ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಜಾನ್‌ ಉಪವಾಸ ಮಧುಮೇಹಿಗಳೇ ಎಚ್ಚರ!

Last Updated 26 ಜೂನ್ 2015, 19:30 IST
ಅಕ್ಷರ ಗಾತ್ರ

ರಮ್ಜಾನ್‌ ಎಂದರೆ ಭಕ್ತಿ-ಭಾವ, ಪ್ರೀತಿಯನ್ನು ಸಾರುವ ಪವಿತ್ರ ಹಬ್ಬ. ಈ ಬಾರಿಯ  ರಮ್ಜಾನ್‌ ಮಾಸದ ಉಪವಾಸ ವ್ರತಾಚರಣೆ ಆರಂಭವಾಗಿದೆ. ಮುಸ್ಲಿಮರು ಒಂದು ತಿಂಗಳು ಪೂರ್ಣ ವ್ರತಾಚರಣೆ ಮಾಡುತ್ತಾರೆ. ಬೆಳಗಿನ ಜಾವದ ‘ಸೆಹರಿ’ ಹಾಗೂ ಸಂಜೆಯ ‘ಇಫ್ತಾರ್‌’ ಕೂಟದ ಬಗೆಬಗೆ ಅಡುಗೆ ಯಾರಿಗೆ ತಾನೇ ಪ್ರಿಯವಾಗುವುದಿಲ್ಲ? ಆದರೆ ಮಧುಮೇಹಿಗಳ ಪಾಲಿಗೆ ಇದು ಸಂಕಷ್ಟದ ಸಮಯವಾಗಿದೆ. 

ದಿನಕ್ಕೆ ಇಂತಿಷ್ಟು ಸಮಯ ತಿಂಡಿ, ಊಟವನ್ನು ಮಾಡಲೇಬೇಕಾದ ಡಯಾಬಿಟೀಸ್‌ ರೋಗಿಗಳು ಕಟ್ಟುನಿಟ್ಟಿನ ರಮ್ಜಾನ್‌ ಉಪವಾಸ ಮಾಡುವಂತಿಲ್ಲ. ಮಾಡಿದರೆ ವೈದ್ಯರ ಸಲಹೆ ಮೇರೆಗೆ ವ್ರತಾಚರಣೆ ಕೈಗೊಳ್ಳಬೇಕು. ಸಕ್ಕರೆ ಕಾಯಿಲೆಯಿಂದ ಪೀಡಿತರಾದವರು ಹೇಗೆ ಉಪವಾಸ ಮಾಡಬೇಕು, ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಬೆಂಗಳೂರಿನ ಡಯಾಬೆಟಾಕೇರ್‌ನ ವೈದ್ಯ ಡಾ. ಸ್ವರಾಜ್‌ ಮಾಹಿತಿ ನೀಡಿದ್ದಾರೆ.

‘ಸಕ್ಕರೆ ಕಾಯಿಲೆ ಪೀಡಿತರು ಉಪವಾಸ ಮಾಡಲೇಬಾರದು. ಆದರೆ ಧಾರ್ಮಿಕ ನಂಬಿಕೆಯಿಂದ ಕಡ್ಡಾಯವಾಗಿ ಉಪವಾಸ ಮಾಡುತ್ತೇವೆ ಎಂದು ಪಟ್ಟು ಹಿಡಿಯುವವರೂ ಇದ್ದಾರೆ. ಇಂಥವರು ಮಾತ್ರ ಎಚ್ಚರಿಕೆಯಿಂದ ವ್ರತ ಪಾಲಿಸಬೇಕಾದ ಅಗತ್ಯವಿದೆ.

ಸಾಮಾನ್ಯವಾಗಿ ಮಧುಮೇಹದಲ್ಲಿ ಟೈಪ್ 1 ಹಾಗೂ ಟೈಪ್‌ 2 ಎಂಬ ಎರಡು ಬಗೆಯಿದೆ. ಟೈಪ್ 1 ಮಧುಮೇಹ ‘ಇನ್ಸುಲಿನ್ ಡಿಪೆಂಡೆಂಟ್ ಡಯಾಬಿಟಿಸ್’ ಆಗಿರುತ್ತದೆ. ಇದು ಹೆಚ್ಚಾಗಿ ಮಕ್ಕಳು ಅಥವಾ ಸಣ್ಣ ವಯಸ್ಸಿನವರಲ್ಲಿ ಕಂಡು ಬರುತ್ತದೆ. ಟೈಪ್2 ಮಧುಮೇಹವನ್ನು ‘ನಾನ್ ಇನ್ಸುಲಿನ್ ಡಿಪೆಂಡೆಂಟ್ ಡಯಾಬಿಟಿಸ್’ ಎನ್ನುತ್ತಾರೆ.

ಇದು ಹೆಚ್ಚಾಗಿ 40ವರ್ಷ ದಾಟಿದವರಲ್ಲಿ ಕಂಡು ಬರುತ್ತದೆ. ಟೈಪ್‌ 1ರಲ್ಲಿ ಡಿಕೆಎ (diabetic ketoacidosis ) ಕಂಡು ಬರುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾಗಿರುತ್ತದೆ. ಮೂತ್ರದಲ್ಲಿ ‘ಕೀಟೂನ್ಸ್‌’ ಹೆಚ್ಚಾಗುತ್ತದೆ. ಅಲ್ಲದೇ ಮೂರ್ಛೆ ಹೋಗುತ್ತಾರೆ. ಶ್ವಾಸಕೋಶ, ಹೃದಯ ತೊಂದರೆಗಳಾಗುವ ಸಾಧ್ಯತೆ ಇದೆ. ಉಪವಾಸದಿಂದ ಡಿಹೈಡ್ರೇಷನ್‌ ಆಗುವ ಸಾಧ್ಯತೆಯಿರುತ್ತದೆ. ಅಂದರೆ ದೇಹದಲ್ಲಿ ನೀರಿನ ಅಂಶ ತುಂಬಾ ಕಡಿಮೆಯಾಗುತ್ತದೆ.

ಸೋಡಿಯಂ, ಪೊಟ್ಯಾಷಿಯಂ ಹೆಚ್ಚುಕಡಿಮೆಯಾಗಿ ಕಿಡ್ನಿ ಸಮಸ್ಯೆಗೂ ಕಾರಣವಾಗುತ್ತದೆ. ಹಾಗಾಗಿ ರಮ್ಜಾನ್‌ಗೂ ಮುಂಚೆಯೇ ಮಧುಮೇಹಿಗಳಿಗೆ ಶಿಕ್ಷಣ ನೀಡುವ ಕೆಲಸವನ್ನು ನಮ್ಮ ಡಯಾಬೆಟಾ ಕೇರ್‌ನಿಂದ ಮಾಡಿದ್ದೇವೆ. ರಮ್ಜಾನ್‌ ಮುಗಿಯುವ ವರೆಗೂ ಮಾಡುತ್ತೇವೆ. ರೋಗಿಯು 15 ದಿನಗಳ ಮುಂಚಿತವಾಗಿ ವೈದ್ಯರ ಬಳಿ ತಪಾಸಣೆ ಮಾಡಿಸಬೇಕು, ಹೃದಯ, ಕಿಡ್ನಿ ಸಮಸ್ಯೆ ಇದೆಯಾ ಎಂಬುದರ ಬಗ್ಗೆ ತಿಳಿಸಬೇಕು. ರಕ್ತ ಹಾಗೂ ಮೂತ್ರ ಪರೀಕ್ಷೆ ಮಾಡಲಾಗುತ್ತದೆ.

ಸಕ್ಕರೆ ಕಾಯಿಲೆ ಯಾವ ಬಗೆಯದ್ದು ಎಂಬುದನ್ನು ತಿಳಿದು ಆ ರೋಗಿಗೆ ಯಾವ ಡೋಸ್‌ನ ಮಾತ್ರೆಗಳನ್ನು ಕೊಡಬೇಕು ಎಂಬುದನ್ನು ತಿಳಿಸುತ್ತೇವೆ. ಅಲ್ಲದೇ ಯಾವಗ ಉಪವಾಸ ನಿಲ್ಲಿಸಬೇಕು ಎಂಬ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಉಪವಾಸ ಮಾಡುವ ರೋಗಿಗಳಿಗೆ ತಾವು ನಿತ್ಯ ತೆಗೆದುಕೊಳ್ಳುವ ಕೆಲವು ಔಷಧಗಳಿಂದ ಸಕ್ಕರೆ ಪ್ರಮಾಣ ಕಡಿಮೆ ಆಗಬಹುದು. ಇಂಥ ಸಮಸ್ಯೆಗಳನ್ನು ತಪ್ಪಿಸಲು ಸಲಹೆ ನೀಡುತ್ತೇವೆ. ಸಾಮಾನ್ಯವಾಗಿ ಬೆಳಿಗ್ಗೆ 3.30ಕ್ಕೆ ಉಪವಾಸ ಆರಂಭಿಸಿದರೆ ಸಕ್ಕರೆ ಇಲ್ಲದ ಹಾಲು ಕುಡಿಯಬಹುದು. ನಂತರ ಮಾತ್ರೆ ಸೇವಿಸಿ ಊಟ ಮಾಡಬೇಕು (ವೈದ್ಯರ ಸಲಹೆಯಂತೆ  ಡೋಸ್‌ ಹೆಚ್ಚು ಕಡಿಮೆ ಮಾಡಿಕೊಳ್ಳಬೇಕು).

ಉಪವಾಸ ಅಂತ್ಯವಾದ ಕೂಡಲೇ ಖರ್ಜೂರ ಸೇವಿಸಬಹುದು. ಸೇಬು, ಕಿತ್ತಳೆ, ಸೀಬೆ ಹಣ್ಣಿನ ರಸವನ್ನು (ಸಕ್ಕರೆ ಬೆರೆಸದೆ) ಕುಡಿಯಬಹುದು. ಉಪವಾಸ ಮಾಡುವವರು ಬೆಳಿಗ್ಗೆಯೇ ಊಟ ಮಾಡುವುದರಿಂದ ಹಸಿವು ಜಾಸ್ತಿಯಾಗಿ ಸಕ್ಕರೆ ಪ್ರಮಾಣ ಕಡಿಮೆ ಆಗಬಹುದು. ಇಂಥ ಸಂದರ್ಭದಲ್ಲಿ ಸೆಕೆ,  ಹಸಿವು ತಲೆ ಸುತ್ತುವುದು, ಕೈ ನಡುಕ ಆಗುತ್ತದೆ. ಆಗ ತಕ್ಷಣವೇ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಬೇಕು. 70ಕ್ಕಿಂತ ಕಡಿಮೆ ಆದಲ್ಲಿ ಏನನ್ನಾದರೂ ತಿನ್ನಲೇಬೇಕು. ರಕ್ತ ಪರೀಕ್ಷೆಗಾಗಿ ಮನೆಯಲ್ಲಿ ಗ್ಲುಕೋಮೀಟರ್‌ ಉಪಕರಣ ಇಟ್ಟುಕೊಂಡಿರಬೇಕು. ದಿನಕ್ಕೆ ಎರಡು ಬಾರಿ ಸಕ್ಕರೆ ಪ್ರಮಾಣ ಪರೀಕ್ಷೆ ಮಾಡಿಕೊಳ್ಳಬೇಕು. ಬೊಜ್ಜು, ಅಧಿಕ ರಕ್ತದೊತ್ತಡಕ್ಕಾಗಿ ಮಾತ್ರೆ ತೆಗೆದುಕೊಳ್ಳುವವರಿಗೆ ಪ್ರತ್ಯೇಕವಾಗಿ ಸಲಹೆ ನೀಡಲಾಗುತ್ತದೆ’ ಎನ್ನುತ್ತಾರೆ  ಡಾ. ಸ್ವರಾಜ್‌.

ಜಯನಗರ, ಇಂದಿರಾನಗರ, ಕೋರಮಂಗಲ ಸೇರಿದಂತೆ ಬೆಂಗಳೂರಿನಲ್ಲಿ 12 ಡಯಾಬೆಟಾಕೇರ್ ಕೇಂದ್ರಗಳಿವೆ. ಎಲ್ಲಾ ಕೇಂದ್ರಗಳಲ್ಲೂ ಮಧುಮೇಹಿಗಳು ಒಂದು ತಿಂಗಳ ಕಾಲ ಮಧುಮೇಹ ತಜ್ಞರು, ಪೌಷ್ಟಿಕಾಂಶ ತಜ್ಞರ ಜೊತೆ ಸಂಪರ್ಕದಲ್ಲಿರಬಹದು ಮತ್ತು ಕಾಲ ಕಾಲಕ್ಕೆ ಸಲಹೆ ಮತ್ತು ಮಾಹಿತಿ ಪಡೆದುಕೊಳ್ಳಬಹುದು.

60 ವರ್ಷ ಮೇಲ್ಪಟ್ಟವರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು
60 ವರ್ಷ ಮೇಲ್ಪಟ್ಟವರು, ಅದರಲ್ಲೂ ಇನ್ಸುಲಿನ್‌ನಲ್ಲಿದ್ದವರು ದಿನಕ್ಕೆ 3ರಿಂದ 4ಬಾರಿ ರಕ್ತಪರೀಕ್ಷೆ ಮಾಡಿಕೊಳ್ಳಬೇಕು. (ಸಕ್ಕರೆ ಪ್ರಮಾಣ ಕಡಿಮೆ ಆಗಿರುವ ಲಕ್ಷಣಗಳು ಕಂಡುಬಂದಲ್ಲೂ ಮಾಡಿಕೊಳ್ಳಬೇಕು)

ಉಪವಾಸ ಇರುವುದರಿಂದ ಸಕ್ಕರೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಸಕ್ಕರೆ ಪ್ರಮಾಣ 70ಕ್ಕಿಂತ ಕಡಿಮೆ ಬಂದರೆ ಕೂಡಲೇ ಏನಾದರೂ ತಿನ್ನಬೇಕು. 15 ನಿಮಿಷದ ನಂತರ ಮತ್ತೆ ಪರೀಕ್ಷೆ ಮಾಡಿಕೊಳ್ಳಬೇಕು.

ಮಾಹಿತಿಗೆ: 080 679 19191

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT