ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗೆ ಬಂದ ಒಂದು ಬಸ್‌; ರಕ್ಷಣೆಗೆ ನಿಂತ ಪೊಲೀಸರು!

ಬೆಂಗಾವಲಿನಲ್ಲಿ ಹರಿಹರಕ್ಕೆ ಹೋದ ಬಸ್‌, ಅಡ್ಡ ಮಲಗಿ ಪ್ರತಿಭಟಿಸಿದ ನೌಕರರು
Last Updated 27 ಜುಲೈ 2016, 10:09 IST
ಅಕ್ಷರ ಗಾತ್ರ

ದಾವಣಗೆರೆ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ಮಧ್ಯಾಹ್ನ ಪೊಲೀಸರ ಸರ್ಪಗಾವಲಿನಲ್ಲಿ ಒಂದೇ ಒಂದು ಬಸ್‌ ರಸ್ತೆಗೆ ಇಳಿಯಿತು. ದಾವಣಗೆರೆ ಬಸ್‌ ನಿಲ್ದಾಣದಿಂದ ಹರಿಹರಕ್ಕೆ ಹೊರಟ ಬಸ್‌ಗೆ ಎರಡು ಪೊಲೀಸ್‌ ಜೀಪುಗಳು ಬೆಂಗಾವಲಾಗಿದ್ದರೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಕಾರುವೊಂದು ಬಸ್‌ ಅನ್ನು ಹಿಂಬಾಲಿಸಿ, ರಕ್ಷಣೆ ನೀಡಿತು.

ಡಿಪೊ ಆವರಣದಿಂದ ಹೊರಟ ಬಸ್‌ನಲ್ಲಿ ಚಾಲಕ, ನಿರ್ವಾಹಕ ಜತೆ ನಾಲ್ವರು ಪೊಲೀಸ್‌ ಸಿಬ್ಬಂದಿ, ನಿಗಮದ ಕೆಲ ನೌಕರರಿದ್ದರು. ಇಷ್ಟು ಜನರನ್ನು ಹೊತ್ತ ಬಸ್‌ಗೆ ಸ್ವತಃ ನಿಗಮದ ಅಧಿಕಾರಿಗಳೇ ನಿಂತು ಬೀಳ್ಕೊಡುಗೆ ನೀಡಿದರು. ಬಸ್‌, ನಿಲ್ದಾಣದಿಂದ ಪಿ.ಬಿ.ರಸ್ತೆ ಸೇರುವವರೆಗೂ ಹೆಜ್ಜೆ, ಹೆಜ್ಜೆಗೂ ಪೊಲೀಸರು ನಿಂತಿದ್ದು ರಕ್ಷಣೆ ನೀಡಿದರು.

ಬಸ್‌ ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆ ರಸ್ತೆಯ ಮತ್ತೊಂದು ಬದಿಗೆ ನಿಂತಿದ್ದ ಮುಷ್ಕರ ನಿರತ ನೌಕರರು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಪೊಲೀಸ್‌ ರಕ್ಷಣೆಯಲ್ಲಿ ಬಸ್‌, ಹರಿಹರ ಬಸ್‌ ನಿಲ್ದಾಣಕ್ಕೆ ಸಾಗಿತು.  ದಾವಣಗೆರೆ ನಗರ ದಾಟುವಷ್ಟರಲ್ಲೇ ಬಸ್‌ ಪ್ರಯಾಣಿಕರಿಂದ ತುಂಬಿತು. ಆದರೆ, ಹರಿಹರಕ್ಕೆ ಹೋದ ಬಸ್ ರಾತ್ರಿಯಾದರೂ ಹಿಂತಿರುಗಲೇ ಇಲ್ಲ.

‘ಮುಷ್ಕರ ಮುರಿಯುವ ಉದ್ದೇಶದಿಂದಲೇ ಅಧಿಕಾರಿಗಳು ತರಬೇತಿ ಹಂತದ ನೌಕರರ ಮೇಲೆ ಒತ್ತಡ ತರುತ್ತಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ಚಾಲಕರು ಬಸ್‌ ಚಾಲನೆ ಮಾಡುತ್ತಿದ್ದಾರೆ. ಚಾಲನಾ ಪರವಾನಗಿ ಇಲ್ಲದವರ ಕೈಯಲ್ಲಿ ಬಸ್‌ ನೀಡುವುದು ಅಪರಾಧ. ಇದನ್ನು ಪೊಲೀಸರು ಗಮನಿಸಬೇಕು’ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ನಿಮಿಷದ ನಂತರ ದಾವಣಗೆರೆ–ಹರಿಹರ ಮಾರ್ಗದಲ್ಲಿ ಇನ್ನೊಂದು ಬಸ್‌ ಡಿಪೊದಿಂದ ಹೊರಡುತ್ತಿದ್ದಂತೆ ನಿಲ್ದಾಣದ ಬಾಗಿಲಿಗೆ ಅಡ್ಡ ಮಲಗಿದ ನೌಕರರು, ‘ಯಾವುದೇ ಕಾರಣಕ್ಕೂ  ನಿಲ್ದಾಣದಿಂದ ಬಸ್‌ ಹೊರಕ್ಕೆ ಹೋಗಲು ಬಿಡುವುದಿಲ್ಲ. ಒಂದು ವೇಳೆ ಬಸ್‌ ಹೋಗುವುದಾದರೆ ನಮ್ಮ ಮೈ ಮೇಲೆ ಹತ್ತಿಕೊಂಡು ಹೋಗಲಿ’ ಎಂದು ಸವಾಲು ಹಾಕಿದರು. ತಕ್ಷಣಕ್ಕೆ ಸ್ಥಳಕ್ಕೆ ಬಂದ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾಗದ ಚಾಲಕರು, ನಿರ್ವಾಹಕರ ಸಂಘದ ಅಧ್ಯಕ್ಷ ಎಚ್‌.ಕೆ.ರಾಮಚಂದ್ರಪ್ಪ ಘೋಷಣೆ ಕೂಗಿ ಹೋರಾಟಕ್ಕೆ ಇನ್ನಷ್ಟು ಹುರುಪು ತಂದರು.

‘ಯಾವುದೇ ಕಾರಣಕ್ಕೂ ಮುಷ್ಕರ ನಿಲ್ಲಿಸಲು ಸಾಧ್ಯವಿಲ್ಲ. ನೌಕರರ ನಡುವೆ ಒಡಕು ಉಂಟು ಮಾಡಲು ಅಧಿಕಾರಿಗಳು ಹೊರಟಿರುವುದು ಸರಿ ಅಲ್ಲ’ ಎಂದು ರಾಮಚಂದ್ರಪ್ಪ ದೂರಿದರು. ಸ್ಥಳದಲ್ಲಿದ್ದ ಪೊಲೀಸ್‌ ವೃತ್ತ ನಿರೀಕ್ಷಕ ಉಮೇಶ್‌, ರಾಮಚಂದ್ರಪ್ಪ ಅವರನ್ನು ಮಾತುಕತೆಗೆ ಡಿಪೊ ಒಳಗೆ ಕರೆದುಕೊಂಡು ಹೋದರು.

ಸಂಧಾನ ವಿಫಲ: ಅಲ್ಲಿದ್ದ ನಿಗಮದ ವಿಭಾಗೀಯ ಅಧಿಕಾರಿಗಳ ಜತೆ ನಡೆಸಿದ ಸಂಧಾನ ಮಾತುಕತೆ ಯಾವುದೇ ಫಲಪ್ರದ ಕಾಣಲಿಲ್ಲ.

‘ಸ್ವ ಇಚ್ಛೆಯಿಂದ ಕೆಲಸ ಕೇಳಿ ಬರುವ ನೌಕರರಿಗೆ ಬಸ್‌ ನೀಡಿ ಕಳುಹಿಸಿದ್ದೇವೆ. ನಮಗೂ ಸರ್ಕಾರದ ಆದೇಶ ಬಂದಿದ್ದು, ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಕೆಲಸ ಮಾಡಲು ಸಹಕರಿಸಿ’ ಎಂದು ನಿಗಮದ ವಿಭಾಗೀಯ ಅಧಿಕಾರಿ ಕೆ.ಎಚ್. ಶ್ರೀನಿವಾಸ್‌, ಎಚ್‌.ಕೆ.ರಾಮಚಂದ್ರಪ್ಪ ಅವರಿಗೆ ಮನವಿ ಮಾಡಿದರು.

‘ಸರ್ಕಾರದ ಜತೆ ಮಾತುಕತೆ ನಡೆಯುತ್ತಿರುವಾಗಲೇ ಬಸ್‌ ಬಿಟ್ಟಿರುವುದು ಸರಿ ಅಲ್ಲ. ನೌಕರರ ಸಂಕಷ್ಟಕ್ಕೆ ನೀವು ಸ್ಪಂದಿಸಬೇಕು. ನೌಕರರ ಮೇಲೆ ಒತ್ತಡ ತಂದು ಕೆಲಸ ಮಾಡಿಸುವುದು ದೌರ್ಜನ್ಯ’ ಎಂದು ರಾಮಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ನಾವು ಯಾವುದೇ ನೌಕರರ ಮೇಲೆ ಒತ್ತಡ ತಂದಿಲ್ಲ. ಕಾರ್ಮಿಕರ ಮುಖಂಡರೇ ನೌಕರರ ಮೇಲೆ ಒತ್ತಡ ತರುತ್ತಿದ್ದಾರೆಂಬ ಮಾಹಿತಿ ಇದೆ’ ಎಂದು ವಿಭಾಗೀಯ ಅಧಿಕಾರಿ ದೂರಿದರು.

‘ನೀವು ನಮಗೆ ಸಹಕಾರ ನೀಡದಿದ್ದರೆ ಬಸ್‌ ತಡೆಯುವುದು ನಮಗೆ ಗೊತ್ತಿದೆ’ ಎಂದು ರಾಮಚಂದ್ರಪ್ಪ ತಿರುಗೇಟು ನೀಡಿ, ಕಚೇರಿಯಿಂದ ಹೊರಗೆ ಬಂದರು.
ಮಾತುಕತೆ ಅರ್ಧಕ್ಕೆ  ಮುಕ್ತಾಯಗೊಂಡಿತು. ಸಿಪಿಐ ಉಮೇಶ್, ‘ಸ್ವ ಇಚ್ಛೆಯಿಂದ ಬಂದವರು ಕೆಲಸ ಮಾಡಿ. ನಾವು ರಕ್ಷಣೆ ನೀಡುತ್ತೇವೆ’ ಎಂದು ಅಧಿಕಾರಿಗಳಿಗೆ ಹೇಳಿದರು.

ರಾತ್ರಿ ಸರಿ ಹೊತ್ತಿನವರೆಗೆ ಕಾರ್ಮಿಕರ ಮುಖಂಡರು ಬಸ್‌ ನಿಲ್ದಾಣದ ಹೊರಗೆ ಕಾವಲು ನಿಂತಿದ್ದರು. ನಿಲ್ದಾಣ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಇತ್ತು.

ಗ್ಲಾಸ್‌ ಒಡೆದಿತ್ತು!
ದಾವಣಗೆರೆ–ಹರಿಹರ ಹೊರಟ ಬಸ್‌ನ ಮುಂಬದಿಯ ಗ್ಲಾಸ್‌ ಒಡೆದು ಹೋಗಿತ್ತು. ಅದೇ ಬಸ್‌ನ್ನು ಚಾಲಕ ಚಾಲನೆ ಮಾಡಿಕೊಂಡು ಹೋದರು.

ತಪ್ಪಿಸಿಕೊಳ್ಳಲು ಯತ್ನಿಸಿದ ನಿರ್ವಾಹಕರು!
ರಸ್ತೆಗೆ ಕಾಲಿಟ್ಟ ಬಸ್‌, ಪ್ರಯಾಣಿಕರನ್ನು ತುಂಬಿಸಿಕೊಳ್ಳಲು ಮಹಾನಗರ ಪಾಲಿಕೆ ನಿಲ್ದಾಣದಲ್ಲಿ ನಿಲ್ಲಿಸಿದಾಗ, ಬಸ್‌ನಿಂದ ಕೆಳಗಿದ ನಿರ್ವಾಹಕರು ಮತ್ತೆ ಬಸ್‌ ಹತ್ತದೆ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಬಸ್‌ ಹಿಂಬಾಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅವರನ್ನು ಮನವೊಲಿಸಿ ಮತ್ತೆ ಬಸ್‌ಗೆ ಹತ್ತಿಸಿ, ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT