ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ–ಕನ್ನಡ ಕೊಂಡಿ ಪ್ರೊ. ಹರಿಶಂಕರ್

ವ್ಯಕ್ತಿ
Last Updated 26 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ರಷ್ಯಾದ ಖ್ಯಾತ ಕವಿ ಸೆರ್ಗೈ ಇಸೆನಿನ್‌ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಕನ್ನಡಿಗ ಪ್ರೊ. ಎಚ್‌.ಎಸ್‌.ಹರಿಶಂಕರ್‌ ಭಾಜನರಾಗಿದ್ದಾರೆ. ಈವರೆಗೆ ಈ ಪ್ರಶಸ್ತಿಯನ್ನು ಮಲೆಯಾಳಿ ಸಾಹಿತಿಗಳೇ ಪಡೆಯುತ್ತಿದ್ದರು. ಇದೇ ಮೊದಲ ಬಾರಿಗೆ ಅದು ಕನ್ನಡಿಗರೊಬ್ಬರಿಗೆ ಬಂದಿದೆ. ಇಸೆನಿನ್ ಕವಿಯ ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ವರ್ಷದಲ್ಲಿಯೇ ಕನ್ನಡಿಗರೊಬ್ಬರಿಗೆ ಈ ಪ್ರಶಸ್ತಿ ಲಭಿಸಿರುವುದು ವಿಶೇಷ. ರಷ್ಯಾ ಸಾಹಿತ್ಯವನ್ನು ಭಾರತೀಯ ಭಾಷೆ ಗಳಿಗೆ ಅನುವಾದ ಮಾಡುವ ಕಾರ್ಯವನ್ನು ಪರಿ ಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ತಿರುವನಂತಪುರ ದಲ್ಲಿರುವ ರಷ್ಯನ್‌ ಕಲ್ಚರಲ್‌ ಸೆಂಟರ್‌ ಮತ್ತು ಮಾಸ್ಕೊದ ಇಸೆನಿನ್ ಮ್ಯೂಸಿಯಂ ಜಂಟಿಯಾಗಿ ಈ ಪ್ರಶಸ್ತಿ ನೀಡುತ್ತವೆ.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ನಿವೃತ್ತರಾಗಿರುವ ಹರಿಶಂಕರ್‌ ರಷ್ಯಾ ಮತ್ತು ಕನ್ನಡ ಭಾಷೆಯ ಕೊಂಡಿಯಾಗಿ ಕೆಲಸ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ರಷ್ಯಾದ 18 ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ರಷ್ಯಾದ ಟಾಲ್ ಸ್ಟಾಯ್‌, ಚೆಕಾಫ್‌, ದಾಸ್ತೊವೊಸ್ಕಿ ಮುಂತಾದ ಪ್ರಸಿದ್ಧರು ಕನ್ನಡಕ್ಕೂ ದಕ್ಕುವಂತೆ ಮಾಡಿದ್ದಾರೆ.

ಚೆಕಾಫ್‌ನ ಕತೆಗಳು, ಕಜಾಕರು (ಟಾಲ್ ಸ್ಟಾಯ್ ಕಾದಂಬರಿ), ನರಿ ಮತ್ತು ಮೊಲ (ರಷ್ಯಾ ಜನಪದ ಕತೆಗಳು), 1–2–3 (ಮಕ್ಕಳ ಕವಿತೆಗಳು), ಜೂಶನ್‌ (ರಷ್ಯಾ ಸೈನಿಕನ ಕತೆ), ನಕ್ಷತ್ರ ಮತ್ತು ಗ್ರಹಗಳ ಕುರಿತು, ಇರುವೆ ಮತ್ತು ಪಾರಿವಾಳ, ನೈಜ ಮಾನವನ ಕತೆ ಮುಂತಾದ ರಷ್ಯಾದ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇದಲ್ಲದೆ ಜಾರ್ಜ್ ಡಬ್ಲ್ಯು ಸೌತ್‌ಗೇಟ್‌ ಅವರ ಯುರೋಪಿನ ಆಧುನಿಕ ಇತಿಹಾಸ ಕೃತಿಯನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಸುಂದರ ಮಾಸ್ಕೊ, ಸುಂದರ ರಷ್ಯಾ’ ಎಂಬ ಕೃತಿಯೂ ಸೇರಿದಂತೆ ಕನ್ನಡದಲ್ಲಿಯೂ ಹಲವಾರು ಪುಸ್ತಕಗಳನ್ನು ಅವರು ರಚಿಸಿದ್ದಾರೆ.

ಭಾರತ–ಸೋವಿಯತ್‌ ಮೈತ್ರಿಯ ನಂತರ ಭಾರತದ ಬಹಳಷ್ಟು ವಿಶ್ವವಿದ್ಯಾಲಯಗಳಲ್ಲಿ ರಷ್ಯನ್‌ ಭಾಷೆ ಕಲಿಸುವ ಕ್ರಿಯೆಗಳು ನಡೆದವು. 1964ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿಯೂ ರಷ್ಯನ್‌ ಭಾಷೆ ಕಲಿಸುವ ತರಗತಿ ಆರಂಭವಾಯಿತು. ಹರಿಶಂಕರ್‌ ಅವರು ಆಗ ರಷ್ಯನ್‌ ಭಾಷೆ ಕಲಿತರು. ರಷ್ಯಾ ಭಾಷೆ ಕಲಿಸಲು ಮಾಸ್ಕೊದಿಂದ ಮೈಸೂರಿಗೆ ಬಂದವರಿಗೆ ಬೇರೆ ಭಾಷೆ ಬರುತ್ತಿರಲಿಲ್ಲ. ಹರಿಶಂಕರ್‌ ಅವರ ಜೊತೆ ಸ್ನೇಹ ಸಂಪಾದಿಸಿದರು. ತಮ್ಮ ಸ್ಕೂಟರ್‌ನಲ್ಲಿ ಅವರನ್ನು ಸುತ್ತಾಡಿಸಿದರು. ಆ ಮೂಲಕ ರಷ್ಯ ಭಾಷೆಯನ್ನು ತಮ್ಮದಾಗಿಸಿಕೊಂಡರು.

ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಆರಂಭವಾದ ವಿದೇಶಿ ಭಾಷಾ ವಿಭಾಗದಲ್ಲಿ 4 ವರ್ಷಗಳ ಕಾಲ ರಷ್ಯನ್‌ ಭಾಷೆ ಪಾಠವನ್ನೂ ಮಾಡಿದರು. 1967ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಸಹಾಯಕ ಅನುವಾದಕರಾಗಿ ವೃತ್ತಿ ಆರಂಭಿಸಿದ ಹರಿಶಂಕರ್‌ 1970ರಲ್ಲಿ ಅಧ್ಯಾಪಕರಾದರು. 1999ರಲ್ಲಿ ಪ್ರೊಫೆಸರ್‌ ಆದರು. ಕನ್ನಡ ಮತ್ತು ಅನುವಾದ ವಿಷಯಗಳನ್ನು ಅವರು ಬೋಧಿಸುತ್ತಿದ್ದರು. 1972ರಲ್ಲಿ ರಷ್ಯನ್‌ ಫೆಲೋಷಿಪ್‌ ಪಡೆದ ಹರಿಶಂಕರ್‌ ಅನುವಾದ ತಂತ್ರಗಳು ಮತ್ತು ರಷ್ಯನ್‌ ಭಾಷೆಯನ್ನು ಮಾಸ್ಕೊ ಸ್ಟೇಟ್‌ ಯೂನಿವರ್ಸಿಟಿಯಲ್ಲಿ ಒಂದು ವರ್ಷ ಕಲಿತರು.  

ರಷ್ಯಾ ಭಾಷೆ ಚೆನ್ನಾಗಿ ಬರುತ್ತಿದ್ದರಿಂದ ಸೋವಿಯತ್‌ ಯೂನಿಯನ್‌ ಜೊತೆ ಅವರ ಸಂಪರ್ಕ ಬೆಳೆದಿತ್ತು. ಮಾಸ್ಕೊದ ಪೀಪಲ್ಸ್ ಫ್ರೆಂಡ್‌ಶಿಪ್‌ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ 1975ರಲ್ಲಿ  ಮಾಸ್ಕೊಗೆ ತೆರಳಿದ ಹರಿಶಂಕರ್‌ ಅಲ್ಲಿ 40 ದಿನ ಇದ್ದರು. ‘ಕನ್ನಡದ ಮೇಲೆ ರಷ್ಯನ್‌ ಸಾಹಿತ್ಯದ ಪ್ರಭಾವ’ ಕುರಿತು ಉಪನ್ಯಾಸ ನೀಡಿದರು. ನಂತರ 1978ರಲ್ಲಿಯೂ ಇದೇ ವಿಶ್ವವಿದ್ಯಾನಿಲಯದ ಆಹ್ವಾನದ ಮೇರೆಗೆ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಅವರು ಆಗಲೂ 40 ದಿನ ರಷ್ಯಾದಲ್ಲಿದ್ದರು.

ರಷ್ಯಾ ಸರ್ಕಾರದ ‘ರಾದುಗಾ ಪಬ್ಲಿಕೇಷನ್’ ಕರೆಯ ಮೇರೆಗೆ 1988ರಿಂದ 1990ರವರೆಗೆ ರಷ್ಯಾದಲ್ಲಿಯೇ ಇದ್ದ ಹರಿಶಂಕರ್‌ ರಷ್ಯಾದ ಸಾಕಷ್ಟು ಕೃತಿಗಳನ್ನು ಕನ್ನಡಕ್ಕೆ ತಂದರು. ರಷ್ಯಾ ಭಾಷೆಯಲ್ಲಿ ರಾದುಗಾ ಎಂದರೆ ಕಾಮನಬಿಲ್ಲು. ಹೆಸರಿಗೆ ತಕ್ಕಂತೆ ಹರಿಶಂಕರ್‌ ರಷ್ಯಾದ ಬಣ್ಣಬಣ್ಣದ ಸಾಹಿತ್ಯವನ್ನೇ ಕನ್ನಡಕ್ಕಿಳಿಸಿದರು. ಅದೇ ಸಂದರ್ಭದಲ್ಲಿ ರೇಡಿಯೊ ಮಾಸ್ಕೊದಲ್ಲಿ ಉದ್ಘೋಷಕರಾಗಿಯೂ ಅವರು ಕೆಲಸ ನಿರ್ವಹಿಸಿದರು. ಆಗ ರೇಡಿಯೊ ಮಾಸ್ಕೊದಲ್ಲಿ ಪ್ರತಿ ದಿನ ಮಧ್ಯಾಹ್ನ 2ರಿಂದ 2.30ರವರೆಗೆ ಹಾಗೂ ಸಂಜೆ 4.30ರಿಂದ 5 ಗಂಟೆಯವರೆಗೆ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಇದರಲ್ಲಿ ರಷ್ಯಾದ ಸುದ್ದಿಗಳನ್ನು ಹರಿಶಂಕರ್‌ ಕನ್ನಡದಲ್ಲಿ ಓದುತ್ತಿದ್ದರು.

ಹರಿಶಂಕರ್‌ ಅವರ ತಂದೆ ಎಚ್‌.ಎಂ.ಶಂಕರನಾರಾಯಣ ಅವರೂ ಪ್ರಸಿದ್ಧ ಸಾಹಿತಿ ಮತ್ತು ಪ್ರಕಾಶಕ. ಶಾರದಾ ಮಂದಿರ ಪ್ರಕಾಶನದ ಮೂಲಕ 300ಕ್ಕೂ ಹೆಚ್ಚು ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಇದರಿಂದಾಗಿ ಹರಿಶಂಕರ್‌ ಅವರಿಗೆ ಬಾಲ್ಯದಿಂದಲೇ ಸಾಹಿತಿಗಳ ಸಂಪರ್ಕ ಇತ್ತು. ಮೈಸೂರಿನಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಹರಿಶಂಕರ್‌ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಮಾಡಿದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಷ್ಯನ್‌ ಭಾಷೆಯ ಮೇಲೆ ಎಂ.ಎ. ಮಾಡಿದರು. ಅನುವಾದ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಫಿಲ್‌ ಮಾಡಿದ್ದಾರೆ. 4 ಮಂದಿ ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ಹಾಗೂ 5 ಮಂದಿಗೆ ಎಂಫಿಲ್‌ ಮಾರ್ಗದರ್ಶಕರಾಗಿದ್ದರು.

ಸೂರ್ಯ ಮುಳುಗದ ನಾಡು ಎಂದೇ ಪ್ರಸಿದ್ಧವಾದ ರಷ್ಯಾದ ತಮ್ಮ ಬದುಕಿನ ಪುಟವನ್ನು ನೆನಪಿಸಿಕೊಳ್ಳುವ ಹರಿಶಂಕರ್‌ ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಹರಿಶಂಕರ್‌ ಮಾಸ್ಕೊದಲ್ಲಿದ್ದಾಗ ಡಾ. ಯು.ಆರ್‌. ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಪಾಟೀಲ ಪುಟ್ಟಪ್ಪ ಮುಂತಾದ ಹಿರಿಯರು ಭೇಟಿ ನೀಡಿದ್ದರು. ‘ಕನ್ನಡದ ಹಿರಿಯರು ಅಥವಾ ಕನ್ನಡದ ಯಾರೇ ಬಂದರೂ ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ಅವರಿಗೆ ಉಪ್ಪಿಟ್ಟು, ಕಾಫಿ ಮಾಡಿಕೊಡುತ್ತಿದ್ದೆ. ಬಹುತೇಕ ಎಲ್ಲರೂ ಖುಷಿಯಿಂದ ನಮ್ಮ ಮನೆಯ ಆತಿಥ್ಯ ಸ್ವೀಕರಿಸಿ ಹೋಗುತ್ತಿದ್ದರು’ ಎಂದು ಹರಿಶಂಕರ್‌ ಮೆಲುಕು ಹಾಕುತ್ತಾರೆ.

‘ನಾನು ಅಲ್ಲಿ ಒಂದು ವರ್ಷ ಒಬ್ಬಂಟಿಯಾಗಿದ್ದೆ. ನಂತರ ಒಂದು ವರ್ಷ ನನ್ನ ಪತ್ನಿ ಜೊತೆಗೆ ಬಂದು ನೆಲೆಸಿದಳು. ನಾನೊಬ್ಬನೇ ಇದ್ದಾಗ ಸ್ವಯಂ ಪಾಕ. ಅದನ್ನೇ ಅತಿಥಿಗಳಿಗೂ ಬಡಿಸುತ್ತಿದ್ದೆ. ಅಂತಹ ಪಾಕದ ರುಚಿಯನ್ನು ಪಾಟೀಲ ಪುಟ್ಟಪ್ಪ ಬಹುಕಾಲದವರೆಗೆ ನೆನಪಿಟ್ಟುಕೊಂಡಿದ್ದರು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ. 1983ರಲ್ಲಿ ಅವರಿಗೆ ಸೋವಿಯತ್‌ಲ್ಯಾಂಡ್‌ ನೆಹರೂ ಪ್ರಶಸ್ತಿ ಬಂದಿತ್ತು. ಈಗ ಮತ್ತೆ ರಷ್ಯಾದ ಇಸೆನಿನ್‌ ಪ್ರಶಸ್ತಿ ಬಂದಿದೆ. ಕನ್ನಡದ ಪ್ರಶಸ್ತಿಗಳು ಬಾರದಿದ್ದರೂ ರಷ್ಯಾದವರು ಅವರನ್ನು ಗುರುತಿಸಲು ಮರೆಯಲಿಲ್ಲ. ರಷ್ಯಾ ದೇಶ ಬೇಲಿನೋಚ್‌ (ಬಿಳಿ ರಾತ್ರಿ) ಎಂದೇ ಪ್ರಸಿದ್ಧ. ಅಲ್ಲಿ ರಾತ್ರಿಯಾದರೂ ಸೂರ್ಯ ಮುಳುಗುವುದಿಲ್ಲ. ಅದಕ್ಕೇ ಅಲ್ಲಿನ ಜನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಲಗುತ್ತಾರಂತೆ. ಹರಿಶಂಕರ್‌ ಪಾಲಿಗೆ ಕನ್ನಡ ಸಾರಸ್ವತಲೋಕವೂ ಹೀಗೆ ಮಾಡಿರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT