ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಗ್ ನಂಬರ್

Last Updated 19 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ವೈಶಂಪಾಯನನು ಜನಮೇಜಯನಿಗೆ ತನ್ನ ತಂದೆ ಪರೀಕ್ಷಿತನನ್ನು ನಾಗಾಗಳು ಯಾಕೆ ಕೊಂದರು ಎಂದು ತಿಳಿಸಲು ಭಾರತದ ಕಥೆ ಹೇಳಿದಂತೆ, ಆ ಕಥೆ ಅನೇಕಾನೇಕ ಕರ್ಣಗಳನ್ನು ದಾಟಿ ಈವರೆಗೂ ಬಂದಿರುವಂತೆ, ಬಂದು ಇನ್ನು ಮುಂದೆಯೂ ಮುಂದುವರಿದಿರುವಂತೆ...

ಅಮೆರಿಕಾಗೆ ಹೋಗಿದ್ದ ವೇಣುಗೋಪಾಲರಾಯರ ಕಿವಿಗೆ ಬಿದ್ದ ಈ ಕಥೆಯನ್ನು ಕೂಡ, ಅವರು ಗೆಳೆಯ ಗೋವಿಂದರಾಯರಿಗೆ ವಾಕಿಂಗ್‌ನಲ್ಲಿ ಹೇಳಿದ್ದರಂತೆಯೂ, ಅವರು ಪತ್ನಿ ಪಾರ್ವತಮ್ಮಗೆ ರಾತ್ರಿ ಉಣ್ಣುವಾಗ ಉಸುರಿದ್ದರಂತೆಯೂ, ಅವರು ಮಹಿಳಾಸಮಾಜದಲ್ಲಿ ಯಾರಿಗೂ ಹೇಳಬೇಡಿರೆಂದು ಪಕ್ಕದ ರಸ್ತೆಯ ಜಲಜಮ್ಮನ ಕಿವಿಯಲ್ಲಿ ಮೆಲ್ಲಗೆ ಪಿಸುಗುಟ್ಟಿದರಂತೆಯೂ... ಮುಂದೆ ಅದು ಯಾರಯಾರ ಕಣ್ಣುಕಿವಿಗಳನ್ನು ದಾಟಿ ದಡ ಮುಟ್ಟಿವಷ್ಟರಲ್ಲಿ ಸೋತು ಸುಣ್ಣವಾಗಿ ಈ ರೂಪ ಪಡೆದು ರೋದಿಸಲಾರಂಭಿಸಿತ್ತು.

ಒಂದು ಊರಲ್ಲಿ ಒಂದು ನದಿ. ಆ ನದಿಯ ಮಧ್ಯೆ ಸಣ್ಣಸಣ್ಣ ದ್ವೀಪಗಳು. ಅದನ್ನು ಮುಚ್ಚುವಂತೆ ಬೆಳೆದಿದ್ದ ದಿಮ್ಮನಾದ ಮರಗಳು, ಬಿದಿರುಮೆಳೆಗಳು, ಗಿಡಗಂಟೆಗಳು. ಅದು ಮೊಟ್ಟೆ ಇಟ್ಟು ಮರಿಮಾಡಿಕೊಳ್ಳಲು ಅತ್ಯಂತ ಪ್ರಶಸ್ತವಾದ ಸ್ಥಳವೆಂದು ದೂರದೂರುಗಳಿಂದ ಬರುತ್ತಿದ್ದ ಪಕ್ಷಿಸಂಕುಲ. ಅಲ್ಲಿ ಮಲೆತು ಹರಿಯುವ ನದಿಯೂ ತಮಗೆ ಸೂಕ್ತವೆಂದೇ ಎಲ್ಲಿಂದಲೋ ಬಂದು ನೆಲೆಯೂರಿದ್ದ ಮೊಸಳೆಗಳು, ಅವಕ್ಕೆ ಆಹಾರವಾಗಲೆಂದೇ ಬ್ರಹ್ಮ ಸೃಷ್ಟಿಸಿರುವನೆಂಬಂತೆ ತಮ್ಮ ಸಂತತಿಯನ್ನು ತಾವೇ ತಿಂದು ದಷ್ಟಪುಷ್ಟವಾಗಿ ಕೊಬ್ಬಿರುವ ಕೊರವಮೀನುಗಳು.

ಅಂಥ ಮನೋಹರವಾದ ವಾತಾವರಣವನ್ನು ಬಯಸಿಯೇ ತಮ್ಮ ಗದ್ದೆಯ ತಲವೂ ಆದ ದಂಡೆಯ ಮೇಲೆ ಪ್ರಶಾಂತರಾಯರು ಮನೆ ಕಟ್ಟಿಕೊಂಡಿದ್ದರು. ಮಲೆನಾಡಲ್ಲಿ ಹಾಗೇ... ಮೈಲಿಗೊಂದು ಮನೆ, ಅಲ್ಲಿಯೇ ಒಂದು ಬಸ್‌ಸ್ಟಾಂಡು. ನದಿಗುಂಟ ಹೆಬ್ಬಾವಿನ ಜತೆ ಚಾಲೆಂಜ್ ಮಾಡುವಂತೆ ಅಂಕುಡೊಂಕಾಗಿ ಓಡುವ ಒಂದು ಡಾಂಬರು ರೋಡು, ಸುತ್ತ ಬರೀ ಕಾಡು.

ಪ್ರಶಾಂತರಾಯರ ಒಬ್ಬನೇ ಮಗ ಅಶೋಕ. ಸಣ್ಣವನಿದ್ದಾಗ ಸದಾ ಮೂಗಿನಲ್ಲೇ ಗೊಣಗರಿಯುತ್ತ ಶೋಕಿಸುತ್ತಿದ್ದ. ರೇವಣ್ಣ ಮೇಷ್ಟ್ರು, ‘ಯಾರಯ್ಯಾ ನಿನಗೆ ಈ ಹೆಸರಿಟ್ಟಿದ್ದು? ಶೋಕವಿಲ್ಲದವನೆಂದು ನಿನ್ನ ಹೆಸರಿನ ಅರ್ಥ!’ ಎಂದು ತಲೆ ಮೇಲೆ ಕುಟುಕಿ ಇನ್ನಷ್ಟು ಅಳಿಸುತ್ತಿದ್ದರು. ಅಂದರೆ ಕನ್ನಡದ ಮೊದಲ ಅಕ್ಷರದ ಅರ್ಥವೇ ಇಲ್ಲ ಅಂತ ಎಂದು ಮನದೊಳಗೇ ಅರ್ಥಮಾಡಿಕೊಳ್ಳುತ್ತ ಎಲ್ಲದಕ್ಕೂ ‘ಅ’ ಸೇರಿಸುತ್ತ ಹೊಸಹೊಸ ನೆಗೆಟೀವ್ ಪದ ಹುಡುಕುತ್ತ ದೊಡ್ಡವನಾಗಿಬಿಟ್ಟ.

ದೊಡ್ಡವನಾದವನು ಬರೀ ದೊಡ್ಡವನಾಗಲಿಲ್ಲ, ಸಣ್ಣ ವಯಸ್ಸಿಗೇ ಇಡೀ ಒಂದು ಮಲ್ಟಿನ್ಯಾಷನಲ್ ಕಂಪೆನಿಯ ಸಿ.ಇ.ಒ. ಆಗುವಷ್ಟು ಬೆಳೆದುಬಿಟ್ಟ. ಟೈ ಕಟ್ಟಿಕೊಂಡು ಊರಿಗೆ ಬಂದಾಗ ಆಳುಮಕ್ಕಳೆಲ್ಲ ಅದು ಸುರಿಯುವ ಮೂಗು ಒರೆಸಿಕೊಳ್ಳಲಿಕ್ಕೆ ಇರುವ ಸಣ್ಣ ಟವಲ್ಲು ಎಂದೇ ಭಾವಿಸಿಬಿಟ್ಟಿದ್ದರು.

ಇವತ್ತು ಇಲ್ಲಿ, ನಾಳೆ ಅಮೆರಿಕ, ನಾಳಿದ್ದು ಫ್ರಾನ್ಸ್, ಆಚೆನಾಳಿದ್ದು ಕೆನಡ, ಅತ್ತ ಆಚೆನಾಳಿದ್ದು ಚೀನಾ, ಆಮೇಲೆ ವಾಪಸ್ಸು ಇಂಗ್ಲೆಂಡು, ಅದಾದ ಮೇಲೆ ಆಸ್ಟ್ರೇಲಿಯಾ– ಹೀಗೆ ಅವನ ದಿನಚರಿ ತುಂಬ ಬರೀ ಫ್ಲೈಟುಗಳೇ ಹಾರಾಡುತ್ತಿದ್ದವು. ಸಿಂಗಾಪುರ, ಥೈಲ್ಯಾಂಡು, ಮಲೇಷಿಯಾಗಳಂತೂ ಲೆಕ್ಕಕ್ಕೇ ಇಲ್ಲ, ಇಲ್ಲೇ ವಿನೋಬನಗರ, ಗಾಂಧಿಬಜಾರು, ಬಸವನಗುಡಿ, ಜಯನಗರ ಇದ್ದಂತೆ.

ಬೆಳೆದ ಮಗ ಹೀಗೆ ಮೈಮರೆತು ಓಡಾಡುತ್ತಿದ್ದರೆ, ವಿದೇಶಗಳಲ್ಲಿರುವ ಬೀಡಾಡಿ ಹೆಣ್ಣುಗಳ ಬಲೆಗೆ ಬಿದ್ದರೇನು ಗತಿ ಎಂದು ಹೆಂಡತಿ ಅನಸೂಯಮ್ಮಳ ಮುಂದೆ ಪ್ರಶಾಂತರಾಯರು ಅಳಲು ತೋಡಿಕೊಂಡರು. ಅಷ್ಟು ಹೇಳಿದ್ದೇ ತಡ, ಮಗನ ಬಗ್ಗೆ ಇಲ್ಲಸಲ್ಲದ ಅನುಮಾನಗಳನ್ನೆಲ್ಲ ಬೆಳೆಸಿಕೊಂಡು ಅವನ ಜೇಬು, ಕರ್ಚೀಪು, ಸೂಟ್‌ಕೇಸುಗಳನ್ನೆಲ್ಲ ತಡಕಾಡಿಬಿಟ್ಟಳು. ಊರಿಗೆ ಯಾವಾಗ ಬರುವನೋ ಮಗ ಎಂದು ತಳಮಳಿಸಲಾರಂಭಿಸಿದಳು.

ಬಂದವನಿಗೆ ಒಂದು ಗಂಟು ಹಾಕಿಯೇ ಕಳಿಸಬೇಕೆಂಬುದು ಆಕೆಯ ಬಯಕೆಯಾಗಿತ್ತು. ಅವನು ಊರಿಗೆ ಬರುವಷ್ಟರಲ್ಲಿ ಪ್ರಶಾಂತರಾಯರ ಮನಸ್ಸೆಲ್ಲ ಅಶಾಂತವಾಗುವಷ್ಟು ತಲೆತಿಂದವಳು, ಮಗ ಬಂದ ಕೂಡಲೇ ಏನೂ ಆಗಿಯೇ ಇಲ್ಲವೇನೋ ಎಂಬಂತೆ ನಗುಮೊಗದಿಂದ ಪ್ರೀತಿಯ ತುಪ್ಪ ಮೊಗೆಮೊಗೆದು ಉಣಬಡಿಸಿದಳು. ಸರಾಗ ಅವನ ಬಾಯಿಂದ ಯಾವುದಾದರೂ ಹುಡುಗಿಯ ಹೆಸರು ಬರುವುದೋ ಎಂದು ಪರಿಶೀಲಿಸಿದಳು.

ತಾನೇ ತನ್ನ ತಮ್ಮನ ಮಗಳು ಶಾಂತಿಯ ಹೆಸರು ಹೇಳಿ ಅವನ ಪ್ರತಿಕ್ರಿಯೆ ಏನು ಬರುವುದೋ ಎಂದು ವಾರೆಗಣ್ಣಲ್ಲಿ ಗಮನಿಸಿದಳು. ಪುಳಕಿತನಾಗದ ಮಗನ ಪ್ರತಿಕ್ರಿಯೆ ಕಂಡು ಯಾವುದಾದರೂ ಹೆಣ್ಣಿನ ರುಚಿ ನೋಡಿರುವುದು ಖಚಿತವೆಂದು ತನ್ನೊಳಗೆ ತಾನೇ ಕಳಂಕಿತಳಂತಾದಳು.

‘ನನಗೆ ಅಷ್ಟೆಲ್ಲ ಟೈಂ ಇಲ್ಲ, ಮುಂದಿನ ಸಲ ಬರುವುದರೊಳಗಾಗಿ ನೀವೇ ಯಾವುದಾದರೊಂದು ಹುಡುಗಿ ನೋಡಿ ಇಟ್ಟಿರಿ. ನೀವು ಹೇಳಿದವಳಿಗೆ ಕಣ್ಣುಮುಚ್ಚಿಕೊಂಡು ತಾಳಿಕಟ್ಟಿಬಿಡುತ್ತೇನೆ. ನನಗೆ ತಕ್ಕನಾದ ಒಳ್ಳೇ ಹುಡುಗಿಯನ್ನೇ ಹುಡುಕಿರುತ್ತೀರಿ ಎಂಬ ಭರವಸೆ ನನಗಿದೆ’ ಎಂದುಬಿಟ್ಟ. ಈ ಕಾಲದಲ್ಲೂ ಇಂಥ ಒಳ್ಳೆ ಮಗ ಇರುವುದು ತಮ್ಮ ಪೂರ್ವಜನ್ಮದ ಪುಣ್ಯ ಎಂದೇ ಭಾವಿಸಿ, ಹೆಂಡತಿಯ ಮುಂದೆ ಮೀಸೆ ತಿರುವಿದರು.

ಅಶೋಕ ಅಧಿಕಾರ ಪಡೆದ ಮೇಲೆ ಮೊದಲ ಬಾರಿ ಇಂಡಿಯಾಕ್ಕೆ ಬಂದಿರುವನೆಂದು ತಿಳಿದು ಯಾವುಯಾವುದೋ ಕಂಪೆನಿಗಳೆಲ್ಲ ಅವನ ಮಾತು, ಅನುಭವ ಕೇಳುವ ನೆಪದಲ್ಲಿ ಸೆಮಿನಾರುಗಳನ್ನು ಏರ್ಪಡಿಸಿದವು.

ತಮ್ಮ ಮೇಲೂ ಮನದೊಳಗೆ ಒಂದು ಸಣ್ಣ ನೆನಪಾದರೂ ಇರಲೆಂದು ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಿದವು. ಪತ್ರಿಕೆಗಳು, ಟಿ.ವಿ. ಮಾಧ್ಯಮದವರೆಲ್ಲ ಅವನ ಇಂಟರ್‌ವ್ಯೂ ಮಾಡಿದವು. ನಮ್ಮ ದೇಶದವನೊಬ್ಬ ತನ್ನ ಬುದ್ಧಿವಂತಿಕೆ, ಮಾತು ಮತ್ತು ಚಾಕಚಕ್ಯತೆಯಿಂದ ವಿಶ್ವದಲ್ಲೇ ಪ್ರಬುದ್ಧ ಸ್ಥಾನದಲ್ಲಿರುವ ಕಂಪೆನಿಯೊಂದರ ಹೆಡ್ ಆಗಿರುವುದು ನಮಗೆಲ್ಲ ಹೆಮ್ಮೆ ಎನ್ನುತ್ತ, ಆ ರೀತಿ ಮುಖ್ಯಸ್ಥರಾಗಿರುವ ಬೆರಳೆಣಿಕೆಯ ಮಂದಿಯ ಬಗ್ಗೆಯೂ ಬರೆಯುತ್ತ, ಅವರೆಲ್ಲರಿಗಿಂತ ಅಶೋಕ ಹೇಗೆ ಭಿನ್ನ ಎಂದು ಬಿಂಬಿಸಿದವು.

ಆತ ಓದಿದ್ದ ಶಾಲೆ–ಕಾಲೇಜುಗಳಿಗೆಲ್ಲ, ಓಡಾಡಿದ್ದ ರಸ್ತೆ–ಬೀದಿಗಳಿಗೆಲ್ಲ ಪ್ರಾಮುಖ್ಯತೆ ಬಂದುಬಿಟ್ಟಿತು. ಗೊಣ್ಣೆ ಸುರಿಸುತ್ತ ಶಾಲೆಗೆ ಹೋಗುವಾಗ ಕೇರು ಮಾಡದಿದ್ದವರೆಲ್ಲ ‘ಇವ ನಮ್ಮವ, ಇವ ನಮ್ಮವ’ನೆಂದು ಬೀಗಿದರು. ನಗರಸಭೆ, ಪಾಲಿಕೆಗಳೆಲ್ಲ ತಮ್ಮೂರಿನ ಪ್ರಮುಖ ರಸ್ತೆ, ವೃತ್ತಗಳಿಗೆ ಅಶೋಕನ ಹೆಸರಿಡಲು ಮಾಸಿಕ ಸಭೆಯ ಮುಂದೆ ಪ್ರಸ್ತಾವನೆ ಸಲ್ಲಿಸಿದವು.

ಇದನ್ನೆಲ್ಲ ನೋಡಿದ ರಾಜ್ಯದ ಹತ್ತಾರು ಕನ್ಯಾಪಿತೃಗಳು ಎಲಿಜಿಬಲ್ ಬ್ಯಾಚುಲರ್ ಆದ ಅಶೋಕನ ಮನೆಯ ಮುಂದೆ ಕಾರು ನಿಲ್ಲಿಸಿ ತಮ್ಮತಮ್ಮ ಹೆಣ್ಣುಮಕ್ಕಳನ್ನು ಅವನಿಗೆ ಕೊಡಲು ಮುಂದೆಬಂದರು. ರಾಯರು ಪ್ರಶಾಂತವಾಗಿ ತಮ್ಮ ಮಗನಿಗೆ ಸರ್ವವಿಧದಲ್ಲೂ ಯೋಗ್ಯಳಾದವಳೊಬ್ಬಳನ್ನು ಮನದಲ್ಲೇ ಆರಿಸಿಟ್ಟು, ಮಗ ಬಂದಮೇಲೆ ಅವನಿಗೊಮ್ಮೆ ತೋರಿಸಿ ತೀರ್ಮಾನಿಸುವುದಾಗಿ ತಿಳಿಸಿ, ಅವರನ್ನೆಲ್ಲ ಕುತೂಹಲದಿಂದ ಕಾಯುವಂತೆ ಮಾಡಿಬಿಟ್ಟರು.

ಆರು ತಿಂಗಳು ಬಿಟ್ಟು ಅಶೋಕ ಊರಿಗೆ ಬರುವಷ್ಟರಲ್ಲಿ ಕೃಷ್ಣನನ್ನು ಮನಸಾರೆ ಪ್ರೀತಿಸುವಂಥ ನೂರಾರು ರಾಧೆಯರು ಕೈಯಲ್ಲಿ ಹೂಮಾಲೆ ಹಿಡಿದು ಅವನ ಕುಡಿನೋಟಕ್ಕಾಗಿ ಕಾದುಕುಂತಿದ್ದರು. ಬಂದವನು ಅಪ್ಪ–ಅಮ್ಮ ಆರಿಸಿಟ್ಟಿದ್ದ ಸಂಜೀವಪ್ಪನ ಮಗಳು ಸೌಜನ್ಯಳನ್ನು ನೋಡಲು ಹೋದ. ಆದರೆ ಆಕೆ ತಾನೇ ವರಪರೀಕ್ಷೆ ಮಾಡುವಂತೆ, ತನ್ನದೊಂದು ಪ್ರಶ್ನೆಗೆ ಉತ್ತರಿಸಿದರೆ ಮಾರುತ್ತರ ನೀಡದೆ ತನ್ನ ಸ್ವಯಂವರದ ಹೂಮಾಲೆ ಹಾಕುವುದಾಗಿ ಘೋಷಿಸಿಬಿಟ್ಟಳು. ಇದುವರೆಗೆ ಪ್ರಪಂಚವನ್ನು ಸುತ್ತಿಬಂದಿರುವುದರ ಲೆಕ್ಕವನ್ನೇ ಇಡದ ತನ್ನ ಮುಂದೆ ಇದೂ ಒಂದು ಲೆಕ್ಕವೇ? ಎಂದು ನಸುನಕ್ಕ.

ಆ ಯಕ್ಷಪ್ರಶ್ನೆ ಹೀಗಿತ್ತು: ಒಂದು ಲಾಡ್ಜ್. ಮೂವರು ಗೆಳೆಯರು ತಲಾ ರೂ. ೧೦೦೦ದಂತೆ ಶೇರು ಹಾಕಿಕೊಂಡು, ರೂ.೩೦೦೦ಕ್ಕೆ ಒಂದು ರೂಮು ಮಾಡಿದರು. ಸ್ವಲ್ಪ ಹೊತ್ತಾದ ಮೇಲೆ ಬಂದ ಓನರ್ರು, ಬಂದಿರುವವರು ತಮ್ಮ ಮಾಮೂಲಿ ಗಿರಾಕಿಗಳು ಎಂದು ಐನೂರು ರೂಪಾಯಿ ಡಿಸ್ಕೌಂಟ್ ನೀಡಿ, ರೂಂಬಾಯ್ ಕಡೆ ಕಳಿಸಿಕೊಟ್ಟ.

ಅವರು ತಲಾ ನೂರರಂತೆ ಹಂಚಿಕೊಂಡು ಉಳಿದ ಇನ್ನೂರನ್ನು ರೂಂಬಾಯಿಗೇ ಮಜಾ ಮಾಡಿಕೋ ಎಂದು ಟಿಪ್ಸ್ ಕೊಟ್ಟುಬಿಟ್ಟರು. ಅಂದರೆ ಒಬ್ಬೊಬ್ಬರಿಗೆ ತಲಾ ಒಂಬೈನೂರು ಬಿತ್ತು. ಇನ್ನೂರು ರೂಪಾಯಿ ಟಿಪ್ಸ್ ಕೊಟ್ಟಿದ್ದಾರೆ. ಅಂದರೆ ರೂ. ೨೯೦೦ ಆಯಿತು. ಹಾಗಾದರೆ ಉಳಿದ ನೂರು ರೂಪಾಯಿ ಎಲ್ಲಿ ಹೋಯಿತು?

ತಕ್ಷಣಕ್ಕೆ ಅಶೋಕನಿಗೆ ಏನೂ ಅರ್ಥವಾಗಲಿಲ್ಲ. ಪಕ್ಕಾಲೆಕ್ಕ ಇಡುವ ಗಣಿತದಲ್ಲೂ ಇಂಥ ಸಿಕ್ಕುಗಳಿವೆಯಾ ಎಂದು ತಲೆಕೆರೆದುಕೊಂಡ. ಹುಡುಗಿಯ ಅಪ್ಪ–ಅಮ್ಮ ಗದರಿಸಿದರು: ‘ಇಂಥ ಟೈಮಲ್ಲಿ ಎಂಥದೇ ನಿನ್ನ ಚೇಷ್ಟೆ’ ಎಂದು. ‘ಉತ್ತರ ಹೇಳದಿದ್ದರೂ ಪರವಾಯಿಲ್ಲ, ತಾನು ಮಾತ್ರ ಮದುವೆಯಾಗಲು ಸಿದ್ಧ’ ಎಂದವಳು, ‘ಇನ್ನೊಂದು ಪ್ರಶ್ನೆ ಕೇಳಲಾ? ಸಿಂಪಲ್ಲಾಗಿರೋದು’ ಎಂದಳು.

ಎಲ್ಲರೂ ಬೇಡ ಮಾರಾಯ್ತಿ ಎಂದು ಮದುವೆ ಮಾತುಕತೆ ಮುಗಿಸಿ, ದಿನಾಂಕ ನಿಗದಿಪಡಿಸಿದರು. ಹುಡುಗಿ ಚುರುಕಾಗಿದ್ದಾಳೆ ಎಂದು ಅಶೋಕನೂ ಇಷ್ಟಪಟ್ಟುಬಿಟ್ಟ. ಜೊತೆಗೆ ಆಕೆಯ ಫೋನ್ ನಂಬರನ್ನೂ ಕೇಳಿ ಪಡೆದುಕೊಂಡ.

ಮಾರನೆಯ ದಿನ ಬೆಳಗ್ಗೆಯೇ ಸೌಜನ್ಯಳಿಗೆ ಬಂದ ಕುಶಲೋಪರಿಯ ಫೋನ್ ಇಟಲಿಯಿಂದಾಗಿತ್ತು. ಎಸ್‌ಟಿಡಿ ಕರೆಗಳನ್ನೇ ನೋಡಿರದ ಅವಳ ಮೊಬೈಲ್‌ನಲ್ಲಿ ಐಎಸ್‌ಡಿ ನಂಬರ್ ನೋಡಿ ಪುಳಕಿತಳಾದಳು. ಕರೆಮಾಡಿರುವುದು ಅಶೋಕ ಎಂದಾಗಂತೂ ಮೈಯೆನ್ನುವುದು ತನ್ನೆಲ್ಲ ತೂಕ ಕಳೆದುಕೊಂಡು ಗಗನಯಾನಿಗಳು ಅಂತರಿಕ್ಷದಲ್ಲಿ ತೇಲಾಡುವಂತೆ ತೂರಾಡಿದಳು.

ತಾನು ಡಿಗ್ರಿ ಮಾಡುವಾಗ ನೂರಾರು ಪುಂಡ ಹುಡುಗರ ಕವಿತೆಯಂಥ ಹೊಗಳಿಕೆ ಕೇಳಿದ್ದರೂ, ಸರಳವಾಗಿದ್ದ ಅಶೋಕನ ಪ್ರೇಮನಿವೇದನೆಯಿಂದಾಗಿ ಮಾತು ಮರೆತುಹೋದಳು. ಹ್ಞಾಂ, ಹ್ಞೂಂ, ಹ್ಞೂಃ.. ಇಷ್ಟೇ ಇವಳ ಕೊರಳಿಂದ. ಒಂದೇ ಕಡೆ ಎಂದು ಅವನಾದರೂ ಎಷ್ಟು ಮಾತಾಡಿಯಾನು, ‘ಪ್ಲೈಟ್ ಬಂತು’ ಎಂದು ಕರೆಕತ್ತರಿಸಿಬಿಟ್ಟ.

ಮತ್ತೆ ಬಂದ ಕರೆ ರಾತ್ರಿ ಒಂದೂವರೆಗೆ. ನಿದ್ದೆಗಣ್ಣಲ್ಲಿ ತೇಲಾಡುತ್ತ ನೋಡಿದರೆ ಇನ್ಯಾವುದೋ ದೇಶದ ಕೋಡ್. ‘ಈಗ ತಾನೆ ಮೀಟಿಂಗ್ ಮುಗಿಯಿತು. ಈಗ ಲಂಚ್‌ಬ್ರೇಕ್’ ಎಂದ ಅಶೋಕ. ‘ಮಧ್ಯರಾತ್ರಿಯಲ್ಲಿ ಲಂಚಾ?’ ಎಂದು ಇವಳು ಕಣ್ಣಾಲಿ ಅಗಲಿಸಿ, ತಾನು ಕನಸು ಕಾಣುತ್ತಿಲ್ಲವಷ್ಟೇ ಎಂದು ಒಳಸುಂಡಿ ಹಿಂಡಿಕೊಂಡು ಖಾತ್ರಿಪಡಿಸಿಕೊಂಡಳು. ಅದನ್ನು ಅರಿತವನಂತೆ ತಾನು ಸೂರ್ಯನ ಹಿಂಬಾಲಕ, ಸದಾ ಬೆಳಕಲ್ಲೇ ತನ್ನ ಪಯಣ, ನಿದ್ದೆ ಏನಿದ್ದರೂ ಫ್ಲೈಟ್‌ನಲ್ಲೇ ಎಂದು ಸೂಚ್ಯವಾಗಿ ಹೇಳಿದ.

ಇಲ್ಲವಾದರೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ತನ್ನ ಕಂಪೆನಿಯೂ ಮಲಗಿಬಿಡಬೇಕಾಗುತ್ತದೆ ಎಂದು ಸೂಚ್ಯವಾಗಿ ಹೇಳಿದ. ಅದಾವುದೂ ಅವಳಿಗೆ ಅರ್ಥವಾಗುವಂತಿರಲಿಲ್ಲ. ತಾನು, ತನ್ನ ಪ್ರೇಮವಷ್ಟೇ ಈ ಭೂಮಿಯಲ್ಲಿರುವ ಜಗತ್ತು ಎಂದು ಪರಿಭಾವಿಸಿದ್ದಳು.

ಹೀಗೆ, ಫೋನುಗಳ ಸುರಿಮಳೆಯ ನಡುವೆಯೇ ಮದುವೆಯ ಸಿದ್ಧತೆಗಳೆಲ್ಲ ನಡೆದವು. ಬಟ್ಟೆ ತೆಗೆಯುವುದು, ಒಡವೆ ಮಾಡಿಸುವುದು, ಇನ್ವಿಟೇಷನ್ ಪ್ರಿಂಟ್ ಮಾಡಿಸುವುದು, ಹಂಚುವುದು ಎಲ್ಲವೂ ಮೇಲ್, ವಾಟ್ಸ್‌ಆಪ್, ಫೇಸ್‌ಬುಕ್‌ನಲ್ಲೇ ನಡೆದುಹೋಯಿತು. ‘ತಾಳಿಯನ್ನೂ ಆನ್‌ಲೈನಲ್ಲೇ ಕಟ್ಟಿಬಿಡುತ್ತೀರಾ’ ಎಂದು ಒಮ್ಮೆ ಕಿಚಾಯಿಸಿಯೂ ಇದ್ದಳು. ‘ಏನ್ಮಾಡ್ಲಿ ಡಿಯರ್, ಚಕ್ರ ಕಟ್ಟಿಕೊಂಡಂತಲ್ಲ, ರೆಕ್ಕೆ ಕಟ್ಟಿಕೊಂಡಂತೆ ಇಡೀ ಭೂಮಿಯನ್ನು ಸುತ್ತಬೇಕು.

ಬಟ್, ನಿನ್ನ ಮದುವೆಗೆ ಖಂಡಿತ ಬರುತ್ತೇನೆ. ಪ್ರಾಮಿಸ್’ ಎಂದು ನಕ್ಕುಬಿಟ್ಟ. ಆದರೆ ಸೌಜನ್ಯಳಿಗೆ ಅವನು ಸದಾ ತನ್ನ ಪಕ್ಕದಲ್ಲೇ ಇರಬೇಕು, ಇದ್ದು ಮಾತಾಡಬೇಕು, ಮಾತಿಗಿಂತಲೂ ತನ್ನ ಸಾನ್ನಿಧ್ಯದಿಂದ ಮೈನವಿರೇಳಿಸಬೇಕು– ಇಂಥ ಕನಸುಗಳು. ‘ಮದುವೆಯಾದ ಮೇಲೆ ಹೇಗೂ ಲೈಸೆನ್ಸ್ ಇರುತ್ತಲ್ಲ; ಜೊತೆಯಲ್ಲೆ ಕರೆದುಕೊಂಡು ಬಂದುಬಿಡುತ್ತೇನೆ ಬಿಡು’ ಎಂದು ಸಮಾಧಾನಿಸಿದ್ದ.

ಮದುವೆಗೆಂದು ಒಂದು ವಾರವೇ ರಜೆ ಸಿಕ್ಕಿದ್ದು. ಆ ಸಂಪ್ರದಾಯ, ಈ ದೇವಸ್ಥಾನ ಅನ್ನುವ ಹೊತ್ತಿಗೇ ಮೂರು ದಿನ ಮುಗಿದೇಹೋಗಿತ್ತು. ಅಷ್ಟರಲ್ಲಿ ಫೋನ್ ಮೇಲೆ ಫೋನು. ಅಲ್ಲಿ ಹಾಗಾಗಿದೆ, ಇಲ್ಲಿ ಹೀಗಾಗಿದೆ, ತಕ್ಷಣ ಹೊರಡಿ, ಇಲ್ಲದಿದ್ದರೆ ಕೋಟ್ಯಂತರ ಡಾಲರ್ ನಷ್ಟವಾಗಿಬಿಡುತ್ತದೆ. ಡೆಪ್ಯುಟಿ ಚೀಫ್‌ಗೆ ಸಿಚುಯೇಷನ್ ಹ್ಯಾಂಡಲ್ ಮಾಡೋಕ್ಕೆ ಅನುಭವ ಸಾಲ್ತಾಯಿಲ್ಲ. ಇತ್ಯಾದಿ.

ತನ್ನ ಉದ್ಯೋಗದ ಜೊತೆಯೇ ಹನಿಮೂನ್ ಮುಗಿಸಿಬಿಡಬಹುದು ಎಂದುಕೊಂಡರೆ ಸೌಜನ್ಯಳಿಗೆ ಪಾಸ್‌ಪೋರ್ಟೇ ಇಲ್ಲ. ಅಯ್ಯೋ, ಇಷ್ಟು ದಿನ ವ್ಯರ್ಥವಾಯಿತಲ್ಲ ಎಂದು ಪರಿತಪಿಸಿ ತನ್ನ ಮೂರ್ಖತನಕ್ಕೆ ತಾನೇ ತಲೆಮೇಲೆ ಹೊಡೆದುಕೊಂಡ. ಅದಕ್ಕೇ ಅವಳ ಸಿಂಪಲ್ ಆದ ಪ್ರಶ್ನೆಗೂ ಉತ್ತರ ಸಿಗದೇ, ಅದನ್ನು ಹುಡುಕುವ ಯೋಚನೆಗೆ ಕಾಲವೂ ಸಿಗದೇ... ಛೇ! ತನ್ನಷ್ಟು ದಡ್ಡ ಈ ಪ್ರಪಂಚದಲ್ಲಿ ಯಾರೂ ಇಲ್ಲವೇನೋ ಎಂದುಕೊಂಡ.

ಆದರೂ ತನ್ನ ಕಂಪೆನಿಯವರು, ತನ್ನಂಥವನನ್ನು ಸಿ.ಇ.ಓ. ಮಾಡಿಕೊಂಡಿದ್ದಾರೆಂದರೆ ನನಗಿಂಥ ಅವರೇ ಹೆಚ್ಚು ಮೂರ್ಖರಿರಬೇಕಲ್ಲವೇ? ಈ ಪ್ರಪಂಚದಲ್ಲಿ ಬದುಕಿರುವ ಜನರೊಳಗೆ, ಅದರೊಳಗೆ ತನ್ನ ವಯೋಮಾನದವರೊಳಗೆ, ಅದರಲ್ಲೂ ಈ ಕಂಪೆನಿಗೆ ಸೇರಲು ಬಯಸಿರುವ ಕೆಲವೇ ಕೆಲವರೊಳಗೆ ಇದ್ದುದರಲ್ಲಿ ಪರವಾಗಿಲ್ಲ ಎನ್ನುವವರನ್ನು ಆರಿಸಿ, ಅವರೊಳಗೆ ೦.೧% ಬೆಟರ್ ಎಂದು ತನಗೆ ಈ ಜವಾಬ್ದಾರಿ ನೀಡಿರಬೇಕಷ್ಟೆ.

ಇಲ್ಲದಿದ್ದರೆ, ಭೂಮಿಯ ಮೇಲೆ ಎಂಥೆಂಥ ಪ್ರಚಂಡ ಬುದ್ಧವಂತರಿದ್ದಾರೆ. ಅದರಲ್ಲೂ ಈ ಕಾಲದ ಮಕ್ಕಳು! ಅವರ ಮುಂದೆ ತಾನೇನೇನೂ ಅಲ್ಲ ಅನ್ನಿಸಿದಾಗ ಇದುವರೆಗೂ ಉಬ್ಬಿದ್ದ ಎದೆ ಸ್ವಲ್ಪ ಕೆಳಕ್ಕೆ ಹೋಯಿತು.

ಉದ್ಯೋಗದ ಒತ್ತಡಕ್ಕೆ ಸಿಲುಕಿ ಊರುಬಿಟ್ಟು ಹೊರಟವನಿಗೆ ಹೆಂಡತಿಯ ಸಿಡುಕುಮೋರೆಯ ವಿದಾಯ. ಮುಂದಿನ ವಾರ ಮತ್ತೆ ಎರಡು ದಿನ ರಜೆ ಹಾಕಿ ಬಂದುಬಿಡುವೆನೆಂದು ರಮಿಸಿ ಹೊರಟವನಿಗೆ, ಅಲ್ಲಿ ಆ ಕೆಲಸ, ಇಲ್ಲಿ ಈ ಕೆಲಸ ಎಂದು ಊರಿಗೆ ಬರುವುದಿರಲಿ, ಹೆಂಡತಿಗೆ ಫೋನು ಮಾಡಲೂ ಪುರುಸೊತ್ತು ಸಿಗಲಿಲ್ಲ. ರಜೆಯಲ್ಲಿ ಉಳಿದುಹೋಗಿದ್ದ ಕೆಲಸಗಳೂ ಸೇರಿ ಇನ್ನಷ್ಟು ಒತ್ತಡ ನೀಡಿದವು.

ಅವತ್ತವತ್ತಿನ ಕೆಲಸ ಅವತ್ತವತ್ತೇ ಮುಗಿಸಿಬಿಡಬೇಕು; ಇಲ್ಲದಿದ್ದರೆ ಮೌಂಟ್ ಆಗಿಬಿಡುತ್ತದೆ ಎಂದು ಕೈಕೆಳಗಿನವರಿಗೆ ಉಪದೇಶ ಮಾಡುತ್ತಿದ್ದುದು ಎಲ್ಲೋ ತನ್ನ ಬುಡಕ್ಕೇ ಬಂದು ನಿಂತಂತೆನಿಸಿತು.

ಏನೇನೋ ಮಾಡಿ ಹದಿನೈದನೇ ದಿನಕ್ಕೆ ಸಿಕ್ಕ ವೀಕೆಂಡಿನ ಜೊತೆಗೆ ಎರಡು ರಜೆಯನ್ನೂ ಸೇರಿಸಿ ಊರಿಗೆ ಓಡೋಡಿಬಂದ. ಬರುವಾಗ ದಾರಿತುಂಬಾ ಏನೇನೋ ಕನಸುಗಳು, ಕನವರಿಕೆಗಳು. ತನ್ನವಳ ಹಿಂದಿನಿಂದ ಗುಲಾಬಿಯನ್ನು ಹೀಗೆ ಕೊಟ್ಟು ಅಚ್ಚರಿಗೊಳಿಸಬೇಕು, ಅರಿವಿರದೆ ಆಲಂಗಿಸಿ ಹಾಗೆ ಆತಂಕಗೊಳಿಸಬೇಕು, ಅವಳ ತೊಡೆಯ ಮೇಲೆ ತಲೆಹಾಕಿ ಮಗುವಿನಂತೆ ಹೀಗೆ ಮಲಗಿ... ಹಾಗೇ ಮಗ್ಗುಲುವರಿದು ಉತ್ಕಂಠತೆಯ ಸ್ವರ್ಗದಲ್ಲಿ ಕಳೆದುಹೋಗಿ ಹೀಗೆ ತೇಲಾಡುತಿರಬೇಕು...

ಮನೆಗೆ ಬರುವ ವೇಳೆಗಾಗಲೇ ಕತ್ತಲು ಆವರಿಸಿಬಿಟ್ಟಿತ್ತು. ಮೊನ್ನೆಯ ಅಮಾವಾಸ್ಯೆಯ ಹೊಡೆತಕ್ಕೆ ನರಳಿ ಬಸವಳಿದಿದ್ದ ಚಂದ್ರ, ತೆಳುರೇಖೆಗಿಂಥ ಸ್ವಲ್ಪ ನೆಗವಾಗಿದ್ದವನು, ತಡವಾಗಿ ಮೇಲೇರಿಬರುತ್ತಿದ್ದ. ತಾನಿರದಿದ್ದಾಗಲೇ ಕರೆದು ಕಳಿಸುವ ಎಲ್ಲ ಸಂಪ್ರದಾಯಗಳನ್ನು ಮುಗಿಸಿ ಗಂಡನ ಮನೆ ಸೇರಿದ್ದ ಸೌಜನ್ಯ, ಯಾಕೋ ನಿರೀಕ್ಷಿಸಿದ ಆತ್ಮೀಯತೆ ತೋರದೆ ಉದಾಸೀನ ಮಾಡುತ್ತಿರುವಂತೆ ಅವನಿಗನಿಸಿತು.

ವಿರಹದ ಬೇಸರಿಕೆ ಕಾರಣವಾಗಿರಬಹುದೆಂದು ಅವನೂ ಅದಕ್ಕೆ ಹೆಚ್ಚೇನೂ ಪ್ರಾಮುಖ್ಯತೆ ನೀಡದೆ ಹಸಿವಿರದ ಹೊಟ್ಟೆಗೂ ಒಂದಷ್ಟು ಉಣಿಸುವ ಶಾಸ್ತ್ರ ಮಾಡಿ ಮೊದಲ ರಾತ್ರಿಯ ಕೋಣೆಸೇರಿದ. ಮನೆಯವರೆಲ್ಲ ಏನೂ ಹೇಳದಿದ್ದರೂ ಎಲ್ಲ ಗೊತ್ತಾಯಿತು ಎನ್ನುವಂತೆ ಹಾಗೆಹಾಗೆ ಸರಿದುಕೊಂಡರು.

ಹಾಸಿಗೆಯೇರಿದ ಮಡದಿಯ ಕಣ್ಣಲ್ಲಿ ಉತ್ಸಾಹದ ಚಿಲುಮೆಯಿರಲಿಲ್ಲ. ಜಡವಾದ ಮೈಯಲ್ಲಿ ಏನೋ ಕಾಟಾಚಾರದ ಸಂಭೋಗಕ್ರಿಯೆ ಮುಗಿಸಿದವನಿಗೆ ಮೊದಲದಿನದ ಊಟ ಮೃಷ್ಟಾನ್ನಭೋಜನವಲ್ಲ ಎಂಬ ಹಳಹಳಿಕೆ ಆರಂಭವಾಯಿತು. ಇನ್ನೂ ಮೂರುದಿನ ಇರುತ್ತೇನೆಂದರೂ ಮುಸಿಮುಸಿ ಅಳುವಷ್ಟೇ ಅವಳ ಆಭರಣವಾಯಿತು. ‘ದೂರದ ದೊಡ್ಡ ಕೆಲಸ ಬೇಡ, ಇಲ್ಲೇ ಯಾವುದಾದರೊಂದು ಸಣ್ಣ ಕೆಲಸ ಮಾಡಿಕೊಂಡಿರಿ ಸಾಕು.

ನಮಗೇನೂ ಬದುಕುವ ಹಣಕ್ಕೇನೂ ಕೊರತೆಯಿಲ್ಲ, ದುಡಿದೇ ತಿನ್ನಬೇಕೆಂಬ ಅನಿವಾರ್ಯತೆಯೂ ಇಲ್ಲ’ ಎಂದವಳು, ‘ನಾವು ಇನ್ನೆಷ್ಟು ದಿನ ಬದುಕುತ್ತೇವೆ? ಇನ್ನೊಂದು ಹತ್ತು-ಇಪ್ಪತ್ತು ವರ್ಷ, ಬೇಡ ಮೂವತ್ತು ವರ್ಷ! ಅಷ್ಟರೊಳಗೆ ಇದ್ದಬದ್ದ ಸುಖವನ್ನೆಲ್ಲ ನಾವು ಮೊಗೆಮೊಗೆದು ಕುಡಿದುಬಿಡಬೇಕು. ಈ ಯೌವನ, ಈ ಉತ್ಸಾಹ ಇರುವುದು ಬರೀ ಉದ್ಯೋಗ ಮಾಡಿ ಯಾರೋ ಬಂಡವಾಳಶಾಹಿಯನ್ನು ಇನ್ನಷ್ಟು ಬಲಶಾಲಿಯನ್ನಾಗಿಸುವುದಕ್ಕಲ್ಲ.

ನಿಮ್ಮ ಕಂಪೆನಿ ಚೇರ್ಮನ್ ನೋಡಿ, ಬುದ್ಧಿವಂತ. ನಿಮ್ಮಂಥವರನ್ನು ದುಡಿಯಲು ಹಚ್ಚಿ ತಾನು ಮಾತ್ರ ಹೆಂಡತಿ ಮಕ್ಕಳೊಂದಿಗೆ ಆರಾಮಾಗಿ ಇದ್ದಾನೆ. ಶ್ರೀಮಂತನಾಗುತ್ತಿದ್ದಾನೆ’ ಎಂದವಳು, ‘ನನಗೆ ನೀನು ಬೇಕು. ಸದಾ ನೀನು ನನ್ನೊಂದಿಗೇ ಇರಬೇಕು’ ಎಂದು ಅವನ ಎದೆಯಲ್ಲಿ ಮುಖಕ್ಕೆ ಆಶ್ರಯ ಕೊಟ್ಟಳು.

‘ಓಕೆ ಡಿಯರ್’ ಎಂದವನು ಮುಂದಿನ ಪ್ರಯಾಣಗಳಲ್ಲೆಲ್ಲ ಹೆಂಡತಿ ಜೊತೆಗಿರುವಂತೆ ನೋಡಿಕೊಂಡ. ಒಂದೊಂದು ದೇಶವೂ ಭಿನ್ನ.. ಆಹಾ, ಎಂಥ ಮಜ.. ಎಂದುಕೊಂಡಳು ಮೊದಲು. ಆದರೆ ವಾರವೆಲ್ಲ ಬರೀ ಪ್ರಯಾಣ, ಅದೇ ಏರ್‌ಪೋರ್ಟು, ಅದೇ ಟ್ಯಾಕ್ಸಿ, ಅದೇ ಹೋಟೆಲು, ಅದೇ ಜೆಟ್‌ಲಾಗ್. ಅವನು ಮೀಟಿಂಗ್ ಮುಗಿಸಿ ಬರುವವರೆಗೆ ರೂಮಲ್ಲೇ ಕೂಡಿಹಾಕಿದಂತೆ ಟಿ.ವಿ. ನೋಡುತ್ತಲೋ ತೂಕಡಿಸುತ್ತಲೋ ಕೂತಿರಬೇಕು.

ಅವನು ಬರುವ ಹೊತ್ತಿಗೆ ಸೈಟ್‌ಸೀಯಿಂಗಿಗೋ, ಮಾರ್ಕೆಟಿಂಗಿಗೋ ಹೋಗಿ ಬಂದುಬಿಡಬಹುದೆಂದು ಹೊರಟರೆ, ಅಷ್ಟರಲ್ಲಿ ಅವನ ಹರಿಬಿರಿಯ ಫೋನ್, ಫ್ಲೈಟ್ ಮಿಸ್ಸಾಗಿಬಿಡಬಹುದೆನ್ನುವ ಆತಂಕ... ಧಾವಂತದಿಂದ ಎದ್ದುಬಿದ್ದು ಓಡಿಬರಬೇಕು. ಅದಕ್ಕೆಂದೇ ಎಲ್ಲೂ ಹೋಗದೇ ಅವನಿಗಾಗಿ ಕಾದು ಕೂತಿರಬೇಕಿತ್ತು. ಎಲ್ಲಾ ದೇಶ ನೋಡಿದರೂ ಏನೂ ನೋಡಿದಂತೆ ಆಗಲೇಯಿಲ್ಲ ಸೌಜನ್ಯಳಿಗೆ.

ಕೊನೆಗೊಮ್ಮೆ ಬೇಸತ್ತು, ತನ್ನ ಸೌಜನ್ಯತೆಯನ್ನು ಮರೆತು ಹೇಳಿಯೇಬಿಟ್ಟಳು. ‘ನನಗೆ ಹಣ ಬೇಡ, ಅಧಿಕಾರ ಬೇಡ. ಐಷಾರಾಮಿ ಜೀವನವೂ ಬೇಡ. ಅಲ್ಲೆಲ್ಲೋ ಓಡಾಟ, ಇನ್ನೆಲ್ಲೋ ಅಲೆದಾಟ, ಸದಾ ಆಕಾಶದಲ್ಲೇ ಪ್ರೇತದಂತೆ ಅಲೆಡಾಡುವ ಬದಲು ಒಂದು ಕಡೆ ಬೇರು ಬಿಡಬೇಕು. ಅಲ್ಲಿಂದ ಸಾರವನ್ನು ಹೀಗೆ, ನಮ್ಮ ಬಿಳಲುಗಳನ್ನು ಬೆಳೆಸಬೇಕು. ಅವು ಎಲ್ಲೆಲ್ಲೋ ತಮ್ಮ ಘಮವನ್ನು ಹರಡಬೇಕು.

ಹೆಂಡತಿಯಾಗಿ ನಾನು ಇಷ್ಟೇ ನಿಮ್ಮಿಂದ ಬಯಸುವುದು’ ಎಂದು ಅಂತಿಮ ಷರಾ ಬರೆದಳು.
ಇರುವುದರಲ್ಲಿ ಸುಖ ಕಾಣಬೇಕೆನ್ನುವ ಅವಳೂ... ಇಲ್ಲದುದರಲ್ಲಿ ಸುಖ ಅರಸುವ ಇವನೂ...

ಈ ಬಾರಿ ಊರಿಗೆ ಬಂದವನು ಹೆಂಡತಿಯನ್ನು ಮನೆಯಲ್ಲೇ ಬಿಟ್ಟು ಅವಳಿಗೆ ಬೇಸರವಾಗದಂತೆ ನೋಡಿಕೊಳ್ಳುವಂತೆ ಅಪ್ಪ ಅಮ್ಮನಿಗೆ ತಾಕೀತು ಮಾಡಿ ಹೊರಟ. ತಿಂಗಳ ನಂತರ ಕನಸು ಹೊತ್ತು ಮತ್ತೆ ಊರಿಗೆ ಬಂದ. ಅಪಾರ ಉತ್ಸಾಹದ ಅವಳಲ್ಲಿ ಬರೀ ನಿರುತ್ಸಾಹದ ಕಾರ್ಮೋಡ. ಅವನಿಲ್ಲದ ದಿನಗಳಲ್ಲೆಲ್ಲ ತವರು ಮನೆಯಲ್ಲೇ ಇರುತ್ತಾಳೆ ಎಂಬ ಅಪ್ಪಅಮ್ಮನ ದೂರು ಬೇರೆ.

ಪರಸ್ಪರ ವಾದ–ವಿವಾದ. ಅಶೋಕನಿಗೆ ತಲೆ ಚಿಟ್ಟುಹಿಡಿದುಹೋಯಿತು. ದೇಶಾಂತರ ತಿರುಗಿ ಸುಖ ಅರಸುತ್ತ ಮನೆಗೆ ಬಂದರೆ, ಮನೆಯಲ್ಲೂ ಸುಖವಿಲ್ಲವಲ್ಲ ಎಂಬ ಹೇವರಿಕೆ ಆವರಿಸಿತು. ಕೇವಲ ದೈಹಿಕ ಸುಖಕ್ಕಾಗಿ ತಾನೇನು ಹುಡುಕಿಕೊಂಡು ಬರುತ್ತಿಲ್ಲವಲ್ಲ; ತಾನು, ತನ್ನದು, ತನ್ನ ಹೆಂಡತಿ, ತನ್ನ ಮನೆ ಎಂದು ತಾನೇ ಇಷ್ಟೆಲ್ಲಾ... ಆದರೂ ಆಕೆ ಯಾಕೆ ಹೀಗೆ? ಅರ್ಥವಾಗಲಿಲ್ಲ ಅವನಿಗೆ.

‘ಇನ್ನು ಎಷ್ಟು ವರ್ಷ ನಮ್ಮನ್ನು ಆ ಜಾಗದಲ್ಲಿ ಇಟ್ಟುಕೊಳ್ಳುತ್ತಾರೆ? ಅಷ್ಟರೊಳಗೆ ಜೀವನಕ್ಕಾಗುವಷ್ಟು ದುಡಿದುಬಿಡಬೇಕು. ಆಮೇಲೆ ದುಡಿಯಲು ನಾವು ತಯಾರಿದ್ದರೂ ದುಡಿಸಿಕೊಳ್ಳಲು ಯಾರೂ ತಯಾರಿರುವುದಿಲ್ಲ. ಆದ್ದರಿಂದ ಸ್ವಲ್ಪ ದಿನ ಅಡ್ಜಸ್ಟ್ ಮಾಡಿಕೊಂಡು ಇರುವಂತೆ ಹೇಳಿ’ ಎಂದು ಸೌಜನ್ಯಳ ತಂದೆತಾಯಿಯರಿಗೆ ಮನವರಿಕೆ ಮಾಡಿದ. ತನ್ನ ಮಾತು ಕೇಳುತ್ತಿಲ್ಲವೆಂದು, ಅವರಿಂದ ಬುದ್ಧಿ ಹೇಳಿಸಲು ನೋಡಿದ. ಆದರೆ ಆಕೆ ಮಾತ್ರ ಯಾರ ಮಾತನ್ನೂ ಕೇಳುವಂತಿರಲಿಲ್ಲ.

ಕೊನೆಗೆ ಅವರೂ, ‘ಮದುವೆಯಾದ ಹೆಣ್ಣು ಸದಾ ಗಂಡನನ್ನು ಜತೆಯಲ್ಲೇ ಇರಬೇಕೆಂದು ಬಯಸುವುದರಲ್ಲಿ ತಪ್ಪೇನು? ನಿಮ್ಮಲ್ಲೇ ಏನೋ ದೋಷವಿದೆ, ಅದನ್ನು ಸರಿಪಡಿಸಿಕೊಳ್ಳಿ’ ಎಂದುಬಿಟ್ಟವರು, ‘ಸಾಧ್ಯವಿಲ್ಲವೆಂದಾದರೆ ಡಿವೋರ್ಸ್ ಕೊಟ್ಟುಬಿಡಿ, ತಮ್ಮ ಮಗಳು ಹೊಸ ಜೀವನವನ್ನಾದರೂ ರೂಪಿಸಿಕೊಳ್ಳುತ್ತಾಳೆ’ ಎಂದುಬಿಟ್ಟರು!

‘ನಾನೇಕೆ ಡಿವೋರ್ಸ್ ತಗೋಬೇಕು, ನನಗೆ ಗಂಡ ಬೇಕು, ಮನೆ–ಮಕ್ಕಳು ಬೇಕೆಂದು ಕೇಳುವುದು ತಪ್ಪೇ’ ಎಂದು ಮನೆಯಲ್ಲಿ ಒಂದು ದೊಡ್ಡ ಪಂಚಾಯಿತಿಯನ್ನೇ ಏರ್ಪಡಿಸಿಬಿಟ್ಟಳು. ಅವಳ ಕಡೆಯ ನಾಲ್ಕು ಜನ, ಇವನ ಕಡೆಯ ನಾಲ್ಕು ಜನ ಕುಂತು ಜಗಳ ಪರಿಹರಿಸಲು ನೋಡಿದರು. ಯಾರೋ, ‘ಇಬ್ಬರಿಗೂ ಇಗೋ ಪ್ರಾಬ್ಲಂ ಇದೆ, ಕೌನ್ಸಿಲಿಂಗ್ ಮಾಡಿಸಿ’ ಎಂದರು.

ಮನಃಶಾಸ್ತ್ರಜ್ಞರ ಬಳಿ ಹೋಗಲು ತಮಗೇನು ಹುಚ್ಚು ಹಿಡಿದಿದೆಯೇ ಎಂದು ಇಬ್ಬರೂ ಪಟ್ಟುಹಿಡಿದರು. ಬೇಕಾದರೆ ಅವನನ್ನು ಕರೆದುಕೊಂಡು ಹೋಗಿ ಎಂದು ಅವಳೂ, ಅವಳನ್ನು ಕರಕೊಂಡು ಹೋಗಿ ಎಂದು ಇವನೂ...

ಇಷ್ಟು ವರ್ಷಗಳ ತನ್ನ ಅನುಭವದಲ್ಲಿ ತನ್ನ ತಪ್ಪಿನ ಬಗ್ಗೆ ಯಾರೂ ಬೆರಳು ಮಾಡಿ ತೋರಿಸಿರಲಿಲ್ಲ. ತಾನು ಪಡುವ ಶ್ರಮ, ಉಪಯೋಗಿಸುವ ತಂತ್ರ ಇವುಗಳನ್ನೆಲ್ಲ ಬೇರೆಯವರು ಅನುಕರಿಸಲು ಪ್ರಯತ್ನಿಸುತ್ತಿದ್ದರು. ಇದ್ದರೆ ಹೀಗಿರಬೇಕು ಎಂದು ಬೇರೆ ಬೇರೆ ಕಂಪೆನಿಯವರೆಲ್ಲ ಅಸೂಯೆಪಡುತ್ತಿದ್ದರು. ಅಂಥ ತನ್ನಲ್ಲೇ ತಪ್ಪು ಕಂಡುಹಿಡಿಯುತ್ತಿದ್ದಾಳಲ್ಲ... ಹಾಗಾದರೆ ಕಷ್ಟಪಟ್ಟು ದುಡಿಯುವುದೇ ತಪ್ಪೇ... ಏನೇನೋ ಹಳಹಳಿಕೆಗಳು ಅವನಲ್ಲಿ.

ಯಾಕೋ ಕೆಲಸದಲ್ಲಿ ಏಕಾಗ್ರತೆಯೇ ಮೂಡುತ್ತಿರಲಿಲ್ಲ. ಎಂಥದೋ ಅಸಹನೆ, ಎಂಥದೋ ದುಗುಡ, ಎಂಥದೋ ಚಡಪಡಿಕೆ. ಮೀಟಿಂಗ್‌ಗಳು ನಡೆಯುವಾಗ ಎಲ್ಲೋ ಇರುತ್ತಿದ್ದ ಗಮನ, ಎಂಥದೋ ಆಲೋಚನೆಯನ್ನು ಗಮನಿಸಿದ ಚೇರ್ಮನ್ ಒಂದೆರಡು ಬಾರಿ ಎಚ್ಚರಿಸಿದರು. ಚೇಂಬರಿನಲ್ಲಿ ಒಬ್ಬನೇ ಇರುವಾಗ ಮಂಕಾಗಿ ಕುಳಿತುಕೊಳ್ಳುತ್ತಿದ್ದ.

ಆತ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ತಪ್ಪಾಗಿವೆ ಎಂದು ಕೆಳಗಿನವರಿಗೂ ಸ್ಪಷ್ಟವಾಗಿ ಗೋಚರಿಸಲಾರಂಭಿಸಿತು. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಒಂದು ನಿಮಿಷ ತಡವಾದರೂ, ಅಷ್ಟರಲ್ಲಿ ಬೇರೆ ಯಾರೋ ಆ ಕೆಲಸ ಮಾಡಿಬಿಟ್ಟಿರುತ್ತಿದ್ದರು. ಇದರಿಂದಾಗಿ ಒಂದೊಂದೇ ಹಿನ್ನಡೆಗಳನ್ನು, ನಷ್ಟಗಳನ್ನು ಕಂಪೆನಿ ಅನುಭವಿಸಲಾರಂಭಿಸಿತು.

ತುರ್ತು ಮೀಟಿಂಗ್ ಕರೆದರು. ಅಶೋಕನಿಂದ ತಮ್ಮ ಕಂಪೆನಿಗೆ ನಷ್ಟವುಂಟಾಗುತ್ತಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗಿ ಗೋಚರಿಸಲಾರಂಭಿಸಿತು. ಎಲ್ಲರ ಬೆರಳೂ ಇವನತ್ತಲೇ ತೋರಿದಾಗ ಎಚ್ಚರಗೊಂಡ. ಬೇರೊಬ್ಬರನ್ನು ಅವನ ಜಾಗಕ್ಕೆ ನೇಮಿಸಬೇಕಾದೀತು ಎಂಬ ಸೂಚನೆ ಅನೇರವಾಗಿ ಬಂತು. ಅಂದರೆ ಕೆಲಸದಿಂದ ತೆಗೆಯಬೇಕಾದೀತು ಎಂದು ಅರ್ಥ!

ನ್ಯೂಯಾರ್ಕಿನ ಯಾವುದೋ ಲಾಡ್ಜಿನ ರೂಮೊಂದರಲ್ಲಿ ಒಂಟಿಯಾಗಿ ಕುಳಿತವನ ಜೊತೆಗೆ ನೂರೆಂಟು ಯೋಚನೆಗಳು, ಆಲೋಚನೆಗಳು. ಇಲ್ಲ, ಇವತ್ತೇ ಇದರಿಂದ ಹೊರಬರಬೇಕು, ನಾಳೆ ಎಂದರೆ ತಡವಾಗುತ್ತದೆ, ಮತ್ಯಾರೋ ತನ್ನ ಜಾಗದಲ್ಲಿ ಬಂದು ಕುಂತುಬಿಡುತ್ತಾರೆ, ಯಾರಾದರೂ ಒಮ್ಮೆ ಹಾಗೆ ಕುಂತರೆ ಮತ್ತೆ ಅವರನ್ನು ಅಲ್ಲಿಂದ ಅಲ್ಲಾಡಿಸುವುದು ಕಷ್ಟ ಎಂಬ ಅರಿವು ಅವನಿಗಿತ್ತು. ಟೇಬಲ್ ಮೇಲಿನ ಗ್ಲಾಸ್ ಕ್ರಮೇಣ ಖಾಲಿಯಾಗುತ್ತಿತ್ತು.

ಅದು ಖಾಲಿಯಾಗುತ್ತಿದ್ದಂತೆಯೆ ತನ್ನ ತಲೆಯ ತುಂಬ ಆಲೋಚನೆಗಳು ಒಂದರ ಹಿಂದೆ ಒಂದರಂತೆ ಪೈಪೋಟಿ ಮೇಲೆ ಹರಿದುಬರಲಾರಂಭಿಸಿದವು. ಅವುಗಳಲ್ಲಿ ಯಾವುದನ್ನು ಅಪ್ಪಿಕೊಳ್ಳುವುದು ಎಂಬ ಗೊಂದಲಕ್ಕೆ ಬೀಳುವಷ್ಟು ದಾರಿಗಳು ಕಣ್ಣಮುಂದೆ ತೆರೆದುಕೊಂಡು ನಿಲ್ಲಲಾರಂಭಿಸಿದವು. ತನ್ನ ಪ್ರತಿಸ್ಪರ್ಧಿ ಕಂಪೆನಿಯನ್ನು ಮತ್ತೆ ತಲೆ ಎತ್ತದಂತೆ, ಇನ್ನಿಲ್ಲದಂತೆ ಹೇಗೆ ನಿರ್ನಾಮ ಮಾಡಿಬಿಡಬೇಕೋ ಅಂಥವೇ ಆಲೋಚನೆಗಳು ಅವು.

ಚಾಣಕ್ಯ ನೆಲದೊಳಡಗಿದ ಗರಿಕೆಯ ಬೇರನ್ನೂ ಮೂಲೋತ್ಪಾಟನೆ ಮಾಡಬೇಕೆಂದು ಹೇಳಿದನಲ್ಲ, ಅಂತ ಆಲೋಚನೆ ಅದು. ಹೌದು. ದೃಢ ನಿರ್ಧಾರ ಮಾಡಿದ. ಇದಕ್ಕಿಂತ ಸಮಂಜಸವಾದ ಮಾರ್ಗವೇ ಇಲ್ಲ ಎಂದು ನಿರ್ಧರಿಸಿದ. ಕೈಗೆ ಫೋನ್ ಎತ್ತಿಕೊಂಡ. ಟಕಟಕಟಕ ನಂಬರ್ ಒತ್ತಿದ.

‘ಹಲೋ.. ನಾನು ಬಾಸ್ ಮಾತಾಡ್ತೀದೀನಿ’.
‘ಹೇಳಿ ಬುದ್ಧಿ’.
‘ಮೇಮ್‌ಸಾಬ್ ಏನ್ ಮಾಡ್ತಿದಾರೆ?’
‘ಮಲಗಿದ್ದಾರೆ ಬುದ್ಧಿ’.
‘ಅಪ್ಪ, ಅಮ್ಮ?’
‘ದಿನಸಿ ತರೋಕ್ಕೆ ನಗರಕ್ಕೆ ಹೋಗಿದಾರೆ ಬುದ್ಧಿ’.
‘ಬರೋಕ್ಕೆ ಎಷ್ಟೊತ್ತಾಗುತ್ತೆ?’
‘ಮಧ್ಯಾಹ್ನ ಆಗುತ್ತೆ ಬುದ್ಧಿ’.
‘ಈಗ ಅಲ್ಲಿ ಟೈಂ ಎಷ್ಟು?’
‘ಹತ್ತೂವರೆ ಬುದ್ಧಿ’.
‘ಮೇಮ್‌ಸಾಬ್ ಇಷ್ಟೊತ್ತಿಗೇ ಯಾಕೆ ಮಲಗಿದಾರೆ?’
‘ಏನೋ ಹುಷಾರಿಲ್ಲಂತೆ ಬುದ್ಧಿ’.
‘ನಿನ್ನ ಸಂಬಳ ಎಷ್ಟು?
‘ನೀವೇ ಕೊಡೋವ್ರು, ನಿಮಗೆ ಗೊತ್ತಿಲ್ರ ಬುದ್ಧಿ’.
‘ಇರಲಿ ಹೇಳು’.
‘ಹತ್ತು ಸಾವಿರ ಬುದ್ಧಿ’.

‘ನಾನು ಹೇಳಿದಂಗೆ ಮಾಡ್ತೀಯಾ, ಹತ್ತು ಕೋಟಿ ಕೊಡ್ತೀನಿ. ನಿನ್ನ ಮೂರು ತಲೆಮಾರು ಕುಂತು ತಿನ್ನಬಹುದು.. ಅಷ್ಟು..’.
‘ಹೇಳಿ ಬುದ್ಧಿ. ನೀವು ಕಾಲ್ನಾಗ್ ತೋರ್ಸಿದ್ನ ನಾನು ಕಣ್ಣಿಗೊತ್ಕೊಂಡು ಮಾಡ್ತೀನಿ’.
‘ಕಾರ್ಡ್‌ಲೆಸ್ ಫೋನ್ ತಗೋ’.

‘ಅದ್ರಾಗೇ ಮಾತಾಡ್ತಿದೀನ್ರಾ..’
‘ಮೇಮ್‌ಸಾಬ್ ರೂಂಗೆ ಹೋಗು. ನಾನು ಹೇಳೋದಷ್ಟೇ ಕೇಳುಸ್ಕೋ, ನೀನು ಮಾತಾಡಬೇಡ. ಮಾತಾಡಬೇಕಾಗಿ ಬಂದರೆ ಮೆಲ್ಲಗೆ ಮಾತಾಡು. ಆಯ್ತಾ... ತಲೆದಿಂಬು ತಗೋ. ಮೇಮ್‌ಸಾಬ್ ಮುಖದ ಮೇಲೆ ಒತ್ತಿಹಿಡುಕೋ. ಐದು ನಿಮಿಷ ಬಿಡಬೇಡ. ಒದ್ದಾಡಿದ್ರೂ ಬಿಡಬೇಡ... ಹಿಡ್ಕೊಂಡೆಯಾ? ಕೊಸರಾಡ್ತಾಳೆ. ಬಿಡಬೇಡ. ಜೋರಾಗಿ ಅದುಮ್ಕೋ. ಹಾಗೇ ಹಿಡ್ಕೋ. ಸುಮ್ಮಗಾದ್ಲ? ಮೂಗು ಹತ್ತಿರ ಬೆರಳಿಡು. ಉಸಿರಾಡ್ತಾಯಿಲ್ವ...’
‘ಇಲ್ಲ ಬುದ್ಧಿ’.

‘ಗುಡ್, ಹೆಗಲ ಮೇಲೆ ಹಾಕ್ಕೋ... ಹಿತ್ತಲ ಬಾಗಿಲು ತಗೀ’.
‘ತಗದೇ ಬುದ್ಧಿ’.
‘ನದಿ ಒಳಗೆ ಮೊಸಳೆಗಳಿವೆ ನೋಡು, ಅಲ್ಲಿಗೆ ಎಸಿ. ಆಮೇಲೆ, ಅವೆಲ್ಲ ತಿಂದ ಆದ ಮೇಲೆ ಏನಾದರೂ ಸೀರೆಗೀರೆ ಉಳಿದಿದ್ರೆ ಬೆಂಕಿ ಹಚ್ಚಿ ಸುಟ್ಟುಬಿಡು. ಗೊತ್ತಾಯ್ತ?’.

‘ಬುದ್ಧಿ... ಹಿತ್ತಲ ಬಾಗಿಲಲ್ಲಿ ಯಾವುದೂ ನದಿಯೇ ಇಲ್ಲವಲ್ಲ...!’.
‘ನದಿ ಇಲ್ವ? ನಿನಗೇನು ತಲೆಗಿಲೆ ಕೆಟ್ಟಿದ್ಯಾ? ಮೂವತ್ತು ವರ್ಷ ಅದೇ ಮನೇಲಿ ಹುಟ್ಟಿ ಬೆಳೆದಿದೀನಿ..’
‘ನಿಜವಾಗ್ಲೂ ಇಲ್ಲ ಬುದ್ಧಿ, ನಮ್ತಾಯಾಣೆಗೂ ಇಲ್ಲ’.

‘ಏಯ್ ಸರಿಯಾಗಿ ನೋಡು..!’ ಆತಂಕದಿಂದ ಕೇಳಿದ..
‘ಖಂಡಿತವಾಗ್ಲೂ ಇಲ್ಲ ಬುದ್ಧಿ’.’– ಅಸಹಾಯಕತೆಯಿಂದ ಉತ್ತರಿಸಿದ ಆಳುಮಗ.
ದಿಗಿಲಾಯಿತು. ಕುಡಿದದ್ದೆಲ್ಲ ಇಳಿದುಹೋದಂತಾಯ್ತು. ಬಾಯಿಯವರೆಗೂ ತಂದಿದ್ದ ಲೋಟವನ್ನು ಟೇಬಲ್ ಮೇಲೆ ಅಪ್ಪಳಿಸಿದಂತೆ ಕುಕ್ಕಿದ. ಮೊಬೈಲ್ ಮುಖವನ್ನು ನೋಡಿದವನೇ, ‘ಓಹ್.. ಸ್ಸಾರಿ.. ರಾಂಗ್‌ನಂಬರ್’ ಎಂದವನೇ ಯಾರದೋ ಮೇಲಿನ ಸಿಟ್ಟನ್ನು ಇನ್ನ್ಯಾರದೋ ಮೇಲೆ ತೋರಿಸುವವನಂತೆ ಅಸಹನೆಯಿಂದ ಮೊಬೈಲನ್ನು ನೆಲಕ್ಕೆ ಅಪ್ಪಳಿಸಿದ.

* *
ಮುಂದೆ..!?
ಮುಂದೆ ಏನಾಯ್ತು ಅಂತ ವೇಣುಗೋಪಾಲರಾಯರು ತಮ್ಮ ಗೆಳೆಯ ಗೋವಿಂದರಾಯರಿಗೆ ಹೇಳಿರಲಿಲ್ಲ, ಅವರು ಪತ್ನಿ ಪಾರ್ವತಮ್ಮಗೂ ಉಸುರಿರಲಿಲ್ಲ, ಅವರು ಮಹಿಳಾಸಮಾಜದಲ್ಲಿ ಜಲಜಮ್ಮನ ಕಿವಿಯಲ್ಲಿ ಪಿಸುಗುಟ್ಟಿರಲೂ ಇಲ್ಲ.

ಮುಂದೆ ಅದು ಯಾರ ಯಾರ ಮಸ್ತಿಷ್ಕವನ್ನು ದಾಟಿ ಯಾವಯಾವ ರೂಪ–ಆಕೃತಿಗಳನ್ನು ತಾಳಿ ಯಾವಯಾವ ನದಿಯ ದಂಡೆ ಮೇಲೆ ಹೇಗೆ ಪವಡಿಸುವುದೋ ಗೊತ್ತಿಲ್ಲ. ಇನ್ನು ನೀವುಂಟು, ನಿಮ್ಮ ಕಥೆ ಉಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT