹಿಸಿಕೊಂಡ ಸುಹಾಸಿನಿ ಅವರ ಬಗ್ಗೆ ರತ್ನಜ ಅವರಿಗೆ ಹೆಮ್ಮೆಯಿದೆ. ಸುಹಾಸಿನಿ ಹಾಗೂ ದೇವರಾಜ್ ಅವರ ಪಾತ್ರಗಳು ಅವರ ವೃತ್ತಿಜೀವನದ ಸ್ಮರಣೀಯ ಪಾತ್ರಗಳ ಸಾಲಿಗೆ ಸೇರಲಿವೆ ಎನ್ನುವ ವಿಶ್ವಾಸ ಅವರದು.

‘ಪ್ರೀತಿಯಲ್ಲಿ ಸಹಜ’ ಚಿತ್ರದ ಸಂದರ್ಭದಲ್ಲೇ ಶಿವರಾಜಕುಮಾರ್ ಅಭಿನಯದ ‘ಶಿವಲಿಂಗ’ ತೆರೆಕಾಣುತ್ತಿದೆ. ‘ಇನ್ನು ಕಾಯುವುದರಲ್ಲಿ ಅರ್ಥವಿಲ್ಲ’ ಎನ್ನುವ ಧೋರಣೆಯಲ್ಲಿ ರತ್ನಜ ತಮ್ಮ ಚಿತ್ರವನ್ನು ತೆರೆಕಾಣಿಸುತ್ತಿದ್ದಾರೆ. ಪ್ರೇಕ್ಷಕರಿಗೆ ಇಷ್ಟವಾದರೆ ಬಾಯಿಮಾತಿನ ಮೆಚ್ಚುಗೆಯ ಮೂಲಕ ಸಿನಿಮಾ ಗೆಲ್ಲುತ್ತದೆ ಎನ್ನುವ ವಿಶ್ವಾಸ ಅವರದು. ‘ನೆನಪಿರಲಿ ಮೂವೀಸ್’ ಮೂಲಕ ಚಿತ್ರವನ್ನು ತೆರೆಕಾಣಿಸುವ ಹೊಸ ಸಾಹಸಕ್ಕೂ ಅವರು ತಮ್ಮನ್ನೊಡ್ಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT