ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಬ್ಬರ್‌ ಖರೀದಿಯಲ್ಲಿ ಭಾರಿ ಅವ್ಯವಹಾರ

Last Updated 24 ಜೂನ್ 2016, 19:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಸಾರಿಗೆ ನಿಗಮಗಳಿಗೆ  ಖರೀದಿಸಿರುವ ₹ 32 ಕೋಟಿಗೂ ಅಧಿಕ ಮೊತ್ತದ ರಬ್ಬರ್‌ ಪರಿಕರಗಳು ಕಳಪೆ ಗುಣಮಟ್ಟದ್ದಾಗಿದ್ದು, ಇದರಿಂದ  ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿರುವುದನ್ನು ರಾಜ್ಯ ಮಾಹಿತಿ ಆಯೋಗ ಗಂಭೀರವಾಗಿ ಪರಿಗಣಿಸಿದೆ.

ಈ  ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಮಾಹಿತಿ ಆಯುಕ್ತ ಎಲ್‌.ಕೃಷ್ಣಮೂರ್ತಿ  ಅವರು, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಕೊಚ್ಚಿನ್‌ ರಬ್ಬರ್‌ ಕಂಪೆನಿಯಿಂದ  ರಾಜ್ಯದ ವಿವಿಧ ಸಾರಿಗೆ ಸಂಸ್ಥೆಗಳಿಗೆ ಖರೀದಿಸಿದ ಪರಿಕರಗಳು ಕಳಪೆ ಆಗಿವೆ  ಎಂದು ಆರೋಪಿಸಿ ಎನ್‌.ಶಿವಕುಮಾರ್‌ ಅವರು  ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ  2013ರ ಅಕ್ಟೋಬರ್‌ನಲ್ಲಿ ದೂರು ನೀಡಿದ್ದರು.  ಅದರ ತನಿಖೆ ಪ್ರಾರಂಭಿಸಿರುವ ಬಗ್ಗೆ  ಆದೇಶದ ಪ್ರತಿಯನ್ನು ಮಾಹಿತಿ ಹಕ್ಕಿನಡಿ ಕೇಳಿದ್ದರು.  

ಮಾಹಿತಿ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ದೂರಿ 2014 ರ ಜನವರಿಯಲ್ಲಿ 31ರಂದು ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಆದರೂ ತನಿಖೆ ಪ್ರಗತಿ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿರಲಿಲ್ಲ.  ಹಾಗಾಗಿ ಅವರು 2014ರ ಮಾರ್ಚ್‌ 13ರಂದು  ಮಾಹಿತಿ ಆಯೋಗದ ಕದ ತಟ್ಟಿದ್ದರು.

ಆಯೋಗವು ಈ ಪ್ರಕರಣ ವಿಚಾರಣೆ ಕೈಗೆತ್ತಿಕೊಂಡ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಹಾಗೂ  ಈಶಾನ್ಯ ಕರ್ನಾಟಕ ಸಾರಿಗೆ ನಿಗಮ  ನಿಗಮಗಳ ಭದ್ರತಾ ಮತ್ತು ಜಾಗೃತಾಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ವರದಿ ನೀಡಿದ್ದಾರೆ. 

ಏನಿದು ಅವ್ಯವಹಾರ: ರಾಜ್ಯದ ವಿವಿಧ ಸಾರಿಗೆ ಸಂಸ್ಥೆಗಳಿಗೆ   ಟೈರ್‌ಗಳ ರಿಸೋಲಿಂಗ್‌ಗೆ ಬಳಸುವ ಪ್ರಿಕ್ಯೂರ್‌್ಡ್‌ ಟ್ರೆಡ್‌ ರಬ್ಬರ್‌  (ಪಿಸಿಟಿಆರ್‌) ಹಾಗೂ ಅದಕ್ಕೆ ಸಂಬಂಧಿಸಿದ ಪರಿಕರಗಳನ್ನು ಕೊಚ್ಚಿನ್‌  ರಬ್ಬರ್‌್ಸ್ ಕಂಪೆನಿಯಿಂದ ಖರೀದಿಸಲಾಗಿದೆ. 

ಗುಣಮಟ್ಟ ಪರೀಕ್ಷೆ ಸಲುವಾಗಿ ಪಿಸಿಟಿಆರ್‌ನ  ಮಾದರಿಗಳನ್ನು   ಪುಣೆಯ ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ರೋಡ್‌ ಟ್ರಾನ್ಸ್‌ಪೋರ್ಟ್‌ಗೆ  ಕಳುಹಿಸಲಾಗುತ್ತದೆ. ಗುಣಮಟ್ಟ ಪರೀಕ್ಷೆಯಲ್ಲಿ ಈ ಮಾದರಿಗಳು ವಿಫಲವಾದಲ್ಲಿ ಸರಬರಾಜುದಾರರ ಬಿಲ್ಲುಗಳಲ್ಲಿ ಅಥವಾ ಭದ್ರತಾ ಠೇವಣಿಗಳಲ್ಲಿ ಶೇ 10ರಷ್ಟು ಮೊತ್ತವನ್ನು ಕಡಿತ ಮಾಡಬೇಕು.

ಮೊದಲ ರಿಸೋಲಿಂಗ್‌ ಬಳಿಕ ನಿಗದಿತ ದೂರವನ್ನು ಕ್ರಮಿಸುವವರೆಗೆ ಪಿಸಿಟಿಆರ್‌ ಬಾಳಿಕೆ ಬರಬೇಕು. ವಿಫಲವಾದಲ್ಲಿ ಪೂರೈಕೆದಾರರಿಂದ ಪ್ರತಿ ಕಿಲೋಮೀಟರ್‌ಗೆ 5 ಪೈಸೆಯಂತೆ ವಸೂಲಿ ಮಾಡಬೇಕು. ಆದರೆ, ಕೊಚ್ಚಿನ್‌ ರಬ್ಬರ್‌ ಕಂಪೆನಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ನಿಯಮಗಳನ್ನೇ ಮಾರ್ಪಾಡು ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ವಿವಿಧ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಟ್ರೆಡ್‌ ರಬ್ಬರ್‌ ಖರೀದಿಸಿದ ಪ್ರಕರಣಗಳ ಬಗ್ಗೆ  ಭದ್ರತಾ ಮತ್ತು ಜಾಗೃತಾಧಿಕಾರಿಗಳು ತನಿಖೆ ನಡೆಸಿರುವಾಗ ಕೊಚ್ಚಿನ್‌ ರಬ್ಬರ್‌ ಸಂಸ್ಥೆಯು ಭಾರಿ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಅಚ್ಚರಿ ಎಂದರೆ ಮೂರು ನಿಗಮಗಳ ವರದಿಗಳಲ್ಲಿ, ‘ಕಂಪೆನಿ ಭಾರಿ ಮೊತ್ತವನ್ನು ಬಾಕಿ ಉಳಿಸಿಕೊಳ್ಳುವುದಕ್ಕೆ ಅಂದಿನ  ಉಗ್ರಾಣ ಮತ್ತು ಖರೀದಿ ನಿಯಂತ್ರಕ ನಾಗರಾಜ್‌ ರಾವ್‌ ಅವರು ಟೆಂಡರ್‌ನ ಕೆಲವು ಷರತ್ತುಗಳನ್ನು ಮಾರ್ಪಾಡು ಮಾಡಿಕೊಟ್ಟಿರುವುದು ಕಾರಣ’ ಎಂದು  ಹೇಳಲಾಗಿದೆ.  ನಾಗರಾಜ ರಾವ್‌ ಅವರು 2014ರ ಮಾರ್ಚ್‌ 31ಕ್ಕೆ ನಿವೃತ್ತರಾಗಿದ್ದಾರೆ.

ಈ  ವರದಿಯಲ್ಲಿರುವ ಅಂಶಗಳ ಬಗ್ಗೆಯೇ ಸಂಶಯ ವ್ಯಕ್ತಪಡಿಸಿರುವ ಆಯುಕ್ತ ಎಲ್‌.ಕೃಷ್ಣಮೂರ್ತಿ ಅವರು, ‘ಮೂರು ನಿಗಮಗಳು ಒಬ್ಬ ವ್ಯಕ್ತಿಯನ್ನೇ ಗುರಿಯಾಗಿಸಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಕೋಟ್ಯಂತರ ರೂಪಾಯಿ ಅವ್ಯವಹಾರ ಹಿರಿಯ ಅಧಿಕಾರಿಗಳ ಸಹಕಾರ ಇಲ್ಲದೇ ನಡೆಯಲು ಸಾಧ್ಯವಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಪ್ರಕರಣವನ್ನು ಉನ್ನತ ಮಟ್ಟದ ಅಧಿಕಾರಿಗಳ ತಂಡದಿಂದ  ತನಿಖೆ ನಡೆಸಬೇಕು’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಯಾವ ನಿಗಮಕ್ಕೆ ಎಷ್ಟು ಬಾಕಿ
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಕೊಚ್ಚಿನ್‌ ರಬ್ಬರ್‌ ಸಂಸ್ಥೆ ₹ 1.01 ಕೋಟಿ ಬಾಕಿ ಉಳಿಸಿ ಕೊಂಡಿದೆ. ಕೊಚ್ಚಿನ್‌ ಕಂಪೆನಿಯಿಂದ ₹ 1 ಕೋಟಿ ಭದ್ರತಾ ಠೇವಣಿ ಪಡೆಯಬೇಕಿತ್ತು.   ಆದರೆ, ಕೇವಲ ₹ 50 ಲಕ್ಷ ಭದ್ರತಾ ಠೇವಣಿ ಪಡೆದು ಕಂಪೆನಿಗೆ ಅನುಕೂಲ ಮಾಡಿಕೊಡ ಲಾಗಿದೆ. ಇಷ್ಟು ಮೊತ್ತವನ್ನು ಕಂಪೆನಿಯಿಂದ  ವಸೂಲಿ ಮಾಡಲು  ಸಾಧ್ಯವಾಗುತ್ತಿಲ್ಲ ಎಂದು ನಿಗಮದ ಉಪಮುಖ್ಯ ಭದ್ರತಾ ಮತ್ತು ಜಾಗೃತ ಅಧಿಕಾರಿ ವರದಿ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿ 2010ರ ಜೂನ್‌ 3ರಂದು ಕೊಚ್ಚಿನ್‌ ರಬ್ಬರ್‌ ಕಂಪೆನಿಯಿಂದ  1800 ಟನ್‌ ರಬ್ಬರ್‌ ಖರೀದಿಗೆ ಆದೇಶ ಮಾಡಿತ್ತು. ಇದರ ಗುಣಮಟ್ಟ ಪರೀಕ್ಷೆ ಸಲುವಾಗಿ ಸಿಐಆರ್‌ಟಿಗೆ ಒಟ್ಟು 212 ಮಾದರಿಗಳನ್ನು ಕಳುಹಿಸಲಾಗಿತ್ತು. ಅದರಲ್ಲಿ ಕೇವಲ ಎಂಟು ಮಾದರಿಗಳು ಮಾತ್ರ ಸ್ವೀಕೃತವಾಗಿದ್ದವು. ರಿಸೋಲ್‌ ಬಳಿಕ ಟೈರ್‌ ನಿಗದಿತ ದೂರವನ್ನು ಕ್ರಮಿಸಲು ವಿಫಲವಾದಲ್ಲಿ ಶೇ 10ರಷ್ಟು ಮೊತ್ತ ಹಿಡಿದಿಟ್ಟುಕೊಳ್ಳುವ ಷರತ್ತನ್ನು   ಮಾರ್ಪಾಡು ಮಾಡಿದ್ದರಿಂದ  ಅದೂ ವಸೂಲಿಯಾಗಿಲ್ಲ.

ಕೆಎಸ್‌ಆರ್‌ಟಿಸಿಗೆ ಸಂಬಂಧಿಸಿದ   ₹ 30.59 ಕೋಟಿ ಟೆಂಡರ್‌ನಲ್ಲೂ ₹ 1 ಕೋಟಿ ಭದ್ರತಾ ಠೇವಣಿಗೆ ಬದಲು ಕೇವಲ ₹ 50 ಲಕ್ಷ ಪಡೆಯಲಾಗಿದೆ. ಕಂಪೆನಿ  ಪೂರೈಕೆ ಮಾಡಿದ್ದ ಪಿಸಿಟಿಆರ್‌ ನ 34 ಮಾದರಿಗಳ ಪೈಕಿ 32 ಮಾದರಿಗಳು ತಿರಸ್ಕೃತಗೊಂಡಿದ್ದವು. ಕೆಎಸ್‌ಆರ್‌ಟಿಸಿಗೂ ಕಂಪೆನಿಯು ₹ 42.22 ಲಕ್ಷ ಪ್ರೊರೇಟಾ ಮೊತ್ತ ಬಾಕಿ ಉಳಿಸಿಕೊಂಡಿದೆ. ಬಿಎಂಟಿಸಿಯಲ್ಲಿ 2015ನೇ ಸಾಲಿನವರೆಗೆ ಒಟ್ಟು  ₹ 73.39ಲಕ್ಷ ಪ್ರೊರೇಟಾ  ಮೊತ್ತ ವಸೂಲಿ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT