ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆಯೇ ಸಮಸ್ಯೆಗೆ ಕಾರಣ

ಹೈಕೋರ್ಟ್‌
Last Updated 27 ಜನವರಿ 2015, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾದಚಾರಿ ಮಾರ್ಗಗಳ ಮೇಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನೆಲ್ಲಾ ತೆರವುಗೊಳಿಸಿದರೆ ಅಂತಿಮ­­ವಾಗಿ ಗ್ರಾಹಕರೇ ತೊಂದರೆಗೆ ಒಳಗಾಗು­ತ್ತಾರೆ’ ಎಂದು ಬೆಸ್ಕಾಂನ ನಗರ ವಿಭಾಗದ ಮುಖ್ಯ ಎಂಜಿನಿ­ಯರ್‌ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿರುವ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳ ತೆರವು ಪ್ರಕರಣಕ್ಕೆ ಸಂಬಂಧಿ­ಸಿದಂತೆ ಹಿರಿಯ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್‌ ಹಾಗೂ ನ್ಯಾಯಮೂರ್ತಿ ಎಸ್‌.­ಸುಜಾತಾ ಅವರಿದ್ದ ವಿಭಾಗೀಯ ಪೀಠಕ್ಕೆ ಮಂಗಳವಾರ ಈ ಕುರಿತ ಪ್ರಮಾಣ ಪತ್ರವನ್ನು ಮುಖ್ಯ ಎಂಜಿನಿಯರ್‌ ಉದಯಕುಮಾರ್‌  ಸಲ್ಲಿಸಿದರು.

‘ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ­ಗಳ ಮೇಲಿದ್ದ 18 ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವು­ಗೊಳಿಸಲಾಗಿದೆ. ಎಲ್ಲೂ  ಬೆಸ್ಕಾಂ ಪಾದಚಾರಿ ಮಾರ್ಗ­ಗಳನ್ನು ಒತ್ತುವರಿ ಮಾಡಿಲ್ಲ. ಆಗಾಗ್ಗೆ ರಸ್ತೆ ವಿಸ್ತರಣೆ ಮಾಡುವುದರಿಂದಲೇ   ಟ್ರಾನ್ಸ್‌ಫಾರ್ಮರ್‌­ಗಳು ಪಾದಚಾರಿ ಮಾರ್ಗಗಳ ಮೇಲೆ ಉಳಿಯು­ವಂತಾಗಿವೆ. ಬೆಸ್ಕಾಂ ಯಾವುದೇ ಪ್ರದೇಶದಲ್ಲೂ ಖಾಸಗಿ­ಯವರಿಗೆ ಸೇರಿದ ಸ್ವತ್ತಿನಲ್ಲಿ ಟ್ರಾನ್ಸ್‌ಫಾರ್ಮರ್‌­ಗಳನ್ನು ಅಳವಡಿಸಿಲ್ಲ. ವಿದ್ಯುತ್‌ ಸರಬರಾಜಿಗೆ ಅಗತ್ಯವಾದ ಎಲ್ಲ ಜವಾಬ್ದಾರಿಗಳನ್ನು ಬೆಸ್ಕಾಂ ಕಾಲಕಾಲಕ್ಕೆ ಸರಿಯಾಗಿ ನಿರ್ವಹಿಸುತ್ತಿದೆ’ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಹೊಸ ವಿನ್ಯಾಸ: ‘ಸ್ಥಳಾಭಾವ ಮತ್ತು ಸುರಕ್ಷತೆ  ದೃಷ್ಟಿ­ಯಿಂದ ಟ್ರಾನ್ಸ್‌ಫಾರ್ಮರ್‌ಗಳ ಸ್ವರೂಪವನ್ನು ಬದ­ಲಾಯಿ­ಸುವಂತೆ ಬೆಸ್ಕಾಂ ಈಗಾಗಲೇ ರಾಷ್ಟ್ರೀಯ ವಿನ್ಯಾಸ ಸಂಸ್ಥೆಗೆ ಮನವಿ ಮಾಡಿದೆ. ಅಂತೆಯೇ ಖಾಸಗಿ ಸಂಸ್ಥೆಗಳೂ ಈ ದಿಸೆಯಲ್ಲಿ ಯಾವುದಾದರೂ ಹೊಸ ವಿನ್ಯಾಸಗಳ ಆಲೋಚನೆಯನ್ನೇನಾದರೂ  ಹೊಂದಿ­ದ್ದರೆ ತಿಳಿಸುವಂತೆ  ಕೋರಲಾಗಿದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಮಾದರಿ ರಸ್ತೆಗಳ ಕುರಿತಂತೆಯೂ ಪೀಠವು ಇದೇ ವೇಳೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

‘ಮಾದರಿ ರಸ್ತೆಗಾಗಿ ನೀವು ಆಯ್ದುಕೊಂಡಿರುವ ರಸ್ತೆಗಳೆಲ್ಲಾ ಮೊದಲು ಹೇಗಿದ್ದವೋ ಹಾಗೇ ಇವೆ. ಏನೂ ಬದಲಾವಣೆ ಕಾಣುತ್ತಿಲ್ಲ. ಅಷ್ಟಕ್ಕೂ ಈ ರಸ್ತೆಗ­ಳೆಲ್ಲಾ ಈಗಾಗಲೇ ಸುಸ್ಥಿತಿಯಲ್ಲಿವೆ’ ಎಂದು ಪೀಠವು ಕುಟುಕಿತು.

ಮುಂದಿನ ವಿಚಾರಣೆ ವೇಳೆಗೆ ಈ ದಿಸೆಯಲ್ಲಿನ ಪ್ರಗತಿ ವರದಿಯನ್ನು ಸಲ್ಲಿಸಿ ಎಂದು ಬಿಬಿಎಂಪಿಗೆ ಸೂಚಿಸಿ ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT