ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರದ್ದತಿಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ

ಹಾಲಿ, ಮಾಜಿ ಶಾಸಕ, ಸಂಸದರ ವೇತನ
Last Updated 6 ಮಾರ್ಚ್ 2015, 7:17 IST
ಅಕ್ಷರ ಗಾತ್ರ

ಬಳ್ಳಾರಿ: ಹಾಲಿ ಹಾಗೂ ಮಾಜಿ ಶಾಸಕರು, ಸಂಸದರಿಗೆ ನೀಡಲಾಗುವ ವೇತನ, ನಿವೃತ್ತ ವೇತನ ರದ್ದು ಮಾಡುವಂತೆ ಕೋರಿ ಏಪ್ರಿಲ್‌ 6ರಿಂದ ಎರಡು ದಿನಗಳ ಕಾಲ ನವದೆಹಲಿಯ ಲಾಲ್‌ಬಹದ್ದೂರ್‌ ಶಾಸ್ತ್ರಿ ಸಮಾಧಿ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಸನಾಥಬಂಧು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಉದಯ ಅಗಸನೂರ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದೇಶದಾದ್ಯಂತ ಪ್ರತಿ ತಿಂಗಳು ಸಾವಿರಾರು ಕೋಟಿಯಷ್ಟು ಹಣವನ್ನು ಹಾಲಿ ಹಾಗೂ ಮಾಜಿ ಶಾಸಕ, ಸಂಸದರಿಗೆ ವೇತನ ಹಾಗೂ ನಿವೃತ್ತಿ ವೇತನದ ರೂಪದಲ್ಲಿ ನೀಡಲಾಗುತ್ತಿದೆ. ಆಗಾಗ ವೇತನದ ಪ್ರಮಾಣವನ್ನೂ ಮನಬಂದಂತೆ ಹೆಚ್ಚಿಸಲಾಗುತ್ತಿದೆ. ಇದರಿಂದ ಸಾಮಾನ್ಯ ಜನರು ತೆರಿಗೆ ರೂಪದಲ್ಲಿ ನೀಡುತ್ತಿರುವ ಹಣ ಪೋಲಾಗುತ್ತಿದೆ ಎಂದು ತಿಳಿಸಿದರು.

ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ನಿಸ್ವಾರ್ಥದಿಂದ ಜನಪರ ಕೆಲಸ ಮಾಡಬೇಕು. ಆದರೆ, ಪ್ರಸ್ತುತ ಆಯ್ಕೆಯಾಗುತ್ತಿರುವ ಬಹುತೇಕ ಜನಪ್ರತಿನಿಧಿಗಳು ತಮ್ಮ ಅಧಿಕಾರವನ್ನು ಸ್ವಹಿತ ಹಾಗೂ ಬೆಂಬಲಿಗರಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಚುನಾವಣೆಯಲ್ಲಿ ಹತ್ತಾರು ಕೋಟಿ ಹಣ ಹಂಚಿ, ಮತದಾರರನ್ನೂ ಭ್ರಷ್ಟರನ್ನಾಗಿಸುತ್ತಿದ್ದಾರೆ. ಇಂಥವರಿಗೆ ವೇತನ, ನಿವೃತ್ತಿ ವೇತನದ ಅಗತ್ಯವೂ ಇಲ್ಲ. ಇವರಿಂದ ಜನತೆಗೆ ಯಾವುದೇ ಉಪಯೋಗವಿಲ್ಲ. ಈ ಕಾರಣದಿಂದ ವೇತನ ಹಾಗೂ ನಿವೃತ್ತಿವೇತನ ನೀಡಬಾರದು ಎಂದು ಕೋರಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ವೇತನ ರದ್ದುಗೊಳಿಸುವಂತೆ ಈಗಾಗಲೇ 29 ರಾಜ್ಯಗಳ ಮುಖ್ಯಮಂತ್ರಿ­ಗಳು, ರಾಷ್ಟ್ರಪತಿ, ಉಪ­ರಾಷ್ಟ್ರಪತಿ, ಪ್ರಧಾನಮಂತ್ರಿಯವರ ಅಧೀನ ಕಾರ್ಯದರ್ಶಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಆದರೆ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿಯಿಂದ ಉತ್ತರ ಬಂದಿದ್ದು, ಆಂಧ್ರ ಸರ್ಕಾರ ಮೊಬೈಲ್ ಸಂದೇಶದ ಮೂಲಕ ಪ್ರತಿಕ್ರಿಯಿಸಿದೆ ಎಂದು ಅವರು ಹೇಳಿದರು.

ವೇತನ, ನಿವೃತ್ತಿ ವೇತನ ರದ್ದುಪಡಿಸಿದರೆ ದೇಶದ ಆರ್ಥಿಕ ಸಂಕಷ್ಟ ಸುಧಾರಿಸಬಹುದಾಗಿದೆ ಎಂದ ಅವರು, ಕೇಂದ್ರ ಸರ್ಕಾರ ಆಯಾ ಪ್ರಾದೇಶಿಕ ಭಾಷೆಗಳನ್ನು ಆಡಳಿತ ಭಾಷೆಯನ್ನಾಗಿಸಲು ನಿರ್ಧಾರ ಕೈಗೊಳ್ಳಬೇಕು, ಬಡವರ ಕೈಗೆಟುಕುವ ದರದಲ್ಲಿ ಆಹಾರ ಧಾನ್ಯ ದೊರೆಯುವಂತಾಗಬೇಕು, ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆ ರದ್ದುಗೊಳಿಸಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ವೇಳೆ ಆಗ್ರಹಿಸಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT