ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿದ ಬಸ್‌ಗಳು; ಮೆಜೆಸ್ಟಿಕ್‌ನಲ್ಲಿ ಲಾಠಿ ಪ್ರಹಾರ

Last Updated 26 ಜುಲೈ 2016, 20:10 IST
ಅಕ್ಷರ ಗಾತ್ರ

ಬೆಂಗಳೂರು: ಮುಷ್ಕರದ ನಡುವೆಯೇ ಮಂಗಳವಾರ ಮಧ್ಯಾಹ್ನದ ಬಳಿಕ ಬಿಎಂಟಿಸಿ, ಕೆಎಸ್‌ಆರ್‌ಟಿಸಿಯ ಕೆಲ ಬಸ್‌ಗಳು ರಸ್ತೆಗೆ ಇಳಿದು ಸಂಚರಿಸಿದವು.

ಆದರೆ, ಪ್ರತಿಭಟನಾಕಾರರ ವಿರೋಧ, ಪ್ರಯಾಣಿಕರ ಕೊರತೆ ಎದುರಿಸಿದವು. ಶಾಂತಿನಗರ ಡಿಪೊ 2 ಹಾಗೂ ಡಿಪೊ 3ರ ಬಸ್‌ಗಳು ಮಧ್ಯಾಹ್ನ 3 ಗಂಟೆಯ ವೇಳೆಗೆ  ಪೊಲೀಸ್ ಸಿಬ್ಬಂದಿಯ ಭದ್ರತೆ ನಡುವೆ  ಮೆಜೆಸ್ಟಿಕ್‌ಗೆ ಪಯಣಿಸಿದವು.

ಶಾಂತಿನಗರ ಡಿಪೊದ ಬಸ್ಸೊಂದು ಮಧ್ಯಾಹ್ನ 4.40ರ ಸುಮಾರಿಗೆ ಮೆಜೆಸ್ಟಿಕ್‌ಗೆ ಬಂತು. ಆಗ ಪ್ರಯಾಣಿಕರ ವೇಷದಲ್ಲಿದ್ದ ಸಾರಿಗೆ ಸಂಸ್ಥೆಯ ನೌಕರರು  ಎನ್ನಲಾದ ಕೆಲವರು, ಬಸ್‌ಗೆ ಘೇರಾವ್‌ ಹಾಕಿ ತಡೆಯಲು ಯತ್ನಿಸಿದರು. ಚಾಲಕ, ಪೊಲೀಸ್ ಭದ್ರತೆಯಲ್ಲಿ  ಬಸ್‌ ಓಡಿಸಲು ಮುಂದಾದ.

ಆಗ ಗುಂಪಿನಲ್ಲಿದ್ದವನೊಬ್ಬ ಚಾಲಕನನ್ನು ಗುರಿಯಾಗಿಸಿಕೊಂಡು ನೀರು ತುಂಬಿದ್ದ ಬಾಟಲಿ ಎಸೆದ. ಆದರೂ ಬಸ್‌ ನಿಧಾನವಾಗಿ ಸಾಗುತ್ತಲೇ ಇತ್ತು. ಅದರ ನಡುವೆಯೇ ಮತ್ತೊಬ್ಬ ಚಾಲಕನ ಮೇಲೆ ಹಲ್ಲೆಗೂ ಯತ್ನಿಸಿದ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು, ಲಘು ಲಾಠಿ  ಪ್ರಹಾರ ನಡೆಸಿ, ಜನರನ್ನೆಲ್ಲ  ಚದುರಿಸಿದರು.

ಹೋದ ಬಸ್‌ ಬರಲಿಲ್ಲ... ‘ಮಧ್ಯಾಹ್ನದ ಬಳಿಕ ಶಾಂತಿನಗರದಿಂದ ಒಟ್ಟು 9 ಬಸ್ಸುಗಳು 11 ಟ್ರಿಪ್‌ ಮಾಡಿವೆ. ಆ ಬಳಿಕ ಹೋದ ಬಸ್ಸುಗಳು ಮರಳಿ ಬಂದಿಲ್ಲ’ ಎಂದು ಮೆಜೆಸ್ಟಿಕ್‌ನಲ್ಲಿ ಸಾರಿಗೆ ವಿಭಾಗದ ಸಿಬ್ಬಂದಿಯೊಬ್ಬರು ತಿಳಿಸಿದರು.

ಪ್ರಯಾಣಿಕರೇ ಇಲ್ಲ...: ಮೆಜೆಸ್ಟಿಕ್‌ನಿಂದ ಮೈಸೂರು ರಸ್ತೆಯ ಸ್ಯಾಟ್‌ಲೈಟ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕೆಎಸ್‌ಆರ್‌ಟಿಸಿಯ ‘ಸಂಪರ್ಕ ಸಾರಿಗೆ’ ಬಸ್‌ಗಳು ಮಧ್ಯಾಹ್ನ 3.45ರಿಂದ  ಸಂಜೆಯ ತನಕ ಓಡಾಡಿದವು.

ಆದರೆ, ತೀವ್ರತರ ಪ್ರಯಾಣಿಕರ ಕೊರತೆ ಎದುರಿಸಿದವು.
‘ಸಂಜೆ ಆರು ಗಂಟೆಯ ತನಕ ಒಟ್ಟು 14 ಟ್ರಿಪ್‌ಗಳಲ್ಲಿ ಬಸ್‌ ಓಡಾಡಿವೆ. ಆದರೂ, ಜನರೇ ಇಲ್ಲ’ ಎಂದು ಕೆಎಸ್‌ಆರ್‌ಟಿಸಿ ಸಹಾಯಕ ಸಂಚಾರ ನಿರೀಕ್ಷಕರೊಬ್ಬರು ಪ್ರತಿಕ್ರಿಯಿಸಿದರು.

‘ಮೂರು ಟ್ರಿಪ್‌ ಓಡಿಸಿದೆ. ಈತನಕ ಕೇವಲ 11 ಪ್ರಯಾಣಿಕರು ಸಂಚರಿಸಿದ್ದಾರೆ. ಬೇರೆ ದಿನವಾಗಿದ್ದರೆ, ಪ್ರಯಾಣಿಕರ ಸಂಖ್ಯೆ 120ಕ್ಕೆ ಕಮ್ಮಿ ಇರುತ್ತಿರಲಿಲ್ಲ. ಇದು ನಾಲ್ಕನೇ ಟ್ರಿಪ್‌. ನೋಡಿ ಬಸ್‌ನಲ್ಲಿ ಒಬ್ಬರೇ ಇದ್ದಾರೆ’ ಎಂದು ಚಾಲಕ ಜಗದೀಶ್  ಅವರು ಬಸ್‌ನತ್ತ ಕೈತೋರಿ ಹೇಳಿದರು.

ಉಚಿತ ಸೇವೆ
ಮುಷ್ಕರದಿಂದ ಪರದಾಡಿದ ಜನರಿಗೆ ಸ್ಪಂದಿಸಲು ‘ಡಾ.ರಾಜ್‌ ಜನಪ್ರಿಯ ಪಬ್ಲಿಕ್ ನೆಟ್‌ವರ್ಕ್‌’ ಉಚಿತವಾಗಿ ವಾಹನ ಓಡಿಸಿತು.

ರಾಜಕುಮಾರ್ ರಸ್ತೆಯಿಂದ ವಿಧಾನಸೌಧ ಮಾರ್ಗವಾಗಿ ಮೆಜೆಸ್ಟಿಕ್‌ ವರೆಗೂ ಜನರನ್ನು ಉಚಿತವಾಗಿ ಕರೆದೊಯ್ಯಿತು. ಸರಕು ಸಾಗಿಸುವಂಥ ಟಾಟಾ ಕಂಪೆನಿ ಗಾಡಿಯಲ್ಲಿ ಐದಾರು ಸ್ಟೂಲ್‌ಗಳನ್ನು ಇಟ್ಟುಕೊಂಡು ಜನರನ್ನು ಸಾಗಿಸಿತು.

‘ಎರಡು ದಿನದಲ್ಲಿ 34 ಟ್ರಿಪ್‌್್ ಸಂಚಾರ ಮಾಡಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ವಿಶ್ವೇಶ್ವರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT