ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಲಾಭಕ್ಕೆ ರೇವಣ್ಣ ಸಂಚು; ಆರೋಪ

ರೈತ ಗಂಗಾಧರ್‌ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಸಿದ್ಧ-– ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಸ್ಪಷ್ಟನೆ
Last Updated 12 ಫೆಬ್ರುವರಿ 2016, 7:20 IST
ಅಕ್ಷರ ಗಾತ್ರ

ಹಾಸನ: ‘ರೈತ ಗಂಗಾಧರ್‌ ಆತ್ಮಹತ್ಯೆಗೂ, ನನಗೂ ಯಾವುದೇ ಸಂಬಂಧವಿಲ್ಲ. ಶಾಸಕ ಎಚ್‌.ಡಿ. ರೇವಣ್ಣ ರಾಜಕೀಯ ಪ್ರಭಾವ ಬಳಸಿ ತಮ್ಮ ಮೇಲೆ ಬಂದ ಆರೋಪವನ್ನು ಇನ್ನೊಬ್ಬರ ಮೇಲೆ ಹೊರಿಸುವ ಕೆಲಸ ಮಾಡಿದ್ದಾರೆ’ ಎಂದು ಜಿ.ಪಂ. ಹಳೇಕೋಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ಗಂಗಾಧರ್‌ ಸಾವಿಗೆ ಸಂಬಂಧಿಸಿದಂತೆ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದ ರೇವಣ್ಣ, ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಹಾಗೂ ಅವರ ಸ್ನೇಹಿತರು ನನ್ನ ವಿರುದ್ಧ ಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಇದಕ್ಕೆ ಉತ್ತರ ನೀಡಿದ ಸುನಿಲ್‌, ‘ಹಳೇಕೋಟೆ ಕ್ಷೇತ್ರದಲ್ಲಿ ರೇವಣ್ಣ ಅವರ ಪತ್ನಿ ಭವಾನಿ ನನ್ನ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ. ಅವರಿಗೆ ಸೋಲಿನ ಭೀತಿ ಉಂಟಾಗಿದ್ದು, ಅದಕ್ಕಾಗಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಗಂಗಾಧರ್‌ ನನಗೆ ಹಲವು ವರ್ಷಗಳಿಂದ ಪರಿಚಿತರು, ಆದರೆ ಕಳೆದ ಕೆಲವು ತಿಂಗಳಿಂದ ನಾನು ಅವರ ಜೊತೆ ಹೆಚ್ಚು ಮಾತನಾಡಿಲ್ಲ.

ನಾನು ನಾಮಪತ್ರ ಸಲ್ಲಿಸುವ ದಿನ ಒಮ್ಮೆ ನನ್ನನ್ನು ಭೇಟಿ ಮಾಡಿ ‘ನನ್ನ ಬೆಂಬಲ ನಿಮಗೆ ಇದೆ’ ಎಂದು ಅವರು ಹೇಳಿದ್ದರು. ಅದರ ನಂತರ ಒಮ್ಮೆ ಕೋರ್ಟ್‌ ಆವರಣದಲ್ಲಿ ಸಿಕ್ಕಿದ್ದರು. ಅದನ್ನು ಬಿಟ್ಟರೆ ಅವರು ನಮ್ಮ ಜೊತೆ ಪ್ರಚಾರಕ್ಕೆ ಬಂದಿಲ್ಲ. ಯಾರೇ ಆದರೂ ಮುಕ್ತವಾಗಿ ಕಾಂಗ್ರೆಸ್‌ ಜತೆ ಗುರುತಿಸಿಕೊಳ್ಳುವ ವಾತಾವರಣ ಹೊಳೆನರಸೀಪುರ ತಾಲ್ಲೂಕಿನಲ್ಲಿ ಇಲ್ಲ ಎಂದರು.

‘ಮಂಗಳವಾರ ರಾತ್ರಿ ಅವರು ವಿಷ ಸೇವಿಸಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ನಾನು ಆಸ್ಪತ್ರೆಗೆ ಧಾವಿಸಿದ್ದೆ. ಮಾನವೀಯ ನೆಲೆಯಲ್ಲಿ ಏನೇನು ಮಾಡಬಹದೋ ಅದನ್ನು ಮಾಡಿದ್ದೇನೆ. ರಾತ್ರಿ 11.30ರ ಸುಮಾರಿಗೆ ಅವರ ಪುತ್ರನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಸ್ವಲ್ಪ ಸಮಯದ ನಂತರ ಅವರು ಬಂದು ‘ಅಪ್ಪ ಸಾಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ನಡುವೆ ಅವರಿಗೆ ಯಾರ್‌್ಯಾರು ಕರೆ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು. ತನಗೆ ಬೇಕಾದ ರೀತಿಯಲ್ಲಿ ಹೇಳಿಕೆ ಕೊಡಲು ಗಂಗಾಧರ್‌ ಅವರ ಪುತ್ರನಿಗೆ ಆಮಿಷ ಒಡ್ಡಿರುವ ಬಗ್ಗೆ ನಮಗೆ ಸಂದೇಹವಿದೆ ಎಂದು ಸುನಿಲ್‌ ಆರೋಪಿಸಿದರು.

‘ಗಂಗಾಧರ್‌ ಸಾವಿನ ಸತ್ಯ ಹೊರಬರಬೇಕು ಎಂಬುದೇ ನಮ್ಮ ಬಯಕೆಯೂ ಆಗಿದೆ. ಆದ್ದರಿಂದ ರೇವಣ್ಣ ಅವರು ಒತ್ತಾಯಿಸಿದಂತೆ ಸಿಬಿಐ ತನಿಖೆಗೆ ನಾನೂ ಸಿದ್ಧನಿದ್ದೇನೆ. ಈ ವಿಚಾರದಲ್ಲಿ ಪೊಲೀಸರೇ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು. ಕಾಂಗ್ರೆಸ್‌ ಮುಖಂಡರಾದ ಶಿವಣ್ಣ, ಪ್ರಕಾಶ್‌, ನಿಂಗರಾಜು, ಶ್ರೀನಿವಾಸ ಹಾಗೂ ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಶಾಸಕ ಬಾಲಕೃಷ್ಣ  ಅಭ್ಯರ್ಥಿಗಳ ಪ್ರಚಾರ
ಹಿರೀಸಾವೆ:
ಚನ್ನರಾಯಪಟ್ಟಣ ತಾಲ್ಲೂಕು ಮತ್ತು ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಗುರುವಾರ ಹೋಬಳಿಯ ಮೇಟಿಕೆರೆಯಲ್ಲಿ ಮತಯಾಚಿಸಿದರು.

ಹಿರೀಸಾವೆ ಜಿಲ್ಲಾ ಪಂಚಾಯಿತಿ ಮತ್ತು ಅದರ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿಗಳ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಿದ್ದರು.

ಜಿಲ್ಲೆಯ ಸಹಕಾರ ಬ್ಯಾಂಕ್‌ ಮತ್ತು ಹಾಸನ ಹಾಲು ಒಕ್ಕೂಟವನ್ನು ಪಕ್ಷದ ಮುಖಂಡರು ಅಭಿವೃದ್ಧಿ ಪಡಿಸುವ ಮೂಲಕ ಗ್ರಾಮೀಣ ಜನರ ಬದುಕನ್ನು ಅರ್ಥಿಕವಾಗಿ ಸದೃಢಮಾಡಿದ್ದಾರೆ ಎಂದು ಶಾಸಕರು ಹೇಳಿದರು.

ಜಿಲ್ಲಾಪಂಚಾಯಿತಿ ಅಭ್ಯರ್ಥಿ ಮಂಜೇಗೌಡ, ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಾದ ಬಾಳಗಂಚಿ ಕ್ಷೇತ್ರದ ಅನಿತಾ ಕುಮಾರ್, ಹಿರೀಸಾವೆ ಕ್ಷೇತ್ರದ ಇಂದ್ರ ದಿನೇಶ್ ಹಾಗೂ ಪಕ್ಷದ ಮುಖಂಡರಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ತೋಟಿ ಜಯರಾಮ್ ಮತ್ತಿತರರು ಜೆಡಿಎಸ್ ಪಕ್ಷದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. 

ಕಾಂಗ್ರೆಸ್‌ನ ಕುತಂತ್ರಗಳಿಗೆ ಮರುಳಾಗಬೇಡಿ: ರಾಮಸ್ವಾಮಿ
ಕೊಣನೂರು:
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಜೆಡಿಎಸ್ ನಿಂದ ಎಲ್ಲ ವರ್ಗದ ಜನರಿಗೆ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡಲಾಗಿದೆ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.

ಹೋಬಳಿಯ  ಬಸವಾಪಟ್ಟಣದಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಚುನಾವಣೆಯಲ್ಲಿ ಹಿಂದಿನಿಂದಲೂ ಜೆಡಿಎಸ್ ಎಲ್ಲ ಸಮುದಾಯಗಳ ಜನರಿಗೆ ಪ್ರಾತಿನಿಧ್ಯ ನೀಡುತ್ತಾ ಬಂದಿದೆ.

ಆದರೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್  ನಲ್ಲಿ ಎಂಥವರಿಗೆ ಟಿಕೆಟ್ ನೀಡಲಾಗಿದೆ ಎಂಬುದು ಜನರ ಕಣ್ಣ ಮುಂದಿದೆ. ಸಚಿವರ ಪತ್ನಿ ಹಿಂದೊಮ್ಮೆ ಜಿಲ್ಲಾ ಪರಿಷತ್ ನಲ್ಲಿ ಗೆದ್ದು ಕನಿಷ್ಠ ಜನಸಾಮಾನ್ಯರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸಲಿಲ್ಲ. ಈಗ ಸಚಿವರ ಪುತ್ರನನ್ನು ರಾಮನಾಥಪುರ ಜಿ ಪಂ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ ಎಂದರು.

ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ವಾಪಾಸ್ಸು ತರುವುದಾಗಿ ಕೇಂದ್ರದ ರಾಜಕಾರಣಿಗಳು ಮಾತನಾಡುತ್ತಾರೆ, ಆದರೆ ನಮ್ಮ ದೇಶದ ದೊಡ್ಡ ದೊಡ್ಡ ಅಧಿಕಾರಿಗಳು, ಕೆಲವು ರಾಜಕಾರಣಿಗಳು ಸಾವಿರ ರೂ ಮುಖ ಬೆಲೆಯ ನೋಟುಗಳನ್ನು ಮೂಟೆಗೆ ತುಂಬಿ ಕಟ್ಟಿಟ್ಟಿದ್ದಾರೆ.

ಹಾಗಾಗಿ ಸಾವಿರ ರೂ ನೋಟುಗಳನ್ನೇ ರದ್ದು ಮಾಡಿದರೆ ಭ್ರಷ್ಟ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗೆ ಮಟ್ಟ ಹಾಕಬಹುದು. ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅರ್ಥ ಸಚಿವ ಕೇಂದ್ರ ಮಂತ್ರಿ ಅರುಣ್ ಜೇಟ್ಲಿ ಅವರ ಗಮನಕ್ಕೂ ತಂದಿದ್ದೇನೆ. ಹಣದ ಕಯಾಲಿಯಿಂದಾಗಿ ರಾಜಕೀಯ ವ್ಯವಸ್ಥೆಯೇ ಹದಗೆಡುತ್ತಿದೆ ಎಂದರು.

ರಾಮನಾಥಪುರ ಜಿ ಪಂ ಕ್ಷೇತ್ರದ ಅಭ್ಯರ್ಥಿ ಜೆಡಿಎಸ್ ಅಭ್ಯರ್ಥಿ ಎಚ್.ಎಸ್. ಶಂಕರ್, ಬಸವಾಪಟ್ಟಣ ತಾ ಪಂ ಕ್ಷೇತ್ರದ ಅಭ್ಯರ್ಥಿ ಪುಟ್ಟಮ್ಮ ತಿಪ್ಪೇಗೌಡ, ಮುಖಂಡರಾದ ಬಿ.ಸಿ. ವೀರೇಶ್, ನಾಗರಾಜು, ರಮೇಶ್, ಕುಮಾರೇಗೌಡ ಮುಂತಾದವರು ಮತ್ತು ಕಾರ್ಯಕರ್ತರು ಹಾಜರಿದ್ದರು.

ಅಭಿವೃದ್ಧಿ ಯೋಜನೆಗಳೇ ಪಕ್ಷಕ್ಕೆ ಶ್ರೀರಕ್ಷೆ
ಅರಸೀಕೆರೆ:
ನಮ್ಮದು ಬಡವ, ದಲಿತ ಹಾಗೂ ಸಾಮಾಜಿಕ ನ್ಯಾಯ ಒದಗಿಸುವ ಪಕ್ಷವಾಗಿದ್ದು, ಅತ್ಯಂತ ಸರಳ ವ್ಯಕ್ತಿಗಳನ್ನು ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳಿಗೆ ಅಭ್ಯ ರ್ಥಿಗಳನ್ನಾಗಿ ಕಣಕ್ಕೆ ಇಳಿಸಿದ್ದೇವೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಗುರುವಾರ ತಿಳಿಸಿದರು.

ತಾಲ್ಲೂಕಿನ ಗಡಿ ಭಾಗವಾದ ಬೊಮ್ಮಸಂದ್ರ ಗ್ರಾಮದ ಗುರು ಚನ್ನಬಸವೇಶ್ವರ ಸ್ವಾಮಿಗೆ ಮುಖಂಡರು ಹಾಗೂ ಅಭ್ಯರ್ಥಿಗಳ ಜತೆ ಪೂಜೆ ಸಲ್ಲಿಸಿದರು.

ಚುನಾವಣಾ ಪ್ರಚಾರ ಸಭೆಯಲ್ಲಿ ಅಭ್ಯರ್ಥಿಗಳ ಪರ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾದರೂ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಹೇಳಿದರು.

ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾದ ಈ ಮೂರೂವರೆ ವರ್ಷದ ಅವಧಿಯಲ್ಲಿ ಸಾವಿರಾರು ಮನೆಗಳು, ಸಮುದಾಯ ಭವನಗಳು, ಹಳ್ಳಿಗಳಲ್ಲಿ ಸಸಿ ರಸ್ತೆ ಮುಂತಾದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಆದ್ದರಿಂದ, ಹಳ್ಳಿಗಳ ಅಭಿವೃದ್ಧಿಗೆ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವುದರ ಮೂಲಕ ಅವರನ್ನು ಆಶೀರ್ವದಿಸಬೇಕು ಎಂದು ಅವರು ಮನವಿ ಮಾಡಿದರು.

ಜಿ.ಪಂ ಅಭ್ಯರ್ಥಿ ಡಿ.ಪಿ.ಬಸವರಾಜು,  ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎನ್‌.ಎಸ್‌. ಸಿದ್ದರಾಮಶೆಟ್ಟಿ, ಮಾಜಿ ಶಾಸಕ ಜಿ.ಎಸ್‌. ಪರಮೇಶ್ವರಪ್ಪ, ತಾ.ಪಂ ಸದಸ್ಯರಾದ ನಂಜುಂಡಪ್ಪ, ಚಂದ್ರಶೇಖರ್‌, ಮಾಡಾಳು ಗ್ರಾ.ಪಂ ಅಧ್ಯಕ್ಷ ಎಂ.ಇ. ಚಂದ್ರಶೇಖರ್‌, ಡಿ.ಎಂ.ಕುರ್ಕೆ ಗ್ರಾ.ಪಂ ಸದಸ್ಯ ನಂಜುಂಡಶೆಟ್ಟಿ ಮಾತನಾಡಿದರು.

ನಗರಸಭಾ ಸದಸ್ಯ ಪಂಚಾಕ್ಷರೀ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕಲ್ಲೇಶಪ್ಪ, ಸಿ.ಎಸ್‌. ರಮೇಶ್‌, ಶಂಕರನಹಳ್ಳಿ ಗ್ರಾ.ಪಂ ಅಧ್ಯಕ್ಷ  ಶಿವಣ್ಣ, ಮಾಜಿ ಅಧ್ಯಕ್ಷರಾದ ಬಸವರಾಜು, ಪಿ.ಕೆ. ಮೈಲಾರಪ್ಪ, ಮಹೇಶ್‌, ತಾ.ಪಂ ಅಭ್ಯರ್ಥಿಗಳಾದ ವನಜಾ ಪ್ರಕಾಶ್‌ಮೂರ್ತಿ, ಯಶೋದಾ ನಟರಾಜ್‌, ಮುಖಂಡ ಶಿವಮೂರ್ತಿ ಉಪಸ್ಥಿತರಿದ್ದರು.

***
‘ಮಂಗಳವಾರ ರಾತ್ರಿ ಅವರು ವಿಷ ಸೇವಿಸಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ  ಆಸ್ಪತ್ರೆಗೆ ಧಾವಿಸಿದ್ದೆ. ಮಾನವೀಯ ನೆಲೆಯಲ್ಲಿ ಏನೇನು ಮಾಡಬಹದೋ ಅದನ್ನು ಮಾಡಿದ್ದೇನೆ.
-ಸುನಿಲ್‌ ಕುಮಾರ್‌,
ಜಿ.ಪಂ. ಹಳೇಕೋಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT