ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿಯ ತಂದೀರಾ... ‘ಅನ್ನಭಾಗ್ಯ’ಕ್ಕೆ

Last Updated 17 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಸ್ಥಳೀಯವಾಗಿ ಬೆಳೆಯುವ ಸಿರಿ ಧಾನ್ಯಗಳನ್ನು ಪಡಿತರ ವ್ಯವಸ್ಥೆ ಒಳಗೊಳ್ಳಬೇಕು ಎನ್ನು­ವುದು ನಾಗರಿಕ ಸಮಾಜದ ಬಹುಕಾಲದ ಅಹ­ವಾಲು. ಪಡಿತರದಲ್ಲಿ ಸಿರಿಧಾನ್ಯ ನೀಡುವ ಮಹ­ತ್ತರ ತೀರ್ಮಾನವನ್ನು ಕೇಂದ್ರ ಸರ್ಕಾರ ಕಳೆದ ವರ್ಷವಷ್ಟೇ ಕೈಗೊಂಡಿತು. ರಾಜ್ಯ ಸರ್ಕಾರ ತನ್ನ ‘ಅನ್ನಭಾಗ್ಯ’ ಯೋಜನೆಯಲ್ಲಿ ರಾಗಿ ಮತ್ತು ಜೋಳ ವಿತರಿಸಲು ತೀರ್ಮಾನಿಸಿ ಈ ಧಾನ್ಯಗಳಿಗೆ ಕಳೆದ ವರ್ಷ ಕೆ.ಜಿ.ಗೆ ರೂ. ೧೮ ಬೆಂಬಲ ಬೆಲೆ ಘೋಷಿಸಿತು.

ರಾಜ್ಯದಲ್ಲಿ ರಾಗಿ, ಜೋಳದ ತೀವ್ರ ಕೊರತೆ ಉಂಟಾಗಿದ್ದು ಸರ್ಕಾರದ ಆತಂಕಕ್ಕೆ ಕಾರಣ­ವಾಗಿದೆ. ಅನ್ನಭಾಗ್ಯ, ಶಾಲಾ ಮಕ್ಕಳಿಗೆ ಮಧ್ಯಾ­ಹ್ನದ ಊಟ ಮುಂತಾದ ಆಹಾರ ಭದ್ರತೆಯ ಕಾರ್ಯಕ್ರಮಗಳಿಗೆ ವರ್ಷಕ್ಕೆ ೩೫ ಲಕ್ಷ ಟನ್ ಆಹಾರ ಧಾನ್ಯ ಅಗತ್ಯವಿದೆ. ಖರೀದಿಗೆ ಲಭ್ಯವಿರು­ವುದು ಸುಮಾರು ೧೦ ಲಕ್ಷ ಟನ್ ಮಾತ್ರ ಎಂದು ಸರ್ಕಾರವೇ ಹೇಳಿಕೊಂಡಿದೆ. 

ಈ ವರ್ಷ ಮುಂಗಾರು ಮಳೆ ಕೈಕೊಟ್ಟು ರಾಜ್ಯದಾದ್ಯಂತ ಜೋಳದ ಬಿತ್ತನೆ ಕುಂಠಿತ­ಗೊಂಡಾಗ ಸರ್ಕಾರ ರಾಗಿಗೆ ಉತ್ತೇಜನ ನೀಡಲು ಮುಂದಾಯಿತು. ಬಿತ್ತನೆಗೆ ಮೊದಲೇ ರಾಗಿಗೆ ಕೆ.ಜಿ.ಗೆ ರೂ. ೨೦ ಬೆಂಬಲ ಬೆಲೆ ಘೋಷಿ­ಸಿತು. ರಾಗಿ ಉತ್ಪಾದನೆಯನ್ನು ಅಧಿಕಗೊಳಿಸಲು ‘ಡಿಎನ್‌ಎ ಸೀಕ್ವೆನ್ಸಿಂಗ್’ ತಂತ್ರಜ್ಞಾನದಲ್ಲಿ ಹೊಸ ತಳಿಗಳನ್ನು ಅಭಿವೃದ್ಧಿ ಮಾಡುವ ಬಗೆಗೆ ಕೃಷಿ ಸಚಿವರು ಹೇಳಿಕೆ ಕೊಟ್ಟರು.

ಇತ್ತೀಚೆಗೆ ರಚನೆಯಾದ ‘ಕೃಷಿ ಬೆಲೆ ಆಯೋಗ’ವು ರಾಜ್ಯದಲ್ಲಿ ರಾಗಿ, ಜೋಳಗಳ ಉತ್ಪಾದನೆ ಹೆಚ್ಚು ಮಾಡುವುದು ಹೇಗೆ? ಬೆಂಬಲ ಬೆಲೆಯನ್ನು ಯಾವ ಮಾನದಂಡದ ಮೇಲೆ ನಿಗದಿಪಡಿಸಬೇಕು? ಎಂಬಿತ್ಯಾದಿ ವಿಚಾರ­ಗಳನ್ನು ಇಟ್ಟುಕೊಂಡು ಚರ್ಚೆ ಪ್ರಾರಂಭಿಸಿದೆ. ಈ ಆಯೋಗದಿಂದ ರೈತರು ಹೆಚ್ಚಿನ ನಿರೀಕ್ಷೆಯಲ್ಲಿ­ದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ಕೃಷಿ ಬೆಲೆ ಆಯೋಗವು ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾ­ಲಯ­ಗಳ ಜೊತೆಗೂಡಿ ರಾಜ್ಯದಲ್ಲಿ ರಾಗಿ ಉತ್ಪಾದನೆ, ಸಂಗ್ರಹಣೆ ಮತ್ತು ವಿತರಣೆಯಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಿತು.

ಕಳೆದ ೮–-೧೦ ವರ್ಷಗಳಲ್ಲಿ ರಾಜ್ಯದಲ್ಲಿ ರಾಗಿ ಬೆಳೆಯುವ ಪ್ರದೇಶ ಐದು ಲಕ್ಷ ಹೆಕ್ಟೇರಿನಿಂದ ಒಂದು ಲಕ್ಷ ಹೆಕ್ಟೇರಿಗೆ ಇಳಿದಿದೆ. ಆದರೆ ಹೆಕ್ಟೇರು­ವಾರು ಉತ್ಪಾದನೆ ಇಳಿಮುಖವಾಗಿಲ್ಲ. ಸದ್ಯ ರಾಗಿಯಲ್ಲಿ ಸಾಕಷ್ಟು ಉತ್ತಮ ಇಳುವರಿ ಕೊಡುವ ಬೀಜಗಳಿವೆ. ರೈತರು ಸುಮಾರು ೮ ಸುಧಾರಿತ ತಳಿಗಳನ್ನು ಬಳಸುತ್ತಿದ್ದಾರೆ. ಡಿಎನ್‌ಎ ಸೀಕ್ವೆನ್ಸಿಂಗ್ ತಂತ್ರಜ್ಞಾನ ಬಳಸಿಕೊಂಡು ರಾಗಿ, ಜೋಳದ ಹೊಸ ತಳಿ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ರಾಗಿಯ ಉತ್ಪಾದನೆಗೆ ರೈತರನ್ನು ಉತ್ತೇಜಿಸಲು ರಾಗಿ ಬೆಳೆಯುವ ೧೩ ಜಿಲ್ಲೆಗಳಲ್ಲಿ ಹೆಕ್ಟೇರಿಗೆ ರೂ. ೩೦೦೦ ಮೌಲ್ಯದ ಬೀಜ, ಗೊಬ್ಬರ (ಸಾವಯವ), ಜಿಪ್ಸಂ ಇತ್ಯಾದಿ­ಗಳನ್ನು ರೈತರಿಗೆ ಒದಗಿಸಲು ಸರ್ಕಾರ ವಿಶೇಷ ಯೋಜನೆ ರೂಪಿಸುತ್ತಿದೆ. ಈ ವರ್ಷ ೧೦೦ ಹೆಕ್ಟೇರ್ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಇದನ್ನು ಕೈಗೊಳ್ಳಲಾಗುವುದು ಎಂದು ಆ ಕಾರ್ಯಾ­ಗಾರದಲ್ಲಿ ಘೋಷಿಸಲಾಯಿತು.

ಇಲ್ಲಿ ಕೆಲ ಗಂಭೀರ ತೊಡಕುಗಳಿವೆ. ರಾಗಿ ಉತ್ಪಾದನೆ ಹೆಚ್ಚಿಸುವುದು ಹೇಗೆ ಎಂಬ ಪ್ರಶ್ನೆಯ ಜೊತೆಗೆ, ಒಂದು ದಶಕಕ್ಕೂ ಕಡಿಮೆ ಅವಧಿ­ಯಲ್ಲಿ ರಾಗಿ ಬೆಳೆಯುವ ಪ್ರದೇಶ ಐದು ಲಕ್ಷ ಹೆಕ್ಟೇರಿನಿಂದ ಒಂದು ಲಕ್ಷ ಹೆಕ್ಟೇರಿಗೆ ಕುಗ್ಗಿದ್ದಾ­ದರೂ ಹೇಗೆ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳ­ಬೇಕಾ­ಗು­ತ್ತದೆ.

ಉತ್ಪಾದನಾ ವೆಚ್ಚ ಹೆಚ್ಚು, ಬೇಡಿಕೆ ಕಡಿಮೆ ಎನ್ನುವ ಕಾರಣಕ್ಕೆ  ರೈತರು ರಾಗಿ ಬೇಸಾಯದಿಂದ ವಿಮುಖರಾಗಿದ್ದಾರೆ ಎಂಬುದು ಸರ್ಕಾರದ ವಿವರಣೆ. ಹಾಗಾದರೆ ರಾಗಿ ಬೆಳೆ­ಯು­ತ್ತಿದ್ದ ಜಮೀನುಗಳು ಈಗ ಏನು ಬೆಳೆಯು­ತ್ತಿವೆ? ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮೈದಳೆದ ಮೇಲೆ, ಅತಿಯಾದ ಸಬ್ಸಿಡಿ, ಒತ್ತಾಸೆ­ಗಳ ಭರಾಟೆಯಲ್ಲಿ ರಾಗಿ ಬೆಳೆಯುವ ಜಮೀನು­ಗಳು ಯಾವ ವೇಗದಲ್ಲಿ ತೋಟಗಾರಿಕೆ ಕ್ಷೇತ್ರ­ಗಳಾಗಿ ಪರಿವರ್ತನೆಗೊಂಡವು ಎನ್ನುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಬೆಂಗಳೂರು ಆಸುಪಾಸಿನ ೬–-೭ ಜಿಲ್ಲೆಗಳಲ್ಲಿ ಕಳೆದ ಹತ್ತು ವರ್ಷದಲ್ಲಿ ಬಹುತೇಕ  ಎಲ್ಲಾ ರಾಗಿ ಜಮೀನು­ಗಳು ಮಾವು, ಸಪೋಟ, ತೆಂಗು, ಅಡಿಕೆ, ಎಲೆಬಳ್ಳಿ, ತರಕಾರಿ ತೋಟಗಳಾಗಿವೆ. ಐದು ಎಕರೆ ಜಮೀನಿರುವ ಸಾಮಾನ್ಯ ರೈತರು ತಮ್ಮ ಮನೆ ಬಳಕೆ ಮತ್ತು ಜಾನುವಾರು ಹುಲ್ಲಿಗಾಗಿ ರಾಗಿ ಬೆಳೆಯಲು ಅರ್ಧದಿಂದ ಒಂದು ಎಕರೆ­ಯಷ್ಟು ಮಾತ್ರ ಜಮೀನು ಇಟ್ಟುಕೊಂಡು ಉಳಿದ­ದ್ದನ್ನು   ತೋಟಗಾರಿಕೆ ಕ್ಷೇತ್ರವಾಗಿ ಪರಿ­ವರ್ತಿ­ಸಿ­ದ್ದಾರೆ.

ಅಲ್ಲದೆ ಸರ್ಕಾರ ಅತಿಯಾಗಿ ಉತ್ತೇಜಿ­ಸಿದ ನೀಲಗಿರಿ, ಸರ್ವೆ, ಸಿಲ್ವರ್ ಓಕ್, ತೇಗಗಳು, ಧಾನ್ಯ ಬೆಳೆಯುವ ಹೊಲಗಳನ್ನು ಆವರಿಸಿವೆ. ಸರ್ಕಾರ ಇಂದು ರಾಗಿಗೆ ಏನೇ ಬೆಲೆ ಕೊಟ್ಟರೂ ಹಣ್ಣಿನ ಮರಗಳನ್ನು, ಅಡಿಕೆ, ತೆಂಗು­ಗಳನ್ನು ಕಡಿದು ಯಾರೂ ರಾಗಿ ಬೆಳೆಯಲಾ­ರರು. ಈ ವಾಸ್ತವವನ್ನು ಬೆಲೆ ಆಯೋಗ ಗಂಭೀರ­ವಾಗಿ ಪರಿಗಣಿಸಬೇಕು. ಹೊಸ ತಳಿ ಬೀಜ ಅಭಿವೃದ್ಧಿಪಡಿಸುವ ಮೂಲಕ ರಾಗಿ ಉತ್ಪಾ­ದನೆ ಹೆಚ್ಚಿಸಬಹುದು ಎಂದಷ್ಟೇ ಯೋಚಿ­ಸು­ತ್ತಿ­ರುವ ಕೃಷಿ ವಿ.ವಿಯಂತೂ ಇದನ್ನು ಅವಶ್ಯ­ವಾಗಿ ನೋಡಬೇಕು.

ದಶಕಗಳಿಂದ ಸರ್ಕಾರದ ನೀತಿಗಳು ಕಿರುಧಾನ್ಯ­ಗಳ ಬೇಸಾಯವನ್ನು ವ್ಯವಸ್ಥಿತವಾಗಿ ನಿರುತ್ತೇಜಿ­ಸುತ್ತಾ ಬಂದು ಈಗ ಏಕಾಏಕಿ ರಾಗಿ ಉತ್ಪಾದನೆ ಹೆಚ್ಚು ಮಾಡಬೇಕೆಂದರೆ ಹೇಗೆ ಸಾಧ್ಯ?

ಸಾಂಪ್ರದಾಯಿಕವಾಗಿ ರಾಗಿ ಬೆಳೆಯುವ ಜಿಲ್ಲೆಗಳಿಗೆ ಗಮನವನ್ನು ಕೇಂದ್ರೀಕರಿಸುವುದರ ಬದಲು ಇತರ ಜಿಲ್ಲೆಗಳತ್ತಲೂ ನೋಡಬೇಕಾಗು­ತ್ತದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ರಾಗಿ ಬೆಳೆಯುತ್ತಿದ್ದಾರೆ. ಅಲ್ಲಿನ ಜನ ಸಾಮಾನ್ಯ­ವಾಗಿ ರಾಗಿ ಉಣ್ಣುವುದಿಲ್ಲ; ಬೆಳೆದದ್ದನ್ನೆಲ್ಲ ಮಾರಾಟ ಮಾಡುತ್ತಾರೆ. ಆದರೆ ರಾಗಿ ಬೇಸಾ­ಯದ ಅವರ ಪದ್ಧತಿಗಳಲ್ಲಿ ಸಾಕಷ್ಟು ಸುಧಾರ­ಣೆಗೆ ಅವಕಾಶವಿದೆ. ಈ ಜಿಲ್ಲೆಗಳಲ್ಲಿ ರಾಗಿ ಬೇಸಾಯದ ಉತ್ತಮ ಪದ್ಧತಿಗಳನ್ನು ಪರಿಚ­ಯಿಸಿ, ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿದ್ದಾ­ದರೆ ಅಧಿಕ ಪ್ರಮಾಣದ ರಾಗಿ ಸಂಗ್ರಹಣೆ ಸಾಧ್ಯತೆ ಇದೆ. 

ಕೃಷಿ ಇಲಾಖೆಯು ರಾಗಿ ಇಳುವರಿ ಹೆಚ್ಚಿಸಲು ಮುಂದಿಡುತ್ತಿರುವ, ಹೆಕ್ಟೇರಿಗೆ ರೂ. ೩೦೦೦ ಮೊತ್ತದ ಬಿತ್ತನೆ ಬೀಜ, ಗೊಬ್ಬರ, ಜಿಪ್ಸಂ ಇತ್ಯಾದಿಗಳನ್ನು ಒಳಗೊಂಡ ಪ್ಯಾಕೇಜ್ ಅನೇಕ ವರ್ಷಗಳಿಂದ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ  ಕಾರ್ಯಕ್ರಮವೇ ಹೊರತು ಹೊಸತೇನಲ್ಲ. ಮೊದಲು ಡಿಎಪಿ ಇದ್ದದ್ದು ಈಗ ಸಾವಯವ ಗೊಬ್ಬರ ಆಗಿರುವುದಷ್ಟೆ ವ್ಯತ್ಯಾಸ. ಇಂಥ ಪ್ಯಾಕೇಜ್‌ ರೈತರ ತಿರಸ್ಕಾರಕ್ಕೆ ಒಳಗಾಗಿದೆ. ಇಂತಹ ಪ್ಯಾಕೇಜ್‌ ನೀಡಿದ ಮಾತ್ರಕ್ಕೆ ರೈತರು ಮುಗಿಬಿದ್ದು ರಾಗಿ ಬೆಳೆಯುತ್ತಾರೆ ಎನ್ನುವ ಭ್ರಮೆ­ಯಿಂದ ಸರ್ಕಾರ ಹೊರಬರಬೇಕು.

ಬೆಲೆ ಆಯೋಗ ಯಾವ ಕಾರಣಕ್ಕೂ  ಇಲಾ­ಖೆಯ ಈ ಪ್ಯಾಕೇಜ್ ಸಂಸ್ಕೃತಿಗೆ ಸೊಪ್ಪು ಹಾಕ­ಕೂಡದು. ಒಂದು ಎಕರೆ ರಾಗಿಯ ಉತ್ಪಾದನಾ ವೆಚ್ಚ ರೂ. ೨೧ ಸಾವಿರ ಎಂದು ಸರ್ಕಾರದ ಅಂಕಿ ಅಂಶವೇ ಹೇಳುವಾಗ, ಪ್ಯಾಕೇಜ್‌ನಿಂದ ರೈತರಿಗೆ ಏನು ಫಲ? ಇದರ ಬದಲು ಉತ್ತಮ ಗುಣ­ಮಟ್ಟದ ಬೀಜಗಳನ್ನು ಉತ್ಪಾದಿಸಿ ಕನಿಷ್ಠ ಶೇ ೫೦ರ ಸಬ್ಸಿಡಿಯಲ್ಲಿ ಪ್ರತಿ ರೈತರಿಗೂ ಒದಗಿಸಿದರೆ ಸಹಾಯವಾಗುತ್ತದೆ. ಗೊಬ್ಬರ, ಜಿಪ್ಸಂಗಳಿಗೆ ಕಂಪೆನಿಗಳಿಗೆ ಗುತ್ತಿಗೆ ಕೊಡುವ ಬದಲು, ತಮಗೆ ಅನುಕೂಲವಾದ ಸಾವಯವ ಗೊಬ್ಬರ ಹೊಂದಿಸಿ­ಕೊಳ್ಳಲು ರೈತರಿಗೆ ನೇರ ಒತ್ತಾಸೆ ನೀಡಿದರೆ ಸಾಕು. ಪ್ರತಿ ಕೆ.ಜಿ ರಾಗಿಗೆ ಕನಿಷ್ಠ ರೂ. ೩೦ ಬೆಂಬಲ ಬೆಲೆ ಘೋಷಿಸಬೇಕು. 

ರಾಗಿ ಖರೀದಿಗೂ ಸೂಕ್ತ ಆದ್ಯತೆ ಕೊಡ­ಬೇಕಾದ್ದು ಅಗತ್ಯ. ಬೆಂಬಲ ಬೆಲೆ ಘೋಷಣೆ ಮಾಡುವ ಜೊತೆಗೆ ಅದು ಎಲ್ಲಾ ರೈತರಿಗೆ
ಸಿಗು­ವುದನ್ನು ಖಾತ್ರಿ ಮಾಡಿಕೊಳ್ಳಬೇಕು. ಪ್ರತಿ ಗ್ರಾಮ, ಅದಿಲ್ಲದಿದ್ದರೆ ಪಂಚಾಯತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು, ಸಮುದಾಯ ಆಧಾರಿತ ಸಂಸ್ಥೆಗಳಿಗೆ, ರೈತ ಗುಂಪುಗಳಿಗೆ ಇದರ ಜವಾಬ್ದಾರಿ ಕೊಡುವುದರಿಂದ ಎಲ್ಲಾ ರೈತರೂ ಬೆಂಬಲ ಬೆಲೆ ಲಾಭವನ್ನು ಪಡೆಯಲು ಸಾಧ್ಯವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT