ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪಹಣಿಯಲ್ಲಿರುವ ದೋಷ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾ­ರರಿಗೆ ತಾತ್ಕಾಲಿಕವಾಗಿ ನೀಡಲಾಗಿದೆ. ದೋಷ ತಿದ್ದುಪಡಿಯಲ್ಲಿ ಲೋಪ ಎಸಗಿದರೆ ಸಂಬಂಧಿಸಿದ ತಹಶೀಲ್ದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವ ಮತ್ತು ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವವನ್ನು ಕಂದಾಯ ಇಲಾಖೆ ಮಾಡಿದೆ. ಭೂ ದಾಖಲೆಗಳು ರೈತರ ಜೀವನಾಡಿ. ದಾಖಲೆಗಳು ಸರಿ ಇಲ್ಲದಿದ್ದರೆ ಅವರಿಗೆ ಸಾಲ, ರಿಯಾಯ್ತಿ ಮೊದಲಾದ ಸೌಲಭ್ಯಗಳು ಸಿಗುವುದಿಲ್ಲ. ಆಗ ಅವರ ಸಂಕಷ್ಟ ಹೇಳತೀರದು.

ಇಂಥ ಮಹತ್ವಪೂರ್ಣವಾದ ದಾಖಲೆಗಳನ್ನು ಸಮರ್ಪಕವಾಗಿ ಒದಗಿಸುವುದು ಸರ್ಕಾರದ ಹೊಣೆ. ಸ್ವಾತಂತ್ರ್ಯ ಬಂದು ಆರೂವರೆ ದಶಕಗಳೇ ಕಳೆದರೂ ಭೂ ದಾಖಲೆಗಳನ್ನು ಸರಿಯಾಗಿ ಒದಗಿಸಲು ಸಾಧ್ಯವಾಗಿಲ್ಲ ಎನ್ನುವುದು ಆಡಳಿತದ ವೈಫಲ್ಯ. ಇದು ನಾಚಿಕೆಗೇಡು. ಭೂ ದಾಖಲೆಗಳ ಗಣಕೀಕರಣ­ವಾಗಿ 18 ವರ್ಷಗಳು ಕಳೆದಿವೆ. ನಮ್ಮ ರಾಜ್ಯ ಗಣಕೀಕರಣದಲ್ಲಿ ಮುಂಚೂಣಿ­ಯಲ್ಲಿದೆ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತಿದ್ದೇವೆ.

ಆದರೆ ಈ ದಾಖಲೆಗಳು ಕಾಗದದಿಂದ ದತ್ತಾಂಶಕ್ಕೆ ವರ್ಗಾವಣೆಯಾಗಿವೆ ಅಷ್ಟೆ. ಗೊಂದಲಗಳು, ವಿವಾದಗಳು ಹಾಗೆಯೇ ಉಳಿದಿವೆ. ಮಾಹಿತಿ ತಂತ್ರ­ಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದ್ದರೂ ಅದನ್ನು ಆಡಳಿತದಲ್ಲಿ ಪರಿಣಾಮಕಾರಿಯಾಗಿ ಬಳಸಲು ಇನ್ನೂ ಆಗಿಲ್ಲ ಎಂಬುದು ದುರದೃಷ್ಟಕರ. ಪಹಣಿಯಲ್ಲಿನ ದೋಷಗಳನ್ನು ಸರಿಪಡಿಸುವ ಕಾರ್ಯ ಈ ಹಿಂದೆ ಕೂಡ ನಡೆದಿತ್ತು.

ಆದರೆ ಅದು ಸಂಪೂರ್ಣವಾಗಿ ಯಶಸ್ವಿಯಾಗಿರಲಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ. ರಾಜ್ಯದಲ್ಲಿ 1.61 ಕೋಟಿ ಪಹಣಿಗಳಿದ್ದು 20 ಲಕ್ಷ ಪಹಣಿಗಳಲ್ಲಿ ಜಮೀನಿನ ವಿಸ್ತೀರ್ಣ, 52 ಲಕ್ಷ ಪಹಣಿಗಳ ಆಕಾರಬಂದ್‌ ಸರಿ ಇಲ್ಲ. ಕಾಗುಣಿತದ ದೋಷ, ಭೂಮಾಲೀಕರ ಹೆಸರಿನ ದೋಷ, ಸರ್ವೆ ನಂಬರ್‌ ಸರಿಯಾಗಿ ದಾಖಲಿಸದೇ ಇರುವುದು ಮುಂತಾದ ದೋಷಗಳು ಉಳಿದುಕೊಂಡಿವೆ. ಅಂದರೆ ರಾಜ್ಯದಲ್ಲಿರುವ ಪಹ­ಣಿ­ಗಳ ಪೈಕಿ ಅರ್ಧದಷ್ಟು ಪಹಣಿಗಳು ಸರಿ ಇಲ್ಲ ಎಂದೇ ಅರ್ಥ. ಅವುಗಳನ್ನು ಸರಿಪಡಿಸುವ ಆಂದೋಲನದ ಭಾಗವಾಗಿಯೇ ಈಗ ತಹ­ಶೀಲ್ದಾರರಿಗೆ ಷರತ್ತುಬದ್ಧ ಅಧಿಕಾರವನ್ನು ನೀಡಲಾಗಿದೆ. ಈ ಆಂದೋಲನದ ನಂತರವೂ ದೋಷಗಳು ಉಳಿದುಕೊಂಡರೆ ಸರ್ಕಾರವನ್ನು ಯಾವುದೇ ಕಾರಣಕ್ಕೂ ಕ್ಷಮಿಸಲಾಗದು.

ತಹಶೀಲ್ದಾರರ ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿವೆ ಎಂಬ ಆರೋಪ ಹೊಸದೇನಲ್ಲ. ಹಣ ನೀಡದೆ ಅಲ್ಲಿ ಯಾವುದೇ ಕೆಲಸವಾ­ಗುವು­ದಿಲ್ಲ ಎನ್ನುವುದೂ ಸುಳ್ಳಲ್ಲ. ಭೂ ಲೂಟಿಕೋರರು ಒತ್ತಡ ಹಾಗೂ ಇನ್ನಿತರ ತಂತ್ರಗಳನ್ನು ಉಪಯೋಗಿಸಿ ಪಹಣಿ ತಿದ್ದುಪಡಿ ಮಾಡಿಸಿಕೊಳ್ಳುವ ಪ್ರಯತ್ನ­ಗಳೂ ನಡೆಯುತ್ತಿವೆ. ಇವೆಲ್ಲಕ್ಕೂ ಕಡಿವಾಣ ಹಾಕಬೇಕು. ತಂತ್ರ­ಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.

ಆ ಮೂಲಕ ದೋಷ­ಗ­ಳಿಲ್ಲದ ಪಹಣಿ ಜನರಿಗೆ ಸಿಗುವಂತಾಗಬೇಕು. ಇದರಿಂದ ರೈತರಿಗೆ ನಿಜವಾ­ಗಿಯೂ ನೆಮ್ಮದಿ ಸಿಗುತ್ತದೆ. ತಾಲ್ಲೂಕು ಕಚೇರಿ ಕೆಲಸಗಳು ಇನ್ನಷ್ಟು ಪಾರ­ದರ್ಶಕವಾಗಿ ನಡೆಯಬೇಕು. ತಾಲ್ಲೂಕು ಕಚೇರಿಗಳನ್ನು ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡುವುದಕ್ಕೆ ಹಾಗೂ ದೋಷಮುಕ್ತ ಪಹಣಿಗಳನ್ನು ನೀಡು­ವುದಕ್ಕೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಇದನ್ನು ರಾಜ್ಯ ಸರ್ಕಾರ ಆದ್ಯತೆಯ ಮೇಲೆ  ಜಾರಿಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT