ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಸುರಕ್ಷತೆ: ಎಲ್ಲರ ಹೊಣೆ

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ದೇಶದಲ್ಲಿ ವಾಹನಗಳ ಬಳಕೆ ವಿಪರೀತವಾಗಿ ಹೆಚ್ಚುತ್ತಿದೆ. ಆಕರ್ಷಕ ವಿನ್ಯಾಸದ, ಹೆಚ್ಚು ಸಾಮರ್ಥ್ಯದ ಬಗೆಬಗೆಯ ವಾಹನಗಳು ಪೈಪೋ­ಟಿಗೆ ಬಿದ್ದಂತೆ ರಸ್ತೆಗೆ ಇಳಿಯುತ್ತಿವೆ. ಆದರೆ ವಾಹನ ಚಾಲನೆಯಲ್ಲಿ, ಸಂಚಾರ ನಿಯಮಗಳ ಪಾಲನೆಯಲ್ಲಿ ಶಿಸ್ತು ಅಳವಡಿಸಿಕೊಳ್ಳಲು ನಮಗೆ ಇನ್ನೂ ಸಾಧ್ಯವಾಗಿಲ್ಲ.

ಇದರ ಪರಿಣಾಮವಾಗಿ ರಸ್ತೆ ಅಪ­ಘಾತ­ಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಸಾವು–ನೋವಿನ ಸಂಖ್ಯೆ­ಯಲ್ಲೂ ತೀವ್ರ ಏರಿಕೆ ಆಗುತ್ತಿದೆ. ದೇಶದಲ್ಲಿ ಪ್ರತೀ ವರ್ಷ ಸುಮಾರು ಐದು ಲಕ್ಷ ಅಪಘಾತಗಳು ಸಂಭವಿಸು­ತ್ತಿದ್ದು, ಇದರಿಂದ 1.5 ಲಕ್ಷಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆಗೆ ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ತಿದ್ದುಪಡಿ, ಹೆಚ್ಚಿನ ಮಹತ್ವ ಪಡೆದಿದೆ. ಸಂಚಾರ ನಿಯಮಗಳ ಉಲ್ಲಂಘನೆಯನ್ನು ಅತ್ಯಂತ ಗಂಭೀ­ರ­ವಾಗಿ ಪರಿಗಣಿಸುವ ಪ್ರಸ್ತಾವಗಳನ್ನು ‘ರಸ್ತೆ ಸುರಕ್ಷತೆ ಮತ್ತು ಸಂಚಾರ ಮಸೂದೆ–2014’ ಒಳಗೊಂಡಿದ್ದು, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಈಗ ಜಾರಿಯಲ್ಲಿರುವ 1988ರ ಮೋಟಾರು ವಾಹನ ಕಾಯ್ದೆಯಲ್ಲಿ ತೀರಾ ಕಡಿಮೆ ದಂಡ, ಶಿಕ್ಷೆ ಇರುವುದರಿಂದ ಸಂಚಾರ ನಿಯಮ ಉಲ್ಲಂಘ­ನೆಯನ್ನು ತಡೆಯಲು ಪರಿಣಾ­ಮ­ಕಾರಿಯಾಗಿಲ್ಲ ಎಂಬ ಅಭಿಪ್ರಾಯವಿದೆ.

ಹೊಸ ಮಸೂದೆಯಲ್ಲಿ, ನಿಯಮ ಉಲ್ಲಂಘನೆಗೆ ವಿಧಿಸುವ ದಂಡ ಮತ್ತು ಶಿಕ್ಷೆಯಲ್ಲಿ ಭಾರಿ ಹೆಚ್ಚಳ ಮಾಡಲಾಗಿದೆ. ಮದ್ಯದ ಅಮಲಿನಲ್ಲಿ ವಾಹನ ಓಡಿಸಿ ಮೊದಲ ಸಲ ಸಿಕ್ಕಿ­ಬಿದ್ದರೂ ₨ 25 ಸಾವಿರ ದಂಡ ಹಾಗೂ ಮೂರು ತಿಂಗಳ ಶಿಕ್ಷೆಗೆ ಗುರಿ­ಯಾಗಬೇಕಾಗುತ್ತದೆ. ಕುಡಿದು ಓಡಿಸಿದ ಮೂರನೇ ಪ್ರಕರಣಕ್ಕೆ ವಾಹನ ಪರವಾನಗಿ ಕಾಯಂ ರದ್ದುಗೊಳ್ಳಲಿದೆ. ಬೇಜವಾಬ್ದಾರಿ­ಯಿಂದ ವಾಹನ ಓಡಿಸಿ ಮಕ್ಕಳ ಸಾವಿಗೆ ಕಾರಣರಾದರೆ ಕನಿಷ್ಠ ಏಳು ವರ್ಷ ಸಜೆ ಹಾಗೂ ₨ 3 ಲಕ್ಷ ದಂಡ ತೆರಬೇಕಾಗುತ್ತದೆ. ಮಕ್ಕಳನ್ನು ಶಾಲಾ ವಾಹ­ನ­ಗಳಲ್ಲಿ ಕರೆ­ದೊಯ್ಯುವಾಗ  ಚಾಲಕ ಮದ್ಯಪಾನ ಮಾಡಿದ್ದರೆ ಮೂರು ವರ್ಷ ಜೈಲು ಹಾಗೂ ₨ 50 ಸಾವಿರ ದಂಡ ವಿಧಿಸಲು ಮಸೂದೆ ಅವಕಾಶ ಕಲ್ಪಿಸುತ್ತದೆ. ಆದರೆ, ದಂಡ ಏರಿಕೆ ಭ್ರಷ್ಟಾಚಾರದ ಹೆಚ್ಚಳಕ್ಕೆ ಎಡೆಮಾಡ­ದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸಬೇಕು.

ವಾಹನಗಳನ್ನು ಮಿತಿ ಮೀರಿದ ವೇಗದಲ್ಲಿ ಹಾಗೂ ಬೇಕಾಬಿಟ್ಟಿ ಓಡಿಸು­ವುದು ಒಂದು ಬಗೆಯ ಷೋಕಿ ಆಗಿದೆ. ಇದನ್ನು ತಡೆಯಲು ದಂಡ ಪ್ರಯೋ­ಗಕ್ಕೆ ಮುಂದಾಗಿರುವುದೇನೋ ಸರಿ. ಆದರೆ ದಂಡದ ಭಯದಿಂದಲೇ ಅಪ­ಘಾತಗಳನ್ನು ಪೂರ್ತಿ ನಿಯಂತ್ರಿಸಲಾಗದು. ಬಹುಪಾಲು ಅಪಘಾತಗಳಿಗೆ ಪ್ರಮುಖ ಕಾರಣ ಚಾಲಕರಾದರೂ ರಸ್ತೆ ನಿರ್ವಹಣೆಯಲ್ಲಿನ ಲೋಪಗಳೂ ಅನೇಕ ವೇಳೆ ವಾಹನವನ್ನು ಅಪಘಾತಕ್ಕೆ ದೂಡುವುದುಂಟು.

ಹೆದ್ದಾರಿ­ಗ­ಳಲ್ಲಿ ಸೂಕ್ತ ಸುರಕ್ಷಾ ಕ್ರಮಗಳನ್ನು ಅಳವಡಿಸದಿರುವುದು, ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು, ಗುಂಡಿಗಳು, ಅವೈಜ್ಞಾನಿಕ ರಸ್ತೆ ಉಬ್ಬುಗಳು ಇವೆಲ್ಲಾ ಅಪಘಾತಕ್ಕೆ ಕಾರಣವಾಗಬಲ್ಲವು. ನಗರಗಳಲ್ಲಿ ಪಾದಚಾರಿಗಳ ಪಾಡು ಹೇಳತೀರದು. ಅವರಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗು­ವುದಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ.

ಚಾಲನೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಬಿಗಿಗೊಳಿಸಬೇಕು. ರಸ್ತೆ ವಿನ್ಯಾಸ ಮತ್ತು ನಿರ್ವಹಣೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು. ಹೆಲ್ಮೆಟ್, ಸೀಟ್‌ ಬೆಲ್ಟ್‌ ಅಂತಹ ಸುರಕ್ಷಾ ಸಾಧನಗಳ ಬಳಕೆಯ ಮಹತ್ವವನ್ನು ಮನದಟ್ಟು ಮಾಡಿಸಬೇಕು. ರಸ್ತೆ
ಸುರ­ಕ್ಷತೆ ಸರ್ಕಾರಕ್ಕೆ ಮಾತ್ರ ಬೇಕಿರುವುದಲ್ಲ. ಪ್ರತಿಯೊಬ್ಬರೂ ಪಾಲಿಸ­ಬೇಕಾದ ಬೀಜಮಂತ್ರ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT