ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯಕರಣ ಬೇಡ ನಿಜಾಂಶ ಹೊರಬರಲಿ

Last Updated 19 ಜನವರಿ 2016, 19:32 IST
ಅಕ್ಷರ ಗಾತ್ರ

ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ದುರದೃಷ್ಟಕರ. ಇದು ವ್ಯಕ್ತಿಗತ ದುರಂತ ಮಾತ್ರವಲ್ಲ, ಸಮಾಜದ ಸಾಕ್ಷಿಪ್ರಜ್ಞೆಯನ್ನು ಕಲಕುವಂತಹದ್ದು. ಜಾತಿ ಪ್ರಜ್ಞೆ ಎಂಬುದು ಆಧುನಿಕ ಭಾರತದ ಸುಶಿಕ್ಷಿತ ವಲಯದಲ್ಲಿ ಇಲ್ಲ ಎಂಬಂತಹ ಕೆಲವರ ವಾದಗಳನ್ನು ಸುಳ್ಳಾಗಿಸಿದೆ ಈ ಪ್ರಕರಣ. ಜಾತಿಪ್ರಜ್ಞೆಯ ಕರಾಳ ಆಯಾಮಗಳಿಗೆ ಈ ಪ್ರಕರಣ ಸಾಕ್ಷಿ. ಉನ್ನತ ವಿದ್ಯಾಸಂಸ್ಥೆಗಳನ್ನು ಆವರಿಸಿರುವ ಜಾತಿ ರಾಜಕೀಯಗಳ ಕಹಿ ಬೆಳವಣಿಗೆಗೆ ಇದು ದ್ಯೋತಕ. 

ಕಳೆದ ಒಂದು ವರ್ಷದಿಂದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿಭಿನ್ನ ವಿಚಾರಧಾರೆಗಳ ವಿದ್ಯಾರ್ಥಿ ಗುಂಪುಗಳ ಮಧ್ಯೆ ಸಮಸ್ಯೆ ಇತ್ತು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹಾಗೂ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಎಸ್‌ಎ) ಮಧ್ಯೆ ಸಂಘರ್ಷ ನಡೆದೇ ಇತ್ತು. ಹೊಡೆದಾಟದ ದೂರುಗಳೂ ದಾಖಲಾಗಿದ್ದವು. ಈ ಬಗ್ಗೆ ತನಿಖೆ ನಡೆಸಿದ್ದ ವಿಶ್ವವಿದ್ಯಾಲಯದ ಆಂತರಿಕ ಸಮಿತಿ, ವಿದ್ಯಾರ್ಥಿಗಳು ತಪ್ಪಿತಸ್ಥರಲ್ಲ ಎಂದು ಹೇಳಿತ್ತು. ಹೀಗಿದ್ದೂ  ಬಿಜೆಪಿ ಎಂಎಲ್‌ಸಿ  ರಾಮಚಂದ್ರ ರಾವ್ ಹಾಗೂ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರ ಪ್ರಭಾವದಿಂದ ಐವರು ದಲಿತ ವಿದ್ಯಾರ್ಥಿಗಳನ್ನು ಉಚ್ಚಾಟಿಸುವ ಸ್ಥಿತಿ ಸೃಷ್ಟಿಯಾಯಿತು ಎಂದು ದೂರಲಾಗಿದೆ. ಈ ಬೆಳವಣಿಗೆ, ವಿದ್ಯಾರ್ಥಿ ಆತ್ಮಹತ್ಯೆಯಲ್ಲಿ ಅಂತ್ಯವಾಯಿತು ಎಂಬಂತಹ ಆರೋಪಗಳನ್ನು ಮಾಡಲಾಗಿದೆ. ವಿಶ್ವವಿದ್ಯಾಲಯದ ಆಡಳಿತದಲ್ಲಿ ರಾಜಕಾರಣಿಗಳ ಇಂತಹ  ಹಸ್ತಕ್ಷೇಪ ತೀವ್ರ ರೀತಿಯಲ್ಲಿ ಖಂಡನೀಯ.

‘ಜಾತೀಯತೆಯಿಂದ ಕೂಡಿದ ತೀವ್ರವಾದಿ ರಾಷ್ಟ್ರವಿರೋಧಿ ರಾಜಕಾರಣದ ತಾಣವಾಗುತ್ತಿದೆ ವಿಶ್ವವಿದ್ಯಾಲಯ’ ಎಂಬಂತಹ ಮಾತುಗಳನ್ನು  ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಬರೆದಿದ್ದರು. ಇದಾದ ನಂತರ ವಿಶ್ವವಿದ್ಯಾಲಯಕ್ಕೆ ನೇಮಕವಾದ ಹೊಸ ಕುಲಪತಿ ಪ್ರೊ. ಅಪ್ಪಾರಾವ್ ನೇಮಿಸಿದ ವಿಚಾರಣಾ ಸಮಿತಿಯು  ರೋಹಿತ್ ಸೇರಿದಂತೆ ಐವರು ದಲಿತ ವಿದ್ಯಾರ್ಥಿಗಳನ್ನು ತಪ್ಪಿತಸ್ಥರೆಂದು ಹಾಸ್ಟೆಲ್‌ನಿಂದ ಉಚ್ಚಾಟಿಸಿತ್ತು. ಅಲ್ಲದೆ, ತರಗತಿ ಹಾಗೂ ಲೈಬ್ರರಿ ಬಿಟ್ಟು ವಿಶ್ವವಿದ್ಯಾಲಯದ ಬೇರೆಲ್ಲಾ ಸೌಲಭ್ಯಗಳ ಬಳಕೆಗೆ ನಿರ್ಬಂಧಗಳನ್ನು ವಿಧಿಸಲಾಗಿತ್ತು.

ವಿಶ್ವವಿದ್ಯಾಲಯವೊಂದರಲ್ಲಿ ವಿಧಿಸಿದ ಇಂತಹ ನಿರ್ಬಂಧ ಕಂಡು ಕೇಳರಿಯದಂತಹದ್ದು. ಈ ಬಗೆಯ ‘ಸಾಮಾಜಿಕ ಬಹಿಷ್ಕಾರ’ ಅದೂ ಪ್ರತಿಷ್ಠಿತ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಜಾರಿಯಾಗಿದ್ದಾದರೂ ಹೇಗೆ? ಇಂತಹದ್ದೊಂದು ಬಹಿಷ್ಕಾರ ಹಾಕುವುದಕ್ಕೆ ಯಾವ ನೀತಿನಿಯಮಗಳೂ ಇಲ್ಲದಿರುವುದು ಎದ್ದು ಕಾಣಿಸುತ್ತದೆ. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಸಾಂಕೇತಿಕತೆಯನ್ನು ಇದು ಧ್ವನಿಸುತ್ತದಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಕರಣದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ವಿಶ್ವವಿದ್ಯಾಲಯದ ಮೇಲೆ ಒತ್ತಡ ಹೇರಿತ್ತೇ ಎಂಬುದು ತನಿಖೆಯಾಗಬೇಕು. ವಿಶ್ವವಿದ್ಯಾಲಯ ಆಡಳಿತ ವ್ಯವಸ್ಥೆ ಪ್ರಜಾಸತ್ತಾತ್ಮಕವಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಈ ವಿಚಾರ ಇಷ್ಟು ಅತಿರೇಕಕ್ಕೆ ಹೋಗುತ್ತಿರಲಿಲ್ಲವೇನೊ. ವಿದ್ಯಾರ್ಥಿಗಳ ಹಿತ ಕಾಪಾಡುವಲ್ಲಿ ವಿಶ್ವವಿದ್ಯಾಲಯ ವಿಫಲವಾಗಿರುವುದು ಎದ್ದು ಕಾಣಿಸುತ್ತದೆ. ವಿದ್ಯಾರ್ಥಿಗಳ ಹಿತಕ್ಕಿಂತ ರಾಜಕೀಯವೇ ಮೇಲುಗೈ ಪಡೆದಿರುವುದು ಈ ವಿದ್ಯಮಾನದಲ್ಲಿ ಸ್ಪಷ್ಟ.

ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಕರಾಳ ಆಯಾಮಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಪ್ರತಿಫಲಿಸಿ ಕಲಿಕೆಯ ಉನ್ನತ ಆದರ್ಶಗಳು ಅನಾಥವಾಗುತ್ತಿರುವುದು ದುರದೃಷ್ಟಕರ. ರೋಹಿತ್ ವೇಮುಲ ತನ್ನ ಪತ್ರದಲ್ಲಿ ನಕ್ಷತ್ರಗಳ ಲೋಕಕ್ಕೆ ಹೋಗುವುದಾಗಿ ಹೇಳಿಕೊಂಡಿದ್ದಾನೆ. ಆದರೆ ಈ ಲೋಕದಲ್ಲಿ ಸಾಮಾಜಿಕ ಗಡಿಗಳನ್ನು ಮುರಿಯುವ ಆತನ ಯತ್ನ ಆತನ ಸಾವಿಗೆ ಕಾರಣವಾದದ್ದು ವಿಪರ್ಯಾಸ. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂಬಂತಹ ಉದಾತ್ತತೆಯನ್ನು ಈ ಸೂಕ್ಷ್ಮ ವಿದ್ಯಾರ್ಥಿ ಪತ್ರದಲ್ಲಿ ವ್ಯಕ್ತಪಡಿಸಿದ್ದಾನೆ. ಆದರೆ ಈ ಪ್ರಕರಣ ಅಷ್ಟು ಸರಳವಾದದ್ದಲ್ಲ ಎಂಬುದು ಗಮನದಲ್ಲಿರಬೇಕಾದುದು ಅಗತ್ಯ.

ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಶ್ರೇಣೀಕೃತ ವ್ಯವಸ್ಥೆಯ ಯಥಾಸ್ಥಿತಿವಾದವನ್ನು ಎತ್ತಿ ಹಿಡಿಯುವ ತಾಣಗಳಾಗುವುದು ವಿಷಾದನೀಯ. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಎಐಐಎಂಎಸ್) ದಲಿತ ವಿದ್ಯಾರ್ಥಿಗಳ ವಿರುದ್ಧದ ತಾರತಮ್ಯವನ್ನು ಪ್ರೊ.ಥೋರಟ್ ಸಮಿತಿ ವರದಿ 2007ರಲ್ಲಿ ಬಯಲಿಗೆಳೆದಿತ್ತು. ಜಾತಿಪ್ರಜ್ಞೆಯ ಜೊತೆಗೆ ರಾಜಕೀಯವೂ ಸೇರಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಸಂಸ್ಥೆಯ ಮೂಲ ಆಶಯಗಳೇ ಮರೆಯಾಗುತ್ತಿರುವುದನ್ನು ತಡೆಯುವುದು ಎಲ್ಲರ ನೈತಿಕ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT