ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿಯದ ಬಸ್‌, ಬೀದಿಗಿಳಿದ ಕಾರ್ಮಿಕರು

ಗದುಗಿನಲ್ಲಿ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ: ಹಲವು ಶಾಲಾ–ಕಾಲೇಜಿಗೆ ರಜೆ, ಪ್ರಯಾಣಿಕರ ಪರದಾಟ
Last Updated 3 ಸೆಪ್ಟೆಂಬರ್ 2015, 6:23 IST
ಅಕ್ಷರ ಗಾತ್ರ

ಗದಗ: ಕೇಂದ್ರ ಕಾರ್ಮಿಕ ನೀತಿಗೆ ವಿರೋಧ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಅಂಚೆ ಕಚೇರಿ, ಬ್ಯಾಂಕ್‌ಗಳು, ಜೀವ  ವಿಮಾ ನಿಗಮ ಕಚೇರಿಗಳನ್ನು ಬಂದ್‌ ಮಾಡಲಾಗಿತ್ತು. ಅಂಗನವಾಡಿ, ಅಕ್ಷರ ದಾಸೋಹ, ಅಂಚೆ ನೌಕರರು, ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯಕೀಯ ಮತ್ತು ಔಷಧ ಮಾರಾಟ ಪ್ರತಿನಿಧಿಗಳ ಸಂಘದ ಸದಸ್ಯರು ಕೆಲಸ ಸ್ಥಗಿತಗೊಳಿಸಿ ಮೆರವಣಿಗೆ ನಡೆಸಿದರು. ನಗರದ ಗಾಂಧಿ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಕೆಎಸ್ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಸೇವೆ ಸ್ಥಗಿತಗೊಳಿಸಲಾಗಿತ್ತು. ಆಟೊ, ಮ್ಯಾಕ್ಸಿಕ್ಯಾಬ್‌ ಸಂಚಾರವಿದ್ದರೂ ಪ್ರಯಾಣಿಕರು ಇರಲಿಲ್ಲ. ರೈಲು ಸಂಚಾರ ಇದ್ದ ಕಾರಣ ಹೆಚ್ಚಿನ ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ಕಂಡು ಬಂದರು.

ಎಟಿಎಂ ಕೇಂದ್ರಗಳು, ಹಣ್ಣು–ತರಕಾರಿ ಮಾರುಕಟ್ಟೆ, ಅಂಗಡಿ, ಮುಂಗಟ್ಟು, ಹೋಟೆಲ್‌ಗಳು, ಪೆಟ್ರೋಲ್‌ ಬಂಕ್‌, ಚಿತ್ರಮಂದಿರ ಪ್ರದರ್ಶನದಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ.

ವಿವಿಧ ಬೇಡಿಕೆ:ಹೊಸ ಪಿಂಚಣಿ ನೀತಿ ರದ್ದುಗೊಳಿಸಬೇಕು, ನೌಕರರನ್ನು ಕಾಯಂಗೊಳಿಸಬೇಕು, ಖಾಸಗೀಕರಣ, ಹೊರಗುತ್ತಿಗೆ ನಿಲ್ಲಿಸಬೇಕು, ಶೇಕಡಾ 100ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದೊಂದಿಗೆ ವಿಲೀನಗೊಳಿಸುವುದು ಮತ್ತು ಅನುಕಂಪ ಆಧಾರಿತ ನೇಮಕಾತಿ ನಿಯಮಗಳ ಮೇಲಿನ ನಿರ್ಬಂಧ ತೆಗೆದುಹಾಕುವಂತೆ ಒತ್ತಾಯಿಸಿ ಅಂಚೆ ನೌಕರರು ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಎನ್‌.ಎಸ್‌.ಪ್ರಸನ್ನಕುಮಾರ್‌ಗೆ ಮನವಿ ಸಲ್ಲಿಸಿದರು.

ಅಂಚೆ ನೌಕರರ ಸಂಘದ ಕಾರ್ಯದರ್ಶಿ ಎಂ.ಬಿ.ನದಾಫ, ಡಿ.ವಿ.ಆಲೂರ, ರಾಜು ಪಾಟೀಲ, ಎಂ.ಆರ್‌.ಭಜಂತ್ರಿ ಭಾಗವಹಿಸಿದ್ದರು.
ಕಾರ್ಪೊರೇಟ್‌ ವಲಯದ ಪರ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಕೈ ಬಿಡಬೇಕು, ವಿಮಾ ರಂಗದಲ್ಲಿ ವಿದೇಶಿ ನೇರ ಬಂಡವಾಳ ಮಿತಿಯನ್ನು ಶೇಕಡಾ 49ಕ್ಕೆ ಹೆಚ್ಚಿಸುವ ಸುಗ್ರೀವಾಜ್ಞೆ ಕೈ ಬಿಡಬೇಕು, ಭೂ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಹಾಗೂ ಕಾರ್ಮಿಕ ಕಾನೂನು ತಿದ್ದುಪಡಿ ಮಸೂದೆ ವಾಪಸ್‌ ಆಗಬೇಕು ಎಂದು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಕನಿಷ್ಠ ವೇತನ ₨ 15 ಸಾವಿರ ನಿಗದಿಯಾಗಬೇಕು, ಗುತ್ತಿಗೆ ಕಾರ್ಮಿಕ ಕಾನೂನಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಿದ್ದುಪಡಿ ಮಾಡಬೇಕು, ₨ 3 ಸಾವಿರ ಕನಿಷ್ಠ ಪಿಂಚಣಿ, ಬೋನಸ್‌, ಭವಿಷ್ಯ ನಿಧಿ ಮಿತಿ ಹೆಚ್ಚಳ ಮಾಡಬೇಕು, ಸಾರ್ವಜನಿಕ ಉದ್ಯಮಗಳ ಷೇರು ವಿಕ್ರಯ ನಿಲ್ಲಿಸಬೇಕು ಹಾಗೂ ರಾಜಸ್ಥಾನ, ಗುಜರಾತ್‌ ಶಾಸನ ಸಭೆ ಅಂಗೀಕರಿಸಿರುವ ಕಾರ್ಮಿಕ ಕಾನೂನು ತಿದ್ದುಪಡಿ ಮಸೂದೆ ವಾಪಸಾಗಬೇಕು ಎಂದರು.  ಅಲ್ಲದೇ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆ, ಕಲ್ಯಾಣ ಯೋಜನೆಗಳ ಜಾರಿಗೆ ಸಮರ್ಪಕ ಹಣ ಮೀಸಲಿಡುವುದು ಹಾಗೂ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆ ಜಾರಿ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರಕ್ಕೆ ಮನವಿ ಅರ್ಪಿಸಿದರು.

ಮುಷ್ಕರದಲ್ಲಿ  ಸಿಐಟಿಯು ಜಿಲ್ಲಾ ಅಧ್ಯಕ್ಷ ಮಹೇಶ ಹಿರೇಮಠ, ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ, ಎಲ್‌ಐಸಿ ಏಜೆಂಟರ ಮುಖಂಡ ಎಫ್‌.ಎಸ್‌.ಸಿಂಧಗಿ, ಔಷಧ ಮಾರಾಟ ಸಂಘದ ಕಾರ್ಯದರ್ಶಿ ಎ.ಎಸ್‌.ಹೊಳೆಣ್ಣವರ, ವಿಮಾ ನೌಕರರ ಸಂಘದ ಜೆ.ಎಸ್‌.ತಳವಾರ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಯಶೋದಾ ಬೆಟಗೇರಿ, ತಾಲ್ಲೂಕು ಅಧ್ಯಕ್ಷೆ ಶೋಭಾ ನರಗುಂದ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT