ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಮೀರಿ ಬೆಳೆಯಲಿದೆಯೇ ನೇತ್ರಾವತಿ ಹೋರಾಟ..

ಮುಗಿದ ಚುನಾವಣಾ ಕಾವು –ಮುಗಿಯದ ನೋವು
Last Updated 21 ಏಪ್ರಿಲ್ 2014, 9:00 IST
ಅಕ್ಷರ ಗಾತ್ರ

ಮಂಗಳೂರು: ಲೋಕಸಭಾ ಚುನಾವಣೆಯ ಕಾವು ಮುಗಿದು ದಕ್ಷಿಣ ಕನ್ನಡ ಜಿಲ್ಲೆ ತಣ್ಣಗಾಗುತ್ತಿದೆ. ಚುನಾವಣೆಯ ಫಲಿತಾಂಶ ಜಿಲ್ಲೆಯ ಪ್ರಧಾನ ಸಮಸ್ಯೆಯಾದ ಎತ್ತಿನಹೊಳೆ ತಿರುವು ಯೋಜನೆಯ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಕುತೂಹಲ ಜಿಲ್ಲೆಯ ಪರಿಸರವಾದಿಗಳಲ್ಲಿದೆ.

ಕೇಂದ್ರದಲ್ಲಿ ರಚನೆಯಾಗಲಿರುವ ಸರ್ಕಾರ ನೇತ್ರಾವತಿ ನದಿಯನ್ನು ಉಳಿಸುತ್ತದೆಯೇ ಅಥವಾ ಅಭಿವೃದ್ಧಿಯ ಹೆಸರಿನಲ್ಲಿ ಈ ಯೋಜನೆ­ಯ ಪರವಾಗಿ ನಿಲ್ಲುತ್ತದೆಯೇ ಎಂಬ ಆತಂಕ ಹೋರಾಟಗಾರರಲ್ಲಿ ಮನೆ ಮಾಡಿದೆ. ಆದ್ದರಿಂದ ಯಾವುದೇ ಪಕ್ಷದ ಸರ್ಕಾರ ರೂಪುಗೊಳ್ಳಲಿ, ಹೋರಾಟದ ಹಾದಿಯಲ್ಲಿ ಮುಂದುವರೆಯಲು ನೇತ್ರಾವತಿ ನದಿ ಪರ ಸಂಘಟನೆಗಳು ನಿರ್ಧರಿಸಿವೆ.

‘ಸರ್ಕಾರಗಳು ಯಾವಾಗಲೂ ನಗರದ ಜನತೆಯ ಹಿತಾಸಕ್ತಿಯನ್ನೇ ಕಾಪಾಡುತ್ತವೆ. ಬೆಂಗಳೂರಿಗೆ ಅನುಕೂಲವಾಗುವಂತೆಯೇ ಹೊಸ ಸರ್ಕಾರದ ನಿರ್ಧಾರವೂ ಇರುತ್ತದೆ ವಿನಃ, ಪರಿಸರ ಪರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಭರವಸೆ ಇಲ್ಲ. ಹೊಸ ಸರ್ಕಾರ ರಚನೆಯಾದ ಬಳಿಕ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎನ್ನುತ್ತಾರೆ ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿಯ ಸಂಚಾಲಕ ನಿರಂಜನ ರೈ.

ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ಫಲಿತಾಂಶ ಹೇಗೆ ಬರುತ್ತದೆ ಎಂಬುದು ಕೂಡ ಹೋರಾಟದ ಹಾದಿಯಲ್ಲಿ ಮುಖ್ಯವಾಗುತ್ತದೆ ಎಂಬ ಅಭಿಪ್ರಾಯ ಸಹ್ಯಾದ್ರಿ ಸಂರಕ್ಷಣಾ ಸಂಚಯದ ಸಂಚಾಲಕ ದಿನೇಶ್‌ ಹೊಳ್ಳ ಅವರದು. ‘ ಜೆಡಿಎಸ್‌ ಮತ್ತು ಸಿಪಿಎಂ ಪಕ್ಷಗಳು ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ, ನೇತ್ರಾವತಿ ನದಿ ತಿರುವು ಯೋಜನೆಯನ್ನೇ ಬೆಂಬಲಿಸುತ್ತಿವೆ. ಏನೇ ಆದರೂ ಸದ್ಯವೇ ಬೆಂಗಳೂರಿಗೆ ತೆರಳಿ ಪ್ರತಿಭಟನೆಗಳನ್ನು ಇನ್ನಷ್ಟು ನಡೆಸಬೇಕಾಗಿದೆ. ಯಾವ ಸರ್ಕಾರ ಬಂದರೂ ದಕ್ಷಿಣ ಕನ್ನಡದ ಜನತೆ ಕೈ ಕಟ್ಟಿ ಕೂರುವಂತಿಲ್ಲ. ಎಚ್ಚರದಿಂದ ನೇತ್ರಾವತಿಯನ್ನೂ, ಪಶ್ಚಿಮ ಘಟ್ಟವನ್ನೂ ಉಳಿಸಿಕೊಳ್ಳಬೇಕಾಗಿದೆ’ ಎನ್ನುತ್ತಾರೆ.

‘ಎತ್ತಿನಹೊಳೆ ಯೋಜನೆಯನ್ನು ಚುನಾವಣೆ ಸಂದರ್ಭದಲ್ಲಿ ಮುಖ್ಯವಿಷಯವನ್ನಾಗಿ ಯಾವುದೇ ರಾಜಕೀಯ ಪಕ್ಷಗಳು ತೆಗೆದುಕೊಳ್ಳದೇ ಇರುವುದರಿಂದ ‘ನೋಟಾ’ ಚಲಾಯಿಸುವಂತೆ ಪ್ರಚಾರ ಮಾಡಲಾಗಿತ್ತು. ನಮ್ಮ ನೋಟಾ ಎಷ್ಟು ಯಶಸ್ವಿಯಾಗಿದೆ ಎಂಬುದು ಮುಖ್ಯವಲ್ಲ. ನೇತ್ರಾವತಿ ರಕ್ಷಣೆಗೆ ಮುಂದಾಗದ ರಾಜಕೀಯ ಪಕ್ಷಗಳೆಡೆಗೆ ತಿರಸ್ಕಾರವನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ‘ನೋಟಾ’ವನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು’ ಎಂಬುದು ಸಹ್ಯಾದ್ರಿ ಸಂರಕ್ಷಣಾ ವೇದಿಕೆಯ ಮುಖಂಡರ ಅಭಿಪ್ರಾಯ.

ದಾರಿ ಹೋರಾಟ: 122 ಮಂದಿಯ ಪುಟ್ಟ ಗುಂಪು ದಾರಿ (democratic ambassidor for all India Rural Integrity) ಸಚಿವರು, ಶಾಸಕರು, ಸರ್ಕಾರಿ ಅಧಿಕಾರಿಗಳಿಗೆ ನಿರಂತರವಾಗಿ ದೂರವಾಣಿ ಕರೆಗಳನ್ನು ಮಾಡಿ ನೇತ್ರಾವತಿ ಉಳಿಸುವಂತೆ ಮನವಿ ಮಾಡುತ್ತಲೇ ಇದೆ. ವಾಕ್‌ ಸ್ವಾತಂತ್ರ್ಯವನ್ನು ಬಳಸಿ ಹೋರಾಟವನ್ನು ಮುಂದುವರೆಸುವ ಆಶಯ ದಾರಿ ಸಂಘಟನೆಯದ್ದು.

ಚುನಾವಣಾ ಫಲಿತಾಂಶಕ್ಕೆ ಇನ್ನು 25 ದಿನ ಕಾಯಬೇಕು ನಿಜ. ಆದರೆ ಈ ಅವಧಿಯೇ ನೇತ್ರಾವತಿ ವಿಚಾರದಲ್ಲಿ ಹೋರಾಟ ನಡೆಸುವವರಿಗೆ, ಭವಿಷ್ಯದ ಕಾರ್ಯತಂತ್ರ ರೂಪಿಸುವವರಿಗೆ ಒದಗಿದ ಸಿದ್ಧತಾ ಅವಧಿ ಎಂದೇ ಪರಿಗಣಿಸಬೇಕು. ನೂತನ ಸರ್ಕಾರ ಎಂತಹ ಕ್ರಮಕ್ಕೆ ಮುಂದಾದರೆ ಎಂತಹ ಪ್ರತಿತಂತ್ರ ರೂಪಿಸಬೇಕು ಎಂಬುದನ್ನು ಈಗಲೇ ಚಿಂತಿಸದಿದ್ದರೆ, ‘ರೈಲು ಹೋದ ಮೇಲೆ ಟಿಕೆಟ್‌ ಕೊಂಡ’ ವಿದ್ಯಮಾನ ಮತ್ತೆ ಮರುಕಳಿಸುವ ಅಪಾಯ ಇದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಕಾನೂನು ಸಮರ
ಹೋರಾಟ –ಪ್ರತಿಭಟನೆಗಳ ಹೊರತಾಗಿ ಕಾನೂನು ಪ್ರಕಾರ ಯೋಜನೆಯು ಅವೈಜ್ಞಾನಿಕವಾದುದು ಎಂದು ಸಾಬೀತುಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿರುವ ಕೆ.ಎನ್‌.ಸೋಮಶೇಖರ್‌ ಈಗಾಗಲೇ ಹೈಕೋರ್ಟ್‌ನಲ್ಲಿ ದಾವೆ (ರಿಟ್‌ ಅರ್ಜಿ ಸಂಖ್ಯೆ– 12307/14) ಹೂಡಿದ್ದಾರೆ. ಮೂಲತಃ ಬೆಂಗಳೂರಿನವರಾದ ಸೋಮಶೇಖರ್‌ ಪಶ್ಚಿಮಘಟ್ಟ ಉಳಿಸುವ ನಿಟ್ಟಿನಲ್ಲಿ ಹಲವಾರು ಹೋರಾಟಗಳನ್ನು ಬೆಂಬಲಿಸಿದವರು.

ನೇತ್ರಾವತಿ ನದಿ ಸಂರಕ್ಷಣಾ ಸಮಿತಿಯ ಮುಖಂಡ, ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ ಅವರೂ ಈ ಯೋಜನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಜನಾರ್ದನ ಪೂಜಾರಿ ಅವರು ಯೋಜನೆಯನ್ನು ವಿರೋಧಿಸಿರುವುದು ಒಟ್ಟು ಹೋರಾಟಕ್ಕೆ ದೊರೆತ ಶಕ್ತಿ ಎಂಬುದು ಅವರ ಅಭಿಪ್ರಾಯ. ಆದರೆ ಅವರಿನ್ನೂ ವಕೀಲರನ್ನು ಆಯ್ಕೆ ಮಾಡಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT