ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪ್ರಜ್ಞೆ ಅನಿವಾರ್ಯ

Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಭಾಗ-೩ರ ೧೯ನೆಯ ಅನುಚ್ಛೇದದಲ್ಲಿ ವಾಕ್‌­ಸ್ವಾತಂತ್ರ್ಯ ಮತ್ತು ಅಭಿ­ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾಪಿ­ಸಲಾಗಿದೆ. ಸಮಸ್ತ ನಾಗರಿಕರೂ ಈ ಸ್ವಾತಂತ್ರ್ಯಕ್ಕೆ ಬಾಧ್ಯರು ಎಂದು ಸಂವಿಧಾನ ಹೇಳುತ್ತಿದೆ. ಅಷ್ಟೇ ಅಲ್ಲದೆ ಈ ಹಕ್ಕಿನ ಮೇಲೆ ಬಾಧ್ಯತೆಯ ನಿಯಂತ್ರಣವನ್ನೂ ವಿಧಿಸಿದೆ. ಹಕ್ಕು ಮತ್ತು ಬಾಧ್ಯತೆಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮೇಲ್ನೋ­ಟಕ್ಕೆ ವಿರುದ್ಧವೆಂಬಂತೆ ಕಂಡರೂ ಪರಸ್ಪರ ಬಿಟ್ಟಿರಲಾಗದ ಬಿಟ್ಟಿರಬಾರದ ಸಂಬಂಧಗಳು.

ಭಾಷೆ, ಸಂಸ್ಕೃತಿ, ಧರ್ಮ, ಆಚಾರ-ವಿಚಾರಗಳಲ್ಲಿ ಬಹುತ್ವದ ವೈವಿಧ್ಯವನ್ನು ಒಳಗೊಂಡಿ­ರುವ ಭಾರತದಲ್ಲಿ  ಬಹುತ್ವಗಳನ್ನು ಗೌರ­ವಿಸಿ ವ್ಯಕ್ತಿ ಸ್ವಾತಂತ್ರ್ಯವನ್ನು ಮಾನ್ಯ ಮಾಡಿದ ಗುಣ­ಧರ್ಮವಿದೆ. ಹೀಗಿರುವಾಗ ಇತ್ತೀಚೆಗೆ ಸಾಹಿತಿಗಳ ವಾಕ್‌­ಸ್ವಾತಂತ್ರ್ಯವನ್ನೂ ಅಮಾನ್ಯ ಮಾಡುವ ರೀತಿ­ಯಲ್ಲಿ ಕೆಲವು ರಾಜಕಾರಣಿಗಳು ಹರಿಹಾಯು­ತ್ತಿ­ದ್ದಾರೆ. ಇವರಿಗೆ ಪೂರಕ ಧಾಟಿಯಲ್ಲಿ ಕೆಲವು ಸಾಹಿತಿಗಳೂ ದನಿ­ಗೂಡಿ­ಸುತ್ತಿದ್ದಾರೆ. ಇವರೆಲ್ಲ ಹೆಚ್ಚಾಗಿ ಬಲಪಂಥೀಯ ಆಲೋಚನೆಯನ್ನು ಪ್ರತಿಪಾದಿ­ಸುತ್ತಿರುವರು. ಇವರಿಗೆ ಸರ್ವಸಮಾನತೆ  ಅಪಥ್ಯದ ವಿಚಾರ.

ಪ್ರಭುತ್ವವಾಗಲಿ, ಪ್ರಜಾಪ್ರಭುತ್ವವಾಗಲಿ ತಾನು ಬದುಕುತ್ತಿರುವ ಸಂದರ್ಭದಲ್ಲಿನ ಸಾಮಾಜಿಕ ಸ್ಥಿತಿ­ಗಳನ್ನು ಕುರಿತು ಯೋಚಿಸಬಯಸುವ ಯಾವುದೇ ಸಾಹಿತಿಗೂ ರಾಜಕೀಯ ಪ್ರಜ್ಞೆ ಎಂಬುದು ಬರಹದ ಜೀವದ್ರವ್ಯ. ರಾಜಕೀಯ ಪ್ರಜ್ಞೆ ಇಲ್ಲದೆ ಬರೆದ ಯಾವುದೇ ಬರಹವೆಂದರೆ ಅದು ಜೀವವಿಲ್ಲದ ಕಾಯ ಸಮಾನ. ಪ್ರಪಂಚದ ಯಾವ ಭಾಷೆಯ ಯಾವ ಮೂಲೆಯ ಸಾಹಿತಿಯ ಸಾಹಿತ್ಯವನ್ನು ತೆಗೆದು­ಕೊಂಡರೂ ಅವರ ಬರಹದಲ್ಲಿ ಆ ನೆಲದ ರಾಜಕೀಯ ಸ್ಥಿತಿಗತಿಗಳ ಒಲವುನಿಲುವುಗಳು ಅಮೂರ್ತವಾಗಿಯಾ­ದರೂ ದನಿಮಾಡಿರುತ್ತವೆ.

ಆದಿಕವಿ ಪಂಪನೇ ತನಗೆ ಪ್ರಭುತ್ವ ಆಶ್ರಯ ನೀಡಿ­ದ್ದರೂ ಅವರ ಜೋಳದ ಪಾಳಿಯ ಹಂಗಿನಲ್ಲಿ ಬದುಕು ನಡೆಸಿದಂತೆ ಕಂಡುಬಂದರೂ ‘ಓಲಗಿಸಿ ಬಾಳ್ವುದೆ ಕಷ್ಟಂ ಇಳಾಧಿನಾಥರಂ’- ಎಂದು ಗೊಣಗಿ­ದ್ದಾನೆ. ‘ನಿಜದೊಳೆ  ಭೂಪರೆಂಬರ್ ಅವಿವೇಕಿಗಳಪ್ಪರ್’- ಎಂದು ಕಿಡಿನುಡಿ­ದಿ­ದ್ದಾನೆ. ‘ತಮ್ಮೊಳ್ ಅಗ್ಗಲಿಸಿ ಪೊದಳ್ದು ಪರ್ವಿದ ಅವಿ­ವೇಕತೆಯಿಂ ನೃಪಚಿತ್ತವೃತ್ತಿ ಸಂಚಲಂ-’ ಎಂದು ಪ್ರಭುಗಳ ಮನೋಸ್ಥಿತಿಯ ಬಗ್ಗೆಯೇ ಪ್ರತಿಕ್ರಿಯಿಸಿದ್ದಾನೆ.

ಪ್ರಭುತ್ವ­ದೊಳಗಿನ ಲೊಳಲೊಟ್ಟೆ­ತನವನ್ನು ಕಂಡು ಆಡಿದ ಪಂಪನ ನುಡಿಗಳು ದಟ್ಟವಾದ ರಾಜಕೀಯ ಪ್ರಜ್ಞಾ­ಪಾತಳಿಯಿಂದ ಒಡಮೂಡಿದವು; ಅಭಿವ್ಯಕ್ತಿ ಸ್ವಾತಂತ್ರ್ಯದ ಕವಿಧರ್ಮವನ್ನು ಮೊರೆದ ನುಡಿಗಳು. ಕುಮಾರ­ವ್ಯಾಸನೂ  ‘ಅರಸು ರಾಕ್ಷಸ ಮಂತ್ರಿ ಮೊರೆವ ಹುಲಿ’ ಇಂಥ ರಾಜ್ಯದೊಳಗೆ ಪ್ರಜೆಗಳ ಅಳಲ ಕೇಳುವರಾರು ಎಂದು ಹಲುಬಿ ಪ್ರಜೆಗಳ ಪರವಾಗಿ ದನಿ ಎತ್ತಿದ್ದಾನೆ. ದಕ್ಷಿಣ ಆಫ್ರಿಕಾದ ಪ್ರಸಿದ್ಧ ಸಾಹಿತಿ ವೊಲೆ ಷೊಯಿಂಕಾ ‘ವಂಚಿತ ಸಮುದಾಯದಿಂದ ಬಂದ ಸಾಹಿತಿಗೆ ಕಲಾತ್ಮಕ ಸಿದ್ಧಾಂತಕ್ಕಿಂತ ಸಾಮಾಜಿಕ ಬದ್ಧತೆ ಮುಖ್ಯ’ ಎಂದು ಹೇಳುತ್ತಾನೆ. ಕುವೆಂಪು ಅವರ ಇಡೀ ಬರಹದಲ್ಲಿಯ ನಿಲುವು ಸರ್ವೋದಯದ ರಾಜಕೀಯ ಪ್ರಜ್ಞೆಯಿಂದ ಪರಿಪೋಷಿತವಾದದ್ದು. ಹೀಗೆ ಸಾಹಿತ್ಯ, ಉದ್ದಕ್ಕೂ ಧಾರ್ಮಿಕ ರಾಜಕೀಯ ಸನ್ನಿವೇಶಗಳ ಎದುರಿಗೆ ಸಂಘ­ರ್ಷಾ­ತ್ಮಕವಾಗಿ ಅರಿವನ್ನು ಪೊಸೆಯಿಸುತ್ತಾ ಬಂದಿದೆ.

ಸ್ವಾತಂತ್ರ್ಯೋತ್ತರ ಭಾರತದ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ನಡೆಯ ಬಗ್ಗೆ ರೋಸಿದ ಕನ್ನಡದ ಕೆಲವು ಸಾಹಿತಿಗಳು ನೇರವಾಗಿ ಸಕ್ರಿಯ ರಾಜಕಾರಣಕ್ಕೆ ಇಳಿದದ್ದು ಇತಿಹಾಸವಷ್ಟೇ ಅಲ್ಲ ಮರೆಯದ ವರ್ತ­ಮಾನ ಕೂಡ. ಯಾವ ಪಕ್ಷದ ಹಂಗೂ ಇಲ್ಲದ ನಿಲು­ವಿ­ನಲ್ಲಿ ಶಿವರಾಮಕಾರಂತರು ಲೋಕಸಭೆಗೆ ಸ್ಪರ್ಧಿಸಿದರೆ ಜನಸಂಘದಿಂದ ಗೋಪಾಲಕೃಷ್ಣ ಅಡಿಗರು ಚುನಾ­ವ­ಣೆಗೆ ನಿಂತರು.

ಲಂಕೇಶರು ಪ್ರಗತಿರಂಗವೆಂಬ ರಾಜಕೀಯ ಪಕ್ಷವನ್ನು ಕಟ್ಟಿ ರಾಜಕೀಯ ಪ್ರವೇಶಕ್ಕೆ ಪ್ರಯತ್ನಿಸಿದರು. ಯು.ಆರ್.ಅನಂತಮೂರ್ತಿ, ಕೆ.ಮರುಳಸಿದ್ದಪ್ಪ ಇವರು ರಾಜಕೀಯ ಚುನಾವಣೆಗೆ ಪಕ್ಷ ಬೆಂಬಲ ಪಡೆದು ಸ್ಪರ್ಧಿಸಿದ್ದರು. ದೇವನೂರ ಮಹಾದೇವ ಅವರು ಸರ್ವೋ­ದಯ ಪಕ್ಷವನ್ನು ಕಟ್ಟಿಕೊಂಡು ರೈತಸಂಘದ ಸಹಕಾರದಲ್ಲಿ ರಾಜಕಾರಣಕ್ಕೆ ತೊಡಗಿದರು. ಇದು ಸಕ್ರಿಯ ರಾಜಕಾರಣದಲ್ಲಿ ಸಾಹಿತಿಗಳು ಭಾಗವಹಿಸಿದ ಉದಾಹರಣೆಯಾದರೆ ಇನ್ನು ಹಲವು ಜನ ತಮ್ಮ ಬದುಕಿನುದ್ದಕ್ಕೂ ತಾವು ನಂಬಿದ ಸಿದ್ಧಾಂತವನ್ನು ಪ್ರತಿ­ಪಾದಿಸುವ ರಾಜಕೀಯ ಪಕ್ಷಗಳ ಜೊತೆ ಗುರುತಿಸಿ­ಕೊಂಡಂತೆ ತಮ್ಮ ರಾಜಕೀಯ ನಿಲುವು ಮೆರೆದರು; ನೇರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸ­ದಿದ್ದರೂ ಪರೋಕ್ಷವಾಗಿ ಬೆಂಬಲಿಸುತ್ತಾ ಬಂದರು.

ಇನ್ನು ಕೆಲವರು ರಾಜಕೀಯ ಪಕ್ಷವೊಂದರ ಗರ್ಭಗುಡಿ­ಯಂತಿರುವ ಸಂಘ ಪರಿವಾರಗಳಲ್ಲಿ ಗುರುತಿಸಿಕೊಂಡು ಅಲ್ಲಿನ ರಾಜಕೀಯ ನಿಲುವುಗಳನ್ನೇ ತಮ್ಮ ಬರಹದ ಜೀವಾಳವಾಗಿಸಿಕೊಂಡು ಅದನ್ನೇ ಪ್ರತಿಪಾದಿಸಿ ಬರೆದರು; ಲೇಖನಿ ಖಡ್ಗಕ್ಕಿಂತ ಹರಿತವಾದದ್ದು ಎಂಬು­ದನ್ನು ತಮ್ಮ ಬರಹಗಳ ಮೂಲಕ ಸಾಬೀತು­ಗೊಳಿಸಿದರು. ಬೆಳೆಯುವ ಮನಸ್ಸುಗಳ ಭಾವನೆ, ಆಲೋಚನೆಗಳ ಮೇಲೆ ಇಂಥವರ ಬರಹ ಬೀರಿದ ಪ್ರಹಾರ ಕಡಿಮೆಯೇನಲ್ಲ. ಹೀಗಾಗಿ ಕನ್ನಡದ ಬಹುತೇಕ ಪ್ರಮುಖ ಸಾಹಿತಿಗಳು ತಮ್ಮ ರಾಜಕೀಯ ಪ್ರಜ್ಞಾ ವಿಶೇಷತೆಯಲ್ಲಿ ತಮ್ಮ ಲೋಕ ದರ್ಶನವೆಂಥದ್ದು ಎಂಬುದನ್ನು ಸಾಬೀತುಪಡಿಸಿಕೊಂಡೇ ಬಂದಿದ್ದಾರೆ.

ಈಗ ಪ್ರಜಾಪ್ರಭುತ್ವದ ಸನ್ನಿವೇಶವು ಅಪಾಯಕಾರಿ ಆತಂಕಗಳನ್ನು ಎದುರಿಸುತ್ತಿರುವುದನ್ನು ಅರಿತುಕೊಂಡ ಕೆಲವು ಜನ ಸಾಹಿತಿಗಳು ಸಂಘಟಿತರಾಗಿ ಅದರ ವಿರುದ್ಧ ತಮ್ಮ ಸಂಘರ್ಷದ ದನಿ ಎತ್ತಿದ್ದಾರೆ. ಬರಹದಲ್ಲಿ ಪ್ರತಿಪಾದಿಸುತ್ತಿದ್ದ ತಮ್ಮ ರಾಜಕೀಯ ನಿಲುವನ್ನು ನೇರವಾಗಿ ಕ್ರಿಯಾಶೀಲರಾಗಿ ಹೋರಾಟದ ಭಾಗವಾಗಿ ಜನತೆಗೆ ಮನವರಿಕೆ ಮಾಡಿಕೊಡಲು ತೊಡಗಿದ್ದಾರೆ. ಕುವೆಂಪು ಅವರು ಭಾರತದ ಒಕ್ಕೂಟ ವ್ಯವಸ್ಥೆಯನ್ನು ‘ಸರ್ವಜನಾಂಗದ ಶಾಂತಿಯ ತೋಟ ’ಎಂದು ಕರೆದರು. ಇಂದು ಒಬ್ಬ ಫ್ಯಾಸಿಸ್ಟ್ ಧೋರಣೆಯ ಮತಾಂಧನನ್ನು ಮುಂದುಮಾಡಿಕೊಂಡಂತೆ ಅಧ್ಯಕ್ಷೀಯ ಮಾದರಿಯ ಚುನಾವಣೆಗೆ ತೊಡಗಿರುವುದು ಭಾರತದ ಪರಮೋಚ್ಚ ಸಂವಿಧಾನಕ್ಕೆ ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧ ನಡೆಯಾಗಿದೆ.

ಈ ಕ್ರೂರ ಅರಿವು ನೇರವಾಗಿ ಚುನಾ­ವಣೆಯ ರಾಜಕಾರಣಕ್ಕೆ ಸಾಹಿತಿಗಳನ್ನು ಒತ್ತಾಯಿಸಿದೆ. ಇದು ಸನ್ನಿವೇಶದ ಒತ್ತಡದ ಪರಿಣಾಮದಿಂದ ಆಗಿರು­ವುದು. ಇದನ್ನು ವಿರೋಧಿಸುತ್ತಿರುವ ಮನಸ್ಸುಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸದ ಫ್ಯಾಸಿಸ್ಟ್ ಶಕ್ತಿಗಳು. ಇವರಿಗೆ ಸಾಹಿತಿಗಳು ಸಾಹಿತ್ಯ ಬರೆದುಕೊಂಡು ಕೂರಬೇಕು. ಕಲಾವಿದರು ಕಲಾರಚನೆಯಲ್ಲಿ ಇರಬೇಕು. ವೈದ್ಯರು ಎಂಜಿನಿಯರ್‌ಗಳು, ವಿದ್ಯಾರ್ಥಿಗಳು ಅವರವರ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಇವರಾರೂ ರಾಜ­ಕೀಯ­ದಲ್ಲಿ ಮೂಗು ತೂರಿಸಬಾರದು. ಇದು ಇವರ ನಿಲುವು. ಪ್ರಜ್ಞಾವಂತರು ರಾಜಕೀಯದಿಂದ ದೂರ ಉಳಿದರೆ ಇನ್ನು ಉಳಿಯುವವರು ಯಾರು? ಉದ್ಯಮ­ಪತಿಗಳು ಗಣಿಲೂಟಿಕೋರರು, ಇಂಥವರಿಗೆ ಇವರ ಪಟ್ಟಿ­ಯಲ್ಲಿ ವಿನಾಯಿತಿ. ಕಾರಣ ಪ್ರಜಾಪ್ರಭು­ತ್ವದ ನಿರ್ಣಾ­ಯಕ ಚೀಲಗಳೇ ಇವರಲ್ಲವೇ? ಇವರನ್ನು ಹೊರಗಿಟ್ಟು ಮಾಡುವುದೇನು?

ವರ್ಣನೀತಿಯ ಮನುಧರ್ಮಶಾಸ್ತ್ರವನ್ನು ಜಾರಿಗೆ ತರಬೇಕು. ಇದೇ ಭಾರತದ ಸನಾತನ ಸಂವಿಧಾನ ಎಂದು ನಂಬಿರುವ ನಂಬಿಕೆಯ ಹಲವು ಮಾರ್ಗಗಳ ಮುಖೇನ ಷಡ್ಯಂತ್ರಗಳನ್ನು ರೂಪಿಸಿರುವ ಮತಾಂಧ ಮನಸ್ಸುಗಳ ಹುನ್ನಾರವಿದು. ಇವರು ತಮ್ಮ ರಾಜಕೀಯ ನಡೆಯ ಬಣ್ಣ ಬಯಲುಗೊಳಿಸಿ ಮಾತನಾಡುವ ಸಾಹಿತಿಗಳ ಬಗ್ಗೆ ಕೆರಳಿದಂತೆ ಪ್ರತಿಕ್ರಿಯಿಸುವುದನ್ನು ನೋಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ಹಲ್ಲೆಯಾಗಿದೆ. ತಮ್ಮ ಪಕ್ಷದ ಸಿದ್ಧಾಂತಗಳನ್ನು ಬೆಂಬ­ಲಿಸಿ ಮಾತನಾಡುವ ಬಲಪಂಥೀಯ ಬರಹಗಾರರ ರಾಜಕೀಯ ನಡವಳಿಕೆಯ ಬಗ್ಗೆ ಇವರು ಚಕಾರವನ್ನೂ ಎತ್ತುವುದಿಲ್ಲ.

ಇದು ಇವರ ಎಬಡತ್ವದ ದ್ಯೋತಕ­ವಾಗಿದೆ. ಇವರನ್ನು ಬೆಂಬಲಿಸುತ್ತಿರುವ ಬಲಪಂಥೀಯ ಬರಹಗಾರರಿಗೂ ತಮ್ಮ ನಿಲುವುಗಳನ್ನು ಹೇಳುವ ಹಕ್ಕಿದೆ. ತಮ್ಮ ಅಭಿಪ್ರಾಯಗಳನ್ನು ಪ್ರತಿಪಾದಿಸುವ ಸ್ವಾತಂತ್ರ್ಯವಿದೆ. ಅದನ್ನು ಗೌರವಿಸಬೇಕು. ಅದನ್ನು ಬಿಟ್ಟು ಸಭ್ಯತೆ ಮೀರಿದ ಮಾತುಗಳಲ್ಲಿ ತೆಗಳುವುದು ಕೆಟ್ಟ ಸಂಸ್ಕೃತಿ. ಕ್ಷುಲ್ಲಕ ಮಾತುಗಳಲ್ಲಿ ವ್ಯಕ್ತಿಗತ ಟೀಕೆಗೆ ತೊಡ­ಗುವುದು, ಕೀಳುಮಟ್ಟದ ಭಾಷೆ ಬಳಸುವುದು ಯಾವ ವ್ಯಕ್ತಿಗೂ ಯಾವ ಪಕ್ಷಕ್ಕೂ ಘನತೆ ತರುವ ನಡವಳಿಕೆ­ಯಲ್ಲ. ಇರುಳು ಜಾತಿಗರ ಪಕ್ಷ, ಹಗಲು ಲಾಬಿಗರ ಸ್ನೇಹ ವೇದಿಕೆಯಲ್ಲಿ ಸಮಾಜವಾದಿ ಸಿದ್ಧಾಂತ ಈ ಬಗೆಯ ಹಿಪೋಕ್ರಸಿಯ ಅವಕಾಶವಾದಿ ನಡವಳಿಕೆಗಿಂತ ನೇರವಾಗಿ ಪಾರದರ್ಶಕವಾಗಿ ತಮ್ಮ ರಾಜಕೀಯ ನಿಲುವನ್ನು ಪ್ರಕಟಿಸುವ ಧೈರ್ಯವನ್ನು ಸಾಹಿತಿಗಳು ತೋರಬೇಕು.

ಬೇರೆಯವರಿಗೆ ಅಪಥ್ಯವಾದರೂ ಇದು ಹೊಣೆಗಾರಿಕೆಯ ನೈತಿಕ ನಡೆ. ಇದಾಗದಿದ್ದಾಗ ಮೌನವಾಗಿರುವುದು ಸಾಹಿತಿಯ ವೈಯಕ್ತಿಕ ಹಾಗೂ ಸಾಮಾಜಿಕ ಕ್ಷೇಮದ ದೃಷ್ಟಿಯಿಂದ ಒಳ್ಳೆಯದು. ಹಾಗೆಯೇ ಪ್ರಜಾಪ್ರತಿನಿಧಿಗಳೆನ್ನಿಸಿಕೊಂಡವರು ವಾಕ್‌ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವವರಾಗಬೇಕೇ ಹೊರತು ದಮನಶೂರತ್ವವನ್ನು ಮೆರೆಯುವ ಫ್ಯಾಸಿಸ್ಟ್‌ಗಳಾಗಬಾರದು. ಅಷ್ಟಕ್ಕೂ ಸಾಹಿತ್ಯದ ರೂಪಕಾತ್ಮಕ ಅಭಿವ್ಯಕ್ತಿ ಎಂದರೆ ರಾಜಕೀಯ ಪ್ರಜ್ಞೆಯ ಅನಾವರಣವೇ ಅಲ್ಲವೇ?  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT