ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಉಬ್ಬು ಅಳವಡಿಸಲು ಕಾಲಮಿತಿ

ಶಿರಾಡಿ ರಸ್ತೆ ಕಾಮಗಾರಿ ಆರಂಭ ದಿನ ಇನ್ನೂ ಅನಿಶ್ಚಿತ
Last Updated 19 ಡಿಸೆಂಬರ್ 2014, 9:17 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಮಹಾ­ನಗರ ವ್ಯಾಪ್ತಿಯಲ್ಲಿ ಅಗತ್ಯ ಇರುವ 31 ಕಡೆ ರಸ್ತೆ ಉಬ್ಬುಗಳನ್ನು ಜನವರಿ 15ಕ್ಕೆ ಮುನ್ನ ಅಳವಡಿಸಬೇಕು. ಅವುಗಳಿಗೆ ಸೂಕ್ತ ಬಣ್ಣ ಬಳಿದು, ಸೂಚನಾ ಫಲಕ­ಗಳನ್ನೂ ಅಳವಡಿಸಬೇಕು ಎಂದು ಜಿಲ್ಲಾ­ಧಿಕಾರಿ ಎ.ಬಿ.ಇಬ್ರಾಹಿಂ ಅವರು ಪಾಲಿಕೆ ಪ್ರಭಾರ ಆಯುಕ್ತರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರು­ವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ರಸ್ತೆ ಉಬ್ಬುಗಳ ಬಗ್ಗೆ ವಿಷಯ ಪ್ರಸ್ತಾಪಿಸಿದ ನಾಗರಿಕ ಹಿತ­ರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತ ಕಾಮತ್‌, ನಗರದ ರಸ್ತೆ ಉಬ್ಬುಗಳು ಅಸಮರ್ಪಕವಾಗಿದ್ದು, ಪಾದಚಾರಿ ಮಾರ್ಗಗಳೂ ಇಲ್ಲ. ಇದರಿಂದ ಪಾದ­ಚಾರಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಸಭೆಯ ಗಮನ ಸೆಳೆದರು.

ಭಾರ­ತೀಯ ರಸ್ತೆ ಕಾಂಗ್ರೆಸ್‌ನ ನಿಯಮ­ದಂತೆಯೇ ರಸ್ತೆ ಉಬ್ಬುಗಳನ್ನು ಮಾಡ­ಬೇಕು. ಕಾಂಕ್ರಿಟೀಕರಣಕ್ಕೆ ನೀಡುವಷ್ಟು ಆಸಕ್ತಿಯನ್ನು ರಸ್ತೆ ಉಬ್ಬು, ಪಾದ­ಚಾರಿ ಮಾರ್ಗಗಳಿಗೆ ನೀಡುತ್ತಿಲ್ಲ ಎಂದು ಆಕ್ಷೇಪಿಸಿದರು. ಈ ವಿಷಯ ದಲ್ಲಿ ಪಾಲಿಕೆ ಪ್ರಭಾರ ಆಯುಕ್ತ ಗೋಕುಲ್‌ದಾಸ್‌ ನಾಯಕ್‌ ಮತ್ತು ಹನುಮಂತ ಕಾಮತ್‌ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.

ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿ ಅವರು ಸಾರ್ವಜನಿಕರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಗುಣಮಟ್ಟದ ಹಂಪ್‌ಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು. ನಗರದ ವಿವಿಧ ಕಡೆಗ­ಳಲ್ಲಿ ರಸ್ತೆ ಕಾಂಕ್ರಿಟೀಕರಣ ಆಗಿ ಹಲ ವಾರು ವರ್ಷ­ಗಳಾದರೂ ಇದುವ­ರೆಗೂ ಪಾದ­­ಚಾರಿ ಮಾರ್ಗ ನಿರ್ಮಾಣ ಆಗದೆ ಇರುವ ಬಗ್ಗೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದರು.

ಆಟೊ ಪಾರ್ಕ್‌: ನಗರದಲ್ಲಿ ಆಟೊ ಪಾರ್ಕ್‌ಗಳನ್ನು ನಿರ್ಮಾಣ ಮಾಡ­ಬೇಕು ಎಂದು ಬೇಡಿಕೆ ಸಲ್ಲಿಸಿದ ಆಟೊ ಚಾಲಕರ–ಮಾಲೀಕರ ಸಂಘದ ಮನ­ವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಜನವರಿ ತಿಂಗಳೊಳಗೆ ವಾರ್ಡ್‌ಗೆ ಒಂದ­ರಂತೆ ಕನಿಷ್ಠ 60 ಆಟೊ ಪಾರ್ಕ್‌ಗಳನ್ನು ಪೂರ್ಣಗೊಳಿಸಬೇಕು. ಜತೆಗೆ ಬಸ್‌ ಬೇಗಳನ್ನೂ ಶೀಘ್ರವಾಗಿ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ರಸ್ತೆ ದುರಸ್ತಿ ಮಾಡಿ: ಕೂಳೂರಿನಿಂದ ಪಣಂಬೂರು ವರೆಗೆ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ರಸ್ತೆ ಹೊಂಡ ಬಿದ್ದಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಆದ್ಯತೆ ನೆಲೆಯಲ್ಲಿ ದುರಸ್ತಿ ಮಾಡಬೇಕು ಎಂದು ಕೆನರಾ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ರಾಜ­ವರ್ಮ ಬಲ್ಲಾಳ್‌ ಒತ್ತಾಯಿಸಿದರು.

ರಸ್ತೆ ದುರಸ್ತಿಗೆ ಸರ್ಕಾರ ಈಗಾಗಲೇ ಅನುದಾನ ಮಂಜೂರು ಮಾಡಿದ್ದು, ಸದ್ಯದಲ್ಲೇ ತೇಪೆ ಕಾಮಗಾರಿ ಆರಂಭಿಸ­ಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು.

ರಸ್ತೆ ಸುರಕ್ಷತೆಗೆ ಕ್ರಮ–ಎಸ್‌ಪಿ: ಉಜಿರೆ, ಬೆಳ್ತಂಗಡಿ, ಪುತ್ತೂರು ಹಾಗೂ ಬಂಟ್ವಾಳಗಳಲ್ಲಿ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳು ಆದೇಶ ಹೊರಡಿಸಿ­ದರೆ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಎಸ್‌.­ಪಿ. ಡಾ. ಎಸ್‌ಡಿ.ಶರಣಪ್ಪ ತಿಳಿಸಿದರು.

ಸುರಕ್ಷತೆಗಾಗಿ ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿ­ಟ್ಟಾಗಿ ಪಾಲಿಸಬೇಕು ಎಂದರು.
ಸಂಚಾರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಉದಯ ನಾಯಕ್, ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ ನಾಯ್ಕ್, ವಿಷ್ಣು­ಮೂರ್ತಿ, ಇಸ್ಮಾಯಿಲ್, ಬಿ.ಎಸ್. ಹಸನಬ್ಬ ಅಮ್ಮೆಂಬಳ ಮತ್ತಿತರರು ಇದ್ದರು.

ಶಿರಾಡಿ ಹೆದ್ದಾರಿ ಬಂದ್– ದಿನ ನಿಗದಿ ಇಲ್ಲ
ಶಿರಾಡಿ ಘಾಟಿ ದುರಸ್ತಿಗಾಗಿ ರಸ್ತೆಯಲ್ಲಿ ಸಂಚಾರ ನಿಷೇಧಿಸುವ ದಿನದ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಆಗಿಲ್ಲ. ಆಗುಂಬೆ ಮತ್ತು ಮಾಣಿ–ಮೈಸೂರು ಹೆದ್ದಾರಿಯಲ್ಲೂ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯನ್ನು ಇದೇ 25ಕ್ಕೆ ಮುನ್ನ ಪೂರ್ಣಗೊಳಿಸಬೇಕಿದೆ. ಇದಕ್ಕೂ ಮುನ್ನ ಶಿರಾಡಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿದರೆ ಈ ರಸ್ತೆಗಳಲ್ಲಿ ಕಾಮಗಾರಿಗೆ ತೊಂದರೆ ಆಗುತ್ತದೆ. ಈ ನಿಟ್ಟಿನಲ್ಲಿ ಇದೇ 25ಕ್ಕೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದು, ಆ ಬಳಿಕವೇ ಶಿರಾಡಿ ಘಾಟ್‌ನಲ್ಲಿ ರಸ್ತೆ ಕಾಮಗಾರಿ ಆರಂಭವಾಗ­ಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT