ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರನಾಥ ಟ್ಯಾಗೋರರ ಸ್ತ್ರೀವಾದಿ ನಾಟಕ

ರಂಗಭೂಮಿ
Last Updated 16 ಜುಲೈ 2015, 19:30 IST
ಅಕ್ಷರ ಗಾತ್ರ

ಇಲ್ಲಿ ಸ್ಥಳ ಇದೆ’ ಶೀರ್ಷಿಕೆ ಸ್ವಲ್ಪ ವಿಚಿತ್ರವಾಗಿದೆ. ಇದೊಂದು ನಾಟಕದ ಹೆಸರು. ಈ ನಾಟಕವನ್ನು ಪ್ರಸ್ತುತ ಪಡಿಸಿದವರು ರಂಗಸುಗ್ಗಿ ಟ್ರಸ್ಟ್‌ನವರು. ‘ಜೀಜೀ’ ನಿರ್ದೇಶನದ ಈ ನಾಟಕ ತನ್ನ ಮೊದಲ ಪ್ರಯತ್ನದಲ್ಲೇ ಕಲಾಗ್ರಾಮ ಹಾಗೂ ಎಡಿಎ ರಂಗಮಂದಿರದಲ್ಲಿ ಸತತ ಐದು ಪ್ರಯೋಗ ಕಂಡಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಿತ್ತು.

‌‌ರವೀಂದ್ರನಾಥ ಟ್ಯಾಗೋರರ ‘ಅಪರಿಚಿತ’ ಕತೆ ಆಧರಿಸಿ ರೂಪಾ ಶಿವಕುಮಾರ್ ‘ಇಲ್ಲಿ ಸ್ಥಳ ಇದೆ’ ಎಂಬ ಈ ನಾಟಕ ರಚಿಸಿದ್ದಾರೆ. ಅನುಪಮ ಬಾಬು ಕೊಲ್ಕತ್ತ ನಗರದ ಯುವಕ. ಅಪ್ಪ ಅಮ್ಮ ಇಲ್ಲದ ಅವನು ಅತ್ತೆಯ ಅಡಿಯಾಳಾಗಿ ಬದುಕುತ್ತಿರುತ್ತಾನೆ. ಅವಳಾದರೋ ಘಟವಾಣಿ. ಸ್ವಂತ ಮಗ ಅರೆಹುಚ್ಚ. ಮದುವೆ ಮಾರ್ಕೆಟ್ಟಿನಲ್ಲಿ ಅಳಿಯನನ್ನು ಮಾರಾಟಕ್ಕಿಟ್ಟಿದ್ದಾಳೆ. ಭಾರಿ ವರದಕ್ಷಿಣೆ ನಿರೀಕ್ಷೆಯಲ್ಲಿರುವ ಅವಳು ಅಂತಹ ಕನ್ಯಾಪಿತೃವನ್ನು ಶೋಧಿಸಿ ಶೋಧಿಸಿ ಕೊನೆಗೆ ಕಾನಪುರದ ಶ್ರೀಮಂತ ಶಂಭುನಾಥ ಬಾಬು ಅವರ ಮಗಳು ಕಲ್ಯಾಣಿಯನ್ನು ತನ್ನ ಅಳಿಯನಿಗೆ ತಂದುಕೊಳ್ಳಲು ನಿಶ್ಚಯಿಸಿಕೊಳ್ಳುತ್ತಾಳೆ.

ತಾಳಿ ಕಟ್ಟುವ ಮುಂಚೆಯೇ ಅವಳ ಷರತ್ತಿನಿಂತೆ ಶಂಭುನಾಥ ಬಾಬು ಬಂಗಾರವನ್ನು ಅಳೆದು ತೂಗಿ ಧಾರಾಳವಾಗಿ ನೀಡುತ್ತಾನೆ. ಆದರೆ ನಿಶ್ಚಯದ ದಿನ ಅತ್ತೆ ವಧುವಿಗೆ ಇಟ್ಟ ಬಂಗಾರವೇ ನಕಲಿ! ಮದುವೆ ಮನೆಯಲ್ಲಿ ಈ ವಿಷಯ ಬಹಿರಂಗ ಪಡಿಸುವ ಶಂಬುನಾಥ ಬಾಬು ತನ್ನ ಮಗಳನ್ನು ಕೊಟ್ಟು ಧಾರೆ ಎರೆಯಲು ನಿರಾಕರಿಸುತ್ತಾನೆ. ಅವಮಾನಿತರಾದ ಅತ್ತೆ, ಅಳಿಯ ಅಲ್ಲಿಂದ ಹೇಳದೆ ಕೇಳದೆ ಕಾಲ್ತೆಗೆಯುತ್ತಾರೆ.

ಕಲ್ಯಾಣಿಯ ನೆನಪಲ್ಲಿ ಅನುಪಮ ಮದುವೆಯಾಗದೆ ಹಾಗೇ ಉಳಿದು ಬಿಡುತ್ತಾನೆ. ಕೊನೆಗೊಮ್ಮೆ ಕಲ್ಯಾಣಿ ರೈಲ್ವೆ ನಿಲ್ದಾಣವೊಂದರಲ್ಲಿ ಭೇಟಿಯಾಗುತ್ತಾಳೆ. ಅವಳಿನ್ನೂ ಮದುವೆ ಆಗದಿರುವ ವಿಷಯ ಗೊತ್ತಾಗುತ್ತದೆ. ಅವಳನ್ನು ಹಿಂಬಾಲಿಸಿ ಮತ್ತೆ ಕಾನಪುರಕ್ಕೆ ಅನುಪಮ ಬಾಬು ಧಾವಿಸುತ್ತಾನೆ. ಈ ಮುಂಚೆ ನಿಶ್ಚಯವಾದಂತೆ ಮಗಳನ್ನು ತನಗೆ ಲಗ್ನ ಮಾಡಿಕೊಡುವಂತೆ ವಿನಂತಿಸಿಕೊಳ್ಳುತ್ತಾನೆ. ಆದರೆ ತಂದೆ ಶಂಭುನಾಥ ಬಾಬು ಮದುವೆಯ ಆಯ್ಕೆಯನ್ನು ಮಗಳಿಗೆ ಬಿಡುತ್ತಾನೆ.

ಅತ್ತೆಯ ಲಾಲಸೆಯಿಂದ ಅಳಿಯ ನೊಂದಿದ್ದಾನೆ. ತನ್ನ ಅಸಹಾಯಕತೆಗೆ ತಾನೇ ಮರುಗಿದ್ದಾನೆ. ಪಶ್ಚಾತ್ತಾಪದಿಂದ ಪರಿವರ್ತನೆಯಾಗಿದ್ದಾನೆ. ಇನ್ನೇನು ಅವರ ಮದುವೆಯಾಗುತ್ತದೆ. ಸಿನಿಮೀಯ ಅಂತ್ಯದಂತೆ ಕತೆಗೆ ಶುಭಂ ಹಾಡುತ್ತಾರೆ ಎಂದು ನಿರೀಕ್ಷಿಸುತ್ತ ಕುಳಿತವರಿಗೆ ಅಚ್ಚರಿ ಕಾದಿರುವುದೇ ಈ ಸಂದರ್ಭದಲ್ಲಿ. ಅನುಪಮನೊಂದಿಗೆ ಮದುವೆಯಾಗಲು ವಧು ನಯವಾಗಿ ನಿರಾಕರಿಸುತ್ತಾಳೆ.

ಮಹಿಳೆಯರ ಶಿಕ್ಷಣ ಪ್ರಸಾರಕ್ಕೆ ತನ್ನ ಉಳಿದ ಜೀವನ ಮುಡಿಪಿಟ್ಟಿರುವುದಾಗಿ ಘೋಷಿಸುತ್ತಾಳೆ. ಮದುವೆ ನಿರಾಕರಣೆ ಕತೆಯ ನಾಟಕೀಯ ಅಂತ್ಯ. ಕತೆಯ ಉತ್ಕೃಷ್ಟ ಭಾಗವೂ ಅದೇ ಆಗಿದೆ. ನಿರಾಕರಣೆ ಮೂಲಕ ಮನುಕುಲದ ಸಮಾನತೆಯನ್ನು ಸಾರಿಬಿಡುತ್ತಾರೆ ಟ್ಯಾಗೋರ್. ಇದು ಆಶಯದ ಗೆಲುವು ಮಾತ್ರವಲ್ಲ, ಕಲಾತ್ಮಕ ಯಶಸ್ಸೂ ಹೌದು.

ರವೀಂದ್ರನಾಥ ಟ್ಯಾಗೋರ್ ವಿಶ್ವಮಾನ್ಯ ಕವಿ. ಕತೆಯ ಆಶಯವೂ ಅದನ್ನು ಸರಿಗಟ್ಟುವಂತಹದು. ಸ್ತ್ರೀವಾದಿ ಎಂದರೆ ಇದೇ ಅಲ್ಲವೆ? ಹಾಗೆ ನೋಡಿದರೆ ‘ಸ್ತ್ರೀವಾದಿ’ ‘ಪುರುಷವಾದಿ’ ಈ ತರಹದ ಎರಡೂ ಪದಗಳನ್ನು ಒಂದು ಒಳ್ಳೆಯ ಆಶಯಕ್ಕೆ ಪ್ರಯೋಗ ಮಾಡುವುದು ತಪ್ಪೆ. ಆದರೆ ಶತಮಾನಗಳಿಂದ ಪುರುಷನ ಅಡಿಯಾಳಾಗಿ ಬೆಳೆದು ಬಂದ ಮಹಿಳೆ ತಲೆ ಎತ್ತಿ ನಿಲ್ಲುವುದನ್ನು ‘ಸ್ತ್ರೀವಾದಿ’ ಎಂದು ಕರೆಯಲಾಗಿದೆ.

ಆ ಕಾರಣಕ್ಕೆ ಆ ಪದಪ್ರಯೋಗಕ್ಕೆ ಒಂದುಮಟ್ಟದ ಸಮರ್ಥನೆ ಇದೆ. ಆ ಅರ್ಥದಲ್ಲಿ ಬಹುತೇಕರು ಸ್ತ್ರೀವಾದ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಸ್ತ್ರೀವಾದವನ್ನು ಮತ್ತೊಂದು ಅತಿಗೆ ಕೊಂಡೊಯ್ದವರು ಇದ್ದಾರೆ. ‘ಫೆಮಿನಿಸ್ಟ್’ ಎಂದು ಕೆಲವು ಸಂದರ್ಭಗಳಲ್ಲಿ ಅದು ವ್ಯಂಗ್ಯಕ್ಕೂ ಗುರಿಯಾಗಿದೆ!

‌ಕಳೆದ ಶತಮಾನದಲ್ಲೇ ಸ್ತ್ರೀವಾದವನ್ನು ಟ್ಯಾಗೋರರು ಪ್ರತಿಪಾದಿಸಿರುವುದು ಆದರ್ಶಪ್ರಾಯವಾದದ್ದು. ಅಂತೆಯೇ ಅವರು ವಿಶ್ವಮಾನ್ಯ ಕವಿ ಎನಿಸಿಕೊಂಡಿದ್ದಾರೆ. ವಿಶ್ವಕವಿ, ರಾಷ್ಟ್ರಕವಿ ಎಂಬ ವಿಶೇಷಣಗಳು ಯಾವುದೇ ಗಡಿಯನ್ನು ನೆಚ್ಚಿಕೊಂಡಂತವಲ್ಲ. ಆಶಯದಲ್ಲಿ, ಕಲಾತ್ಮಕವಾಗಿ ಅದನ್ನು ಕಟ್ಟಿಕೊಡುವಲ್ಲಿ ವಿಶ್ವಕವಿ, ರಾಷ್ಟ್ರಕವಿ ಎಂಬ ಮೆಚ್ಚುಗೆ ಪಡೆಯುತ್ತಾರೆ. ಕನ್ನಡದಲ್ಲೂ ವಿಶ್ವಕವಿ, ರಾಷ್ಟ್ರಕವಿ ಎನಿಸಿಕೊಳ್ಳುವ ಸಾಮರ್ಥ್ಯ ಅನೇಕ ನಾಟಕಕಾರರಿಗೆ, ಕವಿಗಳಿಗೆ ಇದೆ.

ಕತೆ ಕಳೆದ ಶತಮಾನದ್ದು. ಅದಕ್ಕೆ ತಕ್ಕಹಾಗೆ ಆರಂಭದಲ್ಲಿ ನಾಟಕದ ನಡಿಗೆ ನಿಧಾನ! ನಂತರ  ಸುಗಮ ಹಾದಿ ಹಿಡಿಯುತ್ತದೆ. ರಂಗಸಜ್ಜಿಕೆ, ಪ್ರಸಾಧನ, ಬೆಳಕು ಸೂಕ್ತವಾಗಿತ್ತು. ನೇಪಥ್ಯದ ಈ ವಿನ್ಯಾಸ ರೂಪಿಸಿದವರು ಹಿರಿಯರಾದ ಅಲೆಮನೆ ಸುಂದರಮೂರ್ತಿ ಮತ್ತು ಪ್ರಭಾಕರಬಾಬು ಜೋಡಿ. ಸಂಗೀತ ನಿರ್ವಹಣೆ ಜಿ. ಪ್ರಸನ್ನ. ಭಾರತಿ ಪ್ರಿಯದರ್ಶಿನಿ ಅವರೊಂದಿಗೆ ಹಿನ್ನೆಲೆ ಹಾಡು ಹಾಡಿದವರು ನಿರ್ದೇಶಕ ಜೀಜೀ ಅಲಿಯಾಸ್ ಪೂರ್ವಾಶ್ರಮದ ಗೋವಿಂದೇಗೌಡ. ನಟರಾಗಿ, ಹಾಡುಗಾರರಾಗಿ, ನಿರ್ದೇಶಕರಾಗಿ- ಸಿನಿಮಾ ನಿರ್ದೇಶಕ ಜೀಜೀ ಹಂತ ತಲುಪುವವರೆಗೆ ಇವರದು ಬಹುಮುಖ ಪ್ರತಿಭೆಯ ಬಹುವೇಗದ ನಡಿಗೆ.

ಅಭಿನಯಿಸಿದ ಬಹುತೇಕ ನಟ ನಟಿಯರು ಹೊಸಬರು. ರಂಗಸುಗ್ಗಿ ಟಸ್ಟ್‌ನ ತುಮಕೂರು ಶಿವಕುಮಾರ್ ಹೀಗೆಯೇ ನಿರಂತರವಾಗಿ ಹೊಸಬರಿಗೆ ಅವಕಾಶ ಕಲ್ಪಿಸುತ್ತ ಬಂದಿದ್ದಾರೆ. ಶಂಭುನಾಥ ಬಾಬು ಆಗಿ ರಾಮಪ್ರಕಾಶ್, ಅನುಪಮ ಬಾಬುವಾಗಿ ಪ್ರಜ್ವಲ್, ಅರೆಹುಚ್ಚನಾಗಿ ಡಿ.ಎಸ್. ಮಂಜುನಾಥ್, ವಧು ಕಲ್ಯಾಣಿ- ಅರುಣ, ಗೆಳತಿ- ಹೇಮಾ, ಹರೀಶ್- ಪೊಲೀಸ್ ನಾಗರಾಜ, ವಿನೂದಾದ- ಶ್ರೀಕಾಂತ ಚೆನ್ನಾಗಿ ನಟಿಸಿದರು. ಹಲವರು ತಮ್ಮ ಪ್ರಥಮ ಪ್ರಯತ್ನದಲ್ಲೇ ಉತ್ತಮ ನಟರಾಗುವ ಸೂಚನೆ ತೋರಿದರು.

ತಮ್ಮ ದೇಹಭಾಷೆ, ಹಾವಭಾವನ್ನು ಚೆನ್ನಾಗಿ ದುಡಿಸಿಕೊಂಡು ಅಕ್ಕಸಾಲಿಗರು ಮತ್ತಿತರ ಪಾತ್ರಗಳಲ್ಲಿ ಸುಲಲಿತವಾಗಿ ನಟಿಸಿದ ಮಂಜುನಾಥ ದೊಡ್ಡಮನಿ ಮತ್ತು ದೀಪಕ್. ಅತ್ತೆ ಪಾತ್ರದ ಹನುಮಕ್ಕನ ಬಗ್ಗೆ ಎರಡು ಮಾತು ಹೇಳಲೇಬೇಕು. ಟಿವಿ, ಸಿನಿಮಾ ಎಂದು ಯಾವ ಸೆಳೆತಗಳಿಗೂ ವಿಚಲಿತರಾಗದೆ- ನಾಟಕಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ನಟಿ ಹನುಮಕ್ಕ.

ವೃತ್ತಿರಂಗಭೂಮಿಯ ನಟರಾಗಿ ದಂತಕತೆಯಾದ ಮರಿಯಮ್ಮನಹಳ್ಳಿಯ ದುರ್ಗಾದಾಸ್ ಅವರ ಮಗಳು ಈ ಹನುಮಕ್ಕ. ಯಾವುದೇ ತಂಡದ ಎಂತಹದೇ ಪಾತ್ರಗಳಲ್ಲಿ ಸಲೀಸಾಗಿ ಅಭಿನಯಿಸಬಲ್ಲ, ಉತ್ತಮ ಶಾರೀರ ಹೊಂದಿದ ನಟಿ. ರಂಗಸುಗ್ಗಿ ಟ್ರಸ್ಟ್, ನಾಟ್ಯರಾಣಿ ಶಾಂತಲಾ ತಂಡ, ರಂಗ ಪರಂಪರೆ ಸೇರಿದಂತೆ ಹಲವು ತಂಡಗಳಿಗೆ ಹನುಮಕ್ಕ ಒಂದು ಆಸ್ತಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT