ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಚೇನಹಳ್ಳಿ ಕೆರೆಗೆ ಕಾಯಕಲ್ಪ

Last Updated 10 ಫೆಬ್ರುವರಿ 2016, 19:48 IST
ಅಕ್ಷರ ಗಾತ್ರ

ಉದ್ಯಾನನಗರಿಗೆ ಮೆರುಗು ನೀಡಿದ್ದ ಕೆರೆಗಳು ಕೆಲವೇ ವರ್ಷಗಳಲ್ಲಿ ಮಾಯವಾಗಿವೆ. ಕೆಲವು ನಾಮಾವಶೇಷವಾಗಿದ್ದರೆ, ಇನ್ನು ಕೆಲವು ಒತ್ತುವರಿಯಾಗಿವೆ. ನಗರ ಜಿಲ್ಲೆಯಲ್ಲಿನ 835 ಕೆರೆಗಳಲ್ಲಿ 112 ಕೆರೆಗಳು ಇಲ್ಲ.  645 ಕೆರೆಗಳು  ಒತ್ತುವರಿಯಾಗಿವೆ. 85 ಮಾತ್ರ ಒತ್ತುವರಿ ಮುಕ್ತವಾಗಿವೆ. ನಗರದ ಪರಿಸರ, ಜೈವಿಕ ವ್ಯವಸ್ಥೆಗೆ ತಮ್ಮದೇ ಕೊಡುಗೆ ನೀಡುತ್ತಿದ್ದ ನೀರಿನ ಮೂಲಗಳು ನಗರೀಕರಣ, ದುರಾಸೆ, ಅಕ್ರಮ ಚಟುವಟಿಕೆಗಳ ಕಾರಣ ಕಣ್ಮರೆಯಾಗುತ್ತಲೇ ಇವೆ. ದೊಡ್ಡ ದೊಡ್ಡ ಕಂಪೆನಿಗಳು, ನುಂಗಣ್ಣರು ನೂರಾರು ಕೆರೆಗಳನ್ನು ಒತ್ತುವರಿ ಮಾಡಿದರೂ ಸರ್ಕಾರದ ಸಂಬಂಧಪಟ್ಟವರು ಮಾತ್ರ ಸುಮ್ಮನಿದ್ದಾರೆ.

ಇದಕ್ಕೆಲ್ಲ ವಿರುದ್ಧವೆಂಬಂತೆ ಜಕ್ಕೂರು ಸಮೀಪದ ರಾಚೇನಹಳ್ಳಿ ಕರೆಗೆ ಕಾಯಕಲ್ಪ  ಕಲ್ಪಿಸುವ ಯತ್ನವೊಂದು ಸದ್ದಿಲ್ಲದೆ ನಡೆಯುತ್ತಿದೆ. ಸರ್ಕಾರದ ಸಂಸ್ಥೆಯೇ ಆಗಿರುವ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ (ಎಂಜಿಐಆರ್ಇಡಿ)  ಮುಂದಾಳತ್ವದಲ್ಲಿ  140 ಎಕರೆ ವಿಸ್ತೀರ್ಣದ ಕೆರೆ ಉಳಿಸುವ, ಸ್ವಚ್ಛಗೊಳಿಸುವ ಮತ್ತು ಒತ್ತುವರಿ ತಡೆಯುವ ಪ್ರಯತ್ನಗಳು ಕಳೆದ  ವರ್ಷದ ಆಗಸ್ಟ್‌ನಿಂದ ನಡೆಯುತ್ತಿವೆ.

ಎಂಜಿಐಆರ್ಇಡಿ ‘ಜವಾಬ್ದಾರಿಯುತ ಸ್ವಯಂಸೇವಕರ ಗುಂಪ’ನ್ನು ರಚಿಸಿದ್ದು, ಪ್ರತಿದಿನ 8ರಿಂದ 10 ಜನ ಕರೆಯನ್ನು ನೋಡಿಕೊಳ್ಳುತ್ತಿದ್ದಾರೆ. ಆಗಾಗ ಕೆರೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರನ್ನೂ ಕೆರೆ ಉಳಿಸುವ ಯತ್ನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದೆ. ಒತ್ತುವರಿ ತಡೆಯುವುದು, ಜೈವಿಕ ವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿ ಕೊಳ್ಳುವುದು, ಸ್ವಚ್ಛತೆ ಕಾಮಗಾರಿಯನ್ನು ಚಾಚೂ ತಪ್ಪದೆ ನಿರ್ವಹಿಸುತ್ತಿದೆ.

ರಾಚೇನಹಳ್ಳಿ ಕೆರೆ ಉಳಿಸಲು ‘ಜಲಮಿತ್ರ’ ಎಂಬ ಕೆರೆ ಪೋಷಕರ ಗುಂಪನ್ನು ರಚಿಸಲು ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ  ಮುಂದಾಗಿದೆ. ಇದರಡಿ  ಕೆರೆಯನ್ನು ಕಾಪಾಡುವ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.

‘ಜಲಮಿತ್ರ’ದ ಕಾರ್ಯಕ್ರಮಗಳು
* ಕೆರೆಯ ಜೈವಿಕ ವ್ಯವಸ್ಥೆ ಕಾಪಾಡಲು ಸಾಮುದಾಯಿಕ ಸಹಭಾಗಿತ್ವದ ಮಹತ್ವ ತಿಳಿಸಲು ಪ್ರಾತ್ಯಕ್ಷಿಕೆ ನೀಡುವುದು
* ಶಾಲಾ–ಕಾಲೇಜು ಮಕ್ಕಳಿಗೆ ಕೆರೆ ಕುರಿತು ಅರಿವು ಮೂಡಿಸುವ ಚಿತ್ರಕಲೆ ಸ್ಪರ್ಧೆ ಆಯೋಜಿಸುವುದು
* ಸ್ಥಳ ನೋಡಿ ಚಿತ್ರ ಬರೆಯುವುದು
* ಜಲಮಿತ್ರ ಸದಸ್ಯರಿಂದ ಕೆರೆ ಮಹತ್ವದ ಕುರಿತು ವಸ್ತು ಪ್ರದರ್ಶನ ಆಯೋಜನೆ
* ಕೆರೆ ಅಚ್ಚುಕಟ್ಟು ಪ್ರದೇಶ ಮತ್ತು ಏರಿ ಮೇಲೆ ಸಸಿ ನೆಡುವುದು
* ಕೆರೆಯಲ್ಲಿ ಬೋಟಿಂಗ್‌ನಂತಹ ಮನರಂಜನಾ ಚಟುವಟಿಕೆ ಹಮ್ಮಿಕೊಳ್ಳುವುದು
* ಕೆರೆ ರಕ್ಷಣೆಗೆ ಬೆಂಬಲ ಸೂಚಿಸಿ ಸಹಿ ಸಂಗ್ರಹ ನಡೆಸುವುದು

ಕೆರೆ ಸಂರಕ್ಷಣೆಯ ಹೆಜ್ಜೆ ಗುರುತುಗಳು..
ರಾಚೇನಹಳ್ಳಿ ಕೆರೆ ಉಳಿಸುವ ಯತ್ನಗಳ ಹಿಂದೆ ಹಲವರ ಕನಸಿದೆ. ಸಾರ್ವಜನಿಕರನ್ನು ಸಮಾಜದ ಆಸ್ತಿಯ ರಕ್ಷಣೆಗೆ ಮುಂದಾಗುವಂತೆ ಓಲೈಸುವಲ್ಲಿ  ಎಂಜಿಐಆರ್ಇಡಿ  ಪಾತ್ರ ಮಹತ್ವದ್ದು. ಕೆರೆ ಸಂರಕ್ಷಿಸುವ ಆರಂಭಿಕ ಹೆಜ್ಜೆಗಳ ಬಗ್ಗೆ ಎಂಜಿಐಆರ್ಇಡಿ ಕಾರ್ಯಕಾರಿ ನಿರ್ದೇಶಕ ಹಾಗೂ ಹೆಚ್ಚುವರಿ ಪಿಸಿಸಿಎಫ್‌,  ಐಎಫ್‌ಎಸ್‌ ಅಧಿಕಾರಿ ಪುನತಿ ಶ್ರೀಧರ್  ಹೇಳುವುದು ಹೀಗೆ: ‘ನಮ್ಮ ಸಂಸ್ಥೆಗೆ ಜೆನ್‌ರೈನ್‌ಮನ್‌ ಎಂದೇ ಖ್ಯಾತರಾದ ಬಯೊಮೆಡಿಕಲ್ ಎನ್ವಿರಾನ್‌ಮೆಂಟಲ್ ಟ್ರಸ್ಟ್‌ನ ವಿಶ್ವನಾಥ್‌ ಎಸ್. ಅವರು ತರಬೇತಿ ನೀಡಲು ಆಗಾಗ ಬರುತ್ತಿದ್ದರು. ಅವರಿಗೆ ರಾಚೇನಹಳ್ಳಿ ಕೆರೆಯ ಬಗ್ಗೆ ತಿಳಿದಿತ್ತು. ಯಾಕೆ ನೀವೆಲ್ಲ ಸೇರಿ ಕೆರೆ ಸಂರಕ್ಷಣೆಗೆ ಮುಂದಾಗಬಾರದು ಎಂದು ಕೇಳಿದರು. ಈ ಮಾತುಗಳು ನಮಗೆ ಪ್ರೇರಣೆ ನೀಡಿದವು. ಅಲ್ಲಿಂದ ಕೆರೆ ಉಳಿಸುವ ಕಾರ್ಯ ಆರಂಭವಾಯಿತು.

ಆನಂತರ ರಚನೆಯಾದ ‘ಕೆರೆ ಸೇವಕರ ಗುಂಪು’ ತನ್ನ ಚಟುವಟಿಕೆಯನ್ನು ಪ್ರತಿದಿನ, ವಾರ ಹಾಗೂ ತಿಂಗಳು ನಡೆಸುತ್ತಲೇ ಬರುತ್ತಿದೆ. ಎಂಜಿಐಆರ್‌ಇಡಿ ಕೆರೆಯ ಸುತ್ತಲಿನ 500 ಮೀಟರ್‌ ಜಾಗವನ್ನು ದತ್ತು ಪಡೆದು ಸ್ವಚ್ಛ ಮಾಡುತ್ತಿದ್ದರೆ, ಲೆಗಸಿ ಎಂಬ ಶಾಲೆ 360ರಿಂದ 400 ಮೀಟರ್‌ ಜಾಗವನ್ನು  ದತ್ತು ಪಡೆದಿದೆ. ಕೆಲವು ಬಿಲ್ಡರ್‌ಗಳು  ಉಚಿತವಾಗಿ ಜೆಸಿಬಿಯನ್ನು ನೀಡಿದ್ದು, ಕೆರೆ ಜಡ್ಡು ತೆಗೆಯಲು ನೆರವಾಗಿದ್ದಾರೆ.

ಪ್ರತಿವಾರ ಶಾಲಾ ಮಕ್ಕಳು ಇಲ್ಲಿಗೆ ಬಂದು ಸ್ವಚ್ಛಗೊಳಿಸುತ್ತಾರೆ. ಕೆರೆಯು ಬಯಲು ಶೌಚಾಲಯವಾಗಿ ಬಳಕೆಯಾಗುವುದು ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ರಾಚೇನಹಳ್ಳಿ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ 82 ಸದಸ್ಯರಿದ್ದಾರೆ. ತುರ್ತು ವಿಷಯಗಳನ್ನು  ವಾಟ್ಸ್‌ಆ್ಯಪ್‌ನಲ್ಲೇ ಚರ್ಚೆ ನಡೆಸಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ.   

ಇನ್ನೂ ಏನೇನು ಬೇಕು?
ರಾಚೇನಹಳ್ಳಿ  ಕೆರೆ ರಕ್ಷಣೆಯ ನಿಟ್ಟಿನಲ್ಲಿ ಹೆಜ್ಜೆಯನ್ನೇನೋ ಇಟ್ಟಿದ್ದಾಗಿದೆ. ಆದರೆ ಇನ್ನೂ ಹಲವು ಕಾರ್ಯಗಳು, ಸೌಲಭ್ಯಗಳು ಬೇಕಾಗಿವೆ.
* 2011ರ ಸರ್ವೆ ಪ್ರಕಾರ ಕೆರೆಯು 140 ಎಕರೆ ಇದೆ. ಆದರೆ ಕೆಲವು ಭಾಗ ಒತ್ತುವರಿ ಆಗಿರುವ ಶಂಕೆ ಇದೆ. ಆದ್ದರಿಂದ ಮರುಸರ್ವೆ ಅಗತ್ಯವಿದೆ.
* ಕೊಳಚೆ ನೀರು, ಒಳಚರಂಡಿ ನೀರು ಕೆರೆಗೆ ಬರುವುದು ತಪ್ಪಬೇಕು
* ಸೋಲಾರ್‌ ದೀಪಗಳ ವ್ಯವಸ್ಥೆ ಆಗಬೇಕು
* ಹಗಲು ರಾತ್ರಿ ಕಾವಲು ಕಾಯಲು ಗಾರ್ಡ್‌ಗಳ ಅವಶ್ಯಕತೆ ಇದೆ
* ಭೇಟಿ ನೀಡುವವರ ಅನುಕೂಲಕ್ಕೆ  ಶೌಚಾಲಯ ನಿರ್ಮಾಣವಾಗಬೇಕು
* ಗಡಿ ಗುರುತಿಸಿ ಬೇಲಿ ನಿರ್ಮಾಣ ವಾಗಬೇಕು.

***ನಮ್ಮ ಪ್ರಮುಖ ಉದ್ದೇಶ ಕೆರೆ ಸುತ್ತಲಿನ ಪರಿಸರ ರಕ್ಷಣೆಯಾಗಬೇಕು. ಇದರಿಂದ ಜೈವಿಕ ವ್ಯವಸ್ಥೆ ಸುಧಾರಣೆಯಾಗುತ್ತದೆ. ಸರ್ಕಾರದೊಂದಿಗೆ ಸಾರ್ವಜನಿಕರೂ ಕೈಜೋಡಿಸಿದರೆ ಎಲ್ಲವೂ ಸಾಧ್ಯವಿದೆ.

ಡಾ.ಶೋಭಾ ಆನಂದ್‌
ಹಿರಿಯ  ಫ್ಯಾಕಲ್ಟಿ, ಎಂಜಿಐಆರ್ಇಡಿ

***ಕೆರೆಗೆ ಕಾಯಕಲ್ಪ ನೀಡಲು ಎಷ್ಟೊಂದು ಜನ ಸ್ವಯಂಪ್ರೇರಣೆಯಿಂದ ಭಾಗವಹಿಸುತ್ತಾರೆ. ಇದು ಇನ್ನಷ್ಟು ಹೆಚ್ಚಬೇಕು. ಇದರಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ.
ಅಭಿಜಿತ್‌,  ಸ್ಥಳೀಯ ನಿವಾಸಿ

***ಕೆರೆ ಬಳಿ ಈಗ ಸುಂದರ ವಾತಾವರಣ ಇದೆ. ಇದರಿಂದ ಮಕ್ಕಳು ಹಾಗೂ ಮಹಿಳೆಯರು ಖುಷಿಯಿಂದ ಬರುತ್ತಾರೆ. ಶಾಲಾ ಮಕ್ಕಳಲ್ಲೂ ಕೆರೆ ಸಂರಕ್ಷಣೆ ಬಗ್ಗೆ ಅರಿವು ಮೂಡಿದೆ. ನಗರದ ಎಲ್ಲ ಕೆರೆಗಳೂ ಹೀಗೆ ಆಗಲಿ.

ವೆಂಕಟೇಶ್‌, ಸ್ಥಳೀಯ ನಿವಾಸಿ

***ನಮ್ಮ ಕೆರೆ ಎಂಬ ಭಾವ ಬೇಕು

‘ಇದೊಂದು ಸಾಮಾಜಿಕ ಜವಾಬ್ದಾರಿಯ ಕೆಲಸ. ಹನಿ ನೀರಿನ ಮಹತ್ವವು ಅದನ್ನು ಕಳೆದುಕೊಂಡಾಗಲೇ ತಿಳಿಯುವುದು. ಕೇವಲ ಒಬ್ಬೊಬ್ಬರೇ ಇಷ್ಟೊಂದು ವಿಶಾಲ ಕೆರೆಯ ಸಂರಕ್ಷಣೆಗೆ ಹೋರಾಡುವುದು ಕಷ್ಟದ ಕೆಲಸ. ಅದಕ್ಕೆಂದೇ ಸರ್ಕಾರದ ಸಂಸ್ಥೆಗಳನ್ನು, ಶಾಲಾ ಕಾಲೇಜುಗಳನ್ನು, ಖಾಸಗಿ ಕಂಪೆನಿಗಳ ಪ್ರತಿನಿಧಿಗಳನ್ನು ಭಾಗಿ ಮಾಡಿಕೊಂಡೆವು. ಎಲ್ಲಿಯವರೆಗೆ ಜನರಿಗೆ ‘ಇದು ನಮ್ಮ ಕೆರೆ’ ಎಂಬ ಅಭಿಮಾನ ಮೂಡುವುದಿಲ್ಲವೋ ಅಲ್ಲಿಯವರೆಗೆ ಏನೂ ಮಾಡಿದರೂ ವ್ಯರ್ಥ.
– ಪುನತಿ ಶ್ರೀಧರ್‌,  ಎಂಜಿಐಆರ್‌ಇಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT